More

    ಅಕ್ರಮ-ಸಕ್ರಮ ಯೋಜನೆ ಮರು ಜಾರಿಗೆ ಆಗ್ರಹ -ರೈತ ಸಂಘದ ಪ್ರತಿಭಟನೆ, ಬೈಕ್ ಜಾಥಾ

    ದಾವಣಗೆರೆ: ಶುಲ್ಕ ಪಾವತಿಸಿ ನೀರಾವರಿ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಿಕೊಳ್ಳುವ ಯೋಜನೆ ಮುಂದುವರಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್) ಬಣದ ಮುಖಂಡರು ನಗರದಲ್ಲಿ ಶುಕ್ರವಾರ ಬೈಕ್ ರ‌್ಯಾಲಿಯೊಂದಿಗೆ ಪ್ರತಿಭಟನೆ ನಡೆಸಿದರು.
    ಜಯಚಾಮರಾಜೇಂದ್ರ ವೃತ್ತದಿಂದ ಆರಂಭಗೊಂಡ ರ‌್ಯಾಲಿಯು ಜಯದೇವ ವೃತ್ತದ ಮೂಲಕ ಸಾಗಿ ಹದಡಿ ರಸ್ತೆಯ ಬೆಸ್ಕಾಂ ಅಧೀಕ್ಷಕ ಇಂಜಿನಿಯರ್ ಕಚೇರಿ ತಲುಪಿ, ಅಲ್ಲಿನ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿಪತ್ರ ರವಾನಿಸಲಾಯಿತು.
    ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ರಾಜ್ಯ ರೈತ ಸಂಘದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್, ಜಿಲ್ಲೆಯಲ್ಲಿ ಈ ಬಾರಿ ಸಕಾಲಕ್ಕೆ ಮಳೆ ಬಾರದೆ ರೈತರು ಬಿತ್ತನೆ ಮಾಡಿದ ಭತ್ತ, ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ, ಸಜ್ಜೆ, ಜೋಳ, ರಾಗಿ, ಈರುಳ್ಳಿ, ನವಣೆ, ತರಕಾರಿ ಫಸಲು ಸಂಪೂರ್ಣವಾಗಿ ಒಣಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ ಎಂದರು.
    ರೈತರು ಅನಿವಾರ್ಯವಾಗಿ ಕೊಳವೆಬಾವಿಗಳನ್ನು ಆಶ್ರಯಿಸಬೇಕಿದೆ. ಹೀಗಿರುವಾಗ ಬೆಸ್ಕಾಂ, ಅಕ್ರಮ-ಸಕ್ರಮ ಯೋಜನೆಯನ್ನು ರದ್ದುಪಡಿಸಿರುವುದು, ನಿಗದಿತ ಸಮಯಕ್ಕೆ ಸರಿಯಾಗಿ ಮತ್ತು ಗುಣಮಟ್ಟದ ವಿದ್ಯುತ್ ಪೂರೈಸದಿರುವ ಕಾರಣಗಳಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಹೇಳಿದರು.
    ಸ್ಥಗಿತಗೊಳಿಸಿರುವ ಅಕ್ರಮ-ಸಕ್ರಮ ವಿದ್ಯುಚ್ಛಕ್ತಿ ಯೋಜನೆ ಮುಂದುವರೆಸಬೇಕು. ಎಲ್.ಟಿ. ಲೈನ್ ಮತ್ತು ಪವರ್‌ಲೈನ್ 500 ಮೀ. ಒಳಗಿದ್ದರೆ ವಿದ್ಯುತ್ ಪರಿವರ್ತಕ, ಇದಕ್ಕಿಂತ ಹೆಚ್ಚು ದೂರವಿದ್ದರೆ ಸೋಲಾರ್ ಅಳವಡಿಸುವ ನಿಯಮ ಕೈಬಿಡಬೇಕು. ಟಿ.ಸಿ. ಸುಟ್ಟ 24 ಗಂಟೆಯೊಳಗೆ ಪರ್ಯಾಯ ಟಿ.ಸಿ. ಅಳವಡಿಸಬೇಕು. ಬಾಕಿ ಟಿ.ಸಿ. ಗಳನ್ನು ತಕ್ಷಣವೇ ನೀಡಬೇಕು. ಬೆಸ್ಕಾಂ ಲೈನ್‌ಮೆನ್‌ಗಳು ದಬ್ಬಾಳಿಕೆ ನಿಲ್ಲಿಸಬೇಕು. ಹಗಲು ವೇಳೆಯಲ್ಲೂ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿದರು.
    ಪ್ರತಿಭಟನೆಯಲ್ಲಿ ಯಲೋದಹಳ್ಳಿ ರವಿ, ಕುರ್ಕಿ ಹನುಮಂತಪ್ಪ, ಕಾನನಕಟ್ಟೆ ತಿಪ್ಪೇಸ್ವಾಮಿ, ಚಿರಂಜೀವಿ ಚಿಕ್ಕಮಲ್ಲನಹೊಳೆ, ದ್ಯಾಮಜ್ಜಿ ಹನುಮಂತಪ್ಪ, ನಾಗರಾಜ ಕಸವನಹಳ್ಳಿ ಅನೇಕ ರೈತರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts