ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಕೊಲೆ-ಪತ್ನಿ, ಪ್ರಿಯಕರನ ಬಂಧನ

arrest-696x465.jpg
Published on

ದಾವಣಗೆರೆ: ಹೊರವಲಯದ ಹಳೇಬಿಸಲೇರಿ ಗ್ರಾಮದಲ್ಲಿ ಐದು ದಿನದ ಹಿಂದೆ ನಡೆದಿದ್ದ ವಿವಾಹಿತ ಯುವಕನೊಬ್ಬನ ಅನುಮಾನಾಸ್ಪದ ಸಾವಿನ ಪ್ರಕರಣವನ್ನು ಹದಡಿ ಠಾಣೆ ಪೊಲೀಸರು ಭೇದಿಸಿದ್ದಾರೆ. ಪತ್ನಿಯೇ ಪ್ರಿಯಕರನ ಜತೆಗೂಡಿ ಪತಿಯನ್ನು ಕೊಲೆ ಮಾಡಿದ್ದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಹಳೇಬಿಸಲೇರಿ ಗ್ರಾಮದ ನಿವಾಸಿ ನಿಂಗರಾಜ (34) ಜೂನ್ 9ರ ರಾತ್ರಿ ಕೊಲೆಯಾಗಿದ್ದರು. ಪ್ರಕರಣದ ಪ್ರಮುಖ ಆರೋಪಿ, ನಿಂಗರಾಜ ಅವರ ಪತ್ನಿ ಕಾವ್ಯಾ ಹಾಗೂ ಪ್ರಿಯಕರ, ವಿನೋಬನಗರದ ನಿವಾಸಿ ಬೀರೇಶ ಬಂಧಿತರಾಗಿದ್ದಾರೆ.

ಬೀರೇಶನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಮೃತ ನಿಂಗರಾಜನ ಪತ್ನಿ ಇಬ್ಬರೂ ಮಂಗಳೂರಿಗೆ ಓಡಿಹೋಗಿದ್ದರು. ಕಾಣೆಯಾದ ಬಗ್ಗೆ ದೂರು ದಾಖಲಾಗಿತ್ತು. ಕಾವ್ಯಾ ಪತ್ತೆಯಾದ ನಂತರ ಪ್ರಕರಣ ಬಯಲಾಗಿದೆ.

ಪತಿಯೊಂದಿಗೆ ಜೀವನ ಮಾಡಲು ಇಷ್ಟವಿಲ್ಲದ ಪತ್ನಿ ಕಾವ್ಯಾ, ಪ್ರಿಯಕರನ ಜೊತೆ ಸೇರಿ ನಿಂಗರಾಜನ ತಲೆಗೆ ಆಯುಧದಿಂದ ಹೊಡೆದು ಕೊಲೆ ಮಾಡಿದ್ದಳು. ಗೋಡೆ ಮೇಲಿಂದ ಬಿದ್ದು ಮೃತಪಟ್ಟಿದ್ದಾಗಿ ನಂಬಿಸಲು ಯತ್ನಿಸಿದ್ದಳು. ಮಗ ಕೊಲೆಯಾಗಿದ್ದಾಗಿ ಮೃತನ ತಾಯಿ ಶಿವಲಿಂಗಮ್ಮ ಜೂ.10ರಂದು ದೂರು ನೀಡಿದ್ದರು. ಅಕ್ರಮ ಸಂಬಂಧಕ್ಕೆ ಅಡ್ಡಿಪಡಿಸಿದ್ದ ಕಾರಣಕ್ಕೆ ಕೊಲೆ ನಡೆಸಿದ್ದಾಗಿ ಬಂಧಿತರು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗ್ರಾಮಾಂತರ ಎಎಸ್‌ಪಿ ಕನ್ನಿಕಾ ಸಿಕ್ರಿವಾಲ್, ಮಾಯಕೊಂಡ ವೃತ್ತ ನಿರೀಕ್ಷಕ ನಾಗರಾಜು ನೇತೃತ್ವದಲ್ಲಿ ಪಿಎಸ್‌ಐಗಳಾದ ಸಂಜೀವ್‌ಕುಮಾರ್, ಶಕುಂತಲಾ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net