More

    ಅಕ್ರಮ ಭೂ ಮಂಜೂರಾತಿ ರದ್ದು ಪಡಿಸಿ

    ಸಾಗರ: ತಾಲೂಕಿನ ಕೆಳದಿ ಗ್ರಾಮದ ಸರ್ವೆ ನಂ.82ರ ಸಾಮಾಜಿಕ ಅರಣ್ಯ ವ್ಯಾಪ್ತಿಯಲ್ಲಿನ ಅಕ್ರಮ ಭೂಮಂಜೂರಾತಿ ರದ್ದುಗೊಳಿಸುವಂತೆ ಒತ್ತಾಯಿಸಿ ಗುರುವಾರ ತಾಲೂಕು ಪ್ರಗತಿಪರ ಯುವ ಒಕ್ಕೂಟ ಮತ್ತು ಕೆಳದಿ ಭೂತೇಶ್ವರ ಗ್ರಾಮ ಸೇವಾ ಸಮಿತಿ ಸದಸ್ಯರು ಉಪವಿಭಾಗಾಧಿಕಾರಿಗಳ ಕಚೇರಿ ಮತ್ತು ತಹಸೀಲ್ದಾರ್​ಗೆ ಮನವಿ ಸಲ್ಲಿಸಿದರು.

    ಕೆಳದಿ ಸರ್ವೆ ನಂ. 82ರ ಸಾಮಾಜಿಕ ಅರಣ್ಯ ಇಲಾಖೆಯ ಅಕೇಶಿಯಾ ನಡುತೋಪಿನಲ್ಲಿ ಮಹ್ಮದ್ ಹುಸೇನ್ ಬಿನ್ ದೊಡ್ಮನೆ ಖಾನ್ ಸಾಬ್ ಎಂಬುವವರಿಗೆ 1.20 ಕೆರೆ ಜಮೀನು ಕಂದಾಯ ಇಲಾಖೆ ಅಧಿಕಾರಿಗಳು ಕಾನೂನು ನಿಯಮಾವಳಿ ಮೀರಿ ಮಂಜೂರು ಮಾಡಿದ್ದಾರೆ. ಅಕ್ರಮವಾಗಿ ಮಂಜೂರು ಮಾಡಿರುವ ಜಾಗಕ್ಕೆ ಸಂಬಂಧಪಟ್ಟಂತೆ ಪಹಣಿ ಇಂಡೀಕರಣ ಹಾಗೂ ಮ್ಯೂಟೇಷನ್ ಮಾಡಿಕೊಡಲಾಗಿದೆ. ಇದು ಸಂಪೂರ್ಣ ಕಾನೂನಬಾಹಿರ ಕ್ರಮವಾಗಿದೆ. ಈ ಅಕ್ರಮದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳ ಶಾಮೀಲಾಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ ಎಂದು ದೂರಿದರು.

    ಮಂಜೂರು ಮಾಡಿರುವ ಭೂಮಿಯಲ್ಲಿ ಯಾರೂ ಸಾಗುವಳಿ ಮಾಡಿರುವುದಿಲ್ಲ. ನಗರ ವ್ಯಾಪ್ತಿಯಿಂದ 2.5 ಕಿಮೀ ದೂರದಲ್ಲಿರುವ ಭೂಮಿಯನ್ನು 5.5 ಕಿ.ಮೀ. ದೂರದಲ್ಲಿದೆ ಎಂದು ತಪ್ಪು ದಾಖಲ್ನೆ ನೀಡಲಾಗಿದೆ. ಸರ್ವೆ ಮಾಡಿರುವ ಭೂಮಾಪಕರಾದ ಬಿ.ಚೇತನ್ ಮತ್ತು ಶ್ರೀಕಂಠಪ್ಪ ಸಂಪೂರ್ಣ ತಪ್ಪು ಮಾಹಿತಿ ನೀಡಿ ಸರ್ಕಾರಕ್ಕೆ ವಂಚನೆ ಮಾಡುವ ಜತೆಗೆ ಕಂದಾಯ ಇಲಾಖೆ ನಿಯಮಾವಳಿ ಗಾಳಿಗೆ ತೂರಿದ್ದಾರೆ ಎಂದು ಆರೋಪಿಸಿದರು.

    ಈ ಪ್ರಕರಣದಲ್ಲಿ ಸಂಬಂಧಪಟ್ಟ ಮೇಲಧಿಕಾರಿಗಳ ಗಮನಕ್ಕೆ ತಾರದೆ ರೆವಿನ್ಯೂ ದಾಖಲೆಗಳನ್ನು ಮಾರ್ಪಾಡು ಮಾಡಿರುವುದು ಹಾಗೂ ಜಾಗ ಪರಿಶೀಲನಾ ವರದಿಯನ್ನು ಗಮನಕ್ಕೆ ತೆಗೆದುಕೊಳ್ಳದೆ ಅಕ್ರಮ ಎಸಗಿರುವುದು ಸ್ಪಷ್ಟವಾಗಿದೆ. ಇದರಲ್ಲಿ ಹಣದ ಮತ್ತು ಪ್ರಭಾವಿ ವ್ಯಕ್ತಿಗಳ ಕೈವಾಡ ಇದೆ ಎನ್ನುವ ಅನುಮಾನ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಕೂಡಲೆ ಸ್ಥಳಕ್ಕೆ ಭೇಟಿ ನೀಡಿ ಅಕ್ರಮವಾಗಿ ಮಂಜೂರು ಮಾಡಿರುವ ಜಾಗವನ್ನು ರದ್ದುಪಡಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಮನವಿ ಮೂಲಕ ಒತ್ತಾಯಿಸಲಾಯಿತು.

    ಒಕ್ಕೂಟದ ಅಧ್ಯಕ್ಷ ರಮೇಶ್ ಈ.ಕೆಳದಿ, ಗ್ರಾಮಸೇವಾ ಸಮಿತಿ ಅಧ್ಯಕ್ಷ ಕೃಷ್ಣಪ್ಪ, ಪ್ರಮುಖರಾದ ಶಾಂತರಾಜ್ ಜೈನ್, ಬುಡನ್ ಖಾನ್, ಲಕ್ಷ್ಮಣ, ಎಂ.ಆರ್.ಹೊಳೆಯಪ್ಪ, ಕೆರೆಯಪ್ಪ, ಬಿ.ಕೆ.ಕೇಶವ, ಯಾಸಿನ್ ಸಾಬ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts