More

    ಅಕ್ರಮ ಬಾಕ್ಸೈಟ್ ದಂಧೆ ಬಂಟ್ವಾಳ ಶಾಸಕರ ಪತ್ನಿ, ಪಿಡಿಓ ಶಾಮೀಲು: ರಮಾನಾಥ ರೈ ಆರೋಪ

    ಬಂಟ್ವಾಳ:  ತಾಲೂಕಿನ ಮುಡಿಪು ಪರಿಸರದಲ್ಲಿ ನಡೆಯುತ್ತಿರುವ ಅಕ್ರಮ ಬಾಕ್ಸೈಟ್ ದಂಧೆಯಲ್ಲಿ ಬಂಟ್ವಾಳ ಶಾಸಕರ ಪತ್ನಿ ಮತ್ತು ಕೈರಂಗಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಾಮೀಲಾಗಿರುವುದು ದಾಖಲೆಯಿಂದ ಸಾಬೀತಾಗಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಆರೋಪಿಸಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಕ್ಸೈಟ್ ದಂಧೆಯ ಬಗ್ಗೆ ಈ ಹಿಂದೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಶಾಸಕರೊಬ್ಬರ ಬಗ್ಗೆ ಆರೋಪ ಮಾಡಿದ್ದೆ. ಬಂಟ್ವಾಳ ಶಾಸಕ ರಾಜೇಶ್ ನಾಕ್ ಆರೋಪಕ್ಕೆ ಪ್ರತಿಕ್ರಿಯಿಸಿ ‘ದಾಖಲೆ ಸಹಿತ ಆರೋಪ ಸಾಬೀತುಪಡಿಸಿದರೆ ರಾಜಕೀಯ ತ್ಯಜಿಸುವೆ’ ಎಂದು ಹೇಳಿದ್ದರು. ಈಗ ದಂಧೆಯ ಎಲ್ಲ ದಾಖಲೆಗಳ ಸಹಿತ ಆರೋಪವನ್ನು ಸಾಬೀತುಪಡಿಸುತ್ತಿದ್ದೇನೆ ಎಂದು ರಮಾನಾಥ ರೈ ಹೇಳಿದರು.

    ರಾಜೇಶ್ ನಾಯ್ಕ ಅವರು ತನ್ನ ಪತ್ನಿ ಉಷಾ ಆರ್. ನಾಯ್ಕ ಅವರ ಹೆಸರಿನಲ್ಲಿ ತೆಂಕ ಎಡಪದವು ಗ್ರಾಮದಲ್ಲಿ ಕಲ್ಲು ಕೋರೆಗೆ 5 ವರ್ಷಕ್ಕೆ ಪರವಾನಗಿ ಪಡೆದಿದ್ದಾರೆ. ಆ ವ್ಯಾಪ್ತಿಯ ಮಣ್ಣಿನಲ್ಲಿ ರೆಡ್‌ಬಾಕ್ಸೈಟ್ ಅಂಶವಿಲ್ಲದ ಕಾರಣ ಅದೇ ಪರವಾನಗಿಯಲ್ಲಿ ಮುಡಿಪು ಪರಿಸರದಿಂದ ರೆಡ್‌ಬಾಕ್ಸೈಟ್‌ನ್ನು ತಮಿಳುನಾಡು, ಆಂಧ್ರಪ್ರದೇಶದ ವಿವಿಧ ಸಿಮೆಂಟ್ ಕಂಪನಿಗೆ ಸಾಗಾಟ ಮಾಡಿದ್ದಾರೆ. ಇದರಲ್ಲಿ ಕೈರಂಗಳ ಗ್ರಾಮ ಪಂಚಾಯಿತಿ ಪಿಡಿಓ ಕೂಡಾ ಶಾಮೀಲಾಗಿರುವುದು ದಾಖಲೆಯಿಂದ ತಿಳಿದು ಬಂದಿದೆ. ಮುಡಿಪುವಿನಿಂದ ಹೊರರಾಜ್ಯಕ್ಕೆ ಶಾಸಕರ ಪತ್ನಿ ಹೆಸರಿನಲ್ಲಿ 24 ಸಾವಿರ ಟನ್, ಕೈರಂಗಳ ಪಿಡಿಓ ಹೆಸರಿನಲ್ಲಿ 14 ಸಾವಿರ ಟನ್ ಬಾಕ್ಸೈಟ್ ಸಾಗಾಟವಾಗಿರುವ ದಾಖಲೆ ಸಿಕ್ಕಿದೆ ಎಂದು ರೈ ಹೇಳಿದರು.

    ಕೈರಂಗಳ ವ್ಯಾಪ್ತಿಯಲ್ಲಿ ನಿವೇಶನಕ್ಕಾಗಿ ಜಾಗದ ಸಮತಟ್ಟು ಮಾಡಲು ಅವಕಾಶ ಕಲ್ಪಿಸಿದ 6.76ಎಕರೆ ಜಾಗದ ರೆಡ್‌ಬಾಕ್ಸೈಟ್ ಹೊರರಾಜ್ಯಕ್ಕೆ ಹೋಗಿದ್ದು, ಇದರಲ್ಲಿ ಪಿಡಿಓ ಶಾಮೀಲಾಗಿದ್ದಾರೆ. ಗಣಿ ಇಲಾಖೆಗೆ ಸಂಬಂಧಪಟ್ಟ ವಿಚಾರವನ್ನು ಪಿಡಿಓ ಹೇಗೆ ವಿಲೇವಾರಿ ಮಾಡಿದರು. ಇದರಲ್ಲಿ ಅಧಿಕಾರ ದುರ್ಬಳಕೆ ಮಾಡಲಾಗಿದ್ದು, ಈ ಬಗ್ಗೆ ತನಿಖೆ ನಡೆಯಬೇಕು. ಬಾಕ್ಸೈಟ್ ದಂಧೆಯಲ್ಲಿ ಸ್ಥಳೀಯ ಬಿಜೆಪಿ ಮುಖಂಡರು ಇದ್ದಾರೆ. ಬಿಜೆಪಿ ಶಾಸಕರು ಮರಳು, ಬಾಕ್ಸೈಟ್ ದಂಧೆಯಲ್ಲಿ ಜಾತ್ಯತೀತತೆ ಪ್ರದರ್ಶಿಸುತ್ತಿದ್ದು, ರಾಜಕೀಯವಾಗಿ ಓಟಿಗೆ ನಿಂತಾಗ ಹಿಂದೂ ಧರ್ಮದ ರಕ್ಷಕರೆಂದು ಬಿಂಬಿಸುತ್ತಾರೆಂದು ರೈ ಆರೋಪಿಸಿದರು.

    ಮುಖ್ಯ ಕಾರ್ಯದರ್ಶಿಗೆ ದೂರು: ರಾಜ್ಯದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರನ್ನು ಮುಖತಃ ಭೇಟಿಯಾಗಿ ಬಾಕ್ಸೈಟ್ ದಂಧೆಯ ಬಗ್ಗೆ ಸಮಗ್ರ ಮಾಹಿತಿಯನ್ನೊಳಗೊಂಡ ದೂರನ್ನು ನೀಡಿದ್ದೇನೆ. ಅವರು ಗಣಿ ಇಲಾಖೆ ನಿರ್ದೇಶಕರು ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ತನಿಖೆಗೆ ಸೂಚನೆ ನೀಡಿದ್ದಾರೆ ಎಂದರು.

    ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕ ಜೆ.ಆರ್. ಲೋಬೊ, ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಮೇಯರ್‌ಗಳಾದ ಹರಿನಾಥ್, ಶಶಿಧರ್ ಹೆಗ್ಡೆ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೋ, ಕಾಂಗ್ರೆಸ್ ಮುಖಂಡರಾದ ಸಂತೋಷ್ ಕುಮಾರ್ ಶೆಟ್ಟಿ, ಸದಾಶಿವ ಉಳ್ಳಾಲ್, ವಿಶ್ವಾಸ್ ಕುಮಾರ್‌ದಾಸ್, ಸಂತೋಷ್ ಕುಮಾರ್ ಶೆಟ್ಟಿ, ಬೇಬಿ ಕುಂದರ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts