More

    ಅಕ್ರಮ ಗಣಿಗಾರಿಕೆಗೆ ಆರ್ಕುಂದ ಗಢಗಢ : ಬೇಕಾಬಿಟ್ಟಿ ಸ್ಫೋಟಕಗಳ ಬಳಕೆ, ಜನರಲ್ಲಿ ಹೆಚ್ಚಿದ ಆತಂಕ

    ಗೌರಿಬಿದನೂರು: ಹೊತ್ತು-ಗೊತ್ತು ಇಲ್ಲದೆ ನಡೆಯುವ ಗಣಿಗಾರಿಕೆ, ಅನೇಕ ಮನೆಗಳಲ್ಲಿ ಬಿರುಕು, ಕಿವಿ ಕಿತ್ತು ಹೋಗುವಂತಹ ಶಬ್ದ, ಯಾವ ಸಮಯದಲ್ಲಿ ಏನಾಗುತ್ತದೋ ಎಂಬ ಆತಂಕದಲ್ಲಿಯೇ ಬದುಕುತ್ತಿದ್ದಾರೆ ಮಂಚೇನಹಳ್ಳಿ ಹೋಬಳಿಯ ಪುರ ಪಂಚಾಯಿತಿ ವ್ಯಾಪ್ತಿಯ ಆರ್ಕುಂದ ಹಾಗೂ ಸುತ್ತಲ ಗ್ರಾಮಗಳ ಜನ.
    ಆರ್ಕುಂದದಲ್ಲಿ ನಿರಂತರವಾಗಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಗ್ರಾಮಗಳು ನಡುಗುತ್ತಿವೆ. ಜನ ಜೀವ ಕೈಲಿಡಿದು ಬದುಕುವಂತಾಗಿದೆ. ಮರೆಯಲಾಗದ ಹೀರೇನಾಗವಲ್ಲಿಯಲ್ಲಿ ಜಿಲೆಟಿನ್ ಸ್ಫೋಟವು ಹಲವರನ್ನು ಬಲಿ ತೆಗೆದುಕೊಂಡ ದುರ್ಘಟನೆಯ ನಡುವೆ ಇಲ್ಲಿ ಕಲ್ಲು ಗಣಿಗಾರಿಕೆಯ ಸ್ಫೋಟಗಳು ಸಹಜವಾಗಿ ಆತಂಕಕ್ಕೆ ಕಾರಣವಾಗಿದೆ.

    ಕೆಲಸ ಮಾಡಲು ಭಯ: ಇಲ್ಲಿ ಗಣಿ ನಿಯಮ ಉಲ್ಲಂಘಿಸಿ ಭಾರಿ ಪ್ರಮಾಣದ ಸ್ಫೋಟಕಗಳನ್ನು ಬಳಸಲಾಗುತ್ತಿದೆ. ಇದರಿಂದ ಹೆಚ್ಚಿನ ಶಬ್ದ ಉತ್ಪತ್ತಿಯ ಜತೆಗೆ ಕಿ.ಮೀ.ಗಟ್ಟಲೆ ಸೈಜ್ ಕಲ್ಲುಗಳು ಹಾರಿ ಬೀಳುತ್ತಿವೆ. ಇದರಿಂದ ಜಮೀನಿನಲ್ಲಿ ರೈತರು ಮತ್ತು ಕೂಲಿ ಕಾರ್ಮಿಕರು ಕೆಲಸ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಕ್ಕಳು, ವೃದ್ಧರು, ಅಂಗವಿಕಲರ ಪಾಡಂತೂ ಹೇಳತೀರದಾಗಿದೆ. ಒಂಟಿಯಾಗಿ ಹೊರಗಡೆ ಓಡಾಡಲು ಭಯಪಡುವಂತಾಗಿದೆ. ಮುನ್ನೆಚ್ಚರಿಕೆಯಾಗಿ ಮತ್ತೊಬ್ಬರನ್ನು ಜೊತೆಯಲ್ಲಿ ಕರೆದೊಯ್ಯಬೇಕು ಎಂಬ ಅಳಲು ಇಲ್ಲಿನ ಗ್ರಾಮಸ್ಥರದ್ದು.

    ಮನೆಗಳು ಅಪಾಯದಂಚಿಗೆ: ಅರಸಲ್ ಬಂಡೆ, ಕದಿರಿದೇವರಹಳ್ಳಿ, ಪುರ, ನಾಗೇನಹಳ್ಳಿ, ಕಾಟನಾಗೇನಹಳ್ಳಿ, ಅರ್ಕುಂದ ಗ್ರಾಮಗಳಲ್ಲಿ ಬಹುತೇಕ ಮನೆಗಳು ಗೋಡೆಗಳು ಬಿರುಕುಬಿಟ್ಟಿದ್ದ್ದು, ಅಪಾಯದ ಅಂಚಿನಲ್ಲಿವೆ. ಮನೆಗಳು ಯಾವಾಗ ಬೀಳುತ್ತವೋ ಎಂದು ಜನ ಭಯದಲ್ಲೇ ಜೀವನ ಸಾಗಿಸುವಂತಾಗಿದೆ. ಗಣಿ ಗುತ್ತಿಗೆದಾರ ಧನದಾಹದಿಂದ ಬೇಕಾಬಿಟ್ಟಿ ಸ್ಫೋಟಕಗಳನ್ನು ಬಳಸುತ್ತಿದ್ದು, ಇದರಿಂದ ಜನರು ತೊಂದರೆ ಅನುಭವಿಸುವಂತಾಗಿದೆ. ಮತ್ತೊಂದೆಡೆ ಸ್ಥಳೀಯ ಪರಿಸರ ಹಾಳಾಗುತ್ತಿದೆ. ಅಧಿಕಾರಿಗಳು ಕೂಡ ಗಣಿ ಗುತ್ತಿಗೆದಾರರೊಂದಿಗೆ ಶಾಮೀಲಾಗಿದ್ದಾರೆ. ಆದ್ದರಿಂದ ಅಕ್ರಮ ಕೆಲಸಗಳ ವಿರುದ್ಧ ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

    ಭಾರಿ ಸ್ಫೋಟದ ದೃಶ್ಯ ವೈರಲ್: ಇಲ್ಲಿನ ಗಣಿಗಾರಿಕೆ ಕೇಂದ್ರದಲ್ಲಿ ಇತ್ತೀಚೆಗೆ ಕಲ್ಲು ಬಂಡೆಯ ಸ್ಫೋಟದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಯುದ್ಧಭೂಮಿಯಲ್ಲಿ ಸಿಡಿಯುವ ಸ್ಫೋಟದ ಮಾದರಿಯ ದೃಶ್ಯ ಕಂಡು ಬಂದಿದೆ. ಇದನ್ನು ನೋಡಿ ಹಲವರು ಬೆಚ್ಚಿ ಬೀಳುತ್ತಿದ್ದಾರೆ. ಆದರೆ, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಳ್ಳದೆ ಆರಾಮವಾಗಿದ್ದಾರೆ.

    ಸ್ಫೋಟದಿಂದ ಭಾರಿ ಶಬ್ದ ಬರುವುದರಿಂದ ಭಯದ ವಾತಾವರಣ ನಿರ್ಮಾಣವಾಗಿದೆ. ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿರುವ ಪ್ರಾಣಿ ಪಕ್ಷಿಗಳು ಭಯದಿಂದ ಗಾಬರಿಗೊಂಡು ಬೇರೆ ಸ್ಥಳಕ್ಕೆ ದಿಕ್ಕಾಪಾಲಾಗಿ ಹೋಗುತ್ತಿವೆ. ಶೀಘ್ರವೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಭಾರಿ ಸ್ಫೋಟಕಗಳ ಬಳಕೆ ನಿಯಂತ್ರಿಸಬೇಕು.
    ಎಂ.ಆರ್.ರವಿಕುಮಾರ್, ಸ್ಥಳೀಯ ನಿವಾಸಿ

    ********

    ಗಣಿಗಾರಿಕೆಯಿಂದಾಗಿ ಅಕ್ಕ ಪಕ್ಕದ ಜಮೀನುಗಳಲ್ಲಿ ದೊಡ್ಡ ಗಾತ್ರದ ಕಲ್ಲುಗಳು ಬೀಳುತ್ತಿವೆ. ಇಲ್ಲಿಯ ಉತ್ತಮ ಪರಿಸರ ಸಂಪೂರ್ಣ ಹಾಳಾಗುತ್ತಿದೆ. ಗಣಿಗಾರಿಕೆಯಿಂದ ಬರುವ ಧೂಳಿನಿಂದಾಗಿ ಜಮೀನಿನಲ್ಲಿ ಬೆಳೆಗಳನ್ನು ಬೆಳೆಯಲೂ ಸಾಧ್ಯವಾಗುತ್ತಿಲ್ಲ.
    ಗಿರೀಶ್, ಸ್ಥಳೀಯ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts