More

    ಅಕಾಲಿಕ ಮಳೆ, ಮುಗಿಯದ ರಗಳೆ

    ಮಂಜುನಾಥ ಅಂಗಡಿ ಧಾರವಾಡ

    ಜಿಲ್ಲೆಯಲ್ಲಿ ಕಳೆದ ಆಗಸ್ಟ್, ಅಕ್ಟೋಬರ್​ನಲ್ಲಿ ಸುರಿದ ಮಳೆಯಿಂದ ಹಾನಿಗೀಡಾದ ಮನೆಗಳ ಮರು ನಿರ್ಮಾಣ ಹಾಗೂ ದುರಸ್ತಿ ಕಾರ್ಯದ ಮೇಲೂ ಕರೊನಾ ಮಹಾಮಾರಿಯ ಕರಿನೆರಳು ಬಿದ್ದಿದ್ದು, ನಿಗದಿತ ಅವಧಿಯಲ್ಲಿ ಕೆಲಸ ಮುಗಿಯುತ್ತಿಲ್ಲ. ಇನ್ನೊಂದು ತಿಂಗಳಲ್ಲಿ ಮುಂಗಾರು ಆರಂಭವಾಗಲಿದ್ದು, ಹೊಸ ಸಮಸ್ಯೆಗಳಿಗೆ ದಾರಿಯಾಗುವ ಅಪಾಯವಿದೆ.

    ಜಿಲ್ಲೆಯಲ್ಲಿ ಎ, ಬಿ, ಸಿ ವರ್ಗದ 21,089 ಮನೆಗಳು ಹಾನಿಗೀಡಾಗಿವೆ. ಅವುಗಳಲ್ಲಿ 128 ಮನೆ ಎ ವರ್ಗ, 1687 ಮನೆ ಬಿ ವರ್ಗ ಹಾಗೂ 19,274 ಮನೆ ಸಿ ವರ್ಗದ್ದು. ಎ ವರ್ಗ ಮತ್ತು ಬಿ ವರ್ಗದಿಂದ ಎ ವರ್ಗಕ್ಕೆ ಪರಿವರ್ತನೆಗೊಂಡರೆ 5 ಲಕ್ಷ ರೂ., ಬಿ ವರ್ಗದಲ್ಲೇ ಇದ್ದು ದುರಸ್ತಿ ಮಾಡಿಕೊಂಡರೆ 3 ಲಕ್ಷ ರೂ., ಸಿ ವರ್ಗದ ಫಲಾನುಭವಿಗಳಿಗೆ 1 ಲಕ್ಷ ರೂ. ಘೊಷಿಸಲಾಗಿತ್ತು. ಜಿಲ್ಲೆಯ ಮೂರೂ ವರ್ಗಗಳ ಕೆಲವರಿಗೆ 3 ಕಂತು, ಮತ್ತೆ ಕೆಲವರಿಗೆ 2 ಮತ್ತು 1 ಕಂತು ಪರಿಹಾರದ ಮೊತ್ತ ಜಮೆಯಾಗಿದೆ.

    ಕರೊನಾ ಶುರು, ಪರಿಹಾರ ಕಾರ್ಯ ಬಂದ್: ಮಾರ್ಚ್ 2ನೇ ವಾರದಲ್ಲಿ ಕರೊನಾ ಕರಿನೆರಳು ಬಿದ್ದಿತು. ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಕರೊನಾ ಕೋವಿಡ್ ಪರಿಹಾರ ಕಾರ್ಯಕ್ಕೆ ನಿಯೋಜಿಸಲಾಗಿದೆ. ಸಂಬಂಧಿಸಿದ ಅಧಿಕಾರಿಗಳು ಕರೊನಾ ಕರ್ತವ್ಯದ ಮೇಲಿದ್ದಾರೆ. ಇತ್ತ ಅಕಾಲಿಕ ಮಳೆ ಶುರುವಾಗಿದೆ. ಜಲ್ಲಿ, ಸಿಮೆಂಟ್, ಇಟ್ಟಿಗೆ ಪೂರೈಕೆಯೂ ಸ್ಥಗಿತಗೊಂಡಿತ್ತು. ಹೀಗಾಗಿ ಅರೆಬರೆ ಮನೆ ಕಟ್ಟಿಕೊಂಡಿರುವ ಫಲಾನುಭವಿಗಳು ಪರಿತಪಿಸುತ್ತಿದ್ದಾರೆ.

    ಅಂತೂ ತೆರೆದ ನಿಗಮ ಕಚೇರಿ: ಲಾಕ್​ಡೌನ್ ಪರಿಣಾಮ ರಾಜೀವ ಗಾಂಧಿ ವಸತಿ ನಿಗಮದ ಕೇಂದ್ರ ಕಚೇರಿಯ ಕೆಲಸ ಕಾರ್ಯಗಳು ಮಾರ್ಚ್ 20ರಿಂದ ಸಂಪೂರ್ಣ ಸ್ಥಗಿತಗೊಂಡಿದ್ದವು. ಹೀಗಾಗಿ ಜಿಲ್ಲಾ ಮಟ್ಟದ ನಿಗಮದ ಅಧಿಕಾರಿಗಳನ್ನೂ ಕರೊನಾ ಕಾರ್ಯಕ್ಕೆ ನಿಯೋಜಿಸಿಕೊಳ್ಳಲಾಗಿದೆ. ಮೇ 4ರಿಂದ ನಿಗಮದ ಕೇಂದ್ರ ಕಚೇರಿ ಆರಂಭಗೊಂಡಿದೆ. ಈಗಲಾದರೂ ಮತ್ತೊಂದು ಕಂತು ಬರುತ್ತದೆಯೆ ಎಂದು ಫಲಾನುಭವಿಗಳು ಕಾದು ಕುಳಿತಿದ್ದಾರೆ.

    ಕೇಂದ್ರ ಕಚೇರಿ ಆರಂಭಗೊಂಡಿದ್ದು, ಪರಿಹಾರ ಜಮಾ ಕಾರ್ಯಗಳು ವೇಗ ಪಡೆದುಕೊಳ್ಳಲಿವೆ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.

    ಕರೊನಾ ಹರಡುವಿಕೆ ತಡೆ ಹಿನ್ನೆಲೆಯಲ್ಲಿ ಲಾಕ್​ಡೌನ್ ಜಾರಿಯಾಗಿದ್ದರಿಂದ ಎಲ್ಲ ಚಟುವಟಿಕೆಗಳೂ ಸ್ಥಗಿತಗೊಂಡಿದ್ದವು. ಪರಿಷ್ಕೃತ ಆದೇಶದಂತೆ ಗ್ರಾಮೀಣ ಭಾಗದ ನಿರ್ಮಾಣ ಕಾಮಗಾರಿಗಳಿಗೆ ಅವಕಾಶ ನೀಡಲಾಗಿದೆ. ಮನೆ ನಿರ್ಮಾಣ ಚಟುವಟಿಕೆಗಳು ಶೀಘ್ರವೇ ಆರಂಭಗೊಳ್ಳಲಿವೆ. ಬಾಕಿ ಉಳಿದಿರುವ ಮುಂದಿನ ಹಂತಗಳ ಜಿಪಿಎಸ್ ಕಾರ್ಯ ನಡೆದು ಪರಿಹಾರಧನ ಬಿಡುಗಡೆ ಮಾಡಲಾಗುವುದು.

    | ದೀಪಾ ಚೋಳನ್ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts