More

    ಅಕಾಲಿಕ ಮಳೆಗೆ ಅನ್ನದಾತ ತತ್ತರ

    ಹುಬ್ಬಳ್ಳಿ: ಪದೇ ಪದೆ ಮುನಿಸಿಕೊಳ್ಳುತ್ತಿರುವ ಪ್ರಕೃತಿ ಮಾತೆ ಎದುರು ಭೂಮಿ ತಾಯಿಯ ಚೊಚ್ಚಲ ಮಗ ಬಳಲಿ ಬೆಂಡಾಗಿ ಹೋಗಿದ್ದಾನೆ. ಕಳೆದ ಎರಡು ವರ್ಷದಿಂದ ಮುಂಗಾರು ಬೆಳೆಗಳು ಬಹುತೇಕ ಅತಿವೃಷ್ಟಿಗೆ ಕೊಚ್ಚಿ ಹೋಗಿವೆ. ಈ ವರ್ಷವೂ ಮುಂಗಾರಿನಲ್ಲಿ ಬಿಡದೇ ಸುರಿದ ಮಳೆಯಿಂದ ಬೆಳೆಗಳು ಹಾಳಾದವು. ಇದೀಗ ಹಿಂಗಾರು ಬೆಳೆಗಳ ಸರದಿ. ಇದೇ ಹಿಂಗಾರಿನಲ್ಲಿ ಸತತ ಎರಡನೇ ಬಾರಿ ಅಕಾಲಿಕ ಮಳೆಗೆ ಸಿಲುಕಿ ‘ಕೈಗೆ ಬಂದ ತುತ್ತು ಬಾಯಿಗೆ ಬಾರದ’ ಸ್ಥಿತಿ ಕೃಷಿಕನದ್ದಾಗಿದೆ.

    ಧಾರವಾಡ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನ ಬೆಳೆಗಳು ಕೇವಲ ಬಿತ್ತನೆ ಮಾಡುವಾಗ ಇರುವ ತೇವಾಂಶದಲ್ಲೇ ಬೆಳೆಯುತ್ತವೆ. ನಂತರದ ಹಂತದಲ್ಲಿ ಒಂದಿಷ್ಟು ತಂಪಾದ ವಾತಾವರಣ ಇದ್ದರೆ ಸಾಕು ಬೆಳೆಗಳು ಕೈ ಸೇರುತ್ತವೆ. ಹಿಂಗಾರಿನ ಜೋಳ, ಕಡಲೆ, ಗೋಧಿ, ಕುಸುಬಿ ಮುಂತಾದ ಬೆಳೆಗಳಿಗೆ ಹೆಚ್ಚು ಮಳೆ ಅಗತ್ಯವಿರುವುದಿಲ್ಲ. ಆದರೆ, ಈ ವರ್ಷದ ಹಿಂಗಾರು ಹಂಗಾಮಿನಲ್ಲಿ ಜನವರಿ- ಫೆಬ್ರವರಿ ತಿಂಗಳಲ್ಲಿ ಎರಡು ಬಾರಿ ಅಕಾಲಿಕ ಮಳೆ ಸುರಿದಿದೆ. ಇದರಿಂದ ಶೇ. 15ರಷ್ಟು ಬೆಳೆ ಹಾಳಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

    ಕಳೆದ ಜನವರಿ 5-6ರಂದು ಹವಾಮಾನ ವೈಪರೀತ್ಯದಿಂದಾಗಿ ಅಕಾಲಿಕ ಮಳೆ ಸುರಿದಿತ್ತು. ವಿಶೇಷವಾಗಿ, ಕಡಲೆ ಬೆಳೆಯ ಹುಳಿ ತೊಳೆದು ಇಳುವರಿ ಕುಂಠಿತವಾಯಿತು. ಅಲ್ಲದೆ, ಕೀಟಭಾದೆ ಎದುರಾಗಿತ್ತು. ರೈತರು ಕ್ರಿಮಿನಾಶಕ ಸಿಂಪಡಣೆ ಮಾಡಿ ಹೇಗೋ ಹತೋಟಿಗೆ ತಂದರು. ಇದೀಗ ಮತ್ತೆ ಕಳೆದ ಮೂರು ದಿನಗಳಿಂದ ಆಗಾಗ ಮಳೆ ಸುರಿಯುತ್ತಲೇ ಇದೆ. ಮೋಡ ಕವಿದ ವಾತಾವರಣವೂ ಇದೆ. ಇದರಿಂದ ಈಗಷ್ಟೇ ಕಟಾವಿಗೆ ಬಂದಿರುವ ಜೋಳ, ಕಡಲೆ, ಗೋಧಿ ಬೆಳೆಗಳು ತೀವ್ರ ತೊಂದರೆಗೆ ಸಿಲುಕಿವೆ.

    ಮೈದುಂಬಿಕೊಂಡಿರುವ ಜೋಳದ ತೆನೆಗಳು, ಕಡಲೆ ಬೆಳೆಗಳು ಕೆಲವೆಡೆ ನೆಲ ಕಚ್ಚಿವೆ. ಕೊಯ್ಲು ಮಾಡಿ ಹೊಲದಲ್ಲಿ ಇಟ್ಟಿರುವ ಬೆಳೆಗಳ ಗುಣಮಟ್ಟ ಹಾಳಾಗಿದೆ.

    ಕಡಲೆ ಬೆಳೆಗೆ ಮಾರಕ: ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ಕಡಲೆ ಬೆಳೆಗೆ ಅಕಾಲಿಕ ಮಳೆ ಮಾರಕವಾಗಿ ಪರಿಣಮಿಸಿದೆ. ಕಡಲೆ ಬೆಳೆ ಎರಡು ಬಾರಿ ಮಳೆಗೆ ಸಿಕ್ಕಿರುವುದರಿಂದ ಗುಣಮಟ್ಟ ಕಡಿಮೆಯಾಗಿದೆ. ಈಗಂತೂ ಕೊಯ್ಲಿಗೆ ಬಂದಿದ್ದರಿಂದ ಗಿಡದಲ್ಲೇ ಕಾಳು ಉಬ್ಬಿಕೊಂಡಿದೆ. ಅದನ್ನು ಮತ್ತೆ ಒಣಗಿಸುವುದಕ್ಕೂ ಬಿಸಿಲು ಬೀಳುತ್ತಿಲ್ಲ. ಹಾಗೇ ಒಕ್ಕಣೆ ಮಾಡಿದರೆ ಕಾಳು ಬೇಳೆಯಾಗುತ್ತಿವೆ. ಮೂರು ದಿನದಿಂದ ಮೋಡ ಕವಿದಿದ್ದರಿಂದ ರೈತರಿಗೆ ದಿಕ್ಕು ತೋಚದಂತಾಗಿದೆ. ಬಿಸಿಲು ಬಿದ್ದರೆ ಮಾತ್ರ ಅವುಗಳನ್ನು ಒಣಗಿಸಲು ಸಾಧ್ಯ ಎಂದು ರೈತರು ನೋವು ತೋಡಿಕೊಳ್ಳುತ್ತಿದ್ದಾರೆ.

    ಹಿಂಗಾರು ಬಿತ್ತನೆ: 2020-21ರ ಹಿಂಗಾರಿನಲ್ಲಿ ಧಾರವಾಡ ಜಿಲ್ಲೆಯಲ್ಲಿ ಮುಖ್ಯವಾಗಿ ಕಡಲೆ, ಜೋಳ, ಗೋಧಿ ಬಿತ್ತನೆ ಮಾಡಲಾಗಿದೆ. ಜಿಲ್ಲೆಯ ಒಟ್ಟು ಹಿಂಗಾರು ಬಿತ್ತನೆಯ ಪ್ರದೇಶ 2.10 ಲಕ್ಷ ಹೆಕ್ಟೇರ್ ಪೈಕಿ ಕಡಲೆ ಅತ್ಯಧಿಕ ಕ್ಷೇತ್ರ ವ್ಯಾಪಿಸಿದೆ. ಕೃಷಿ ಇಲಾಖೆ ಈ ಬಾರಿ 78,627 ಹೆಕ್ಟೇರ್​ನಲ್ಲಿ ಕಡಲೆಕಾಳು ಬಿತ್ತನೆ ಗುರಿ ಹೊಂದಿತ್ತು. ಆದರೆ, ರೈತರು ಗುರಿ ಮೀರಿ 90933 ಹೆಕ್ಟೇರ್​ನಲ್ಲಿ ಬಿತ್ತನೆ ಮಾಡಿದ್ದಾರೆ.

    ಈ ವರ್ಷ ಸತತ ಎರಡನೇ ಸಲ ಅಕಾಲಿಕ ಮಳೆ ಬೀಳುತ್ತಿರುವುದರಿಂದ ಮುಂಗಾರಿನಂತೆ ಹಿಂಗಾರು ಬೆಳೆಗಳೂ ಕೈ ಬಿಟ್ಟು ಹೋಗುವಂತಾಗಿದೆ. ಕೊಯ್ಲು ಮಾಡಿದ ಕಡಲೆ ಕಾಳು ಉಬ್ಬಿಕೊಂಡಿದೆ. ರೈತರಿಗೆ ಪ್ರಕೃತಿ ವಿಕೋಪ ಪರಿಹಾರ ನೀಡಲು ಸರ್ಕಾರ ಮುಂದೆ ಬರಬೇಕು.
    | ಸುಭಾಸ ಬೂದಿಹಾಳ ಕೋಳಿವಾಡ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts