More

    ಅಂತೂ ಮನೆ ಸೇರಿದ ಶತಾಯುಷಿ

    ಕಲಘಟಗಿ: ಕಳೆದ ಮೂರು ದಿನಗಳ ಹಿಂದೆ ತಾಲೂಕಿನ ದೇವಿಕೊಪ್ಪ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ನಾಪತ್ತೆಯಾಗಿದ್ದ ಬೈಚವಾಡ ಗ್ರಾಮದ ಶತಾಯುಷಿಯೊಬ್ಬರು ಮರಳಿ ಮನೆ ಸೇರಿದ್ದು, ಕುಟುಂಬಸ್ಥರು ನಿಟ್ಟುಸಿರು ಬಿಡುವಂತಾಗಿದೆ.

    ತಾಲೂಕಿನ ಸೂಳ್ಳಿಕಟ್ಟಿ ಗ್ರಾಪಂ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿರುವ ಬೈಚವಾಡ ಗ್ರಾಮದ ನಿವಾಸಿ ಜನ್ನು ಬಾಂಬು ಪಾಂಡರಮೀಶಿ (101) ಮನೆಗೆ ಮರಳಿದ್ದು, ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

    ಘಟನೆ ಹಿನ್ನೆಲೆ: ಜನ್ನು ಅವರು ಜೂ. 26ರಂದು ಮಧ್ಯಾಹ್ನ ಗ್ರಾಮದ ಹತ್ತಿರದ ಹೊಲಕ್ಕೆ ಹೋಗಿದ್ದರು. ಕಾಲು ದಾರಿಯಾಗಿದ್ದರಿಂದ ಸಂಜೆ ವಾಪಸಾಗುವಾಗ ದಾರಿ ತಪ್ಪಿ ಕಾಡಿನೊಳಕ್ಕೆ ಹೋಗಿದ್ದರು. ಕ್ರಮೇಣ ಕತ್ತಲು ಆವರಿಸಿದ್ದರಿಂದ ದಾರಿಕಾಣದೆ ಕಾಡಿನಲ್ಲೇ ಉಳಿದಿದ್ದರು. ಇತ್ತ ರಾತ್ರಿ 12ಗಂಟೆಯಾದರೂ ಜನ್ನು ಮನೆಗೆ ಬಾರದಿದ್ದುದರಿಂದ ಆತಂಕಗೊಂಡ ಕುಟುಂಬಸ್ಥರು ಹುಡುಕಾಟ ನಡೆಸಿದರಾದರೂ ಅಂದು ರಾತ್ರಿ ವೃದ್ಧನ ಸುಳಿವು ಸಿಕ್ಕಿರಲಿಲ್ಲ. ಮರುದಿನ ವೃದ್ಧನ ಕುಟುಂಬದ 30 ಜನ ಹಾಗೂ ಗ್ರಾಮಸ್ಥರು ಸೇರಿ ಅಂದಾಜು 50ಜನ ಬುತ್ತಿ ಕಟ್ಟಿಕೊಂಡು ಹೋಗಿ ಪ್ರತ್ಯೇಕ ತಂಡ ಮಾಡಿಕೊಂಡು ಅರಣ್ಯದ ನಾಲ್ಕೂ ದಿಕ್ಕುಗಳಲ್ಲಿ ಹುಡುಕಾಡಿದ್ದಾರೆ. ಜತೆಗೆ ಅರಣ್ಯ ಇಲಾಖೆಯ ಅಧಿಕಾರಿ ಶ್ರೀಕಾಂತ ಪಾಟೀಲ ಮತ್ತು ಸಿಬ್ಬಂದಿ ಸಾಥ್ ನೀಡಿದ್ದರು. ಆದರೂ ಪ್ರಯೋಜನವಾಗಿರಲಿಲ್ಲ. ಆದರೆ, ಮೂರು ದಿನಗಳಿಂದ ಆಹಾರವಿಲ್ಲದೆ ನಿತ್ರಾಣಗೊಂಡಿದ್ದ ಜನ್ನು, ಮಂಗಳವಾರ ಅದ್ಹೇಗೋ ಗ್ರಾಮದ ಸಮೀಪವಿರುವ ಕೆರೆ ದಂಡೆವರೆಗೂ ಬಂದು ಕುಳಿತಿದ್ದ. ವೃದ್ಧನನ್ನು ಕಂಡ ಗ್ರಾಮದ ವ್ಯಕ್ತಿಯೊಬ್ಬ ತಕ್ಷಣವೇ ಕುಟುಂಬದವರಿಗೆ ಸುದ್ದಿ ಮುಟ್ಟಿಸಿದ್ದಾನೆ, ಕೂಡಲೆ ಜನ್ನು ಕುಟುಂಬಸ್ಥರು ಮತ್ತು ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ವೃದ್ಧನನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ. ಬಳಿಕ ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಜನ್ನು ಅವರಿಗೆ ಆರೈಕೆ ಮಾಡಿ ಸನ್ಮಾನಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts