More

    ಅಂಡರ್‌ಗ್ರೌಂಡ್ ಡಸ್ಟ್‌ಬಿನ್‌ಗೆ ಸಿದ್ಧತೆ

    ಬೆಳಗಾವಿ: ನಗರದಲ್ಲಿ ಕಸ ವಿಲೇವಾರಿಗೆ ಮಹಾನಗರ ಪಾಲಿಕೆ ವೈಜ್ಞಾನಿಕ ಕ್ರಮ ಅನುಸರಿಸುತ್ತಿದ್ದು, ನಗರ ನೈರ್ಮಲ್ಯಕ್ಕೆ ಅಧಿಕಾರಿಗಳು ಹೆಚ್ಚು ಒತ್ತು ನೀಡುತ್ತಿದ್ದಾರೆ. 15ನೇ ಹಣಕಾಸು ಯೋಜನೆಯಡಿ 1.85 ಕೋಟಿ ರೂ. ವೆಚ್ಚದಲ್ಲಿ ‘ಅಂಡರ್‌ಗ್ರೌಂಡ ಡಸ್ಟ್ ಬಿನ್’ ನಿರ್ಮಾಣಕ್ಕೆ ಸಿದ್ಧತೆ ನಡೆಸಿದ್ದಾರೆ.ಮೊದಲ ಹಂತದಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದ 18 ಕಡೆಗಳಲ್ಲಿ ಅಂಡರ್‌ಗ್ರೌಂಡ್ ಡಸ್ಟ್‌ಬಿನ್ ಸಿದ್ಧಗೊಳಿಸಲು ಅಧಿಕಾರಿಗಳು ತಯಾರಿ ನಡೆಸಿದ್ದಾರೆ. ಈ ಯೋಜನೆ ಕುರಿತಂತೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಅನುಮೋದನೆಗೆ ಕಳುಹಿಸಲಾಗಿದ್ದು, ಶೀಘ್ರದಲ್ಲಿ ಯೋಜನೆ ಅನುಷ್ಠಾನಕ್ಕೆ ಪಾಲಿಕೆ ಅಧಿಕಾರಿಗಳು ಕಾರ್ಯಾ ದೇಶ ನೀಡುವುದಾಗಿ ತಿಳಿಸಿದ್ದಾರೆ. ಈ ವಿಶಿಷ್ಟ ಯೋಜನೆ ಸೂರತ್‌ನಲ್ಲಿ ಈಗಾಗಲೇ ನಿರ್ಮಾಣವಾಗಿದ್ದು, ಇದೀಗ ಬೆಳಗಾವಿ ಯಲ್ಲಿ ಅನುಷ್ಠಾನಗೊಳ್ಳುತ್ತಿರುವುದು ವಿಶೇಷವಾಗಿದೆ.

    1.85 ಕೋಟಿ ರೂ.ಯೋಜನೆ: 1.85 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದ್ದು, ಈ ಅನುದಾನದಲ್ಲಿ ಕಸ ವಿಲೇವಾರಿಗೆ ಕ್ರೇನ್ ಆಧಾರಿತ ಒಂದು ವಾಹನ, 18 ಕಂಟೇನರ್ ಖರೀದಿಸಲಾಗುತ್ತಿದೆ. ವಾಹನವೊಂದಕ್ಕೆ 85 ಲಕ್ಷ ರೂ. ಮೀಸಲಿಡಲಾಗಿದೆ. ಬೆಲಿಂಗ್ ಮಷಿನ್, ಪ್ಲಾಸ್ಟಿಕ್ ಸ್ಟಡ್ಡಿಂಗ್ ಮಷಿನ್, ಜೆಸಿಬಿ ಮಾದರಿಯ ಲೋಡರ್ ಬಳಸಿಕೊಳ್ಳಲಾಗುತ್ತಿದೆ.
    ಜನದಟ್ಟಣೆ ಪ್ರದೇಶದಲ್ಲಿ ಅಳವಡಿಕೆ: ನಗರದ ಜನನಿಬಿಡ ಪ್ರದೇಶ ಹಾಗೂ ವಾಣಿಜ್ಯ ಪ್ರದೇಶದಲ್ಲಿ ದೊಡ್ಡ ದೊಡ್ಡ ಅಂಗಡಿಗಳು ಇರುವುದರಿಂದ ರಾತ್ರಿ ವೇಳೆ ಹೆಚ್ಚಿನ ಪ್ರಮಾಣದ ಕಸ ಸಂಗ್ರಹವಾಗುತ್ತಿದೆ. ಅಂಗಡಿಕಾರರು ಕಸ ತಂದು ರಸ್ತೆ ಮೇಲೆ ಬಿಸಾಕಿ ಹೋಗುತ್ತಿದ್ದಾರೆ. ಇದರಿಂದ ಕಸ ವಿಲೇವಾರಿಗೆ ಪೌರ ಕಾರ್ಮಿಕರಿಗೆ ತೊಂದರೆ ಆಗುತ್ತಿತ್ತು. ಇದನ್ನು ತಪ್ಪಿಸಲು ನೆಲದೊಳಗೆ ಡಸ್ಟ್‌ಬಿನ್ ತೆರೆಯುತ್ತಿದ್ದಾರೆ. ನಗರದ ಯಾವ ಪ್ರದೇಶಗಳಲ್ಲಿ ಹೆಚ್ಚು ಕಸ ಸಂಗ್ರಹವಾಗುತ್ತಿದೆಯೋ ಆ ಪ್ರದೇಶದಲ್ಲಿ ಈ ಯೋಜನೆ ಅನುಷ್ಠಾನ ಮಾಡುತ್ತಿದ್ದಾರೆ. ಮೊದಲ ಹಂತದ ಈ ಯೋಜನೆ ಯಶಸ್ವಿಯಾದ ಬಳಿಕ ನಗರದ ಎಲ್ಲೆಡೆಯೂ ಯೋಜನೆ ಅನುಷ್ಠಾನ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಏನಿದರ ವೈಶಿಷ್ಟೃ?

    ನೆಲದೊಳಗೆ ಕಂಟೇನರ್ ಅಳವಡಿಸಿ, ಮೇಲ್ಭಾಗದಲ್ಲಿ ಕಸ ಹಾಕುವುದಕ್ಕೆ ಮ್ಯಾನುವಲ್ ಆಧಾರಿತ ರಂಧ್ರ ಕೊರೆಯುತ್ತಾರೆ. ಕಾಲಿನಿಂದ ಪೆಡಲ್ ತುಳಿದರೆ, ರಂಧ್ರ ತೆರೆದುಕೊಳ್ಳುತ್ತದೆ. ಆಗ ಕಸ ಹಾಕಬಹುದು. ನೆಲದೊಳಗೆ ಅಳವಡಿಸಿದ ಕಂಟೇನರ್‌ನಲ್ಲಿ ಸಂಗ್ರಹವಾಗುವ ಕಸ ವಿಲೇವಾರಿಗೆ ‘ಹೈಡ್ರೋಲಿಕ್ ಕ್ರೇನ್’ ಆಪರೇಟ್ ಮಾಡುವ ಮೂಲಕ ಕಂಟೇನರ್ ವಾಹನಕ್ಕೆ ಲಿಫ್ಟ್ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ. ಈ ಕ್ರಮ ಅನುಸರಿಸುವುದರಿಂದ ನೆಲದ ಮೇಲೆ ಕಸ ಕಾಣುವುದಿಲ್ಲ. ಇದರಿಂದ ಹಂದಿ, ನಾಯಿ ಹಾಗೂ ಬಿಡಾಡಿ ದನಗಳು ಸುಳಿಯುವುದಾಗಲೀ, ಕಸ ಚೆಲ್ಲಾಪಿಲ್ಲಿ ಮಾಡಲು ಆಸ್ಪದವಿರುವುದಿಲ್ಲ. ಸುತ್ತಲಿನ ಪರಿಸರವೂ ಕಲುಷಿತವಾಗುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಮೊದಲ ಹಂತದಲ್ಲಿ 18 ಕಡೆಗಳಲ್ಲಿ ಇಂತಹ ಡಸ್ಟ್‌ಬಿನ್ ನಿರ್ಮಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಶಿವಾಜಿ ಉದ್ಯಾನದ ಬಳಿ ಒಂದು ಡಸ್ಟ್‌ಬಿನ್ ಅಳವಡಿಸಲು ಜಾಗ ಗುರುತಿಸಲಾಗಿದೆ.

    ವಾಣಿಜ್ಯ ಪ್ರದೇಶದಲ್ಲಿ ಹೆಚ್ಚು ಕಸ ಸಂಗ್ರಹವಾಗುತ್ತದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ನಗರ ಸ್ವಚ್ಛವಾಗಿಟ್ಟುಕೊಳ್ಳುವ ದೃಷ್ಟಿಯಿಂದ ಅಂಡರ್‌ಗ್ರೌಂಡ್ ಡಸ್ಟ್‌ಬಿನ್ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಹೈಡ್ರೋಲಿಕ್ ಕ್ರೇನ್ ಆಪರೇಟ್ ಮಾಡುವ ಮೂಲಕ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲು ಚಿಂತನೆ ನಡೆಸಿದ್ದೇವೆ. 3-4 ತಿಂಗಳಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುವುದು.
    | ಪ್ರವೀಣಕುಮಾರ ಕಿಲಾರೆ. ಪರಿಸರ ಅಭಿಯಂತ, ಬೆಳಗಾವಿ ಮಹಾನಗರ ಪಾಲಿಕೆ

    | ಜಗದೀಶ ಹೊಂಬಳಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts