More

    ಅಂಗವಿಕಲರ ಔನ್ನತ್ಯಕ್ಕೆ ಶ್ರಮಿಸಬೇಕು

    ಧಾರವಾಡ: ಸಮಾಜದ ಮುಖ್ಯ ವಾಹಿನಿಯಲ್ಲಿ ಸ್ಥಾನ ಪಡೆಯಲು ಎಲ್ಲ ಮೂಲಗಳಿಂದ ವಿಪುಲ ಅವಕಾಶಗಳನ್ನು ಒದಗಿಸಿ ದಿವ್ಯಾಂಗರ ಬದುಕಿನ ಔನ್ನತ್ಯಕ್ಕೆ ಎಲ್ಲರೂ ಒಗ್ಗೂಡಿ ಶ್ರಮಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಡಳಿತ ಉಪ ನಿರ್ದೇಶಕ ಮೋಹನಕುಮಾರ ಹಂಚಾಟೆ ಹೇಳಿದರು.

    ನಗರದ ಡಯಟ್​ನಲ್ಲಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರಗಳ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶೇಷ ಸಮಾರಂಭದಲ್ಲಿ ನಗರ ಬಿಆರ್​ಸಿ ಪ್ರೌಢಶಿಕ್ಷಣ ವಿಭಾಗದ ವಿಶೇಷ ಸಂಪನ್ಮೂಲ ವ್ಯಕ್ತಿ ಸುಮಿತಾ ಹಿರೇಮಠ ಗೃಹ ಆಧಾರಿತ ಮತ್ತು ಶಾಲಾ ಸಿದ್ಧತಾ ಕೇಂದ್ರದ ವಿಶೇಷ ಅಗತ್ಯತೆಯುಳ್ಳ ಚೇತನ ಚಿಣ್ಣರಿಗಾಗಿ ಬರೆದಿರುವ ‘ದಿವ್ಯಾಂಗ ದೀವಿಗೆ’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

    ಸುಮಿತಾ ಅವರ ಈ ಕೃತಿ ದಿವ್ಯಾಂಗರ ವ್ಯಾಸಂಗಕ್ಕೆ ಬೆಳಕನ್ನು ನೀಡಿದ್ದು, ಉತ್ಕೃಷ್ಟ ಕೈಪಿಡಿಯಾಗಿದೆ ಎಂದರು. ಅತಿಥಿ, ಜಿಲ್ಲಾ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ ಮಾತನಾಡಿ, ಈ ಕೃತಿಯು ಸಮಾಜದಲ್ಲಿ ಬದುಕುತ್ತಿರುವ ದಿವ್ಯಾಂಗ ಮಕ್ಕಳ ಬಾಳ ಪಥಕ್ಕೆ ಬೆಳಕನ್ನು ತುಂಬಲು ಬೆಳಗಿಸಿದ ದೀವಿಗೆಯಾಗಿದೆ ಎಂದರು.

    ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಡಿ.ಎನ್. ಮೂಲಿಮನಿ ಮಾತನಾಡಿ, ಸಾಮಾನ್ಯ ವಿದ್ಯಾರ್ಥಿಗಳಂತೆ ದಿವ್ಯಾಂಗ ಮಕ್ಕಳೂ ಶಿಕ್ಷಣ ಪಡೆಯಲು ಸರ್ಕಾರಗಳು ಹಲವು ಯೋಜನೆಗಳನ್ನು ರೂಪಿಸಿವೆ. ದಿವ್ಯಾಂಗ ಮಕ್ಕಳ ವ್ಯಾಸಂಗಕ್ಕೆ ಶಿಷ್ಯವೇತನ, ಕಲಿಕಾ ಸಾಮಗ್ರಿಗಳನ್ನು ನೀಡಿ ವ್ಯಾಪಕ ಕಲಿಕಾ ಅವಕಾಶಗಳನ್ನು ಒದಗಿಸಲಾಗಿದೆ ಎಂದರು.

    ಕೃತಿಯ ಲೇಖಕಿ ಸುಮಿತಾ ಹಿರೇಮಠ, ಶಹರ ಬಿಇಒ ಎ.ಎ. ಖಾಜಿ, ಬಾಲವಿಕಾಸ ಅಕಾಡೆಮಿ ಮಾಜಿ ಅಧ್ಯಕ್ಷ ಶಂಕರ ಹಲಗತ್ತಿ, ಡಯಟ್ ಪ್ರಭಾರಿ ಪ್ರಾಚಾರ್ಯ ವೈ.ಬಿ. ಬಾದವಾಡಗಿ, ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಪ್ರಮೋದ ಮಹಾಲೆ, ಉಮೇಶ ಬಮ್ಮಕ್ಕನವರ, ಅಶೋಕಕುಮಾರ ಸಿಂದಗಿ, ಬಿ.ಎಸ್. ಮಾಯಾಚಾರಿ, ಶಿವಲೀಲಾ ಕಳಸಣ್ಣವರ, ಪ್ರಕಾಶ ಭೂತಾಳಿ, ಜೀವನ ಶಿಕ್ಷಣ ಮಾಸಪತ್ರಿಕೆ ಸಂಪಾದಕ ಡಾ. ಗುರುಮೂರ್ತಿ ಯರಗಂಬಳಿಮಠ, ಶಿಕ್ಷಕರ ಸಂಘದ ಅಧ್ಯಕ್ಷ ರಮೇಶ ಲಿಂಗದಾಳ, ಇತರರಿದ್ದರು. ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಎಂ.ವಿ. ಅಡಿವೇರ ಸ್ವಾಗತಿಸಿದರು. ಪಿ.ಎಫ್. ಗುಡೇನಕಟ್ಟಿ ನಿರೂಪಿಸಿದರು. ಸುರೇಶ ಮೊರಬ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts