More

    ಅಂಗವಿಕಲರಿಗೆ ಅವಕಾಶ ನೀಡಿ

    ದಾವಣಗೆರೆ: ವಿಕಲಾಂಗ ಮಕ್ಕಳು ದೇವರ ಮಕ್ಕಳಿದ್ದಂತೆ. ಅವರನ್ನು ಪ್ರತಿಯೊಬ್ಬರೂ ಪ್ರೀತಿ ವಿಶ್ವಾಸದಿಂದ ಕಾಣುವ ಮೂಲಕ ಆತ್ಮಸ್ಥೈರ್ಯ ತುಂಬಬೇಕು. ಅನುಕಂಪದ ಬದಲಾಗಿ ಸಮಾನ ಅವಕಾಶ ನೀಡಬೇಕು ಎಂದು ಸಂಸದ ಡಾ.ಜಿ.ಎಂ ಸಿದ್ದೇಶ್ವರ ಹೇಳಿದರು.

    ನಗರದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಶನಿವಾರ, ಅಂಗವಿಕಲ ವ್ಯಕ್ತಿಗಳ ಕೌಶಲಾಭಿವೃದ್ಧಿ ಮತ್ತು ಸಬಲೀಕರಣ ಪ್ರಾದೇಶಿಕ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ, ಕೇಂದ್ರ ಸರ್ಕಾರದ ಅಡಿಪ್ ಯೋಜನೆಯಡಿ ವಿವಿಧ ಸಾಧನ ಸಲಕರಣೆ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಅಂಗವಿಕಲರು ಆರ್ಥಿಕ, ಶೈಕ್ಷಣಿಕ, ತಾಂತ್ರಿಕ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದ್ದಾರೆ. ಇತ್ತೀಚೆಗೆ ನಡೆದ ಅಂಗವಿಕಲರ ಕ್ರೀಡೆಯಲ್ಲಿ 19 ಪದಕಗಳನ್ನು ಪಡೆದು ಅಮೋಘ ಸಾಧನೆ ಮಾಡಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ.
    ಪ್ರಧಾನಿ ನರೇಂದ್ರ ಮೋದಿ ಅಭಿಲಾಷೆಯಂತೆ ಸಮಾಜದಲ್ಲಿನ ವಿಕಲಾಂಗರನ್ನು ಸಶಕ್ತಗೊಳಿಸಲು ಇಂತಹ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತಂದು ಸ್ವಾವಲಂಬಿಗಳನ್ನಾಗಿ ಮಾಡುತ್ತಿದ್ದೇವೆ ಎಂದು ಹೇಳಿದರು.
    ದಾವಣಗೆರೆಯಲ್ಲಿನ ಸಿಆರ್‌ಸಿ ಕೇಂದ್ರವನ್ನು ಉನ್ನತೀಕರಿಸಲು 53 ಕೋಟಿ ರೂ. ಹೆಚ್ಚಿನ ಮೊತ್ತಕ್ಕೆ ವಡ್ಡಿನಹಳ್ಳಿ ಗ್ರಾಮದಲ್ಲಿ 12 ಎಕರೆ ಜಮೀನು ಮಂಜೂರಾಗಿದೆ. ನೂತನ ಕಟ್ಟಡ ಕಾಮಗಾರಿಗೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಶಂಕುಸ್ಥಾಪನೆ ನೆರವೇರಿಸಿದ್ದು ಇದೀಗ 25 ಕೋಟಿ ಬಿಡುಗಡೆಯಾಗಿದ್ದು ಸದ್ಯದಲ್ಲೇ ಕಾಮಗಾರಿ ಶುರುವಾಗಲಿದೆ. ವಿಕಲಾಂಗ ಮಕ್ಕಳಿಗೆ ಹಾಸ್ಟೆಲ್, ವಿವಿಧ ಕೌಶಲಗಳ ತರಬೇತಿ ನೀಡಿ ಉದ್ಯೋಗ ನೀಡುವ ಉದ್ದೇಶ ಸಿಆರ್‌ಸಿ ಕೇಂದ್ರದ್ದಾಗಿದೆ ಎಂದರು.
    ಕೇಂದ್ರ ಸರ್ಕಾರದ ಆಡಿಪ್ ಯೋಜನೆ ಅಡಿ 25.70 ಲಕ್ಷ ರೂ.ಮೌಲ್ಯದ 180 ಟಿಎಲ್ಎಂ ಕಿಟ್, 72 ಜೋಡಿ ಶ್ರವಣಯಂತ್ರ, 5 ತ್ರಿಚಕ್ರ ಬೈಸಿಕಲ್‌ಗಳನ್ನು ವಿತರಿಸಿದರು.
    ಕಾರ್ಯಕ್ರಮದಲ್ಲಿ ದೂಡಾ ಅಧ್ಯಕ್ಷ ಕೆ.ಎಂ ಸುರೇಶ್, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಆರೋಗ್ಯ ಇಲಾಖೆಯ ಅಧಿಕಾರಿ ನಟರಾಜನ್, ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ಕೆ.ಕೆ. ಪ್ರಕಾಶ್, ಸಿ.ಆರ್.ಸಿ ನಿರ್ದೇಶಕ ಡಾ.ಉಮಾಶಂಕರ್ ಮೊಹಾಂತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts