More

    ಅಂಗನವಾಡಿ ನೌಕರರಿಂದ ಪ್ರತಿಭಟನೆ

    ಎಚ್.ಡಿ.ಕೋಟೆ: ಅಂಗನವಾಡಿ ನೌಕರರನ್ನು ನಿರ್ಲಕ್ಷೃ ಮಾಡುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ವತಿಯಿಂದ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಯಿತು.

    ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಮುಂಭಾಗದಿಂದ ಹೊರಟ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಫೋಷಣ್ ಅಭಿಯಾನ ಅಡಿಯಲ್ಲಿ ನೀಡಿದ 2ಜಿ ಫೋನ್ ವಾಪಸ್ ಪಡೆಯುವಂತೆ ಹಾಗೂ ಒಂದು ಸಾವಿರ ರೂ. ಹೆಚ್ಚಳ ಮಾಡುವಂತೆ ಒತ್ತಾಯಿಸಿ ಹುಣಸೂರು-ಬೇಗೂರು ರಸ್ತೆ ಮೂಲಕ ತೆರಳಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಿಡಿಪಿಒ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

    ಅಂಗನವಾಡಿ ನೌಕರರ ಸಂಘದ ತಾಲೂಕು ಅಧ್ಯಕ್ಷೆ ನೀಲಮ್ಮ ಮಾತನಾಡಿ, ಕೇಂದ್ರ ಸರ್ಕಾರ 2019ರಲ್ಲಿ ಮಕ್ಕಳ ಶಾಲಾಪೂರ್ವ ಶಿಕ್ಷಣ, ಮಕ್ಕಳ ಹಾಜರಾತಿ ಹಾಗೂ ಗರ್ಭಿಣಿಯರ ದಾಖಲೆ ಸೇರಿದಂತೆ ಅಂಗನವಾಡಿಗೆ ಸಂಬಂಧಿಸಿದ ಎಲ್ಲ ಕೆಲಸವನ್ನು ಆನ್‌ಲೈನ್ ಮಾಡಲು ಫೋನ್ ನೀಡಲಾಯಿತು. ಪ್ರಾರಂಭದಲ್ಲಿ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಹಲವಾರು ಕೆಲಸ ಕಾರ್ಯಗಳನ್ನು ಮಾಡಿದೆವು. ಆದರೆ ಫೋನ್ ಹಳೆಯದಾದಂತೆ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇದರ ನಡುವೆ, ಇಲಾಖೆ ಆರೋಗ್ಯ ಇ ಸಮೀಕ್ಷೆ ಮಾಡುವಂತೆ ಕಡ್ಡಾಯ ಮಾಡಿದೆ. ಆದರೆ ನಾವು ಪರ್ಯಾಯ ವ್ಯವಸ್ಥೆ ಮಾಡಿಕೊಡಿ ಎಂದು ಕೇಳಿದರೂ ಕೇಂದ್ರ ಮಾಡಿಕೊಡುತ್ತಿಲ್ಲ. ಇದರಿಂದ ನಮಗೆ ಕೆಲಸ ಮಾಡಲು ತೊಂದರೆ ಆಗಿದೆ, ದಿನಕ್ಕೆ ಒಂದೂವರೆ ಜಿಬಿ ನೆಟ್ ಕೊಡುವುದರಿಂದ ಸರಿಯಾಗಿ ಕೆಲಸ ಮಾಡಲಾಗುತ್ತಿಲ್ಲ ಎಂದು ದೂರಿದರು.

    ಫೋನ್ ನೀಡಿ ನಾಲ್ಕು ವರ್ಷ ಕಳೆದಿರುವುದರಿಂದ ಫೋನ್‌ಗಳು ಚಾರ್ಜ್ ಆಗುವುದಿಲ್ಲ, ನೆಟ್‌ವರ್ಕ್ ಸಿಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೆ ಅವರುಮ ಇದರ ಬಗ್ಗೆ ನಾವು ಏನೂ ಮಾಡಲು ಸಾಧ್ಯವಿಲ್ಲ. ಸರ್ಕಾರದ ಆದೇಶ ಪಾಲನೆ ಮಾಡಬೇಕು, ಇಲ್ಲ ನಿಮಗೆ ನೋಟಿಸ್ ನೀಡಬೇಕಾಗುತ್ತದೆ ಎಂದು ಬೆದರಿಕೆ ಹಾಕುತ್ತಾರೆ ಎಂದು ಆರೋಪಿಸಿದರು.

    ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಿದರೆ ನಮಗೆ ಕೆಲಸ ಮಾಡಲು ಯಾವುದೇ ತೊಂದರೆ ಇಲ್ಲ. ಅದನ್ನು ಮಾಡದೆ ನಮಗೆ ಒತ್ತಡ ಹಾಕುತ್ತಿದ್ದಾರೆ ಎಂದು ದೂರಿದರು.

    ಈ ಕೂಡಲೇ ಸರ್ಕಾರ ಅಂಗನವಾಡಿ ನೌಕರರ ತೊಂದರೆಯನ್ನು ಮನಗಂಡು ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.
    ಗೃಹಲಕ್ಷ್ಮೀ ಯೋಜನೆ ಅಡಿ ನಮಗೆ ಹಣ ಬೇಡ, ಬದಲಿಗೆ ತಿಂಗಳಿಗೆ ನೌಕರರಿಗೆ 15 ಸಾವಿರ ರೂ., ಸಹಾಯಕಿರಿಗೆ 10 ಸಾವಿರ ರೂ. ಸಂಬಳ ನೀಡುವಂತೆ ಒತ್ತಾಯಿಸಿದರು.

    ನಂತರ ಸಿಡಿಪಿಒ ಆಶಾ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
    ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಶಾಂತಾಮಣಿ, ಶಿವಕುಮಾರಿ, ಸುಮಾ, ಮಾದೇವಮ್ಮ, ರೂಪಾ, ಚಿಕ್ಕತಾಯಮ್ಮ, ಜ್ಯೋತಿ, ದೇವರಾಜಮ್ಮ, ಸಿಪಿಎಂ ಶಿವಣ್ಣ, ಫಾರೂಖ್ ಆಲಿಖಾನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts