More

    ಅಂಗನವಾಡಿ ಕೇಂದ್ರಗಳಿಗಿಲ್ಲ ಸ್ವಂತ ನೆಲೆ

    ಕೋಲಾರ: ರಾಜ್ಯದ ಅಂಗನವಾಡಿಗಳಿಗೆ 2021ರ ಡಿ.31ರೊಳಗಾಗಿ ವಿದ್ಯುತ್ ಸಂಪರ್ಕ, ಫ್ಯಾನ್ ವ್ಯವಸ್ಥೆ ಕಲ್ಪಿಸಬೇಕೆಂದು ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಆದರೆ ಜಿಲ್ಲೆಯಲ್ಲಿ ಮೂಲಸೌಲಭ್ಯ ಒತ್ತಟ್ಟಿಗಿರಲಿ, ಸ್ವಂತ ಕಟ್ಟಡವೇ ಇಲ್ಲದ ಅಂಗನವಾಡಿಗಳದ್ದು ತೀರಾ ಶೋಚನೀಯ ಪರಿಸ್ಥಿತಿ.

    ಜಿಲ್ಲೆಯಲ್ಲಿರುವ 2080 ಕೇಂದ್ರಗಳ ಪೈಕಿ 1017 ಅಂಗನವಾಡಿಗಳು ಸ್ವಂತ ಕಟ್ಟಡದಲ್ಲಿದ್ದರೆ ಉಳಿದವು ಬಾಡಿಗೆ, ಪಂಚಾಯಿತಿ ಕಟ್ಟಡ ಹಾಗೂ ಸಮುದಾಯ ಭವನದಲ್ಲಿ ನಡೆಯುತ್ತಿವೆ. ವಿದ್ಯುತ್ ಸಂಪರ್ಕ, ಫ್ಯಾನ್ ವ್ಯವಸ್ಥೆ ದೂರದ ಮಾತು. ಸ್ವಂತ ಕಟ್ಟಡದ ಜತೆಗೆ ಕುಡಿಯುವ ನೀರು, ಶೌಚಗೃಹದಂತಹ ಕನಿಷ್ಠ ಮೂಲ ಸೌಲಭ್ಯಗಳಿಲ್ಲ.

    ಸೂರಿನದ್ದೇ ಚಿಂತೆ: ಗ್ರಾಮೀಣ ಭಾಗದಲ್ಲಿ 1769, ನಗರ ಪ್ರದೇಶದಲ್ಲಿ 311 ಕೇಂದ್ರಗಳಿವೆ. ಈ ಪೈಕಿ ಹಳ್ಳಿಗಳಲ್ಲಿ 994 ಕೇಂದ್ರಗಳು ಸ್ವಂತ ಕಟ್ಟಡದಲ್ಲಿದ್ದರೆ 23 ಬಾಡಿಗೆ ಕಟ್ಟಡದಲ್ಲಿವೆ. ಒಟ್ಟಾರೆ 1017 ಕೇಂದ್ರಗಳು ಸ್ವಂತ ಸೂರು ಹೊಂದಿವೆ. ಹಳ್ಳಿಗಳಲ್ಲಿ 172 ಕೇಂದ್ರಗಳು, ನಗರದಲ್ಲಿ 259 ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿವೆ.

    ಹಳ್ಳಿಗಳಲ್ಲಿ 91 ಕೇಂದ್ರ, ನಗರದಲ್ಲಿ 2 ಕೇಂದ್ರಗಳು ಪಂಚಾಯಿತಿ ಕಟ್ಟಡದಲ್ಲಿವೆ. ಗ್ರಾಮೀಣದಲ್ಲಿ 206 ಕೇಂದ್ರಗಳು ಸಮುದಾಯ ಭವನ, ನಗರದಲ್ಲಿ 12, ಗ್ರಾಮೀಣದಲ್ಲಿ 305 ಕೇಂದ್ರಗಳು ಮತ್ತು ನಗರದಲ್ಲಿ 16 ಕೇಂದ್ರಗಳು ಶಾಲಾ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ.
    ಸ್ವಂತ ಕಟ್ಟಡ ಹೊರತುಪಡಿಸಿ ಉಳಿದೆಡೆ ಕಾರ್ಯನಿರ್ವಹಿಸುತ್ತಿರುವ ಕೇಂದ್ರಗಳ ಪೈಕಿ 377 ಕೇಂದ್ರಗಳಿಗೆ ನಿವೇಶನ ಲಭ್ಯವಿದ್ದು, ಅನುದಾನವಿಲ್ಲದೆ ಕಟ್ಟಡ ನಿರ್ಮಾಣ ಸಾಧ್ಯವಾಗಿಲ್ಲ. ಗ್ರಾಮೀಣದಲ್ಲಿ 253 ಮತ್ತು ನಗರದಲ್ಲಿ 238 ಸೇರಿ ಕೇಂದ್ರಗಳಿಗೆ ಸ್ವಂತ ನಿವೇಶನವೇ ಇಲ್ಲ.

    ಮೂಲಸೌಲಭ್ಯ: ಹಳ್ಳಿಗಳ 1181 ಹಾಗೂ ನಗರದ 186 ಕೇಂದ್ರಗಳಲ್ಲಿ ಶೌಚಗೃಹ ಇದೆ, 1045 ಕೇಂದ್ರಗಳಲ್ಲಿ ಅಡುಗೆ ಮನೆ ಇದೆ, 1301 ಕೇಂದ್ರಗಳಿಗೆ ನೀರಿನ ಸಮಸ್ಯೆ ಇಲ್ಲ, 1014 ಕೇಂದ್ರಗಳಲ್ಲಿ ಫ್ಯಾನ್ ಸೌಲಭ್ಯ ಇದೆ. 888 ಕೇಂದ್ರಗಳಿಗೆ ಸುತ್ತ ಕಾಂಪೌಂಡ್ ವ್ಯವಸ್ಥೆ ಇದೆ. 1015 ಕೇಂದ್ರಗಳಿಗೆ ದಾಸ್ತಾನು ಕೊಠಡಿ ಇರುವುದರಿಂದ ಈ ಕೇಂದ್ರಗಳು ತಕ್ಕ ಮಟ್ಟಿಗೆ ಸುಸ್ಥಿತಿಯಲ್ಲಿ ನಡೆಯುತ್ತಿದೆ.

    ಕೊರತೆಗಳದ್ದೇ ಸಮಸ್ಯೆ: ಸ್ವಂತ ಕಟ್ಟಡದ ಬಹುತೇಕ ಕೇಂದ್ರಗಳಲ್ಲಿ ಶೌಚಗೃಹ ಇದ್ದರೂ ಬಳಸುವ ಸ್ಥಿತಿಯಲ್ಲಿಲ್ಲ. ಬಾಡಿಗೆ ಕಟ್ಟಡದಲ್ಲಿ ಶೌಚಗೃಹದ ಮಾತು ದೂರ. 631 ಕೇಂದ್ರಗಳು ಶೌಚಗೃಹ ಹೊಂದಿಲ್ಲ, ಇಲ್ಲಿನ ಮಕ್ಕಳು ಬಯಲಿಗೇ ಹೋಗುವಂತಾಗಿದೆ. 1061 ಕೇಂದ್ರಗಳಿಗೆ ಪ್ರತ್ಯೇಕ ಅಡುಗೆ ಕೋಣೆ ಇಲ್ಲದೆ ಮಕ್ಕಳಿರುವ ಕೊಠಡಿಯಲ್ಲೇ ಗ್ಯಾಸ್ ಅಡುಗೆ ಮಾಡುವ ಸ್ಥಿತಿ. 760 ಕೇಂದ್ರಗಳಿಗೆ ನೀರಿನ ಸೌಲಭ್ಯವಿಲ್ಲದೆ ನಿತ್ಯವೂ ನೆರೆಯವರನ್ನು ಕೇಳುವ ಸ್ಥಿತಿ ಇದೆ.
    ಪ್ರಮುಖವಾಗಿ 854 ಕೇಂದ್ರಗಳಲ್ಲಿ ಫ್ಯಾನ್ ಇಲ್ಲ, 1046 ಕೇಂದ್ರಗಳಲ್ಲಿ ಸ್ಟೋರ್ ರೂಂ ಇಲ್ಲ, 1173 ಕೇಂದ್ರಗಳಿಗೆ ಕಾಂಪೌಂಡ್ ಇಲ್ಲ.

    ಹೈಕೋರ್ಟ್ ನಿರ್ದೇಶನ ಏನು?: ಅಂಗನವಾಡಿಗಳಿಗೆ ಮೂಲಸೌಕರ್ಯ ಒದಗಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್. ಒಕ್ ನೇತೃತ್ವದ ವಿಭಾಗೀಯ ಪೀಠ ಸರ್ಕಾರಿ ಕಟ್ಟಡದಲ್ಲಿರುವ ಅಂಗನವಾಡಿಗಳಿಗೆ ಡಿ.31ರೊಳಗೆ ಹಾಗೂ ಉಳಿದ ಅಂಗನವಾಡಿಗಳಿಗೆ 2022ರ ಜೂನ್ 30ರೊಳಗೆ ಮೂಲಸೌಕರ್ಯ ಒದಗಿಸಬೇಕು, ಈ ಎಲ್ಲ ನಿರ್ದೇಶನ ಪಾಲಿಸಿರುವ ಸಂಬಂಧ ಅನುಸರಣಾ ಅಫಿಡವಿಟ್ ಸಲ್ಲಿಸುವಂತೆ ವಿಚಾರಣೆಯನ್ನು 2022ರ ಜೂ.11ಕ್ಕೆ ಮುಂದೂಡಿದೆ.

    ಸರ್ಕಾರಕ್ಕೆ ಮಾಹಿತಿ: ರಾಜ್ಯದ 33,164 ಅಂಗನವಾಡಿಗಳಿಗೆ ವಿದ್ಯುತ್ ಸಂಪರ್ಕ, 26,560 ಅಂಗನವಾಡಿಗಳಿಗೆ ಫ್ಯಾನ್ ವ್ಯವಸ್ಥೆ ಮಾಡಲಾಗಿದೆ. 44,225 ಕೇಂದ್ರಗಳಲ್ಲಿ ಶೌಚಗೃಹ ಇದೆ, 14,948 ಅಂಗನವಾಡಿ ಕೇಂದ್ರಗಳಿಗೆ ವಿದ್ಯುತ್ ಸಂಪರ್ಕ ಹಾಗೂ 18,974 ಅಂಗನವಾಡಿ ಕೇಂದ್ರಗಳಿಗೆ ಫ್ಯಾನ್ ಸೌಕರ್ಯ ಒದಗಿಸಬೇಕಿದೆ ಎಂದು ಸರ್ಕಾರ ನ್ಯಾಯಾಲಯಕ್ಕೆ ಮಾಹಿತಿ ನೀಡಿತ್ತು.

    ಜಿಲ್ಲೆಯಲ್ಲಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ನಿವೇಶನ ಕಲ್ಪಿಸುವುದು, ಮೂಲ ಸೌಲಭ್ಯ ಕೊರತೆಯ ಪಟ್ಟಿ ಸಿದ್ಧವಿದೆ, ಸ್ವಂತ ಕಟ್ಟಡಕ್ಕೆ ನರೇಗಾದಡಿ ತಲಾ 5 ಲಕ್ಷ ರೂ. ಪಡೆಯಬಹುದಾದರೂ ಉಳಿಕೆ ಕನಿಷ್ಠ 5 ಲಕ್ಷ ರೂ.ಗಳನ್ನು ಇಲಾಖೆಯಿಂದ ಭರಿಸಬೇಕು, ಸರ್ಕಾರದಿಂದ ಅನುದಾನ ಲಭ್ಯವಾದಂತೆ ಕಟ್ಟಡ ನಿರ್ಮಿಸಿಕೊಳ್ಳಲಾಗುತ್ತಿದೆ.
    ಎಂ.ಜಿ.ಪಾಲಿ, ಉಪ ನಿರ್ದೇಶಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts