More

    ಅಂಗಡಿಗೊಬ್ಬರಂತೆ ಪೊಲೀಸ್ ಪಹರೆ

    ಹುಬ್ಬಳ್ಳಿ ಇಲ್ಲಿಯ ಅಮರಗೋಳ ಎಪಿಎಂಸಿ ಪ್ರಾಂಗಣದಲ್ಲಿರುವ ಅಕ್ಕಿಹೊಂಡ (ದಿನಸಿ) ಮಾರ್ಕೆಟ್​ನಲ್ಲಿ ಉಂಟಾಗುತ್ತಿದ್ದ ಜನದಟ್ಟಣೆ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಹಲವು ಕ್ರಮ ಕೈಗೊಂಡಿದೆ.

    ಪ್ರತಿ ಅಂಗಡಿಗೊಬ್ಬರಂತೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಜನರ ಮಧ್ಯೆ ಪರಸ್ಪರ ಅಂತರ ಕಾಯ್ದುಕೊಳ್ಳಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಎಲ್ಲೆಡೆ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.

    ಅಂಗಡಿಕಾರರು ಸಹ ಗ್ರಾಹಕರು ಅಂಗಡಿ ಎದುರು ನಿಂತು ಜನದಟ್ಟಣೆ ಉಂಟು ಮಾಡುವುದನ್ನು ತಪ್ಪಿಸಲು ಪ್ರತಿಯೊಬ್ಬರಿಗೂ ಟೋಕನ್ ನೀಡಿ ಕಳುಹಿಸುತ್ತಿದ್ದಾರೆ. ಅವರ ಸರದಿ ಬಂದಾಗ ಫೋನ್ ಮಾಡಿ ಇಲ್ಲವೇ ಇಂತಿಷ್ಟು ಸಮಯಕ್ಕೆ ಬರುವಂತೆ ತಿಳಿಸಿ ಮನೆಗೆ ಕಳುಹಿಸುತ್ತಿದ್ದಾರೆ.

    ಇಷ್ಟೆಲ್ಲ ಇದ್ದರೂ ಬೆಳಗಿನ ಹೊತ್ತು ದಿನಸಿ ಮಾರ್ಕೆಟ್​ನಲ್ಲಿ ಜನಸಂದಣಿ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಹರಸಾಹಸ ಪಡುತ್ತಿದೆ. ಎಷ್ಟೇ ಹೇಳಿದರೂ ಕೇಳದ ಜನ ಅಲ್ಲೇ ನಿಂತು ಸಮಯ ಕಳೆಯುತ್ತಿದ್ದಾರೆ.

    ಪ್ರತಿ ಅಂಗಡಿ ಎದುರು ಪೆಂಡಾಲ್ ಹಾಕಿ ಕಟ್ಟಿಗೆಯ ಚಾಕಾಕಾರದ ಬಾಕ್ಸ್ ನಿರ್ವಿುಸಿ ಅಲ್ಲೇ ಗ್ರಾಹಕರು ಕಾಯಲು ವ್ಯವಸ್ಥೆ ಮಾಡಲಾಗಿದೆ. ಕೆಲವರು ಕೈಚೀಲ, ಕಟ್ಟಿಗೆ, ಕಲ್ಲು ಇತ್ಯಾದಿಗಳನ್ನು ಸರದಿಗಾಗಿ ಇಟ್ಟು ಅಲ್ಲೇ ಮರೆಯಲ್ಲಿ ಕಾಯುತ್ತ ಕುಳಿತುಕೊಳ್ಳುತ್ತಿದ್ದಾರೆ.

    ಇನ್ನು ಸೋಮವಾರ ಹಣ್ಣು, ತರಕಾರಿ ಸಗಟು ಮಾರುಕಟ್ಟೆಗೆ ವಾರದ ರಜೆ. ಮಂಗಳವಾರ ಮತ್ತೆ ಯಥಾಪ್ರಕಾರ ಸಗಟು ತರಕಾರಿಗೆ ಬರುವ ಜನರು ಸೇರಿ ಹೆಚ್ಚಿನ ಸಂಚಾರ ಕಂಡು ಬರಲಿದೆ. ಹಾಗಾಗಿ ಪೊಲೀಸರಿಗೆ ಮತ್ತಷ್ಟು ಸವಾಲು ಎದುರಾಗಲಿದೆ.

    ಬೆಳಗ್ಗೆ 10.30ರಿಂದ ಸಂಜೆ 7ರವರೆಗೆ ದಿನಸಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲರಿಗೂ ದಿನಸಿ ವಸ್ತುಗಳು ಲಭ್ಯವಾಗಲಿವೆ. ಗ್ರಾಹಕರು ಭಯ ಪಡದೇ ಶಾಂತಿಯುತವಾಗಿ ಪರಸ್ಪರ ಅಂತರ ಕಾಯ್ದುಕೊಂಡು ಹೋಗಬೇಕು. ದಿನಸಿ ಇಂದು ಸಿಗದಿದ್ದರೆ ನಾಳೆ ಖಂಡಿತ ಸಿಗಲಿದೆ ಎಂದು ವ್ಯಾಪಾರಸ್ಥರು ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts