More

    ಅಷ್ಟ ಮಠ ಪರ್ಯಾಯ ಆದರ್ಶ

    ಉಡುಪಿ: ಅಷ್ಟ ಮಠಗಳ ಪರ್ಯಾಯ ಆಚರಣೆ ಜಗತ್ತಿಗೆ ಆದರ್ಶಪ್ರಾಯ. ಕೊಟ್ಟ ಅವಧಿಯಲ್ಲಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿ ಭಕ್ತರಿಗೆ ಕೃಷ್ಣ ಸಂದೇಶ ತಲುಪಿಸುವ ಕೆಲಸ ಮಾದರಿ. ಇದಕ್ಕೆ ಸಮಾಜದ ಬೆಂಬಲ ನಿರಂತರ ಲಭಿಸುತ್ತಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು. ಪರ್ಯಾಯ ಅದಮಾರು ಮಠದ ಆಶ್ರಯದಲ್ಲಿ ಭಾನುವಾರ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಸಂಸ್ಕೃತಿ-ಸಂಸ್ಕಾರ, ಪ್ರೀತಿ-ವಿಶ್ವಾಸ ಇವು ಒಂದು ವ್ಯವಸ್ಥೆಯ ಭದ್ರಬುನಾದಿಗಳು. ಧಾರ್ಮಿಕ ಪೀಠಗಳು ಮಾತ್ರ ಈ ನಾಲ್ಕನ್ನು ಸಮಾಜಕ್ಕೆ ನೀಡಬಲ್ಲವು. ಹಿಂದಿನ ಕಾಲದಲ್ಲಿ ಪ್ರತೀ ರಾಜನಿಗೂ ರಾಜಗುರುಗಳಿದ್ದರು. ಕಾಲ ಕಾಲಕ್ಕೆ ಅವರು ಸಲಹೆ-ಸೂಚನೆಗಳನ್ನು ನೀಡುತ್ತಿದ್ದರು. ಇಂದಿನ ಕಾಲದಲ್ಲಿ ಮಠ-ಮಂದಿರಗಳ ಧಾರ್ಮಿಕ ವಾತಾವರಣ ಜವಾಬ್ದಾರಿಗಳನ್ನು ನೆನಪಿಸುತ್ತವೆ ಎಂದರು. ಕೆಪಿಸಿಸಿ ನಿಕಟಪೂರ್ವ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಅಧ್ಯಾತ್ಮಿಕ ಬದುಕು ಸಾಮಾನ್ಯನಿಗೂ ಹತ್ತಿರವಾಗಿರಬೇಕು ಎಂದರು. ಸಾಧಕರಾದ ಉದಯ ತಂತ್ರಿ, ಗಣಪತಿ ಭಟ್, ಯು.ದಾಮೋದರ್ ಅವರಿಗೆ ಕೃಷ್ಣಸೇವೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಾಸಕ ರಘುಪತಿ ಭಟ್, ಮಂಗಳೂರು ಶಾರದಾ ವಿದ್ಯಾಲಯ ಮುಖ್ಯಸ್ಥ ಎಂ.ಬಿ. ಪುರಾಣಿಕ್, ಮಾಜಿ ಸಂಸದ ಅಶೋಕ್ ತನ್ವರ್, ಎನ್‌ಎಂಪಿಟಿ ಅಧ್ಯಕ್ಷ ಎ.ವಿ.ರಮಣ, ಮಣಿಪಾಲ ಮೀಡಿಯಾ ನೆಟ್‌ವರ್ಕ್‌ನ ಟಿ. ಸತೀಶ್ ಪೈ, ಮುಂಬೈನ ಡಾ.ಎಂ.ಎಸ್.ಆಳ್ವ ಉಪಸ್ಥಿತರಿದ್ದರು.

    ನಿರಂತರ ಭಗವಂತ ಸ್ಮರಣೆ ಅಗತ್ಯ: ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಎಲ್ಲ ವ್ಯಕ್ತಿಗಳಲ್ಲಿರುವ ಒಳ್ಳೆಯ ಗುಣಗಳನ್ನು ಸ್ವೀಕಾರ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಇದರಿಂದ ಇಡೀ ಪ್ರಪಂಚ ನಮ್ಮ ಬಂಧುವಾಗಲು ಸಾಧ್ಯ ಎಂದರು. ನಿರಂತರ ಭಗವಂತನ ನಾಮಸ್ಮರಣೆಯಿಂದ ಉತ್ತಮ ಗುಣಗಳನ್ನು ಅಳವಡಿಸಿಕೊಳ್ಳಬಹುದು. ದೇವರನ್ನು ಪಡೆಯುವ ಜ್ಞಾನಕ್ಕೆ ಕರ್ಮವೂ ಸಾಧನ ಎಂದರು.

    ಪರ್ಯಾಯ ಶ್ರೀಗಳ ಪರಿಸರಕ್ಕೆ ಪೂರಕ ನಿಲುವುಗಳು ಸಮಾಜದಲ್ಲಿ ಮಹತ್ತರ ಬದಲಾವಣೆಗೆ ಕಾರಣವಾಗಲಿದೆ. ಅವರಿಂದ ಹೆಚ್ಚಿನದನ್ನು ನಾವು ನಿರೀಕ್ಷಿಸಬಹುದು. ರಾಜಕಾರಣಿಗಳ ಮಾತಿಗಿಂತ ಸಂತರ ಮಾತಿಗೆ ಹೆಚ್ಚು ಮಹತ್ವ ನೀಡುತ್ತಾರೆ.
    -ದಿನೇಶ್ ಗುಂಡೂರಾವ್, ಕೆಪಿಸಿಸಿ ನಿಕಟಪೂರ್ವ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts