More

    ಜಿಪಂ ಅಧಿಕಾರ ಅವಧಿ ಪೂರ್ಣ

    ಮಂಗಳೂರು: ದ.ಕ ಜಿಲ್ಲಾ ಪಂಚಾಯಿತಿ ಅಧಿಕಾರ ಅವಧಿ ಮಂಗಳವಾರ ಪೂರ್ಣಗೊಂಡಿದೆ. ನಿರ್ಗಮನ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಐದು ವರ್ಷ ಅಧಿಕಾರ ಪೂರೈಸಿದ ಪ್ರಥಮ ಅಧ್ಯಕ್ಷೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಹಿಂದೆ ಜಿಪಂನಲ್ಲಿ ಅಧ್ಯಕ್ಷ ಹುದ್ದೆ 20 ತಿಂಗಳಿಗೆ ಸೀಮಿತವಾಗಿತ್ತು. ಹಾಗಾಗಿ 5 ವರ್ಷ ಅವಧಿಯಲ್ಲಿ ಮೂವರಿಗೆ ಅಧ್ಯಕ್ಷ ಸ್ಥಾನದ ಅವಕಾಶ ಇತ್ತು. ಪಂಚಾಯತ್‌ರಾಜ್ ಕಾಯ್ದೆ ತಿದ್ದುಪಡಿ ಬಳಿಕ ಅಧ್ಯಕ್ಷ ಸ್ಥಾನ 5 ವರ್ಷ ಅವಧಿ ಪಡೆಯಿತು. ಮುಂದಿನ ಸಾಲಿನಲ್ಲಿ ಎರಡುವರೆ ವರ್ಷಕ್ಕೆ ಅಧ್ಯಕ್ಷರ ಅವಧಿ ನಿಗದಿಯಾಗಿ, ಐದು ವರ್ಷ ಅಧಿಕಾರ ಪೂರೈಸುವ ಅವಕಾಶ ಇಲ್ಲ.

    2016ರ ಏ.28ರಂದು ಮೀನಾಕ್ಷಿ ಶಾಂತಿಗೋಡು ದ.ಕ.ಜಿಪಂ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ್ದರು. ಪರಿಶಿಷ್ಟ ಜಾತಿ ಮೀಸಲು ಇರುವ ಜಿಪಂ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಮೀನಾಕ್ಷಿ ಮತ್ತು ಸುಜಾತಾ ಕೆ.ಪಿ ಮಾತ್ರ ಸ್ಪರ್ಧಿಸಲು ಅರ್ಹರಾಗಿದ್ದರು. ಈ ಸಂದರ್ಭ ತಲಾ 30 ತಿಂಗಳು ಅಧಿಕಾರ ಹಂಚಿಕೆ ಮಾಡುವ ಬಗ್ಗೆ ಮಾತುಕತೆ ನಡೆದಿದ್ದರೂ, ಮೀನಾಕ್ಷಿ ಅವರನ್ನೇ ಮುಂದುವರಿಸಲು ಪಕ್ಷದ ನಾಯಕರು ನಿರ್ಧರಿಸಿದ್ದರು.

    ಬೋರ್ಕರ್ ಪ್ರಥಮ ಅಧ್ಯಕ್ಷ: 1997ರಲ್ಲಿ ದ.ಕ ಜಿಲ್ಲೆಯಿಂದ ಉಡುಪಿ ಬೇರ್ಪಟ್ಟು ಹೊಸ ಜಿಲ್ಲೆಯಾಯಿತು. ಆಗ ಅವಿಭಜಿತ ದ.ಕ ಜಿಲ್ಲಾ ಪಂಚಾಯಿತಿಯಲ್ಲಿ ಕಾಂಗ್ರೆಸ್-ಜನತಾದಳ ಮೈತ್ರಿ ಆಡಳಿತವಿತ್ತು. ಕಾಂಗ್ರೆಸ್‌ನ ಸುಗಂಧಿ ಕೊಂಡಾಣ 20 ತಿಂಗಳು ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದ ಬಳಿಕ ಜನತಾದಳದ ಸಂಜೀವ ಶೆಟ್ಟಿ ಅಧ್ಯಕ್ಷರಾಗಿದ್ದರು. ಜಿಲ್ಲೆ ವಿಭಜನೆಯಾಗಿ ಪ್ರತ್ಯೇಕವಾಗಿ ಅಸಿತ್ವಕ್ಕೆ ಬಂದ ದ.ಕ ಜಿಲ್ಲಾ ಪಂಚಾಯಿತಿಯಲ್ಲಿ ಬಿಜೆಪಿ ಬಹುಮತ ಪಡೆಯಿತು. ಉಪ್ಪಿನಂಗಡಿ ಕ್ಷೇತ್ರದ ಬಾಲಕೃಷ್ಣ ಬೋರ್ಕರ್ ಪ್ರಥಮ ಅಧ್ಯಕ್ಷರಾಗಿ ಆಯ್ಕೆಯಾದರು. ಅವರ ಅಧಿಕಾರಾವಧಿ 6 ತಿಂಗಳಿಗೆ ಅಂತ್ಯಗೊಂಡಿತು. ಸುಳ್ಯ ಕ್ಷೇತ್ರದ ಸದಸ್ಯೆ ಮಾಲತಿ ಯು. ಮುಂದಿನ ಅವಧಿಗೆ ಅಧ್ಯಕ್ಷೆಯಾಗಿದ್ದರು.

    ಕಾಂಗ್ರೆಸ್ ಆಡಳಿತ: 2000ದ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದು ಸದಾನಂದ ಪೂಂಜ, ಜ್ಯೋತಿ ರವೀಂದ್ರ ಪೂಜಾರಿ ಮತ್ತು ಸೋಮನಾಥ ಕ್ರಮವಾಗಿ 3 ಅವಧಿಗೆ ಅಧ್ಯಕ್ಷರಾಗಿದ್ದರು. 2006ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಡಳಿತದಲ್ಲಿ ಕಾಂಗ್ರೆಸ್‌ನ ಮಮತಾ ಗಟ್ಟಿ ಅಧ್ಯಕ್ಷೆಯಾದರು. ಬಳಿಕ ಅವರನ್ನು ಪದಚ್ಯುತಿಗೊಳಿಸಲು ಜೆಡಿಎಸ್‌ನ ಮೂವರು ಸದಸ್ಯರು ಬಿಜೆಪಿ ಜತೆ ಕೈ ಜೋಡಿಸಿದ್ದರು. ಬಿಜೆಪಿಯ ಸುಷ್ಮಾ ಜನಾರ್ದನ್ 8 ತಿಂಗಳು ಅಧ್ಯಕ್ಷೆಯಾದರು.

    5 ವರ್ಷ ಐವರು ಅಧ್ಯಕ್ಷರು
    ಮುಂದಿನ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಸದಸ್ಯ ಸಂತೋಷ್ ಕುಮಾರ್ ಭಂಡಾರಿ ಬೆಂಬಲ ಪಡೆದ ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಸುಚರಿತ ಶೆಟ್ಟಿ ಅಧ್ಯಕ್ಷರಾದರು. ಅವರ ಅವಧಿ ಬಳಿಕ ಅಧ್ಯಕ್ಷ ಹುದ್ದೆಯ ಮೀಸಲು ಗೊಂದಲದಿಂದ ಬಿಜೆಪಿಯ ವೆಂಕಟ್ ದಂಬೆಕೋಡಿ ಮೂರು ತಿಂಗಳು ಅಧ್ಯಕ್ಷರಾಗಿದ್ದರು. ಕೊನೆ ಅವಧಿಯಲ್ಲಿ ಸಂತೋಷ್ ಅವರಿಗೆ ಅಧ್ಯಕ್ಷ ಸ್ಥಾನ ಒಲಿಯಿತು.

    ಬಿಜೆಪಿಗೆ ಅಧಿಕಾರ: 2012ರಲ್ಲಿ ಮತ್ತೆ ಬಿಜೆಪಿ ಅಧಿಕಾರ ಪಡೆಯಿತು. ಶೈಲಜಾ ಭಟ್, ಕೊರಗಪ್ಪ ನಾಯ್ಕ ಮತ್ತು ಆಶಾ ತಿಮ್ಮಪ್ಪ ಕ್ರಮವಾಗಿ ಮೂರು ಅವಧಿಗೆ ಅಧ್ಯಕ್ಷರಾದರು. 2016ರಲ್ಲಿ ಮತ್ತೆ ಬಿಜೆಪಿ ಅಧಿಕಾರ ಪಡೆದು ಮೀನಾಕ್ಷಿ ಶಾಂತಿಗೋಡು ಅವರಿಗೆ 5 ವರ್ಷ ಅಧಿಕಾರ ಪಡೆಯವ ಅವಕಾಶ ಪ್ರಾಪ್ತವಾಯಿತು.

    ಐದು ವರ್ಷ ಕಾರ್ಯನಿರ್ವಹಿಸಲು ಅವಕಾಶ ನೀಡಿದ ಪಕ್ಷಕ್ಕೆ ಋಣಿ. ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಅಧಿಕಾರಿಗಳ ನೆರವಿನಿಂದ ಯಶಸ್ವಿ ಆಡಳಿತ ಸಾಧ್ಯವಾಯಿತು. ಅನುಭವಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಪೂರ್ಣ ಸಹಕಾರ ನೀಡಿದ್ದಾರೆ.
    ಮೀನಾಕ್ಷಿ ಶಾಂತಿಗೋಡು ನಿರ್ಗಮನ ಅಧ್ಯಕ್ಷೆ, ದ.ಕ ಜಿಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts