More

    ನವಭಾರತದ ಯುಗಪುರುಷ ಮಹರ್ಷಿ ಅರವಿಂದರು

    ನವಭಾರತದ ಯುಗಪುರುಷ ಮಹರ್ಷಿ ಅರವಿಂದರುಆದರ್ಶ ಗೋಖಲೆ
    ಸಾವಿರ ವರ್ಷಗಳ ನಿರಂತರ ಸಂಘರ್ಷದ, ಭಾರತದ ಸ್ವಾತಂತ್ರ್ಯ ಹೋರಾಟ ಅನೇಕ ಕಾರಣದಿಂದಾಗಿ ವಿಶಿಷ್ಟ. ರೈತನಿಂದ ರಾಜನವರೆಗೆ, ಕಾರ್ವಿುಕನಿಂದ ಧಾರ್ವಿುಕನವರೆಗೆ, ಪಥಿಕನಿಂದ ರಥಿಕನವರೆಗೆ ಏಕಮೇವ ಉದ್ದೇಶದಿಂದ ನಡೆದ ಆಂದೋಲನ ವಿಶ್ವದಲ್ಲೇ ವಿಶೇಷ. ಈ ಅವಿಚ್ಛಿನ್ನ ಸಂಗ್ರಾಮಕ್ಕೆ ಜ್ಞಾನ-ಕರ್ಮಯೋಗಗಳನ್ನು ಧಾರೆಯೆರೆದು, ಅಖಂಡ ಸ್ವಾತಂತ್ರ್ಯ ಘೊಷಣೆ ಮೊಳಗಿಸಿ, ವಿಶ್ವವ್ಯಾಪಿ ಭಾರತದ ನೀಲನಕಾಶೆಯನ್ನು ರಚಿಸಿದ ಕ್ರಾಂತಿಮೂರ್ತಿ, ಯುಗಪುರುಷ ಮಹರ್ಷಿ ಅರವಿಂದರು. ಅಧ್ಯಾತ್ಮದ ತಳಹದಿಯ ಮೇಲೆ ಸಮರ್ಥ ರಾಷ್ಟ್ರನಿರ್ಮಾಣಕ್ಕೆ ಪ್ರೇರಣೆಯಾಗಿರುವ ಅರವಿಂದರು ನವಭಾರತದ ದಿಗ್ದರ್ಶಕರಲ್ಲಿ ಅಗ್ರಗಣ್ಯರು.

    ಕೃಷ್ಣಧನ ಘೊಷ್-ಸ್ವರ್ಣಲತಾದೇವಿ ದಂಪತಿಯ ಮಗನಾಗಿ 1872ರ ಆಗಸ್ಟ್ 15ರಂದು ಕಲ್ಕತ್ತೆಯಲ್ಲಿ ಜನಿಸಿದ ಅರವಿಂದರು ತಮ್ಮ ಶಿಕ್ಷಣವನ್ನು ಪಡೆದದ್ದು ಇಂಗ್ಲೆಂಡ್​ನಲ್ಲಿ. ಇಂಗ್ಲಿಷ್ ಶೈಕ್ಷಣಿಕ ವ್ಯವಸ್ಥೆಯಲ್ಲಿ ಹದಿಮೂರು ವರ್ಷ ಅಧ್ಯಯನ ಮಾಡಿ ಅದ್ವಿತೀಯ ಪಾಂಡಿತ್ಯ ಸಂಪಾದಿಸಿದರು. ‘ಕುದುರೆ ಸವಾರಿ’ ಪರೀಕ್ಷೆಯಲ್ಲಿ ಅನುತ್ತೀರ್ಣತೆಯ ನೆಪವೊಡ್ಡಿ ಐಸಿಎಸ್ ಉತ್ತೀರ್ಣತೆಯನ್ನು ಮಾನ್ಯಮಾಡದ ಬ್ರಿಟಿಷ್ ವ್ಯವಸ್ಥೆಯಿಂದ ಭಾರತಕ್ಕೆ ಮರಳಿದ ಬಳಿಕ ಬರೋಡಾ ಸಂಸ್ಥಾನದಲ್ಲಿ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. ಆಂಗ್ಲಸಾಮ್ರಾಜ್ಯದ ಕನಸುಗಳಿಗೆ ಕೊಳ್ಳಿಯಿಡುತ್ತಿದ್ದ ಪಂಜಾಬ್, ಬಂಗಾಲ ಹಾಗೂ ಮಹಾರಾಷ್ಟ್ರದ ಕ್ರಾಂತಿಕಾರಿ ನಾಯಕರ ಸಂಪರ್ಕ ಸಾಧಿಸಿದ ಅರವಿಂದರು, ಬರಹ ಭಾಷಣಗಳ ಮೂಲಕ ಸ್ವಾತಂತ್ರ್ಯ ಚಳವಳಿಗೆ ಕಾವು ತುಂಬಿದರು. ಅನುಶೀಲನಾ ಸಮಿತಿಯ ಪದಾಧಿಕಾರಿಗಳು, ಸಾಮಾಜಿಕ ಸುಧಾರಣೆಯ ಅಗ್ರಗಣ್ಯ ನಾಯಕ ಲೋಕಮಾನ್ಯ ತಿಲಕರೇ ಮೊದಲಾಗಿ ರಾಷ್ಟ್ರೀಯತೆಯ ಪ್ರಬಲ ಪ್ರತಿಪಾದಕರಿಂದ ಪ್ರಭಾವಿತರಾದ ಅವರು ಭಾರತದ ಪುನರುತ್ಥಾನಕ್ಕೆ ಮುಂದಡಿಯಿಟ್ಟರು.

    ಇದನ್ನು ಓದಿ: ಕಲ್ಲು ತೂರಾಟವೇ ಚೀನಿ ಯೋಧರಿಗೆ ಅಸ್ತ್ರ; ಚೀನಿಯರನ್ನು ಹಿಮ್ಮೆಟ್ಟಿಸಿದ ಪೊಲೀಸರಿಗೆ ಶೌರ್ಯ ಪದಕ

    ಮತದ ಆಧಾರದ ಮೇಲೆ ಬಂಗಾಲವನ್ನು ವಿಭಜಿಸುವ ಬ್ರಿಟಿಷರ ಕುತಂತ್ರದ ವಿರುದ್ಧ ನಡೆದ ಜನಾಂದೋಲನದಲ್ಲಿ ಭಾಗವಹಿಸಿ ‘ಯುಗಾಂತರ’ ಹಾಗೂ ‘ವಂದೇ ಮಾತರಂ’ ಪತ್ರಿಕೆಗಳ ಮೂಲಕ ಪ್ರಖರ ಲೇಖನಗಳನ್ನು ಬರೆದ ಅರವಿಂದರು ‘ಭವಾನಿ ಮಂದಿರ’ ಕ್ರಾಂತಿಕಾರಿ ಪ್ರಕಟಣೆಗೂ ನಾಂದಿ ಹಾಡಿದರು. ಲೇಖನಗಳು, ಅದರ ಪ್ರಸಾರ, ತೀಕ್ಷ್ಣನುಡಿಗಳಿಂದ ವಿಚಲಿತವಾದ ಸರ್ಕಾರ ರಾಜದ್ರೋಹದ ಆರೋಪ ಹೊರಿಸಿ ಬಂಧಿಸಿತು. ತಕ್ಕ ಪುರಾವೆ ಒದಗಿಸಲು ಸರ್ಕಾರ ಅಸಮರ್ಥವಾದ ಕಾರಣ ಬಿಡುಗಡೆಗೊಂಡ ಅರವಿಂದರು ದೇಶಾದ್ಯಂತ ಸಂಚರಿಸಿ, ಬ್ರಿಟಿಷ್ ಪ್ರಭುತ್ವವನ್ನು ಎದುರಿಸಬೇಕಾದ ರೀತಿ, ವಿದೇಶಿ ವಸ್ತುಗಳ ಪೂರ್ಣ ಬಹಿಷ್ಕಾರಗಳ ಕುರಿತು ಜನಜಾಗೃತಿಗೈದರು.

    ಇದನ್ನು ಓದಿ: ತೆರಿಗೆ ವ್ಯವಸ್ಥೆಯು ತಡೆರಹಿತ, ನೋವುರಹಿತ, ಮುಖರಹಿತವನ್ನಾಗಿಸಲು ಪ್ರಯತ್ನ: ಪ್ರಧಾನಿ ಮೋದಿ

    ಅರವಿಂದರ ಕೀರ್ತಿ-ಪ್ರಭಾವಗಳಿಂದ ದಿಕ್ಕೆಟ್ಟ ಸರ್ಕಾರ ಅವರ ಧ್ವನಿಯನ್ನು ಹತ್ತಿಕ್ಕುವ, ಕಾರ್ಯವಿಸ್ತಾರವನ್ನು ತಡೆಯಲು ವಿಫಲ ಪ್ರಯತ್ನ ನಡೆಸಿತು. ಕ್ರಾಂತಿಕಾರಿಗಳಿಗೆ ವಿನಾಕಾರಣ ಉಗ್ರಶಿಕ್ಷೆ ವಿಧಿಸುತ್ತಿದ್ದ ಕಿಂಗ್ಸ್ ಫರ್ಡ್ ಹತ್ಯಾಪ್ರಯತ್ನದ ಕಾರಣವೊಡ್ಡಿ ಬಂಧಿಸಿದರೂ ಚಿತ್ತರಂಜನದಾಸರ ವಕಾಲತ್ತಿನೆದುರು ಸರ್ಕಾರ ಸೋತು, ಅರವಿಂದರು ಬಿಡುಗಡೆಗೊಂಡರು.

    ಇದನ್ನು ಓದಿ:  ಆರಕ್ಷಕ ಪಡೆಗಳಿಗೆ 926 ಪದಕಗಳ ಘೋಷಣೆ: ಗರಿಷ್ಠ ಪದಕ ಜಮ್ಮು-ಕಾಶ್ಮೀರ ಪೊಲೀಸರಿಗೆ

    ‘ಆ ವೇಳೆಗೆ ವೇದ, ಶಾಸ್ತ್ರ, ಸಂಸ್ಕೃತ, ಸಂಸ್ಕೃತಿಯ ಕುರಿತು ಆಳ ಅಧ್ಯಯನಗೈದಿದ್ದ ಅವರು 1910ರ ಪ್ರಾರಂಭದ ರಾಜಕೀಯ ಪಲ್ಲಟಗಳಿಂದಾಗಿ ಫ್ರೆಂಚ್ ಆಡಳಿತಕ್ಕೆ ಒಳಪಟ್ಟ ಚಂದ್ರನಗರಕ್ಕೂ, ಅಲ್ಲಿಂದ ಪಾಂಡಿಚೇರಿಗೂ ವರ್ಗಾವಣೆಯಾದರು. ಅಧ್ಯಾತ್ಮಸಾಧನೆಯಿಲ್ಲದ ಸ್ವಾತಂತ್ರ್ಯ ಕಲಸುಮೇಲೋಗರದ ಸಮನ್ವಯ, ಸಂಪೂರ್ಣ ಸತ್ಯಕ್ಕೆ ಮರಳದೆ ಲಭಿಸುವ ಸುಖ ಅಶಾಶ್ವತ ಎಂದರಿತು ಭಗವತ್ ಸಾಕ್ಷಾತ್ಕಾರದ ಹಾದಿಯಲ್ಲಿ ಸಾಗುವ ನಿರ್ಣಯ ಕೈಗೊಂಡರು. ಅವರ ನಾಲ್ಕು ದಶಕಗಳ ಅಧ್ಯಾತ್ಮದ ಪಯಣವು ಭಾರತೀಯ ತತ್ವಶಾಸ್ತ್ರಕ್ಕೆ ಹೊಸರೂಪ ನೀಡಿತು. ವೈದಿಕಸಾಹಿತ್ಯದ ಉತ್ಕೃಷ್ಟತೆ, ರಾಷ್ಟ್ರೀಯ ಐಕ್ಯತೆ, ಹಿಂದುಧರ್ಮದ ಶ್ರೇಷ್ಠತೆಯನ್ನು ಸಾರಿದ ಅರವಿಂದರು ಲಕ್ಷಾಂತರ ಜ್ಞಾನಪಿಪಾಸುಗಳಿಗೆ ಜೀವನದ ಉದ್ದೇಶವನ್ನು ತಿಳಿಸಿದ ಆಧುನಿಕ ಮಹರ್ಷಿ. ಶಕ್ತಿಶಾಲಿ ಭಾರತದ ಕನಸು ಕಾಣುತ್ತಿದ್ದ ಅವರು ಭಾರತ ವಿಭಜನೆಯಿಂದ ತೀವ್ರ ದುಃಖಿತರಾದರು. ಅಖಂಡ ಭಾರತದ ಅಗತ್ಯವನ್ನು ಪ್ರತಿಪಾದಿಸಿ ವೇದೋಕ್ತ ವಿಕಾಸಸಾಧನೆಯ ಮೂಲಕ ಸವೋತ್ಕೃಷ್ಟ ಸ್ವಾತಂತ್ರ್ಯ ಪಡೆಯುವ ಬಗೆಯನ್ನು ಧಾರೆಯೆರೆದ ಅವರು 1950ರ ಡಿಸೆಂಬರ್ 5ರಂದು ಬ್ರಹ್ಮಲೀನರಾದರು.
    (ಲೇಖಕರು ಉಪನ್ಯಾಸಕರು, ಯುವ ವಾಗ್ಮಿ)

    ಈ ಬೈಕ್​ಗೆ ಪೆಟ್ರೋಲ್ ಬೇಡ, ನೀರಿದ್ದರೆ ಸಾಕಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts