More

    ಯುವಕನ ರಕ್ಷಣೆಗಾಗಿ ಸೇತುವೆಯಿಂದ ಜಿಗಿದ ತಂಡಕ್ಕೆ ಮೆಚ್ಚುಗೆ

    ಬಂಟ್ವಾಳ: ಘಟನೆ 1: ಕಳೆದ ಮಳೆಗಾಲದಲ್ಲಿ ತುಂಬಿ ಹರಿಯುತ್ತಿದ್ದ ನೇತ್ರಾವತಿ ನದಿಗೆ ಯುವಕರ ತಂಡ ಹಳೇ ಸೇತುವೆ ಮೇಲೆ ನಿಂತು ಒಬ್ಬೊಬ್ಬರಾಗಿ ಧುಮುಕುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದು ಅಪಾಯಕಾರಿ. ಈ ರೀತಿ ಮಾಡಬಾರದು ಎಂದೆಲ್ಲ ಯುವಕರ ಈ ಸಾಹಸ ಪ್ರದರ್ಶನವನ್ನು ಸಾಕಷ್ಟು ಟೀಕೆಗೆ ಗುರಿಮಾಡಲಾಗಿತ್ತು.

    ಘಟನೆ 2: ಮೇ 24ರಂದು ನೇತ್ರಾವತಿ ನದಿಗೆ ಹಾರಿ ಯುವಕನೋರ್ವ ಆತ್ಮಹತ್ಯೆಗೆ ಯತ್ನಿಸಿದಾಗ ಯುವಕರು ಸೇತುವೆ ಮೇಲಿಂದ ಹಾರಿ ಯುವಕನ ಪ್ರಾಣ ರಕ್ಷಣೆಗೆ ಯತ್ನಿಸಿದ ದೃಶ್ಯಾವಳಿಯೂ ವೈರಲ್ ಆಗಿದೆ. ಇದಕ್ಕೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ.

    ಮೇಲಿನ ಘಟನೆಗಳೆರಡೂ ಪ್ರತ್ಯೇಕ. ಆದರೆ ಸೇತುವೆಯ ಮೇಲಿಂದ ಹಾರಿದ ಯುವಕರಲ್ಲಿ ಬಹುತೇಕರು ಅವರೇ. ಮೊದಲನೆಯ ಘಟನೆಯಲ್ಲಿ ಅವಮಾನ, ಎರಡನೇ ಘಟನೆಗೆ ಅಭಿಮಾನ, ಸನ್ಮಾನ. ಯುವಕ ನದಿ ಹಾರಿ ಆತ್ಮಹತ್ಯೆ ಮಾಡಿಕೊಂಡಾಗ ಆತನ ರಕ್ಷಣೆಗಾಗಿ ಈದ್ ಉಲ್ ಫಿತ್ರ್ ಹಬ್ಬದ ಸಂಭ್ರಮಾಚರಣೆಯಲ್ಲಿದ್ದ ಯುವಕರು ಪ್ರಾಣದ ಹಂಗು ತೊರೆದು ನದಿಗೆ ಧುಮುಕಿದ್ದರು.

    ಕಲ್ಲಡ್ಕ ಸಮೀಪದ ಕೊಳಕೀರು ನಿವಾಸಿ ನಿಶಾಂತ್ ಆರ್ಥಿಕ ಸಂಕಷ್ಟದಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಹಬ್ಬದ ನಿಮಿತ್ತ ತನ್ನ ಸಹೋದರಿಯ ಮನೆಗೆ ಹೋಗಿ ಬರುತ್ತಿದ್ದ ಗೂಡಿನ ಬಳಿಯ ನಿವಾಸಿ ಅಫ್ರಿದ್ ಈ ದೃಶ್ಯ ಕಂಡು ತಕ್ಷಣ ಸ್ಥಳೀಯ ಯುವಕರಿಗೆ ಮಾಹಿತಿ ನೀಡಿದ್ದರು.

    ಮಹಮ್ಮದ್, ಝಾಹೀರ್, ಮುಕ್ತಾರ್, ಸಮೀರ್, ತೌಸೀಫ್ ಓಡಿ ಬಂದು ಸೇತುವೆಯಿಂದ ಧುಮುಕಿ ಯುವಕನನ್ನು ನದಿ ತೀರಕ್ಕೆ ಎಳೆ ತಂದರು. ಆರಿಫ್ ಎಂಬುವರು ಕರೊನಾ ಆತಂಕದ ಮಧ್ಯೆಯೂ ಅದನ್ನು ಲೆಕ್ಕಿಸದೆ ಬಾಯಿಗೆ ಬಾಯಿ ಇಟ್ಟು ಕೃತಕ ಉಸಿರಾಟ ನೀಡಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಬಳಿಕ ಆಸ್ಪತ್ರೆಗೆ ಸಾಗಿಸಾಲಾಗಿದೆ. ದುರದೃಷ್ಟದಿಂದ ಯುವಕನ ಜೀವ ಉಳಿಸಲಾಗಲಿಲ್ಲ.

    ಜೇಸಿ ಬಂಟ್ವಾಳ ಗೌರವಾರ್ಪಣೆ: ಯುವಕನ ರಕ್ಷಣೆಗೆ ನದಿಗೆ ಹಾರಿದ ಯುವಕರಿಗೆ ಬಂಟ್ವಾಳ ಜೇಸಿ ವತಿಯಿಂದ ಸೋಮವಾರ ಅಭಿನಂದನೆ ಸಲ್ಲಿಸಲಾಯಿತು. ರಕ್ಷಣಾ ಕಾರ್ಯಾಚರಣೆ ಕಣ್ಣಾರೆ ಕಂಡ ಜೇಸಿ ಬಂಟ್ವಾಳ ಅಧ್ಯಕ್ಷ ಸದಾನಂದ ಬಂಗೇರ ಯುವಕರ ಮಾನವೀಯ ಕಾರ್ಯವನ್ನು ಅಭಿನಂಧಿಸಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಸದಸ್ಯರಾದ ನಾಗೇಶ್ ಬಾಳೆಹಿತ್ಲು, ಸುರೇಶ್ ಕುಮಾರ್ ನಾವೂರು, ಯತೀಶ್ ಕರ್ಕೇರ, ಉಮೇಶ್ ಮೂಲ್ಯ, ಗಣೇಶ್ ಕುಲಾಲ್, ವಿಜಯ ಕುಲಾಲ್, ರೋಷನ್ ರೈ ಮೊದಲಾದವರಿದ್ದರು.

    ಹಲವು ಕಾರ್ಯಾಚರಣೆಯಲ್ಲಿ ಭಾಗಿ: ಈ ಯುವಕರ ತಂಡ ರಕ್ಷಣಾ ಕಾರ್ಯಾಚರಣೆ ನಡೆಸಿರುವುದು ಇದೇ ಮೊದಲಲ್ಲ. ಈ ಹಿಂದೆ ಮೈಸೂರಿನ ಕುಟುಂಬ ನೇತ್ರಾವತಿ ಸೇತುವೆ ಮೇಲಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದಾಗ ಮಹಿಳೆ ಹಾಗೂ ನಾಯಿಯನ್ನು ಗೂಡಿನ ಬಳಿಯ ಈ ತಂಡ ರಕ್ಷಿಸಿದೆ. ಕಾಫಿ ಡೇ ಮಾಲೀಕ ಸಿದ್ದಾರ್ಥ ಶೋಧದಲ್ಲಿಯೂ ಈ ತಂಡ ಕಾರ್ಯಾಚರಿಸಿದೆ. ಉಪ್ಪಿನಂಗಡಿ, ಮಾಣಿ ನದಿಯಲ್ಲಿ ರಕ್ಷಣಾ ಕಾರ್ಯಚರಣೆಯಲ್ಲಿ ಭಾಗಿಯಾಗಿದೆ.

    ನೇತ್ರಾವತಿ ನದಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಹಲವು ಮಂದಿಯನ್ನು ರಕ್ಷಿಸಿದ್ದೇವೆ. ಸ್ಥಳೀಯಾಡಳಿತವೂ ತುರ್ತು ಸಂದರ್ಭ ನಮ್ಮನ್ನೇ ಆಹ್ವಾನಿಸುತ್ತದೆ. ಆದರೆ ಸರ್ಕಾರದಿಂದ ಯಾವುದೇ ರಕ್ಷಣಾ ಸಾಮಗ್ರಿ ನಮಗೆ ಸಿಕ್ಕಿಲ್ಲ.
    ಮಹಮ್ಮದ್ ಈಜುಗಾರ

    ಮಾನವೀಯತೆಗಿಂತ ಮಿಗಿಲಾದ ಧರ್ಮವಿಲ್ಲ ಎನ್ನುವ ಮನೋಭಾವನೆಯಿಂದ ಈ ಯುವಕರು ಪ್ರಾಣದ ಹಂಗು ತೊರೆದು ರಕ್ಷಿಸಿರುವುದು ಅಭಿನಂದನೀಯ.
    ಸದಾನಂದ ಬಂಗೇರ ಅಧ್ಯಕ್ಷರು, ಜೇಸಿ ಬಂಟ್ವಾಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts