More

    ಅರ್ಥಶಾಸ್ತ್ರ ಕಲಿಕೆಗೆ ಯುವಜನರು ನಿರಾಶಕ್ತಿ

    ಮೈಸೂರು: ಯುವಜನರು ಅರ್ಥಶಾಸ್ತ್ರ ಕಲಿಕೆಗೆ ನಿರಾಸಕ್ತಿ ತೋರುತ್ತಿದ್ದಾರೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಕಳವಳ ವ್ಯಕ್ತಪಡಿಸಿದರು.


    ಮೈವಿವಿ ಅರ್ಥಶಾಸ್ತ್ರ ಮತ್ತು ಸಹಕಾರ ಅಧ್ಯಯನ ವಿಭಾಗ ವತಿಯಿಂದ ಮಾನಸಗಂಗೋತ್ರಿಯ ಎಚ್‌ಆರ್‌ಡಿಸಿ ಹಾಲ್‌ನಲ್ಲಿ ‘ಅನುಭವದ ಮೇಲೆ ಸಮಯ ಸರಣಿ ವಿಶ್ಲೇಷಣೆ’ ಕುರಿತು ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಮಾತನಾಡಿದರು.


    ಉನ್ನತ ಶಿಕ್ಷಣ ಕಲಿಯುವ ವಿದ್ಯಾರ್ಥಿಗಳು ಅರ್ಥಶಾಸ್ತ್ರ ಕೋರ್ಸ್ ಅನ್ನು ತೆಗೆದುಕೊಳ್ಳುತ್ತಿಲ್ಲ. ಇದು ಯುವಜನರ ನಿರಾಸಕ್ತಿಯನ್ನು ತೋರಿಸುತ್ತದೆ. ಇದು ಮಹತ್ವದ ಕೋರ್ಸ್. ಆದ್ದರಿಂದ ಆರ್ಥಿಕ ಚಟುವಟಿಕೆ ಕುರಿತು ಅಧ್ಯಯನ ಮಾಡುವ ಅರ್ಥಶಾಸ್ತ್ರವನ್ನು ಕಲಿಯಲು ಮುಂದಾಗಬೇಕು ಎಂದರು.


    ಜಪಾನ್, ಅಮೆರಿಕದಲ್ಲಿ ಕೌಶಲಾಭಿವೃದ್ಧಿ ಪ್ರಮಾಣ ಶೇ.92ರಷ್ಟಿದೆ. ಇದು ಯುರೋಪ್ ದೇಶಗಳಲ್ಲಿ ಶೇ.86ರಷ್ಟಿದೆ. ಹೀಗಾಗಿ, ಅಲ್ಲಿ ಶಿಕ್ಷಣ ಪಡೆದ ಬಹುತೇಕರಿಗೆ ಉದ್ಯೋಗ ದೊರೆಯುತ್ತಿದೆ. ಆದರೆ ಭಾರತದಲ್ಲಿ ಇದಕ್ಕೆ ವಿರುದ್ಧವಾದ ಪರಿಸ್ಥಿತಿ ಇದೆ. ಈ ಪ್ರಮಾಣ ದೇಶದಲ್ಲಿ ಕೇವಲ ಶೇ.12ರಷ್ಟಿದೆ. ಕಳೆದ ಎರಡ್ಮೂರು ವರ್ಷ ಹಿಂದೆ ಈ ಪ್ರಮಾಣ ಶೇ.8-9ರಷ್ಟಿತ್ತು. ಶಿಕ್ಷಣ ಪಡೆದ ಎಲ್ಲರಿಗೂ ನಮ್ಮಲ್ಲಿ ಉದ್ಯೋಗ ಸಿಗುತ್ತಿಲ್ಲ. ಇದುವೆೇ ನಿರುದ್ಯೋಗ ಸಮಸ್ಯೆಗೆ ಕಾರಣವಾಗುತ್ತಿದೆ. ಕೌಶಲಾಧಾರಿತ ಶಿಕ್ಷಣ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡುವುದು ಈ ಸಮಸ್ಯೆಗೆ ಪರಿಹಾರವಾಗಿದೆ ಎಂದು ಹೇಳಿದರು.


    ಭಾರತದಲ್ಲಿ ವರ್ಷಕ್ಕೆ ಅಂದಾಜು 3 ಕೋಟಿಯಷ್ಟು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಹೊರಬರುತ್ತಿದ್ದಾರೆ. ಇದು ಕೆಲ ದೇಶಗಳ ಜನಸಂಖ್ಯೆಗಿಂತ ಹೆಚ್ಚು. ಇಷ್ಟು ದೊಡ್ಡ ಪ್ರಮಾಣದಲ್ಲಿ ಉನ್ನತ ಶಿಕ್ಷಣ ಪೂರೈಸಿದ ವಿದ್ಯಾರ್ಥಿಗಳಿಗೆ ಹೇಗೆ ಉದ್ಯೋಗಾವಕಾಶ ಕಲ್ಪಿಸಿಕೊಡಬೇಕು? ಇದು ಸಾಧ್ಯವಾಗದಿದ್ದರೆ ನಿರುದ್ಯೋಗ ಸಮಸ್ಯೆ ಸೃಷ್ಟಿಯಾಗಲಿದೆ. ಇದು ಸಮಾಜ ಮತ್ತು ದೇಶ ದೊಡ್ಡ ಸಮಸ್ಯೆಗೆ ಸಿಲುಕಿಸಲಿದೆ. ಆದ್ದರಿಂದ ಈ ಸಮಸ್ಯೆಗೆ ಮಾರ್ಗೋಪಾಯ ಕಂಡುಕೊಳ್ಳಬೇಕಿದೆ ಎಂದರು.


    ದತ್ತಾಂಶ ವಿಶ್ಲೇಷಣೆ ಎಂದರೆ ಕೇವಲ ಅಪ್‌ಲೋಡ್ ಮತ್ತು ಡೌನ್‌ಲೋಡ್‌ನಂತಾಗಿದೆ. ಬದಲಿಗೆ ವಿಶ್ಲೇಷಣಾತ್ಮಕ ಚಿಂತನೆ ಕಾಣುತ್ತಿಲ್ಲ. ಕೃತಕ ಬುದ್ಧಿಮತ್ತೆ, ಮಾಹಿತಿ ತಂತ್ರಜ್ಞಾನ ಸೇರಿದಂತೆ ಅಗತ್ಯ ಎಲ್ಲ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡರೂ ಉತ್ತಮ ಫಲಿತಾಂಶ ಹೊರಹೊಮ್ಮುತ್ತಿಲ್ಲ. ತಂತ್ರಜ್ಞಾನವು ಜ್ಞಾನ ಸಂಪಾದನೆ, ಓದು, ಗ್ರಹಿಕೆ ವಿಸ್ತರಣೆಗೆ ನೆರವಾಗಬೇಕು ಎಂದು ಸಲಹೆ ನೀಡಿದರು.


    ದತ್ತಾಂಶ ಸಂಗ್ರಹ-ಸಿದ್ಧಾಂತ-ಮಾದರಿ-ವಿಶ್ಲೇಷಣೆ ಪ್ರಾಯೋಗಿಕವಾಗಿ ಇರಬೇಕು. ದತ್ತಾಂಶ ತಪ್ಪಾದರೆ ಇಡೀ ವಿಶ್ಲೇಷಣೆಯೇ ತಪ್ಪಾಗಲಿದೆ. ಶೇ.1ರಿಂದ 3ರಷ್ಟು ಲೋಪವಿದ್ದರೆ ಸಹಜ. ಆದರೆ, ಅದು ಶೇ.10ರಷ್ಟು ಮೀರಿದರೆ ಇಡೀ ಯೋಜನೆ ವಿಫಲವಾಗಲಿದೆ. ಇದು ದೇಶಕ್ಕೆ ನಷ್ಟವಾಗಲಿದೆ. ಆದ್ದರಿಂದ ವಸ್ತುನಿಷ್ಠ ಮತ್ತು ಪ್ರಾಯೋಗಿಕ ವಿಶ್ಲೇಷಣಾ ಮಾದರಿಯನ್ನು ರೂಪಿಸಬೇಕು. ಇದು ಜನಸಮುದಾಯಕ್ಕೆ ಅನುಕೂಲವಾಗಲಿದೆ ಎಂದರು.


    ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿ.ಕೆ.ರೇಣುಕಾರ್ಯ, ವಿಭಾಗದ ಮುಖ್ಯಸ್ಥ ಪ್ರೊ.ಎನ್.ಮಹೇಶ್ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts