

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾವಿರಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಆದರೆ, ಕೆಲವೊಂದು ವಿಡಿಯೋಗಳು ವಿಭಿನ್ನ, ವಿಶೇಷ ಹಾಗೂ ವಿಚಿತ್ರ ಕಾರಣಗಳಿಂದ ಬಹಳ ಬೇಗನೆ ವೈರಲ್ ಆಗಿಬಿಡುತ್ತವೆ. ಇದೀಗ ಅಂಥದ್ದೇ ವಿಡಿಯೋವೊಂದು ಜಾಲತಾಣದಲ್ಲಿ ಕೆಲ ದಿನಗಳಿಂದ ಸಿಕ್ಕಾಪಟ್ಟೆ ಸುಳಿದಾಡುತ್ತಿದೆ.
ಚಲಿಸುವ ರೈಲಿನಲ್ಲಿ ಯುವಜೋಡಿ ಮದುವೆಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಯಾಣಿಕರ ನಡುವೆ ಯುವಕನೊಬ್ಬ ಯುವತಿಗೆ ತಾಳಿ ಕಟ್ಟುತ್ತಿರುವ ಮತ್ತು ಹಾರ ಬದಲಾಯಿಸುತ್ತಿರುವ ದೃಶ್ಯವಿದೆ. ಪರಸ್ಪರ ಇಬ್ಬರು ತಬ್ಬಿಕೊಳ್ಳುತ್ತಿರುವುದು ಹಾಗೂ ಯುವತಿಯನ್ನು ಯುವಕ ಸಂತೈಸುತ್ತಿರುವುದು ಮತ್ತು ಪ್ರಯಾಣಿಕರು ನವಜೋಡಿಗೆ ಶುಭ ಹಾರೈಸುತ್ತಿರುವ ಭಾವುಕ ಕ್ಷಣಗಳಿಗೆ ರೈಲು ಸಾಕ್ಷಿಯಾಯಿತು.
ವರದಿಗಳ ಪ್ರಕಾರ ಅಸನ್ಸೋಲ್-ಜಸಿದಿಹ್ ರೈಲಿನಲ್ಲಿ ಈ ವಿಶಿಷ್ಟ ವಿವಾಹ ನಡೆಯಿತು. ಸಹ ಪ್ರಯಾಣಿಕರ ಹರ್ಷೋದ್ಘಾರದ ನಡುವೆ ಯುವಕ, ಯುವತಿಯ ಕುತ್ತಿಗೆಗೆ ಮಂಗಳಸೂತ್ರವನ್ನು ಕಟ್ಟುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರಯಾಣಿಕರು ತಮ್ಮ ಮೊಬೈಲ್ ಫೋನ್ಗಳಲ್ಲಿ ಮದುವೆಯ ದೃಶ್ಯವನ್ನು ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ನವೆಂಬರ್ 25ರಂದು max_sudama_1999 ಹೆಸರಿನ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಪೋಸ್ಟ್ಗ್ ಮಾಡಲಾಗಿದೆ. ಈವರೆಗೂ 30 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದ್ದು, 73 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. (ಏಜೆನ್ಸೀಸ್)