More

    ನಿಮ್ಮ ಬದುಕಿನ ನಾಯಕ ನೀವೇ ಆಗಿರಿ…: ಸೆಲೆಬ್ರಿಟಿ ಕಾರ್ನರ್​ನಲ್ಲಿ ರವಿ ಡಿ. ಚನ್ನಣ್ಣನವರ್​

    ನಿಮ್ಮ ಬದುಕಿನ ನಾಯಕ ನೀವೇ ಆಗಿರಿ...: ಸೆಲೆಬ್ರಿಟಿ ಕಾರ್ನರ್​ನಲ್ಲಿ ರವಿ ಡಿ. ಚನ್ನಣ್ಣನವರ್​ಬದುಕು ಕಲಿಸುವ ಪಾಠವನ್ನು ಇನ್ನೆಲ್ಲೂ ಕಲಿಯಲಾಗದು. ಲಕ್ಷಗಟ್ಟಲೆ ಸುರಿದು ಕೋಚಿಂಗ್ ಪಡೆದರೂ ಕಲಿಯಲಾಗದ ಪಾಠವನ್ನು ಈ ಬದುಕೆಂಬ ಮುಕ್ತ ವಿಶ್ವವಿದ್ಯಾಲಯದಲ್ಲಿ ನಾವು ಪ್ರತಿನಿತ್ಯ ಕಲಿಯುತ್ತಲೇ ಇರುತ್ತೇವೆ. ಅದು ನಮಗೆ ಕೊಡುವ ಅನುಭವ ಅನನ್ಯ ಮತ್ತು ಅಮೂಲ್ಯ. ಪ್ರತಿದಿನವೂ ಒಂದು ಹೊಸ ವಿಚಾರವನ್ನು ಕಲಿಸುತ್ತದೆ, ನಾವೆಲ್ಲಿ ಎಡವಿದೆವು ಎಂಬುದು ಅರಿವಿಗೆ ಬರುವಂತೆ ಮಾಡುತ್ತದೆ. ನಮ್ಮಿಂದಾದ ತಪು್ಪ ನಮಗೆ ತಿಳಿಯುವಂತೆ ಮಾಡುತ್ತದೆ. ಅಂದಂದಿಗೆ ಆದ ತಪ್ಪನ್ನು ಸರಿಪಡಿಸಿಕೊಂಡು ಮತ್ತೆ ತಪ್ಪು ಮಾಡುವುದಿಲ್ಲವೆಂಬ ಅದಮ್ಯವಾದ ಆತ್ಮವಿಶ್ವಾಸದೊಂದಿಗೆ ಮುನ್ನಡೆಯುತ್ತೇವೆ, ಆದರೆ ತಪ್ಪು ಮತ್ತೆ ಘಟಿಸಬಹುದು, ತಪ್ಪೇನಿಲ್ಲ, ತಪ್ಪು-ಒಪ್ಪು, ಸೋಲು-ಗೆಲುವುಗಳಿದ್ದಾಗಲೇ ಜೀವನ. ಅದಿಲ್ಲದೇ ಬರೇ ಗೆಲುವೊಂದೇ ಬದುಕಿನಲ್ಲಿದ್ದರೆ ಅದು ಖಂಡಿತವಾಗಿಯೂ ನೀರಸ ಮತ್ತು ನಿಸ್ಸಾರ. ಈ ಬದುಕೆಂಬುದು ಕಷ್ಟ-ನಷ್ಟ, ವೈಫಲ್ಯ-ಸಾಫಲ್ಯಗಳು ತುಂಬಿರುವ ಸಮರಸದ ಪ್ಯಾಕೇಜ್ ಟೂರ್. ಬಂದುದನ್ನು ಬಂದ ಹಾಗೆ ಸ್ವೀಕರಿಸಿ ಮುನ್ನಡೆಯುವ, ಸವಾಲು ಗಳನ್ನು ಎದುರಿಸುವ ಮತ್ತು ಎಲ್ಲವನ್ನೂ ಅನುಭವಿಸಿ ಮುಂದಡಿ ಇಡುವ ಪ್ರಕ್ರಿಯೆ ನಿರಂತರವಾಗಿರಬೇಕು. ಜೀವನವೆಂಬುದು ನಿಂತ ನೀರಾಗದೆ ಹರಿವ ತೊರೆಯಾಗಿ, ಹೊಳೆಯಾಗಿ, ನದಿಯಾಗಿ ವಿಶಾಲವಾಗುತ್ತ ಸುದೀರ್ಘ ಪಯಣವನ್ನು ಕಾಣಬೇಕು.

    ನೆರವಿನ ಮನ: ನಾವು ಮಾತ್ರ ಬೆಳೆದರೆ ಸಾಲದು, ನಮ್ಮಂತಹ ನೂರು ಜನರಿಗೆ ನೆರವಾಗಬೇಕು. ಇದು ಮೂಲಭೂತವಾಗಿ ನಮ್ಮೆಲ್ಲರಲ್ಲಿ ಅಳವಡಿಕೆಯಾಗಬೇಕಿರುವ ಅಂಶ. ಇಂದಿನ ವಾಣಿಜ್ಯ ಯುಗದಲ್ಲಿ ಎಲ್ಲವೂ ನನಗೇ ಸಿಗಬೇಕು, ನಾನೊಬ್ಬನೇ ಬೆಳೆಯಬೇಕು ಎಂಬ ಹಪಾಹಪಿತನ ಹೆಚ್ಚುತ್ತಿದೆ. ನಾನೊಬ್ಬ ಬೆಳೆದರೆ ಸಾಲದು, ಸುತ್ತಮುತ್ತಲ ಪರಿಸರದಲ್ಲಿ ನನ್ನಂತೆ ಇರುವ, ನನಗೆ ಸಿಕ್ಕ ಸವಲತ್ತುಗಳು ಸಿಗದೆ ಹತಾಶರಾಗಿರುವ, ಹತಭಾಗ್ಯರಿಗೂ ಒಳಿತಾಗಬೇಕು. ಅನ್ಯರ ಒಳಿತಿಗೆ ನಾನು ಹೇತುವಾಗಬೇಕು, ಬಿದ್ದವನನ್ನು ಮೇಲೆತ್ತುವವನು ನಾನಾಗಬೇಕು ಎನ್ನುವ ಮನೋಭೂಮಿಕೆ ಬೆಳೆಸಿಕೊಂಡು ಅದಕ್ಕೆ ತಕ್ಕಂತೆ ಅನುವರ್ತಿಸಿದಾಗ ಮಾತ್ರ ನಮ್ಮ ಬದುಕು ಸಾರ್ಥಕ. ಅನ್ಯಥಾ ಅದೆಷ್ಟೇ ಕೋಟಿಗಳ ಆಸ್ತಿ ಗಳಿಸಿದ್ದರೂ ಅದು ವ್ಯರ್ಥ ಮತ್ತು ನಿರರ್ಥಕ. ನಿಮ್ಮ ಹಳಿ ್ಳ ಊರು -ಕೇರಿ, ಹೋಬಳಿ, ತಾಲೂಕು, ಜಿಲ್ಲೆಯಲ್ಲಿ ಅದೆಷ್ಟೋ ಮಂದಿ ಅವಕಾಶವಂಚಿತರು ಇದ್ದೇ ಇರುತ್ತಾರೆ. ನೀವು ಗೆದ್ದಾಗ ಅಂಥವರನ್ನು ಆಯ್ದು ಅವರ ಗೆಲುವಿಗೂ ನೆರವಾಗಿ. ಈ ಮನೋಭಾವ ವ್ಯಕ್ತಿತ್ವಕ್ಕೊಂದು ಮೆರುಗನ್ನು ತುಂಬುತ್ತದೆ. ನಾವು ಬದುಕಿನಲ್ಲಿ ಹೊಂಗೆಮರದಂತಾಗಬೇಕು, ಅನ್ಯರಿಗೆ ನೆರಳಾಗಬೇಕು, ತಂಪನ್ನೀಯಬೇಕು. ಮುಳ್ಳಿನಿಂದ ಕೂಡಿದ ಜಾಲಿಮರವಾಗುವುದು ತರವಲ್ಲ.

    ಖರ್ಚು ಮಾಡುವ ಪ್ರತಿ ರೂಪಾಯಿಗೂ ಲೆಕ್ಕ: ಇಂತಹ ಶಿಸ್ತು ಇದ್ದಾಗ ಜೀವನ ಕ್ಕೊಂದು ಹೊಸ ಆಯಾಮ ಪ್ರಾಪ್ತವಾಗುತ್ತದೆ. ಪೋಷಕರು ಕಳುಹಿಸುವ ದುಡ್ಡಿನ ಮೌಲ್ಯ ಎಷ್ಟೋ ಮಂದಿಗೆ ಗೊತ್ತಿರುವುದಿಲ್ಲ, ಗೊತ್ತಿದ್ದರೂ ಅಲಕ್ಷ ್ಯ ಮಾಡಿ ಬೇಕಾಬಿಟ್ಟಿಯಾಗಿ ವರ್ತಿಸುವವರೂ ಇರುತ್ತಾರೆ. ನಾನೇನು ಮಾಡುತ್ತಿದ್ದೇನೆ, ನನ್ನ ಗುರಿ ಏನು, ಯಾವ ಉದ್ದೇಶಕ್ಕಾಗಿ ಶಿಕ್ಷಣಾರ್ಥಿಯಾಗಿ ಬಂದಿದ್ದೇನೆ, ನನ್ನ ಇಂದಿನ ಸುಖಕ್ಕೆ ಯಾರ್ಯಾರು ಕಷ್ಟಪಡುತ್ತಿದ್ದಾರೆ, ಅವರು ನನಗೆ ಕೊಡುವ ಪ್ರತಿ ರೂಪಾಯಿ ಯನ್ನೂ ಪ್ರಾಮಾಣಿಕವಾಗಿ ದುಡಿದು ವಾಪಾಸು ಕೊಡುವುದಕ್ಕೆ ಬದ್ಧನಿರಬೇಕು ಎಂಬ ದೃಢನಿಶ್ಚಯ ಇರಬೇಕು. ಆಗ ದುಬಾರಿ ಖರ್ಚುಗಳಿಂದ ಮತ್ತು ದುಶ್ಚಟಗಳಿಂದ ದೂರವಿರಬಹುದು ಮತ್ತು ತನ್ಮೂಲಕ ಗುರಿಸಾಧನೆ ಕೂಡ ಸಾಧ್ಯ.

    ನಿಮ್ಮ ಬದುಕಿನ ನಾಯಕ ನೀವೇ: ನೀವೊಂದು ಸಿನಿಮಾ ನೋಡುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಆ ಸಿನಿಮಾದಲ್ಲಿ ಬರುವ ನಾಯಕ ಸೂಪರ್ ಮ್ಯಾನ್, ಟಫ್ ಪೊಲೀಸ್ ಆಫೀಸರ್ ಕೂಡ ಆಗಿರಬಹುದು, ಅಥವಾ ಇನ್ನೇನೋ ಆಗಿರಬಹುದು. ಸಿನಿಮಾ ಮಂದಿರದಿಂದ ಹೊರಬರುವಾಗ ನೀವು ನಿಮ್ಮನ್ನು ಆ ನಾಯಕನ ಸ್ಥಾನದಲ್ಲಿ ಊಹಿಸಿಕೊಂಡು ಬರುತ್ತೀರೇ ವಿನಾ ಬೇರೆ ಯಾರನ್ನಲ್ಲ, ಅಲ್ಲವೇ? ಇದು ಸಹಜ. ಬದುಕಿನ ಏಳು-ಬೀಳುಗಳ ಸಂದರ್ಭಗಳಲ್ಲಿ ಸಾವರಿಸಿಕೊಂಡು ಎದ್ದುನಿಂತು ದೃಢವಾದ ಹೆಜ್ಜೆಗಳನ್ನಿಟ್ಟು ಮುನ್ನಡೆಯುವವರು ಕೂಡ ನೀವೇ ಅಲ್ಲವೇ? ಅಂದರೆ ನಿಮ್ಮ ಬದುಕಿನ ನಾಯಕ ನೀವೇ ಮತ್ತು ನಿಮ್ಮ ಬದುಕನ್ನು ರೂಪಿಸಿಕೊಳ್ಳುವವರು ಕೂಡ ನೀವೇ. ನಿಮ್ಮ ಗೆಲುವಿಗೆ ಹೇಗೆ ನೀವು ಕಾರಣರೋ ಹಾಗೆಯೇ ಸೋಲುಗಳಿಗೂ ನೀವೇ ಕಾರಣರು.

    ಜ್ಞಾನದ ಅಸ್ತ್ರಗಳನ್ನು ಬತ್ತಳಿಕೆಯಲ್ಲಿ ತುಂಬಿ: ನಮ್ಮ ಜ್ಞಾನಕೋಶದಲ್ಲಿ ಸುಜ್ಞಾನ ತುಂಬಬೇಕೆಂದಾದರೆ, ದುರಾಲೋಚನೆಗಳಿಂದ ದೂರವಾಗಿರಬೇಕು. ಮಸ್ತಿಷ್ಕ ವೆಂಬ ಹಾರ್ಡ್​ಡಿಸ್ಕ್​ನಲ್ಲಿ ವೈರಸ್​ಗಳನ್ನು, ಅನವಶ್ಯಕ ಕಸಕಡ್ಡಿಗಳನ್ನು ಆಗಾಗ ತೊಡೆದುಹಾಕಿ ಕ್ಲೀನ್ ಮಾಡಿಕೊಳ್ಳಬೇಕು. ಆಗ ಸುಜ್ಞಾನವನ್ನು ತುಂಬಿ ಕೊಳ್ಳುವು ದಕ್ಕೆ ಹೆಚ್ಚಿನ ಸ್ಥಳಾವಕಾಶ ಮಿದುಳೆಂಬ ಹಾರ್ಡ್ ಡಿಸ್ಕ್​ನಲ್ಲಿ ಉಳಿಯುತ್ತದೆ. ಬದುಕಿಗೆ, ಪರೀಕ್ಷೆಗೆ, ಬೇಕಾದ ಪೂರಕ ಸಂಗತಿಗಳನ್ನು, ಜ್ಞಾನದ ಅಸ್ತ್ರಗಳನ್ನು ಎಲ್ಲಿಂದಲಾದರೂ ಸರಿ, ಒಟ್ಟುಗೂಡಿಸಿ ಬತ್ತಳಿಕೆಯಲ್ಲಿ ಪೋಣಿಸಿ ಇಟ್ಟುಕೊಳ್ಳಿ. ಬೇಕೆಂದಾಗ ಒಂದೊಂದಾಗಿ ಪ್ರಯೋಗಿಸಿ ಗೆಲುವನ್ನು ನಮ್ಮದಾಗಿಸಿ ಕೊಳ್ಳಬಹುದು. ಪರೀಕ್ಷೆಯ ದೃಷ್ಟಿಯಿಂದ ಮಾತ್ರವಲ್ಲ, ಬದುಕಿಗೂ ಇದು ಪೂರಕ.

    ಓದಲು ಯಾವುದು ಸೂಕ್ತ ಸಮಯ: ನನ್ನ ಅನುಭವದ ಪ್ರಕಾರ ಓದುವುದಕ್ಕೆ ಇಂತಹ ಸಮಯವೇ ಸೂಕ್ತ ಮತ್ತು ಪ್ರಶಸ್ತ ಎಂಬುದಿಲ್ಲ. ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಓದಿದ್ದು ಮಾತ್ರ ಮಸ್ತಕದಲ್ಲಿ ದಾಖಲಾಗುತ್ತದೆ ಎಂದೆಲ್ಲ ಹೇಳುವವರಿದ್ದಾರೆ. ಅದು ಹೌದೋ ಅಲ್ಲವೋ ಗೊತ್ತಿಲ್ಲ, ನನಗಂತೂ ಅಂತಹ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಓದುವ ಭಾಗ್ಯ ಸಿಕ್ಕಿರಲಿಲ್ಲ. ಕಾರಣ ನಾನು ತಡರಾತ್ರಿಯತನಕ ದುಡಿಮೆಯಲ್ಲಿರುತ್ತಿದ್ದೆ, ಹಾಗಾಗಿ ಬೆಳಗ್ಗೆ ಅಷ್ಟುಬೇಗ ಏಳುವುದು ಸಾಧ್ಯವಿರಲಿಲ್ಲ. ಬೆಳಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ ಎಂಬ ಪರಿವೇ ಇಲ್ಲದೆ, ಸಿಕ್ಕ ಸಮಯವನ್ನು ಸದುಪಯೋಗಪಡಿಸಿಕೊಂಡು, ಪ್ರಶಸ್ತವೂ, ಪ್ರಶಾಂತವೂ ಆದ ಜಾಗದಲ್ಲಿ ಕುಳಿತು ಓದಿಗೆ ತೊಡಗಿ. ಓದಿದ್ದು ತಲೆಯಲ್ಲಿ ರಿಜಿಸ್ಟರ್ ಆಗಬೇಕಾದರೆ ಅದನ್ನು ಮತ್ತೆ ಮತ್ತೆ ಮನನ ಮಾಡಿಕೊಳ್ಳಬೇಕು, ನೋಟ್ಸ್ ಮಾಡಿಕೊಂಡು ಮುನ್ನಡೆದರೆ ಅದು ಬಹಳ ಕಾಲ ತಲೆಯಲ್ಲಿ ಉಳಿದೀತು ಮತ್ತು ಪರೀಕ್ಷೆಯಲ್ಲಿ ಸಹಾಯವಾದೀತು. ಏಕೆಂದರೆ ನಾವ್ಯಾರೂ ಅವಧಾನಿಗಳಲ್ಲ. ನಿಮ್ಮ ಸ್ಮರಣಶಕ್ತಿ ಹೆಚ್ಚಿರಬಹುದು, ಆದರೆ ನನಗೆ ಹೆಚ್ಚಿನ ಸ್ಮರಣ ಶಕ್ತಿ ಇಲ್ಲ, ಅಷ್ಟಾವಧಾನಿಗಳಂತೆ, ಶತಾವಧಾನಿಗಳಂತೆ ಏಕಕಾಲದಲ್ಲಿ ಬಹುವಿಧ ಕೆಲಸಗಳನ್ನು ನನಗೆ ಮಾಡಲಾಗದು. ನನ್ನ ಏಕಾಗ್ರತೆಯ ವ್ಯಾಪ್ತಿ ಹದಿನೈದು ನಿಮಿಷಕ್ಕಿಂತ ಜಾಸ್ತಿ ಇರುವುದಿಲ್ಲ. ಹಾಗಾಗಿ ಎಲ್ಲವನ್ನೂ ಪುಟ್ಟ ನೋಟ್ಸ್ ರೂಪದಲ್ಲಿ ಬರೆದಿಟ್ಟುಕೊಳ್ಳುವ ಅಭ್ಯಾಸ ಮಾಡಿದ್ದೇನೆ. ನಿಮಗೆ ನಿಮ್ಮ ಸ್ಮರಣ ಶಕ್ತಿಯ ಬಗ್ಗೆ ಅಪಾರವಾದ ನಂಬಿಕೆ ಇದ್ದರೆ ಹಾಗೆಯೇ ಮುಂದುವರಿಯಿರಿ, ಇಲ್ಲವೆಂದಾದಲ್ಲಿ ಜೇಬಿನಲ್ಲಿ ಪುಟ್ಟದೊಂದು ನೋಟ್​ಬುಕ್ ಸದಾ ಇಟ್ಟುಕೊಳ್ಳಿ. ಎಲ್ಲೆಲ್ಲಿ ಏನೇನು ನಿಮ್ಮ ಅವಗಾಹನೆಗೆ ಬರುವುದೋ ಅದನ್ನು ನೋಟ್ಸ್ ಮಾಡಿಕೊಳ್ಳಿ. ಇನ್ನು ಊಟೋಪಹಾರದ ವಿಷಯಕ್ಕೆ ಬರುವುದಾದರೆ ಆದಷ್ಟು ಜಂಕ್ ಫುಡ್ ಬಿಟ್ಟುಬಿಡಿ. ಅದು ಆಲಸ್ಯವನ್ನು ತುಂಬುತ್ತದೆ, ಹೊಟ್ಟೆಭಾರ ವಾಗಿ ನಿದ್ದೆಗೆ ಜಾರುವಂತೆ ಮಾಡವುದಲ್ಲದೇ, ನಿಮ್ಮನ್ನು ಉದ್ದೇಶದಿಂದ ವಿಮುಖ ರಾಗಿಸುವಲ್ಲಿ ಕೆಲಸ ಮಾಡಬಹುದು. ಪೂರ್ವಜರ ಆಹಾರಪದ್ಧತಿ ನಿಜವಾಗಿಯೂ ಚೆನ್ನ. ಬೆಳಗಾಗೆದ್ದು ರಾಗಿ ಅಂಬಲಿ ಉಂಡರೆ ಸಿಗುವ ಸುಖಕ್ಕೆ ಸಾಟಿ ಇನ್ನೊಂದಿಲ್ಲ.

    ಮನುಷ್ಯನೆಂಬ ಅದ್ಭುತ: ಮನುಷ್ಯ ಈ ಜಗತ್ತಿನ ಅತ್ಯದ್ಭುತ ಸೃಷ್ಟಿಗಳಲ್ಲೊಂದು. ತನಗಿಂತ ನೂರುಪಟ್ಟು ದೈಹಿಕ ಶಕ್ತಿ ಇರುವ ಆನೆಯನ್ನೋ, ಹುಲಿಯನ್ನೋ ಪಳಗಿಸಿ ಹದ್ದುಬಸ್ತಿನಲ್ಲಿಟ್ಟುಕೊಳ್ಳುವ ತಾಕತ್ತು, ಆಲೋಚನೆ, ಚಿಂತನೆ, ಸಂಶೋಧನೆ, ಆವಿಷ್ಕಾರಗಳ ಮೂಲಕ ಇನ್ನಾವುದೇ ಜೀವಿ ಮಾಡಲಾಗದ್ದನ್ನು ಸಾಧಿಸುವ ಕ್ಷಮತೆ ಮನುಷ್ಯನಿಗೆ ಪ್ರಕೃತಿದತ್ತವಾಗಿ ಸಿಕ್ಕಿರುವಂಥದು. ಹಾಗಾಗಿ ಮನುಷ್ಯನನ್ನು ಸೋಲಿಸುವ ವಸ್ತು ಇದುವರೆಗೂ ಜಗತ್ತಿನಲ್ಲಿ ಸೃಷ್ಟಿಯಾಗಿಲ್ಲ. ಆತ ಎಲ್ಲವನ್ನೂ, ಎಲ್ಲರನ್ನೂ ಗೆಲ್ಲಬಲ್ಲ ಮತ್ತು ತನ್ನ ಪಾರಮ್ಯವನ್ನು ಜಾಹೀರು ಮಾಡಬಲ್ಲ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಪ್ರತಿಯೊಬ್ಬರೂ ಇದನ್ನು ತಲೆಯಲ್ಲಿಟ್ಟುಕೊಂಡಿರಬೇಕು. ಏಕೆಂದರೆ ನಮ್ಮ ಮಿದುಳಿಗಿರುವ ಅದ್ಭುತ ಗ್ರಹಣ ಶಕ್ತಿ, ಸ್ಮರಣಶಕ್ತಿ, ವಿವೇಚನೆ ಮತ್ತು ಆಲೋಚನಾಶಕ್ತಿ ಎದುರಾಗುವ ಎಲ್ಲ ಸೋೕಲಿನ ಪ್ರಸಂಗಗಳನ್ನೂ ಹಿಮ್ಮೆಟ್ಟಿಸಿ ಗೆಲುವಿನ ಪತಾಕೆ ಹಾರಿಸುವುದಕ್ಕೆ ಸಹಾಯಕವಾಗುತ್ತದೆ.

    ಗೆಲುವಿಗೆ ನೂರು ಅಪ್ಪಂದಿರು, ಸೋಲು ಅನಾಥ: ಹಿಡಿದ ಗುರಿಸಾಧಿಸಿ ಗೆದ್ದು ಬಂದರೆ ನಿಮ್ಮ ಗೆಲುವಿಗೆ ತಾನು ಕಾರಣ ಎಂದು ಹೇಳಿಕೊಳ್ಳುವ ಕನಿಷ್ಟ ನೂರು ಜನರು ಎದುರಾಗುತ್ತಾರೆ. ಇರಬಹುದು, ಅವರು ಕೊಟ್ಟ ಅಲ್ಪಸಹಾಯ ನಿಮ್ಮ ಗೆಲುವಿಗೆ ಕಾರಣವೂ ಆಗಿರಬಹುದು. ಆದರೆ ಸೋತರೆ ಅದರ ದಾಯಿತ್ವವನ್ನು ವಹಿಸಿಕೊಳ್ಳಲು ಯಾರೂ ಮುಂದೆ ಬರುವುದಿಲ್ಲ, ನನ್ನಿಂದಾಗಿ ಆತ ಸೋತ ಎಂದು ಯಾರೂ ಹೇಳುವುದಿಲ್ಲ. ಇದರರ್ಥ ಸ್ಪಷ್ಟ, ಸೋಲು ಎಂದಿದ್ದರೂ ಅನಾಥ. ನಿಮ್ಮ ಸೋಲಿನ ದಾಯಿತ್ವ ನಿಮ್ಮದೇ, ಹಾಗಾಗಿ ಸೋಲನ್ನು ಸವಾಲಾಗಿ ಸ್ವೀಕರಿಸಿ.

    ಹಿರಿಯರು-ದಾರ್ಶನಿಕರ ಮಾತು ಆದರ್ಶ: ‘ನಾಳೆ ಎಂಬುದು ನಿನ್ನಿನ ಮನಸು, ಮುಂದೆ ಎಂಬುವುದು ಇಂದಿನ ಕನಸು’ ಇದು ದ.ರಾ.ಬೇಂದ್ರೆಯವರ ಮಾತು. ಕವಿ ಮಧುರಚೆನ್ನ ‘ಬರುವುದೇನುಂಟೊಮ್ಮೆ ಬರುವ ಕಾಲಕೆ ಬಹುದು, ಬಯಕೆ ಬರುವುದರ ಕಣ್ಸನ್ನೆ ಕಾಣೋ’ ಎಂದು ಹೇಳಿದ್ದಾರೆ. ಹಿರಿಯರು, ದಾರ್ಶನಿಕರ ಇಂತಹ ಮಾತು ನಮಗೆಲ್ಲ ಸ್ಪೂರ್ತಿಯಾಗಬೇಕು. ಬದುಕಿನಲ್ಲಿ ಎಂದೂ ಸೋಲೊಪ್ಪಿಕೊಳ್ಳಬೇಡಿ, ನಾಳೆಯ ಬಗ್ಗೆ ದೃಢವಿಶ್ವಾಸವಿಡಿ. ನಿನ್ನೆಯ ತಪ್ಪುಗಳನ್ನು ಮರೆತು ಇಂದಿನ ವರ್ತಮಾನದಲ್ಲಿ ಶ್ರಮ ಹಾಕಿದರೆ ನಿಮ್ಮ ನಾಳೆ ಸದೃಢವಾಗುತ್ತದೆ.

    (ಲೇಖಕರು ಐಪಿಎಸ್ ಅಧಿಕಾರಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts