More

    2021ರಲ್ಲಿ ಯೆಲ್ಲೋ ಜೆರ್ಸಿಗೆ ಟಿ20 ಪ್ರಶಸ್ತಿ ಗೆಲ್ಲೋ ಅದೃಷ್ಟ!

    ಬೆಂಗಳೂರು: ಹಾಲಿ ವರ್ಷ ಇನ್ನು ಯಾವುದಾದರು ತಂಡಕ್ಕೆ ಟಿ20 ಕ್ರಿಕೆಟ್​ ಪ್ರಶಸ್ತಿ ಜಯಿಸುವ ಆಸೆ ಇದ್ದರೆ ಕೂಡಲೆ ತನ್ನ ಜೆರ್ಸಿಯನ್ನು ಹಳದಿ ಬಣ್ಣಕ್ಕೆ ಬದಲಾಯಿಸುವುದು ಒಳಿತು. ಯಾಕೆಂದರೆ ಹಾಲಿ ವರ್ಷದ ಪ್ರಮುಖ 3 ಟಿ20 ಟೂರ್ನಿಗಳಲ್ಲಿ ಹಳದಿ ಜೆರ್ಸಿ ಧರಿಸಿದ ತಂಡಗಳೇ ಪ್ರಶಸ್ತಿ ಜಯಿಸಿವೆ! ಕಾಕತಾಳೀಯವೋ, ಅದೃಷ್ಟವೋ ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ನಡೆದ 3 ಪ್ರಮುಖ ಟಿ20 ಟೂರ್ನಿಗಳ ಫೈನಲ್‌ನಲ್ಲೂ ಹಳದಿ ಜೆರ್ಸಿ ಧರಿಸಿದ ತಂಡಗಳೇ ಪ್ರಶಸ್ತಿ ಒಲಿಸಿಕೊಂಡಿರುವುದು ವಿಶೇಷವಾಗಿದೆ. ಈ ಮೂಲಕ 2021 ಹಳದಿ ಬಣ್ಣಕ್ಕೆ ಅದೃಷ್ಟದ ವರ್ಷವೆನಿಸಿದೆ.

    ಐಪಿಎಲ್ 14ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ಮತ್ತು ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡ ಪ್ರಶಸ್ತಿ ಜಯಿಸಿತ್ತು. ಇವೆರಡು ತಂಡಗಳೂ ಹಳದಿ ಜೆರ್ಸಿಯಿಂದಲೇ ಕ್ರಿಕೆಟ್ ಜಗತ್ತಿನಲ್ಲಿ ವಿಶೇಷ ಮನ್ನಣೆ ಪಡೆದಿವೆ. ಅಕ್ಟೋಬರ್ 15ರಂದು ದುಬೈನಲ್ಲಿ ನಡೆದ ಐಪಿಎಲ್ ಫೈನಲ್‌ನಲ್ಲಿ ಎಂಎಸ್ ಧೋನಿ ಸಾರಥ್ಯದ ಸಿಎಸ್‌ಕೆ ಪ್ರಶಸ್ತಿ ಗೆದ್ದಿದ್ದರೆ, ನವೆಂಬರ್ 14ರಂದು ಅಲ್ಲೇ ಟಿ20 ವಿಶ್ವಕಪ್ ನಡೆದ ಫೈನಲ್‌ನಲ್ಲಿ ಆರನ್ ಫಿಂಚ್ ಸಾರಥ್ಯದ ಆಸೀಸ್ ತಂಡ ಪ್ರಶಸ್ತಿ ಜಯಿಸಿತ್ತು. ಇವೆರಡು ಫೈನಲ್‌ಗಳಲ್ಲಿ ಕಡು ನೇರಳೆ-ಕಪ್ಪು ಬಣ್ಣದ ಜೆರ್ಸಿ ಧರಿಸುವ ಕೆಕೆಆರ್ ಮತ್ತು ನ್ಯೂಜಿಲೆಂಡ್ ತಂಡಗಳು ಸೋಲು ಅನುಭವಿಸಿದ್ದವು.

    ಇದೀಗ ಹಳದಿ ಮತ್ತು ನೀಲಿ ಜೆರ್ಸಿಯ ತಮಿಳುನಾಡು ತಂಡಕ್ಕೂ ಪ್ರಶಸ್ತಿ ಅದೃಷ್ಟ ಒಲಿದಿದೆ. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ದೇಶೀಯ ಟಿ20 ಟೂರ್ನಿಯ ಫೈನಲ್‌ನಲ್ಲಿ ತಮಿಳುನಾಡು ತಂಡ ಕರ್ನಾಟಕಕ್ಕೆ ಕೊನೇ ಎಸೆತದಲ್ಲಿ ಸೋಲುಣಿಸಿ ಪ್ರಶಸ್ತಿ ಅದೃಷ್ಟ ಸಂಪಾದಿಸಿದೆ.

    ಈ ವರ್ಷ ಹಳದಿ ಜೆರ್ಸಿ ಧರಿಸಿದ ತಂಡವೇ ಟಿ20 ಪ್ರಶಸ್ತಿ ಜಯಿಸುವ ಸಾಧನೆ ತಮಿಳುನಾಡು ತಂಡದಿಂದಲೇ ಶುರುವಾಗಿತ್ತು ಎಂಬುದು ಗಮನಾರ್ಹ. ಈ ವರ್ಷ ಜನವರಿ 31ರಂದು ನಡೆದ 2020-21ರ ಸಾಲಿನ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲೂ ತಮಿಳುನಾಡು ತಂಡ ಫೈನಲ್‌ನಲ್ಲಿ ಬರೋಡ ತಂಡಕ್ಕೆ ಸೋಲುಣಿಸಿ ಪ್ರಶಸ್ತಿ ಜಯಿಸಿತ್ತು. ಇದೀಗ ಸತತ 2ನೇ ಬಾರಿ ಪ್ರಶಸ್ತಿ ಒಲಿಸಿಕೊಂಡು, ಹಳದಿ ಜೆರ್ಸಿಯ ಅದೃಷ್ಟವನ್ನು ಸಾರಿದೆ.

    ಕೊನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿದ ಶಾರುಖ್, ಕರ್ನಾಟಕಕ್ಕೆ ತಪ್ಪಿದ ದೇಶೀಯ ಟಿ20 ಕಿರೀಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts