More

    ಈಶ್ವರಪ್ಪ ಚುನಾವಣಾ ಪ್ರಚಾರಕ್ಕೆ ಮೋದಿ ಫೋಟೊ ಬಳಕೆ ತಪ್ಪೇನಿಲ್ಲವೆಂದ ಯಡಿಯೂರಪ್ಪ !

    ಬೆಂಗಳೂರು: ಲೋಕಸಭಾ ಚುನಾವಣೆ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಫೋಟೊ ಬಳಕೆ ವಿಚಾರದಲ್ಲಿ ಶಿವಮೊಗ್ಗ ಕ್ಷೇತ್ರದ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹಾಗೂ ಬಿಜೆಪಿ ನಡುವೆ ಜಟಾಪಟಿ ನಡೆದಿದೆ. ಕಾನೂನು ಸಮರದ ತಿರುವು ಪಡೆದು ಕಾವೇರಿಸಿದ್ದರೆ ಮೋದಿ ಫೋಟೊ ಬಳಕೆ ಒಳ್ಳೆಯದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಣ್ಣನೆ ಪ್ರತಿಕ್ರಿಯೆ ನೀಡಿರುವುದು ರಾಜಕೀಯ ವಲಯದಲ್ಲಿ ಹುಬ್ಬೇರಿಸುವಂತೆ ಮಾಡಿದೆ.

    ಕ್ಷೇತ್ರದ ಸಂಸದ, ಬಿಎಸ್ ವೈ ಹಿರಿಯ ಪುತ್ರ ಬಿ.ವೈ.ರಾಘವೇಂದ್ರ ಮತ್ತೊಮ್ಮೆ ಬಿಜೆಪಿ ಅಭ್ಯರ್ಥಿಯಾಗಿ‌ ಕಣಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಈ ನಡುವೆ ಪಕ್ಷೇತರರಾಗಿ ಸ್ಪರ್ಧಿಸಿರುವ ಕೆ.ಎಸ್.ಈಶ್ವರಪ್ಪ ಅವರು ಚುನಾವಣಾ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಫೋಟೊ ಬಳಕೆ ಮಾಡುತ್ತಿರುವುದರಲ್ಲಿ ತಪ್ಪೇನಿಲ್ಲ. ಅವರ ವಿರುದ್ಧ ಕ್ರಮವಹಿಸುವುದು ಪಕ್ಷದ ವರಿಷ್ಠರ‌ ವಿವೇಚನೆಗೆ ಬಿಟ್ಟದ್ದು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

    ಪಕ್ಷದ ಅಭ್ಯರ್ಥಿ ಪರವಾಗಿ ಚುನಾವಣಾ ಪ್ರಚಾರಕ್ಕೆ ಚಿತ್ರದುರ್ಗ ಜಿಲ್ಲೆಗೆ ತೆರಳುವ ಮುನ್ನ ಸುದ್ದಿಗಾರರಿಗೆ ಶನಿವಾರ ಪ್ರತಿಕ್ರಿಯಿಸಿದ ಅವರು, ದಿನಗಳೆದಂತೆ ರಾಜ್ಯದಲ್ಲಿ ಬಿಜೆಪಿ ವಾತಾವರಣ ಇನ್ನಷ್ಟು ಗಟ್ಟಿಯಾಗುತ್ತಿದೆ. ಬಿಜೆಪಿ- ಜೆಡಿಎಸ್ ಮೈತ್ರಿಕೂಟ‌ 28ಕ್ಕೆ 28 ಸ್ಥಾನ ಗೆಲ್ಲುತ್ತದೆ ಎಂದು ಹೇಳಿದ್ದೇವೆ. ಅದೇ ವಿಶ್ವಾಸದೊಂದಿಗೆ ಜನರ ಬೆಂಬಲ ಪಡೆಯಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇವೆ. ಮುಂದೆ ಏನಾಗುತ್ತದೋ ನೋಡೋಣವೆಂದು ಉತ್ತರಿಸಿದರು.

    ಮೋದಿ ಕಾರ್ಯಕ್ರಮದಲ್ಲಿ ಭಾಗಿ

    ಮೊಳಕಾಲ್ಮೂರು, ಚಳ್ಳಕೆರೆ, ಹಿರಿಯೂರು ಮೂರು ಸ್ಥಳಗಳಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮ‌ಗಳನ್ನು ಮುಗಿಸಿ ವಾಪಸ್ ಬರುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿನಲ್ಲಿ ಭಾನುವಾರ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ನಾನೂ ಭಾಗವಹಿಸುತ್ತೇನೆ ಎಂದು ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

    ಮೋದಿಯವರ ಜನಪ್ರಿಯತೆ ಏರುಮುಖವಾಗಿದೆ. ಉತ್ತಮ ವಾತಾವರಣವೂ ಇದೆ. ಮೋದಿ ಸೇರಿ ರಾಷ್ಟ್ರೀಯ ನಾಯಕರ ಕಾರ್ಯಕ್ರಮಗಳು ಇನ್ನಷ್ಟು ಬಲ ತುಂಬುತ್ತವೆ. ಅಭ್ಯರ್ಥಿಗಳಲ್ಲೂ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ನಿಗದಿತ ಗುರಿ ಸಾಧಿಸಲು ಎಲ್ಲರೂ ಒಂದಾಗಿ ಶ್ರಮಿಸುತ್ತಿದ್ದಾರೆ. ಮೈತ್ರಿ ಕೂಟ 28 ಸ್ಥಾನಗಳನ್ನು ಗೆಲ್ಲಲಿದೆ ಎಂಬ ವಿಶ್ವಾಸವನ್ನು ಯಡಿಯೂರಪ್ಪ ಪುನರುಚ್ಚರಿಸಿದರು.

    ನಿದರ್ಶನೀಯ ಶಿಕ್ಷೆ

    ಬೆಂಗಳೂರಿನ  ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣದಲ್ಲಿ  ಎನ್ಐಎ ನವರು ಬಹಳ ಕಷ್ಟಪಟ್ಟು ಶಂಕಿತ ಆರೋಪಿಗಳನ್ನು ಹಿಡಿದಿದ್ದಾರೆ. ನಿಜಾಂಶ ಬಯಲಿಗೆಳೆದು ದುಷ್ಕೃತ್ಯ ಎಸಗಿದವರಿಗೆ ತಕ್ಕಪಾಠ ಕಲಿಸುತ್ತಾರೆ.  ಈ ರೀತಿಯ ಘಟನೆಗಳು ಮರುಕಳಿಸದಂತೆ ಅಪರಾಧಿಗಳಿಗೆ ನಿದರ್ಶನೀಯ ಶಿಕ್ಷೆಯಾಗಬೇಕು ಎಂದು ಯಡಿಯೂರಪ್ಪ ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts