More

    ಕುಪ್ಪೂರು ಶ್ರೀಗಳ ಜೀವನ ಪರಿಶುದ್ಧ : ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಭಿಮತ

    ಚಿಕ್ಕನಾಯಕನಹಳ್ಳಿ: ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದ ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಸದಾ ಅಧ್ಯಯನಶೀಲರಾಗಿದ್ದರು ಹಾಗೂ ಮಠದ ಅಭಿವೃದ್ಧಿಯ ಕನಸು ಕಂಡಿದ್ದರು ಎಂದು ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸ್ಮರಿಸಿದರು.

    ಕುಪ್ಪೂರು ಗದ್ದುಗೆ ಮಠದಲ್ಲಿ ಭಾನುವಾರ ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಪುಣ್ಯಸ್ಮರಣೆ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಕುಪ್ಪೂರು ಗದ್ದುಗೆ ಮಠದ ಜವಾಬ್ದಾರಿ ವಹಿಸಿಕೊಂಡ ನಂತರ ಸ್ವಾಮೀಜಿ ಅವರಿಗೂ ಇಂದಿನ ಕಿರಿಯ ಶ್ರೀಗಳಷ್ಟೇ ವಯಸ್ಸು, ಶ್ರೀ ಚಂದ್ರಶೇಖರ ಸ್ವಾಮೀಜಿ ಅವರ ಅಧ್ಯಾತ್ಮ ಸಾಧನೆಯ ದಾರಿಯಲ್ಲಿ ಸಮಾಜಕ್ಕೆ ಕೊಡುಗೆ ನೀಡಿದರು ಎಂದರು. ಯತೀಶ್ವರರ ಶರಣ ಜೀವನ ಪರಿಶುದ್ಧ ಆಚಾರ, ನಡೆ-ನುಡಿಗಳೊಂದಿಗೆ ಸದಾ ಕಾಯಕ ನಿರತರಾಗಿ ಬೇಡಿ ಬಂದ ಭಕ್ತರಿಗೆ ಇಷ್ಟಾರ್ಥಗಳನ್ನು ಪೂರೈಸುತ್ತ ಸಮಾಜದ ಸರ್ವತೋಮುಖ ಬೆಳವಣಿಗೆಯತ್ತ ಗಮನಹರಿಸಿ ಸಾರ್ಥಕ ಬದುಕು ಸಾಗಿಸಿದರು ಎಂದರು.

    ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಯತೀಶ್ವರ ಸ್ವಾಮೀಜಿ ತಪಸ್ವಿಗಳು, ಸಹನಶೀಲರಾಗಿದ್ದರು. ಹೇಮಾವತಿ ಕುಡಿಯುವ ನೀರಿನ ಹೋರಾಟದಲ್ಲಿ ಪಾದಯಾತ್ರೆ ನಡೆಸಿದ್ದರು ಎಂದು ಸ್ಮರಿಸಿದರು. ಪ್ರಸ್ತುತ ಹಾಲ್ಕುರಿಕೆ ಭಾಗಕ್ಕೆ ಹೇಮಾವತಿ ನೀರು ಹರಿಸುವ ಕಾಮಗಾರಿ ಆರಂಭವಾಗಲಿದ್ದು ಈ ಸಂದರ್ಭದಲ್ಲಿ ಶ್ರೀಗಳ ಅನುಪಸ್ಥಿತಿ ನಮಗೆ ನೋವುಂಟು ಮಾಡುತ್ತಿದೆ ಎಂದರು. ಸಿದ್ಧಂಗಾ ಮಠದಲ್ಲಿ ಅಧ್ಯಯನ ಮಾಡುತ್ತಿರುವ 30 ವಿದ್ಯಾರ್ಥಿಗಳನ್ನು ಕುಪ್ಪೂರಿನ ಸಿದ್ಧಗಂಗಾ ಪ್ರೌಢಶಾಲೆಗೆ ಕಳುಹಿಸಿಕೊಡುವಂತೆ ಸಿದ್ಧಗಂಗಾ ಶ್ರೀಗಳಲ್ಲಿ ಮನವಿ ಮಾಡಲಾಗಿದೆ ಎಂದರು.

    ಮೂರು ಸಾವಿರ ಮಠದ ಶ್ರೀ ಮಹಾರಾಜ ನಿರಂಜನ ಜಗದ್ಗುರು ಮಾತನಾಡಿ, ಕುಪ್ಪೂರು ಕ್ಷೇತ್ರದಲ್ಲಿ ತಪಸ್ವಿಗಳ ಅಂಶವಿದೆ. ಚಂದ್ರಶೇಖರ ಸ್ವಾಮೀಜಿ ಮಾನಸ ಪುತ್ರರಾಗಿ ಮಠದಲ್ಲಿ ಯತೀಶ್ವರರು ಶಿವಪೂಜೆ ಮಾಡುತ್ತಿದ್ದರು. ಇದು ಭಕ್ತರು ಮಠಕ್ಕೆ ಬರಲು ಪ್ರೇರಣೆಯಾಗಿತ್ತು, ಸಮಾಜದ ಸೇವೆಗೆ ಪ್ರಾಧಾನ್ಯತೆ ನೀಡಿ ವಿರಮಿಸಿದರು ಎಂದು ಗದ್ಗದಿತರಾದರು.

    ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿದರು. ಎಡೆಯೂರು ಕ್ಷೇತ್ರದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ, ತಮ್ಮಡಿಹಳ್ಳಿ ಶ್ರೀ ಅಭಿನವ ಮಲ್ಲಿಕಾರ್ಜುನ ಸ್ವಾಮೀಜಿ, ಷಡಾಕ್ಷರ ಮಠದ ಶ್ರೀ ರುದ್ರಮುನಿ ಸ್ವಾಮೀಜಿ, ತಾವರೆಕೆರೆ ಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಬಿಳಕಿ ಮಠದ ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಬೀರೂರು ಮಠದ ಶ್ರೀರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಮಾದಿಹಳ್ಳಿ ಮಠದ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ದೊಡ್ಡಗುಣಿ ಮಠದ ಶ್ರೀ ರೇವಣ ಸಿದ್ದೇಶ್ವರ ಸ್ವಾಮೀಜಿ ಇದ್ದರು. ಕುಪ್ಪೂರು ವಾಣಿ ಮಾಸ ಪತ್ರಿಕೆ ಬಿಡುಗಡೆ ಮಾಡಲಾಯಿತು.

    ಶ್ರೀಗಳನ್ನು ಉತ್ತರ ಕರ್ನಾಟಕದಲ್ಲಿ ಅಜ್ಜಯ್ಯ ಎಂದು ಸಂಬೋಧಿಸುತ್ತಾರೆ. ದಕ್ಷಿಣದಲ್ಲಿ ಬುದ್ದಿ, ಸ್ವಾಮಿಗಳೇ ಎಂದು ಕರೆಯುತ್ತಾರೆ. ಕುಪ್ಪೂರು ಅಜ್ಜಯ್ಯ ಎಂದು ಕರೆದಿರುವುದು ಮರುಳ ಸಿದ್ದೇಶ್ವರರ ವಿಶೇಷ ಪರಂಪರೆ, ಇವರು ಪವಾಡ ಪುರುಷರಾಗಿದ್ದಾರೆ. ಒಬ್ಬರೆ ಸ್ವಾಮಿಗಳು ಎರಡು ಕಡೆ ಹಾಗೂ ಲಿಂಗೈಕ್ಯರಾದ ನಂತರವೂ ದರ್ಶನ ಕೊಡುವುದು ಕೆಲವೇ ಕೆಲವು ಪವಾಡ ಪುರುಷರಿಂದ ಮಾತ್ರ ಸಾಧ್ಯ.
    ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸುತ್ತೂರು ಮಠ

    ಆಧುನಿಕ ತಂತ್ರಜ್ಞಾನ, ಸಾಮಾಜಿಕ ಜಾಲತಾಣಗಳನ್ನು ಅತ್ಯಂತ ಕ್ರಿಯಾಶೀಲವಾಗಿ ಬಳಸಿಕೊಂಡು ಸಮಾಜಕ್ಕೆ ಸಂದೇಶ ನೀಡಿದ ಹೆಗ್ಗಳಿಕೆ ಶ್ರೀಯತೀಶ್ವರ ಸ್ವಾಮೀಜಿ ಅವರದ್ದಾಗಿತ್ತು, ಸಮಾಜದ ಆಗುಹೋಗು ಹಾಗೂ ದೈನಂದಿನ ಪೂಜಾಕೈಂಕರ್ಯಗಳು ಸುಲಭವಾಗಿ ಭಕ್ತರಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದರು.
    ಬಿ.ಸಿ.ನಾಗೇಶ್ ಶಿಕ್ಷಣ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts