More

    ಯಲ್ಲಮ್ಮನಗುಡ್ಡಕ್ಕೆ ಹೈಟೆಕ್ ಸ್ಪರ್ಶ!

    ಬೆಳಗಾವಿ: ಭಕ್ತರ ಆರಾಧ್ಯ ದೇವತೆ, ಏಳುಕೊಳ್ಳದ ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನ ಸಮಗ್ರ ಅಭಿವೃದ್ಧಿಗೆ ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಸುಮಾರು 300 ಕೋಟಿ ರೂ.ವೆಚ್ಚದ ಪ್ರಾಜೆಕ್ಟ್ ಸಿದ್ಧಗೊಂಡಿದೆ. ಮೊದಲ ಬಾರಿಗೆ ಭಕ್ತರಿಂದಲೇ ದೇಣಿಗೆ ಸಂಗ್ರಹಿಸಿ ದೇವಸ್ಥಾನ ಅಭಿವೃದ್ಧಿಗೆ ರಾಜ್ಯ ಸರ್ಕಾರ ಹೊಸ ಯೋಜನೆ ಹಾಕಿಕೊಂಡಿದೆ.

    ಕರ್ನಾಟಕ, ಮಹಾರಾಷ್ಟ್ರ, ಗೋವಾ ಹಾಗೂ ಆಂಧ್ರಪ್ರವೇಶ ರಾಜ್ಯಗಳ ಲಕ್ಷಾಂತರ ಭಕ್ತರ ಭೇಟಿ, ವಾರ್ಷಿಕ ಸುಮಾರು 40 ಕೋಟಿ ರೂ.ಆದಾಯ ಹೊಂದಿರುವ ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನ ಅನೇಕ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಅಲ್ಲದೆ, ದೇವಸ್ಥಾನ ಸುತ್ತಲಿನ ನೂರಾರು ಎಕರೆ ಭೂಮಿ ಸಂರಕ್ಷಣೆ, ಬಳಕೆ ಇಲ್ಲದೆ ದುರ್ಬಳಕೆ ಆಗುತ್ತಿದೆ. ಅದಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಕ್ರಮ ವಹಿಸಿದ್ದು, ದೇವಸ್ಥಾನದ ಸಮಗ್ರ ಅಭಿವೃದ್ಧಿ ಜವಾಬ್ದಾರಿಯನ್ನು ಪ್ರವಾಸೋದ್ಯಮ ಇಲಾಖೆಗೆ ವಹಿಸುತ್ತಿರುವುದು ವಿಶೇಷ.

    ಸರ್ಕಾರವು ಸವದತ್ತಿ ಯಲ್ಲಮ್ಮ ಸುಕ್ಷೇತ್ರವನ್ನು ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಪ್ರವಾಸೋದ್ಯಮ ತಾಣವನ್ನಾಗಿ ಮಾಡುವ ನಿಟ್ಟಿನಲ್ಲಿ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ರಚನೆ ಮಾಡಿದೆ. ಮತ್ತೊಂದೆಡೆ ಭಕ್ತರು, ಉದ್ಯಮಿಗಳು, ಹಾಲಿ, ಮಾಜಿ ಶಾಸಕರಿಂದ ದೇಣಿಗೆ ಸಂಗ್ರಹ ಸೇರಿ ಸಾರ್ವಜನಿಕರ ಸಹಭಾಗಿತ್ವದಲ್ಲಿಯೇ ದೇವಸ್ಥಾನ ಅಭಿವೃದ್ಧಿ ಕೈಗೊಳ್ಳಲು ಸರ್ಕಾರ ಯೋಜನೆ ರೂಪಿಸಿದೆ. ಅದಕ್ಕೆ ಪೂರಕವಾಗಿಯೇ ಪ್ರವಾಸೋದ್ಯಮ ಇಲಾಖೆಯು ಅಭಿವೃದ್ಧಿ ನೀಲಿನಕ್ಷೆ ರೂಪಿಸಿದೆ. ಪ್ರತಿ ವರ್ಷ ಸುಮಾರು 1.50 ಕೋಟಿ ಭಕ್ತರು ದೇವಿ ದರ್ಶನ ಪಡೆಯುತ್ತಾರೆ. ವರ್ಷದ 12 ತಿಂಗಳೂ ಪ್ರತಿ ಮಂಗಳವಾರ, ಶುಕ್ರವಾರ, ಶನಿವಾರ, ಪ್ರತಿ ಹುಣ್ಣಿಮೆ ಹಾಗೂ ರಜಾ ದಿನಗಳಲ್ಲಿ ಹಾಗೂ ಹೊಸ್ತಿಲ, ಬನದ, ಭಾರತ, ದವನದ ಹುಣ್ಣಿಮೆ, ನವರಾತ್ರಿ ಹಾಗೂ ಶ್ರಾವಣ ಮಾಸದಲ್ಲಿ ಅಪಾರ ಸಂಖ್ಯೆಯ ಭಕ್ತರು ದರ್ಶನಕ್ಕೆ ಆಗಮಿಸುತ್ತಾರೆ.

    ಸುಕ್ಷೇತ್ರದಲ್ಲಿ ಅನ್ನದಾಸೋಹ ಆರಂಭಕ್ಕೂ ಚಿಂತನೆ

    ಪ್ರಥಮ ಬಾರಿಗೆ ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಭಕ್ತರ ದೇಣಿಗೆಯಲ್ಲಿ ವರ್ಷಪೂರ್ತಿ ಅನ್ನದಾಸೋಹ ಹಾಗೂ ಸಾವಿರಾರು ಜಾನುವಾರುಗಳಿಗೆ ಮೇವು ದಾಸೋಹ ಆರಂಭಿಸಲಾಗುತ್ತಿದೆ. ಈಗಾಗಲೇ ಭಕ್ತರು ಕಟ್ಟಡ ನಿರ್ಮಾಣ, ಕುಡಿಯುವ ನೀರು, ಅನ್ನದಾಸೋಹ ಸೇರಿ ವಿವಿಧ ಸೌಲಭ್ಯ ಕಲ್ಪಿಸಲು ಮುಂದೆ ಬಂದಿದ್ದಾರೆ. ಅಲ್ಲದೆ, ವಸತಿ ಭವನ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಪಿಪಿಪಿ ಮಾದರಿಯ ಯೋಜನೆ ವಿಶೇಷತೆ

    • ದೇವಸ್ಥಾನ ಸಮೀಪ ಎಣ್ಣೆ ಹೊಂಡ ನಿರ್ಮಾಣ
    • ಒಂದೇ ಕಡೆ ಲಕ್ಷಕ್ಕೂ ಅಧಿಕ ಭಕ್ತರಿಗೆ ಪಡ್ಡಲಗಿ ತುಂಬುವ ವ್ಯವಸ್ಥೆ
    • ಹೈಟೆಕ್ ಸಾರ್ವಜನಿಕ ಶೌಚಗೃಹಗಳ ನಿರ್ಮಾಣ
    • ಜಾನುವಾರುಗಳಿಗೆ ಕುಡಿಯುವ ನೀರು, ಕೊಟ್ಟಿಗೆ ವ್ಯವಸ್ಥೆ
    • ವಾಹನ, ಚಕ್ಕಡಿಗಳಿಗೆ ಪ್ರತ್ಯೇಕ ಪಾರ್ಕಿಂಗ್ ಸೌಲಭ್ಯ
    • ದೇವಸ್ಥಾನದಿಂದ ಹೆದ್ದಾರಿ ಸಂಪರ್ಕಕ್ಕೆ ರಿಂಗ್‌ರೋಡ್ ನಿರ್ಮಾಣ
    • 500 ಜನ ಸಾಮರ್ಥ್ಯದ ಭಕ್ತರ ವಸತಿ ಭವನಗಳ ನಿರ್ಮಾಣ
    • ಇಪ್ಪತ್ತು ಎಕರೆಯಲ್ಲಿ ಬೃಹತ್ ಸಾರಿಗೆ ಬಸ್ ನಿಲ್ದಾಣ, ಡಿಪೋ ನಿರ್ಮಾಣ

    ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿಗೆ ಹೊಸದಾಗಿ ಮಾಸ್ಟರ್ ಪ್ಲ್ಯಾನ್ ಯೋಜನೆ ಸಿದ್ಧಗೊಳ್ಳುತ್ತಿದ್ದು, ಶೀಘ್ರ ಕಾರ್ಯರೂಪಕ್ಕೆ ಬರಲಿದೆ. ಪ್ರವಾಸೋದ್ಯಮ ಇಲಾಖೆ ಅಭಿವೃದ್ಧಿ ಯೋಜನೆ ರೂಪಿಸಿದೆ.
    | ವಿಶ್ವಾಸ ವೈದ್ಯ, ಶಾಸಕ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts