More

    ನೀರಿನ ಸಂರಕ್ಷಣೆ ಎಲ್ಲರ ಹೊಣೆ: ಕೊಪ್ಪಳದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿಕೆ

    ಯಲಬುರ್ಗಾ: ಮಾನವ ನಿಸರ್ಗದ ಶಿಶು. ಕರುಣಾಮಯಿ ದೇವರು ನಿಸರ್ಗದತ್ತವಾಗಿ ಎಲ್ಲ ಸಂಪನ್ಮೂಲ ಕಲ್ಪಿಸಿದ್ದು, ಪ್ರತಿಯೊಬ್ಬರೂ ಸುಂದರ ಬದುಕು ಕಟ್ಟಿಕೊಳ್ಳಬೇಕು ಎಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

    ತಾಲೂಕಿನ ನಿಲೋಗಲ್ ಗ್ರಾಮದ ಕೆರೆ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ನಿಸರ್ಗ ಮನುಷ್ಯನಿಗೆ ಎಷ್ಟೊಂದು ಉಪಕೃತವಿದೆ. ಅದನ್ನು ಹೇಗೆ ಬಳಕೆ ಮಾಡಿಕೊಳ್ಳಬೇಕು ಎಂಬ ಕಲ್ಪನೆ ಇಲ್ಲದಾಗಿದೆ. ರೈತರಿಗೆ ಬೇಕಾಗಿರುವುದು ನೀರು. ನೀರಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬುದನ್ನು ಅರಿಯಬೇಕಿದೆ. ಕೆರೆ ಕಟ್ಟೆಗಳ ಉಪಯೋಗ ಆಗಬೇಕು. ಸಚಿವ ಹಾಲಪ್ಪ ಆಚಾರ್ ಕೆರೆ ತುಂಬಿಸುವ ಸಂಕಲ್ಪ ಮಾಡಿರುವುದು ಶ್ಲಾಘನೀಯ ಎಂದರು.

    ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಮಾತನಾಡಿ, ಕೆರೆ ಕಟ್ಟೆಗಳ ರಕ್ಷಣೆ ಮಡುವ ಮೂಲಕ ನೀರಿನ ತಾಪತ್ರಯ ಉಂಟಾಗದಂತೆ ಎಚ್ಚರ ವಹಿಸಬೇಕಿದೆ. ಆಧುನಿಕ ತಂತ್ರಜ್ಞಾನ ಬೆಳೆದಂತೆಲ್ಲ, ಸಂಪನ್ಮೂಲ ಬರಿದಾಗುವಿಕೆ ಮನುಷ್ಯನನ್ನು ಅನೇಕ ಸಂಕಷ್ಟಕ್ಕೆ ದೂಡಿದೆ. ಆಚಾರ ವಿಚಾರ, ಸಂಸ್ಕೃತಿ ಸಂಸ್ಕಾರ ಮರೆಯಾಗುತ್ತಿದೆ. ಹೀಗಾಗಿ ಮುಂದೊಂದು ದಿನ ಕುಡಿವ ನೀರಿಗಾಗಿ ಹೋರಾಟ ನಡೆಸಬೇಕಾಗುತ್ತದೆ ಎಂದರು. ಸಣ್ಣ ನೀರಾವರಿ ಇಲಾಖೆ ಯೋಜನಾ ನಿರ್ದೇಶಕ ಎಂ.ಎನ್.ಕಿಶೋರ ಮಾತನಾಡಿದರು.

    ಗ್ರಾಪಂ ಅಧ್ಯಕ್ಷೆ ಶಾಂತಾ ಶರಣು ಹಾವೇರಿ, ಡಿಎಚ್‌ಒ ಟಿ.ಲಿಂಗರಾಜ, ವೈದ್ಯಾಧಿಕಾರಿ ಮಹೇಶ, ತಹಸೀಲ್ದಾರ್ ಶ್ರೀಶೈಲ ತಳವಾರ್, ತಾಪಂ ಪ್ರಭಾರ ಇಒ ಸೋಮಶೇಖರ ಬಿರಾದಾರ್, ಪ್ರಮುಖರಾದ ಬಸಲಿಂಗಪ್ಪ ಭೂತೆ, ವೀರಣ್ಣ ಹುಬ್ಬಳ್ಳಿ, ಸಿ.ಎಚ್.ಪಾಟೀಲ್, ರತನ್ ದೇಸಾಯಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts