More

    ನೌಕರರೆಂದು ಪರಿಗಣಿಸಿ ಕನಿಷ್ಠ ವೇತನ ನೀಡಿ

    ಯಲಬುರ್ಗಾ: ಅಂಗನವಾಡಿ ಕಾರ್ಯಕರ್ತೆ-ಸಹಾಯಕಿಯರಿಗೆ ಕನಿಷ್ಠ ವೇತನ, ನಿವೃತ್ತಿ ಸೌಲಭ್ಯ ನೀಡಿ ನೌಕರರೆಂದು ಪರಿಗಣಿಸಬೇಕು ಎಂದು ಅಂಗನವಾಡಿ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಲಲಿತಾ ಅರಳಿ ಒತ್ತಾಯಿಸಿದರು.

    ಪಟ್ಟಣದ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಜ.23ರಂದು ಜಿಲ್ಲಾ ಕೇಂದ್ರದಲ್ಲಿ ನಡೆಯುವ ಸಂಸದರ ಕಚೇರಿ ಚಲೋ ನಿಮಿತ್ತ ಅಂಗನವಾಡಿ ನೌಕರರ ತಾಲೂಕು ಸಮಿತಿಯಿಂದ ನಡೆದ ಪೂರ್ವಭಾವಿ ಸಭೆಯಲ್ಲಿ ಬುಧವಾರ ಮಾತನಾಡಿದರು.

    ವಿವಿಧ ಬೇಡಿಕೆ ಈಡೇರಿಕೆಗಾಗಿ ನಡೆಯುತ್ತಿರುವ ಈ ಹೋರಾಟಕ್ಕೆ ಎಲ್ಲರೂ ಸಹಕರಿಸೋಣ. 3ರಿಂದ 6 ವರ್ಷದೊಳಗಿನ ಮಕ್ಕಳಿಗೆ ಉಚಿತ, ಕಡ್ಡಾಯ ಮತ್ತು ಸಾರ್ವತ್ರಿಕವಾಗಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಅಂಗನವಾಡಿಗಳಲ್ಲಿ ನೀಡಲು ಕಾನೂನು ರಚಿಸಬೇಕು. ಎನ್‌ಇಪಿ ವ್ಯವಸ್ಥೆ ನಿಲ್ಲಿಸಬೇಕು.

    ಸಮಾನ ಕೆಲಸಕ್ಕೆ ಸಮಾನ ವೇತನ, ಮಾಸಿಕ 10 ಸಾವಿರ ರೂ. ಪಿಂಚಣಿ, ನಿವೃತ್ತಿ ಹೊಂದಿದ ಎಲ್ಲ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಗೆ ಗ್ಯಾಜ್ಯುಟಿ ನೀಡಬೇಕು. ವಿದ್ಯುತ್, ರೈಲ್ವೆ ಸೇರಿ ಸಾರ್ವಜನಿಕ ವಲಯಗಳಲ್ಲಿ ಖಾಸಗೀಕರಣ ನಿಲ್ಲಬೇಕು. ರೈತ ಮತ್ತು ಕಾರ್ಮಿಕ ವಿರೋಧಿ ತಿದ್ದುಪಡಿಗಳನ್ನು ವಾಪಸ್ ಪಡೆದು ಪರವಾದ ನೀತಿ ಜಾರಿ ಮಾಡಿ, ಕಾಂಗ್ರೆಸ್ ಸರ್ಕಾರ ಭರವಸೆ ನೀಡಿದ ಆರನೇ ಗ್ಯಾರಂಟಿಯಾದ ಅಂಗನವಾಡಿ ನೌಕರರಿಗೆ 15 ಸಾವಿರ ರೂ., ಬಿಸಿಯೂಟದವರಿಗೆ 6 ಸಾವಿರ ರೂ. ವೇತನ ಮತ್ತು ಭತ್ಯೆ ಸೌಲಭ್ಯ ಒದಗಿಸಿ ಎಂದು ಒತ್ತಾಯಿಸಿದರು.

    ಸಮಿತಿಯ ಉಪಾಧ್ಯಕ್ಷೆ ಬಸಮ್ಮ ಉಣಚಗೇರಿ, ಕಾರ್ಯದರ್ಶಿ ಪಾರ್ವತಿ ಛಲವಾದಿ, ಪದಾಧಿಕಾರಿಗಳಾದ ಯಲ್ಲೂಬಾಯಿ ಮ್ಯಾಗೇರಿ, ಸುಲೋಚನಾ ಬಂಗಿ, ಸುನಿತಾ ಹುರಳಿ, ಗಂಗಮ್ಮ ಗಾಂಜಿ, ಗೌರಮ್ಮ ಬೇಲೇರಿ, ಸುಮಿತ್ರಾ ಹಿರೇಮಠ, ಗಿರಿಜಾ ಕಲ್ಲೂರು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts