More

    ಯಕ್ಷಗಾನ, ತಾಳಮದ್ದಲೆ ಸಾಹಿತ್ಯದ ತಾಯಿ

    ಸಾಗರ: ಪುರಾಣದ ಕಥಾನಕಗಳನ್ನು ಹಿಡಿದಿಟ್ಟು ಜನರಿಗೆ ತಲುಪಿಸುವಲ್ಲಿ ತಾಳಮದ್ದಲೆ ಪಾತ್ರ ದೊಡ್ಡದು ಎಂದು ಯಕ್ಷಗಾನ ಕಲಾವಿದ ಶಂಕರನಾರಾಯಣ ಹೊಸಕೊಪ್ಪ ಹೇಳಿದರು.
    ಸಮೀಪ ಅಮಚಿಯಲ್ಲಿ ಶನಿವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಭಾಗವತ ಯಕ್ಷಮಿತ್ರ ಮಂಡಳಿ ಅಮಚಿ ಅವರ ಆಶ್ರಯದಲ್ಲಿ ಮಹಾಬಲಗಿರಿ ಅವರ ಮನೆಯಂಗಳದಲ್ಲಿ ಆಯೋಜಿಸಿದ್ದ ತ್ರಿಪುರಾಂತಕೇಶ್ವರ ಯಕ್ಷಗಾನ ಕಲಾಸಂಘ ಖಂಡಿಕಾ ಇವರು ನೀಡಿದ ದಿ.ಪಟೇಲ್ ಲಕ್ಷ್ಮೀನಾರಾಯಣ ಅಮಚಿ ಇವರ ದತ್ತಿ ಉಪನ್ಯಾಸ ಕಾರ್ಯಕ್ರದಲ್ಲಿ ಮಾತನಾಡಿದರು.
    ತಾಳಮದ್ದಲೆಗೆ ವಿಶೇಷವಾದ ಸಾಂಸ್ಕೃತಿಕ ಶಕ್ತಿ ಇದೆ. ಜನಸಾಮಾನ್ಯರಿಗೆ ಹತ್ತಿರವಾಗುವ ಅನೇಕ ವಿಷಯಗಳನ್ನು ಸರಳವಾಗಿ ಹಾಗೂ ಅರ್ಥವಾಗುವ ರೀತಿ ತಿಳಿಸಲಾಗುತ್ತದೆ. ಯಕ್ಷಗಾನ ಮುನ್ನೆಲೆಗೆ ಬರುವುದೇ ತಾಳಮದ್ದಲೆ ಮೂಲಕ. ಹಾಗಾಗಿ ಅನೇಕ ಕಲಾವಿದರು ಬೆಳೆದಿರುವುದೇ ತಾಳಮದ್ದಲೆಯಿಂದ. ಅದರಲ್ಲೂ ವಿಶೇಷವಾಗಿ ಪಟೇಲ್ ಲಕ್ಷ್ಮೀನಾರಾಯಣ ಅವರು ಮಲೆನಾಡಿನ ಭಾಗದಲ್ಲಿ ಯಕ್ಷಗಾನ ಹಾಗೂ ತಾಳಮದ್ದಲೆ ಮೂಲಕ ಅನೇಕ ಕಲಾವಿದರನ್ನು ಬೆಳೆಸಿ ಪೋಷಿಸಿದ್ದಾರೆ ಎಂದು ಹೇಳಿದರು.
    ಕಸಾಪ ತಾಲೂಕು ಅಧ್ಯಕ್ಷ ವಿ.ಟಿ.ಸ್ವಾಮಿ ಮಾತನಾಡಿ, ಆಧುನಿಕತೆಯಿಂದ ಮೌಲ್ಯಯುತ ಕಲೆಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಸಾಹಿತ್ಯ ಹಾಗೂ ಕಲೆಗಳು ರಾಜಾಶ್ರಯದಿಂದ ಇಂದು ಜನಾಶ್ರಯದತ್ತ ಬಂದಿದ್ದು ಇಂತಹ ಕಲೆ ಸಾಹಿತ್ಯವನ್ನು ಉಳಿಸಿ ಬೆಳೆಸಲು ಜನ ಸಾಮಾನ್ಯರು ಮುಂದಾಗಬೇಕು. ಯಕ್ಷಗಾನ ಹಾಗೂ ತಾಳಮದ್ದಲೆ ಸಾಹಿತ್ಯದ ತಾಯಿ. ಮನಮುಟ್ಟುವಂತೆ ಅನೇಕ ವಿಚಾರಗಳನ್ನು ಇದರ ಮೂಲಕ ನೀಡಲಾಗುತ್ತದೆ. ರಾಮಾಯಣ ಮಹಾಭಾರತದಂತಹ ಅನೇಕ ಕೃತಿಗಳ ಸಾರವನ್ನು ಸಂಭಾಷಣೆಗಳ ಮೂಲಕ ತಿಳಿಸಲಾಗುತ್ತದೆ. ಸಂಗೀತ, ಕಲೆ ಸಾಹಿತ್ಯದ ಮೂಲಕ ಬದುಕಿನ ಬಾಂಧವ್ಯ ಬೆಳೆಸಲು ಸಾಧ್ಯವಾಗುತ್ತದೆ ಎಂದರು.

    ಯಕ್ಷಗಾನ ಹಿರಿಯ ಕಲಾವಿದರಾದ ಎಂ.ಆರ್ ಲಕ್ಷ್ಮೀನಾರಾಯಣ, ಎ.ಎಸ್.ಮಹಾಬಲಗಿರಿ, ಅಮೃತದೇವ ಕಟ್ಟಿನಕೆರೆ ಇತರರಿದ್ದರು. ನಂತರ ಭೀಷ್ಮಾರ್ಜುನ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts