More

    ಸರ್ಕಾರದಿಂದಲೇ ಸಮಗ್ರ ಯಕ್ಷಗಾನ ಸಮ್ಮೇಳನ: ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ ಆಶಯ

    ಶೇಣಿ ಮುರಳಿ, ಮಂಗಳೂರು
    ಕನ್ನಡ ಸಾಹಿತ್ಯ ಸಮ್ಮೇಳನದ ಹಾಗೆ ಪ್ರತಿ ವರ್ಷ ಸಮಗ್ರ ಯಕ್ಷಗಾನ ಸಮ್ಮೇಳನವನ್ನು ನಡೆಸಲು ಸರ್ಕಾರ ನೆರವಾಗಬೇಕು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಗೋಪಾಲಕೃಷ್ಣ ಎಲ್.ಹೆಗಡೆ ಮನವಿ ಮಾಡಿದರು.

    ‘ವಿಜಯವಾಣಿ’ ಕಚೇರಿಗೆ ಶನಿವಾರ ಭೇಟಿ ನೀಡಿದ್ದ ಅವರು ಪತ್ರಿಕೆ ಜೊತೆ ಮಾತನಾಡಿ, ಸಮಗ್ರ ದೃಷ್ಟಿಕೋನದಿಂದ ಅರ್ಥಪೂರ್ಣ ಪ್ರಾಯೋಗಿಕ ಸಮ್ಮೇಳನ ಮಾಡಿದರಷ್ಟೇ ಯಕ್ಷಗಾನ ಕನ್ನಡದ ಕಲೆ ಎಂದು ಬಿಂಬಿತವಾಗಲು ಸಾಧ್ಯ. ಮೂರು ದಿನಗಳ ಈ ಸಮ್ಮೇಳನ ಉದ್ಯಮ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಆಯೋಜಿಸಬೇಕು. ಭಾಷಣಕ್ಕೆ ಸೀಮಿತವಾಗಬಾರದು ಎನ್ನುವ ಅಭಿಲಾಷೆಯನ್ನು ವ್ಯಕ್ತಪಡಿಸಿದರು.

    ಯಕ್ಷಗಾನ ಸಾವಿರಾರು ಕಲಾವಿದರಿಗೆ ಅನ್ನ ನೀಡುವ ಅನ್ನಪೂರ್ಣೆ. ಸಮಗ್ರ ಕರ್ನಾಟಕದ ಕಲೆ. ಕರೊನಾ ಕಾಲದಲ್ಲಿ ಯಕ್ಷಗಾನ ಕಲಾವಿದರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಅವರು ಬಹಿರಂಗವಾಗಿ, ಸಮಷ್ಠಿಯಿಂದ ಅಸಹಾಯಕತೆ ತೋಡಿಕೊಂಡು, ಆ ಬಗ್ಗೆ ಚರ್ಚಿಸಿ, ಪರಿಹಾರೋಪಾಯ ಕಂಡುಕೊಳ್ಳಲು ಯಕ್ಷಗಾನ ಸಮ್ಮೇಳನ ಉತ್ತಮ ವೇದಿಕೆ. ದಾನಿಗಳನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿ ಅವರಿಂದ ಕಲಾವಿದರಿಗೆ ನೆರವನ್ನು ಕೇಳಬಹುದು. ಇದಕ್ಕೆಲ್ಲ ಸಾಂಘಿಕ ಪ್ರಯತ್ನ ಬೇಕು ಎಂದರು.

    ಈ ರಂಗದಲ್ಲಿ ಎಷ್ಟು ಕಲಾವಿದರಿದ್ದಾರೆ ಎಂದ ದಾಖಲೆ ಬೇಕು. ನಿವೃತ್ತರು ಮತ್ತು ಪ್ರವೃತ್ತರೆಂಬ ಎರಡು ಬಗೆಯ ಕಲಾವಿದರ ಸರ್ವೇ ಆಗಲೇಬೇಕು. ಮೇಳಗಳ ಸಂಚಾಲಕರು ತಮ್ಮ ಕಲಾವಿದರ ದಾಖಲೆಗಳನ್ನು ಅಕಾಡೆಮಿಗೆ ನೀಡಬೇಕು. ಯಕ್ಷಗಾನ ಉದ್ದಿಮೆಯಾಗಿ ಬೆಳೆದಿದೆ. ಮೇಳಗಳಿಗೆ ಸರ್ಕಾರದಿಂದ ಸಬ್ಸಿಡಿ ಸಿಗುವಂತಾಗಬೇಕು. ಇದು ಮನರಂಜನಾ ಕಲೆಯಷ್ಟೇ ಅಲ್ಲ, ಆರಾಧನಾ ಕಲೆಯೂ ಹೌದು. ಹಾಗಾಗಿ ಸರ್ಕಾರ ಯಕ್ಷಗಾನಕ್ಕೆ ಸೇವಾ ತೆರಿಗೆ ರದ್ದು ಮಾಡಬೇಕೆಂದು ಅವರು ಆಗ್ರಹಿಸಿದರು.
    ಅಕಾಡೆಮಿ ರಿಜಿಸ್ಟ್ರಾರ್ ಎಸ್.ಎಚ್.ಶಿವರುದ್ರಪ್ಪ ಜೊತೆಯಲ್ಲಿದ್ದರು.

    ದೇವಳಗಳಲ್ಲಿ ಲೈಬ್ರರಿ, ಯಕ್ಷ ಮ್ಯೂಸಿಯಂ: ಎಲ್ಲ ಪ್ರಸಿದ್ಧ ದೇವಾಲಯಗಳಲ್ಲಿ ಸರ್ಕಾರ ಯಕ್ಷಗಾನದ ಲೈಬ್ರರಿ ಮತ್ತು ಮ್ಯೂಸಿಯಂ ಸ್ಥಾಪಿಸಬೇಕು ಎಂದು ಅಕಾಡೆಮಿ ಅಧ್ಯಕ್ಷರು ಅಭಿಪ್ರಾಯಪಟ್ಟರು. ದೇವಸ್ಥಾನಗಳಿಗೆ ಭೇಟಿ ನೀಡುವ ಪ್ರವಾಸಿಗರಲ್ಲಿ ಯಕ್ಷಗಾನದ ಒಲವು ಮೂಡಿಸಲು ಮ್ಯೂಸಿಯಂ ಸಹಕಾರಿ. ಗ್ರಂಥಾಲಯ ತೆರೆದು, ಕಲಾವಿದರ ಅಧ್ಯಯನಶೀಲತೆಯನ್ನು ಹೆಚ್ಚಿಸಬಹುದು ಎಂದರು.

    ವಿಶ್ವಕೋಶಕ್ಕೆ ಸಮಿತಿ ರಚನೆ ಶೀಘ್ರ: ಯಕ್ಷಗಾನ ವಿಶ್ವಕೋಶ ಸಿದ್ಧಪಡಿಸುವ ಯೋಜನೆಗೆ ಅಕಾಡೆಮಿ ಮುಂದಾಗಿದೆ ಎಂದು ಡಾ.ಜಿ.ಎಲ್.ಹೆಗಡೆ ಹೇಳಿದರು. ಸಾವಿರ ಪುಟಗಳ ಈ ಸಮಗ್ರ ಕೈಪಿಡಿ ಸಂಶೋಧನಾಸಕ್ತರಿಗೆ ಜ್ಞಾನದೀವಿಗೆ ಆಗಿರಲಿದೆ. ತೆಂಕು, ಬಡಗು, ಮೂಡಲಪಾಯ, ಘಟ್ಟದಕೋರೆ, ಕೇಳಿಕೆ ಮೊದಲಾದ ಪ್ರಕಾರಗಳ ಸಮಗ್ರ ಮಾಹಿತಿ ಇಲ್ಲ. ಚರಿತ್ರೆ ಮತ್ತು ವರ್ತಮಾನದ ಎಲ್ಲ ವಿದ್ಯಮಾನಗಳ ದಾಖಲೆಗಳನ್ನು ಒಳಗೊಂಡ ಈ ಗ್ರಂಥ ರಚನೆಗೆ ತಜ್ಞರ ಸಮಿತಿಯನ್ನು ಶೀಘ್ರ ರಚಿಸಲಾಗುವುದು ಎಂದರು.

    ಮೊದಲ ಬಾರಿಗೆ ದತ್ತಿನಿಧಿ ಸ್ಥಾಪನೆ: ಸಾಧಕರ ಹೆಸರಿನಲ್ಲಿ ಅಕಾಡೆಮಿ ಮೊದಲ ಬಾರಿಗೆ 5 ಲಕ್ಷ ರೂ. ಮೊತ್ತದ ವಿವಿಧ ದತ್ತಿನಿಧಿ ಸ್ಥಾಪಿಸಲಿದೆ. ಈ ನಿಧಿಯನ್ನು ದಾನಿಗಳಿಂದ ಸಂಗ್ರಹಿಸಿ ಅರ್ಹ ಕಲಾವಿದರಿಗೆ ಪ್ರತಿ ವರ್ಷ ಪ್ರಶಸ್ತಿ ನೀಡುವ ಯೋಜನೆ ಇದೆ ಎಂದು ಅಧ್ಯಕ್ಷರು ತಿಳಿಸಿದರು. ಧರ್ಮಸ್ಥಳದ ಕೀರ್ತಿಶೇಷ ರತ್ನವರ್ಮ ಹೆಗ್ಗಡೆ, ಡಾ.ಶೇಣಿ ಗೋಪಾಲಕೃಷ್ಣ ಭಟ್, ಕರ್ಕಿ ಹಾಸ್ಯಗಾರರ ಮನೆತನ, ಸಭಾಹಿತ ಮನೆತನ, ಕೆರೆಮನೆ ಮಹಾಬಲ ಹೆಗಡೆ, ಪಳ್ಳಿ ಸೋಮನಾಥ ಹೆಗ್ಡೆಯವರ ಹೆಸರಲ್ಲಿ ದತ್ತಿನಿಧಿ ಸ್ಥಾಪಿಸುವ ಇರಾದೆ ಇದೆ ಎಂದರು.

    ಯಕ್ಷಗಾನ ಕಲಾವಿದರಿಗೆ ಸರ್ಕಾರ ಎರಡು ಸಾವಿರ ರೂ. ಮಾಸಾಶನ ನೀಡುತ್ತಿದೆ. ಇದು ಇಳಿವಯಸ್ಸಿನ ಕಲಾವಿದರ ಔಷಧಕ್ಕೂ ಸಾಕಾಗುವುದಿಲ್ಲ. ಈ ಮೊತ್ತವನ್ನು ಐದು ಸಾವಿರ ರೂ.ಗೆ ಏರಿಸಬೇಕು ಎಂಬುದು ಅಕಾಡೆಮಿಯ ಬೇಡಿಕೆ.
    – ಡಾ.ಗೋಪಾಲಕೃಷ್ಣ ಹೆಗಡೆ
    ಅಧ್ಯಕ್ಷರು, ಕರ್ನಾಟಕ ಯಕ್ಷಗಾನ ಅಕಾಡೆಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts