More

    ಯಕ್ಷಗಾನ ಕಲಾವಿದರಿಗೆ ಸಹಾಯಧನ ಗೋಲ್ಮಾಲ್!

    – ಶ್ರೀಪತಿ ಹೆಗಡೆ ಹಕ್ಲಾಡಿ, ಕುಂದಾಪುರ

    ಕರೊನಾ ಹಿನ್ನೆಲೆಯಲ್ಲಿ ಯಕ್ಷಗಾನ ಪ್ರದರ್ಶನ ಸ್ಥಗಿತಗೊಂಡು ಆರ್ಥಿಕ ಸಂಕಷ್ಟಕ್ಕೆ ಒಳಗಾದ ಕಲಾವಿದರಿಗೆ ಸರ್ಕಾರ 2 ಸಾವಿರ ರೂ. ಸಹಾಯಧನ ಘೋಷಣೆ ಮಾಡಿದರೂ, ಹಣ ವಿತರಣೆ ಪಾರದರ್ಶಕವಾಗಿಲ್ಲ ಎನ್ನುವ ಆರೋಪ ಕೇಳಿಬರುತ್ತಿದೆ.

    ಸರ್ಕಾರ ಬಿಡುಗಡೆ ಮಾಡಿದ 40 ಲಕ್ಷ ರೂ.ನಲ್ಲಿ ತಲಾ 2 ಸಾವಿರ ರೂ.ಪ್ರಕಾರ ಯಕ್ಷಗಾನ ಅಕಾಡೆಮಿ 1,507 ಅರ್ಹ ಕಲಾವಿದರನ್ನು ಆಯ್ಕೆ ಮಾಡಿತ್ತು. ಈ ಮೊತ್ತದಲ್ಲಿ ಕಲಾವಿದರಿಗೆ 30,14,000 ರೂ. ನೀಡಲಾಗಿದೆ. ಉಳಿದ 9,86,000 ರೂ.ಎಲ್ಲಿ ಹೋಯಿತು ಎಂಬ ಪ್ರಶ್ನೆ ಎದುರಾಗಿದೆ. ಕಲಾವಿದರು ಸಲ್ಲಿಸಿದ ಅರ್ಜಿಗಳನ್ನು ಕನ್ನಡ ಸಂಸ್ಕೃತಿ ಇಲಾಖೆಗೆ ವರ್ಗಾಯಿಸಲಾಗಿದೆ. ಅವರೇ ಪರಿಹಾರ ನೀಡಿದ್ದಾರೆ ಎಂದು ಯಕ್ಷಗಾನ ಅಕಾಡೆಮಿ ತಿಳಿಸಿದೆ.

    ಉತ್ತರ ಕನ್ನಡದ ಕಲಾವಿದರಿಗಿಲ್ಲವೇ ನೆರವು: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ 2 ಸಾವಿರಕ್ಕೂ ಮಿಕ್ಕಿ ಕಲಾವಿದರು ಅರ್ಜಿ ಸಲ್ಲಿಸಿದ್ದಾರೆ ಎಂದು ಅಕಾಡೆಮಿ ತಿಳಿಸಿದೆ. ಉತ್ತರ ಕನ್ನಡದ ಕಲಾವಿದರನ್ನು ನಿರ್ಲಕ್ಷಿಸಲಾಗಿದೆ. ಸಹಾಯಧನ ಪಡೆಯಲು ಹತ್ತು ವರ್ಷ ಸೇವಾ ಅವಧಿ ನಿಗದಿ ಮಾಡಲಾಗಿತ್ತು. ಕಿರಿಯರು ಕಲಾವಿದರಲ್ಲವೇ? ಅವರಿಗೆ ಸಂಕಷ್ಟ ಇಲ್ಲವೇ? ಅಷ್ಟಕ್ಕೂ ಸೇವಾ ಅವಧಿಯನ್ನು ನಿಗದಿಪಡಿಸಿದ ಮಾನದಂಡವೇನು? ಎನ್ನುವುದಕ್ಕೂ ಸ್ಪಷ್ಟತೆ ಇಲ್ಲ. ಕಿರಿಯ ಕಲಾವಿದರು ಹೆಚ್ಚಿನ ಸೇವಾ ಅವಧಿ ಇದೆ ಎಂಬ ಮಾಹಿತಿ ಸೇರಿಸಿ ಅರ್ಜಿ ಹಾಕಿರುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಅರ್ಜಿ ಹಾಕಿದ ಹೆಚ್ಚಿನ ಹಿರಿಯ ಕಲಾವಿದರಿಗೆ ಅನುದಾನ ಬಂದಿಲ್ಲ.

    ನಾಲ್ಕಾರು ಕಲಾವಿದರಿಗೆ ಜಾನಪದ ಪರಿಷತ್ ಹೆಸರಿನಲ್ಲಿ ಮೊತ್ತ ಬಂದಿದೆ. ಒಬ್ಬೊಬ್ಬರ ಅಕೌಂಟಿಗೆ ಎರಡು ಬಾರಿ ಹಣ ಬಂದ ಉದಾಹರಣೆಯೂ ಇದೆ. 10 ವರ್ಷ ಮೇಲ್ಪಟ್ಟು ಕಲಾ ಸೇವೆ ಮಾಡಿದ ಹೆಚ್ಚಿನ ಕಲಾವಿದರಿಗೆ ಹಣ ಸಿಕ್ಕಿಲ್ಲ. ಯಕ್ಷಗಾನ ಬಯಲಾಟ ಅಕಾಡೆಮಿ ರಿಜಿಸ್ಟ್ರಾರ್ ನೀಡಿದ ಮಾಹಿತಿಯಂತೆ 967 ಕಲಾವಿದರು ಸಹಾಯಧನ ಪಡೆದಿದ್ದಾರೆ. ಅಕಾಡೆಮಿ ಅಧ್ಯಕ್ಷರ ಪ್ರಕಾರ ಈ ಸಂಖ್ಯೆ 1507. ಸಹಾಯಧನ ಪಡೆದ ಕಲಾವಿದರ ವಿವರ ಬಹಿರಂಗ ಪಡಿಸಬೇಕು, ಖಾತೆಗೆ ಜಮೆ ಮಾಡಿದ್ದರೆ ಬ್ಯಾಂಕ್ ಸ್ಟೇಟ್‌ಮೆಂಟ್ ಸಹಿತ ಪ್ರಕಟಿಸಬೇಕು ಎಂಬುದು ಕಲಾವಿದರ ಒತ್ತಾಯ.

    ಕರ್ನಾಟಕ ಜಾನಪದ ಎಂಬ ಹೆಸರಿನಲ್ಲಿ ನನಗೆ ಎರಡು ಸಾವಿರ ರೂ.ಲಭಿಸಿದೆ. ಅದು ಅಕಾಡೆಮಿಯಿಂದ ಬಂದದ್ದಲ್ಲ. ಅಕಾಡೆಮಿಯಲ್ಲಿ ಯಕ್ಷಗಾನ ಕಲಾವಿದರ ಮಾಹಿತಿ ಇಲ್ಲ. ಮೇಳಗಳ ಯಜಮಾನರಿಂದ ಕಲಾವಿದರ ಪಟ್ಟಿ ಪಡೆಯಬೇಕು. ನಾವೆಲ್ಲ ಯಕ್ಷಗಾನ ಕಲಾವಿದರು, ಎಷ್ಟು ವರ್ಷಗಳಿಂದ ಈ ಕ್ಷೇತ್ರದಲ್ಲಿದ್ದೇವೆ ಎಂಬುದಕ್ಕೆ ದಾಖಲೆ ಇಲ್ಲ. ಅಕಾಡೆಮಿ ದಾಖಲೀಕರಣ ಮಾಡಬೇಕು. ಅರ್ಹ ಎಲ್ಲರಿಗೂ ನೆರವು ಸಿಗಬೇಕು.
    – ಶಶಿಕಾಂತ ಶೆಟ್ಟಿ, ಕಲಾವಿದರು, ಸಾಲಿಗ್ರಾಮ ಮೇಳ

    ನಾವು ಯಾರಿಗೂ ನೇರವಾಗಿ ಹಣ ಕೊಟ್ಟಿಲ್ಲ. ಬ್ಯಾಂಕ್ ಅಕೌಂಟಿಗೆ ಹಾಕಿದ್ದೇವೆ. ಯಕ್ಷಗಾನ ಕಲಾವಿದರಿಗೆ ಅನುದಾನ ನೀಡಿದ ಡಿಟೇಲ್ಸ್ ಬಗ್ಗೆ ಮಾಹಿತಿ ಇಲ್ಲ. ಎಲ್ಲವೂ ಅಕೌಂಟ್ ಪೇ ಆಗಿದ್ದರಿಂದ ಏನಾಗಿದೆ ಎನ್ನೋದು ಗೊತ್ತಾಗುತ್ತದೆ. ಆದರೂ, ಚೆಕ್ ಮಾಡಿಸುತ್ತೇ ನೆ.
    -ಸಿ.ಟಿ.ರವಿ, ಸಚಿವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts