More

    ಗೋವಾ ಸರ್ಕಾರಕ್ಕೆ ಕರವೇ ಎಚ್ಚರಿಕೆ

    ಬೀದರ್: ಗೋವಾದಲ್ಲಿ ಅಲ್ಲಿನ ಸರ್ಕಾರ ಕನ್ನಡಿಗರ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ಸಹಿಸುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಸಿದೆ.
    ಗೋವಾದ ಸಂಗೋಲ್ಡಾ ಪ್ರದೇಶದಲ್ಲಿ 15ಕ್ಕೂ ಹೆಚ್ಚು ಕನ್ನಡಿಗರ ಮನೆಗಳನ್ನು ನೆಲಸಮಗೊಳಿಸಿರುವ ಗೋವಾ ಸರ್ಕಾರದ ಕ್ರಮ ತೀವ್ರ ಖಂಡನೀಯ ಎಂದು ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ ಹೇಳಿದ್ದಾರೆ.
    ತಮ್ಮನ್ನು ಒಕ್ಕಲೆಬ್ಬಿಸದಂತೆ 200ಕ್ಕೂ ಹೆಚ್ಚು ಕನ್ನಡಿಗರು ಮನವಿ ಮಾಡಿದರೂ ಸ್ಪಂದಿಸಿಲ್ಲ. ಪ್ರತಿರೋಧ ಒಡ್ಡಿದವರ ಮೇಲೆ ಲಾಠಿ ಪ್ರಹಾರ ನಡೆಸಿ ಅಮಾನವೀಯವಾಗಿ ನಡೆದುಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.
    ವಿವಿಧ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಕನ್ನಡಿಗರ ಪುಟ್ಟ ಮನೆಗಳಿಗೆ ಅಲ್ಲಿಯ ಸ್ಥಳೀಯ ಆಡಳಿತವೇ ಮೂಲಸೌಕರ್ಯ ಒದಗಿಸಿತ್ತು. ಇದೀಗ ಆ ಕುಟುಂಬಗಳನ್ನು ನಿರ್ದಾಕ್ಷಿಣ್ಯವಾಗಿ ಸ್ಥಳಾಂತರಿಸಲಾಗಿದೆ ಎಂದು ಹೇಳಿದ್ದಾರೆ.
    ಗೋವಾ ಸರ್ಕಾರ ಕನ್ನಡಿಗರಿಗೆ ಕಿರುಕುಳ ಕೊಡುತ್ತಿರುವುದು ಸರಿಯಲ್ಲ. ರಾಷ್ಟ್ರಪತಿಯವರು ಕೂಡಲೇ ಮಧ್ಯೆ ಪ್ರವೇಶಿಸಿ, ಗೋವಾ ಕನ್ನಡಿಗರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಬೇಡಿಕೆ ಮಂಡಿಸಿದ್ದಾರೆ.
    ಗೋವಾದಲ್ಲಿ ಸಾವಿರಾರು ಕನ್ನಡಿಗರು ಹಲವು ದಶಕಗಳಿಂದ ವಾಸವಾಗಿದ್ದಾರೆ. ಪ್ರವಾಸೋದ್ಯಮ ಸೇರಿದಂತೆ ಗೋವಾದ ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಹೊಟೇಲ್, ಬಟ್ಟೆ, ಹಾಲು, ಮೊಸರು, ತುಪ್ಪ ಮಾರಾಟ, ಕಟ್ಟಡ, ರಸ್ತೆ ನಿರ್ಮಾಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡಿಗರ ಮೇಲಿನ ದೌರ್ಜನ್ಯ ನಿಲ್ಲಿಸದಿದ್ದಲ್ಲಿ ಗೋವಾ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಾಗುವುದು. ಕನ್ನಡಿಗರಿಂದ ಅಸಹಕಾರ ಚಳವಳಿ ಆರಂಭಿಸಲಾಗುವುದು. ಕನ್ನಡಿಗರು ಪ್ರವಾಸಕ್ಕಾಗಿ ಹಾಗೂ ಕರ್ನಾಟಕದ ಹಾಲು, ಮೊಸರು, ತುಪ್ಪ ಮತ್ತು ಇತರ ಉತ್ಪನ್ನಗಳು ಗೋವಾಕ್ಕೆ ಹೋಗದಂತೆ ತಡೆಯಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts