More

    ಅತಿಮಾನುಷ ಶಕ್ತಿಗಳ ಆರಾಧನೆ

    ಇತ್ತೀಚಿನ ದಿನಗಳಲ್ಲಿ ದೈವಾರಾಧನೆ, ದೈವನರ್ತನ ಮುಂತಾದ ಆಚರಣೆಗಳು ಸಿನಿಮಾ, ಟಿವಿ ಮಾಧ್ಯಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು ಈ ಬೆಳವಣಿಗೆಯ ಬಗ್ಗೆ ಕೆಲವರಿಂದ ವಿರೋಧ ವ್ಯಕ್ತವಾಗುತ್ತಿದೆ. ಆದರೆ ಇಂತಹ ಬೆಳವಣಿಗೆ ಕರ್ನಾಟಕಕ್ಕೆ ಸೀಮಿತವಲ್ಲ, ಜಗತ್ತಿನ ಹಲವು ದೇಶ ಗಳಲ್ಲಿಯೂ ಇಂತಹ ಆಚರಣೆಗಳಿದ್ದು, ಅವು ಕೂಡ ಆಧುನಿಕತೆಗೆ ತೆರೆದುಕೊಳ್ಳುತ್ತಿವೆ. ಈ ಕುರಿತು ಒಂದು ವಿಸõತ ಅವಲೋಕನ.

    | ಸುಧೀರ್ ಅತ್ತಾವರ

    ವ್ಯಕ್ತಿ ತನ್ನ ಜೀವಿತಾವಧಿ ಮುಗಿದ ನಂತರ ದೈವ ಅಥವ ದೇವರ ಅಧೀನನಾಗುತ್ತಾನೆ ಎಂಬ ನಂಬಿಕೆ ಇದೆ. ಆ ನಂಬಿಕೆಯಿಂದಲೇ ಭೂಮಿಯಲ್ಲಿರದ ವ್ಯಕ್ತಿಗಳೊಂದಿಗೆ ಸಂವಹನ ನಡೆಸುವ ಆರಾಧನಾ ಕ್ರಮ ಪ್ರಪಂಚದಾದ್ಯಂತ ಅನಾದಿಕಾಲದಿಂದಲೂ ಚಾಲ್ತಿಯಲ್ಲಿದೆ. ಅದು ಬರೀ ಕರ್ನಾಟಕ ಕರಾವಳಿ ಭಾಗದ ಭೂತಕೋಲಕ್ಕೆ ಮತ್ತು ಕಾಲೆಕೋಲಕ್ಕೆ ಸೀಮಿತವಾಗಿಲ್ಲ. ಕೇರಳ, ಅಸ್ಸಾಂ, ಆಂಧ್ರ, ತಮಿಳುನಾಡು ಸೇರಿ ದೇಶ- ವಿದೇಶಗಳಲ್ಲಿ ವಿವಿಧ ರೂಪದಲ್ಲಿ ಅತೀತ ಶಕ್ತಿಗಳನ್ನು ಮೈಮೇಲೆ ಆವಾಹಿಸಿ ಸಂವಹನ ನಡೆಸುತ್ತಿದ್ದಾರೆ. ಈ ಆಚರಣೆಗಳ ಮೂಲ ಕುತೂಹಲಕಾರಿಯಾಗಿದೆ. ಇದು ಒಂದು ರೀತಿಯ ಆಧ್ಯಾತ್ಮಿಕ ನೆಲೆ ಕೂಡ ಕಂಡುಕೊಂಡಿದೆ. ಶಿಲಾಯುಗದ ಕಾಲದಿಂದಲೂ ಇದರ ಇರುವಿಕೆಯ ಬಗ್ಗೆ ಉಲ್ಲೇಖಗಳಿವೆ. ಪಾಶ್ಚಾತ್ಯ ದೇಶಗಳಲ್ಲೂ ಇದ್ದ ಈ ಆಚರಣೆ ಬಗ್ಗೆ ತುಲನಾತ್ಮಕ ಅಧ್ಯಯನ ನಡೆಸಿದರೆ, ಪುರಾತನ ಕಾಲದಿಂದಲೂ ಅತೀತ ಶಕ್ತಿಗಳೊಂದಿಗೆ ಮಾನವ ತನ್ನ ಟ್ರಾನ್ಸ್ ಮನಸ್ಥಿತಿಯಲ್ಲಿ ಸಂವಹನ ನಡೆಸುತ್ತಿದ್ದನೆಂಬ ವಿಚಾರ ತಿಳಿದುಬರುತ್ತದೆ. ಪ್ರಪಂಚದಾದ್ಯಂತ ಇದ್ದ ಆದಿವಾಸಿಗಳು ಅಗೋಚರ ಶಕ್ತಿಯನ್ನು ತಮ್ಮ ಮೈಮೇಲೆ ಆವಾಹಿಸಿ ಕೊಂಡು, ದೈವನರ್ತನದ ರೂಪದಲ್ಲಿ ಭೂತ-ಭವಿಷ್ಯದ ವಿಚಾರಗಳನ್ನು ನಿಖರ ಎನಿಸುವಷ್ಟರ ಮಟ್ಟಿಗೆ ಹೇಳುತ್ತ, ಜನರ ಭಕ್ತಿ ಮತ್ತು ಶ್ರದ್ಧೆಗೆ ಇಂಬು ನೀಡುತ್ತಿದ್ದರು. ಇದು ಇಂದಿಗೂ ನಡೆದುಕೊಂಡು ಬಂದಿದೆ. ಕರಾವಳಿಯಲ್ಲಿ ಜನಜನಿತವಾಗಿರುವ ಭೂತಕೋಲ, ಅದಕ್ಕೆ ಹೆಚ್ಚು ಸಮೀಪವಿರುವ ನಾಗ ಮಂಡಲ, ಕೇರಳದ ತೆಯ್ಯಂ, ಅಸ್ಸಾಮಿನ ಖೇರಾಯ್ಪೂಜಾ, ಆಂಧ್ರದ ಬೋನಾಲ್ ಹೀಗೆ ದೇಶದ ನಾನಾ ಕಡೆ ಅಗೋಚರ ಶಕ್ತಿಗಳ ಆರಾಧನೆ ಇದೆ. ಹಿಂದು ಧರ್ಮದಲ್ಲಿ ಮಾತ್ರ ಅಲ್ಲ, ಪ್ರಪಂಚದಾದ್ಯಂತ ಬೌದ್ಧ, ಕ್ರಿಶ್ಚಿಯನ್, ಹೈಟಿಯನ್ ಒಡೋವ್ (ಏಚಜಿಠಿಜಿಚ್ಞ ್ಖಛಟ್ಠ), ಇಸ್ಲಾಂ, ವಿಕ್ಕಾ (ಡಿಜ್ಚಿ್ಚ), ಪೆನ್ ಹೆಲೆನಿಕ್, ಡೊಮಿನಿಕ್ 21 ಡಿವಿಷನ್ಸ್… ಹೀಗೆ ದೇಶ-ವಿದೇಶಗಳ ಸುಮಾರು 488 ಸೊಸೈಟಿಗಳಲ್ಲಿ ದೈವಾರಾಧನೆಯ ರೀತಿಯಲ್ಲಿ ಅತಿಮಾನುಷ ಶಕ್ತಿಗಳ ಆರಾಧನೆ ಮತ್ತು ಆಚರಣೆ ನಡೆಯುತ್ತಿದೆ.

    ಕ್ರೖೆಸ್ತ ಧರ್ಮದಲ್ಲಿ ಆವಾಹನೆ: ಪೆಂಟಾಕೋಸ್ಟಾಲಿಸಂ ಎನ್ನುವುದು ಕ್ರೖೆಸ್ತ ಧರ್ಮದಲ್ಲಿ ಅಗೋಚರ ಶಕ್ತಿಯ ಆವಾಹನೆಯ ಅನುಭವವಾಗುವ ಒಂದು ಆಚರಣೆ. ಬ್ಯಾಪ್ಟಿಸ್ಟ್ ಆಗುವ ಸಂದರ್ಭದಲ್ಲಿ ಪವಿತ್ರ ನೀರನ್ನು ತಲೆ ಮೇಲೆ ಸಿಂಪಡಿಸುವಾಗ ಅನೇಕ ಪಾದ್ರಿಗಳು ತಮ್ಮ ಮೇಲೆ ದೈವೀ ಶಕ್ತಿಯ ಆವಾಹನೆ ಆಗಿ, ಮೈ ನಡುಗಿದ ಅನುಭವವನ್ನು ಹಂಚಿಕೊಂಡಿದ್ದಾರೆ. ಧರ್ವಂತರವಾಗಿರುವ ಈ ಆಚರಣೆಯ ಮೂಲ ಪಾಶ್ಚಾತ್ಯ ಆದಿವಾಸಿಗಳ ಷಮನಿಸಂ ಎನ್ನುವ ದೈವೀಶಕ್ತಿಯ ಆವಾಹನೆಯ ಕ್ರಿಯೆ ಎಂಬ ಸಂಶಯ ವ್ಯಕ್ತವಾಗುತ್ತದೆ. ಷಮನಿಸಂ- ಇದು ಉತ್ತರ ಏಷ್ಯಾದ ಸೈಬೀರಿಯಾ ಮತ್ತು ರಷ್ಯಾ ದೇಶದ ಕೆಲವು ಪ್ರಾಂತ್ಯಗಳಲ್ಲಿ ಟುಂಗು ಸಿಕ್ ಭಾಷೆ ಮಾತನಾಡುವ ಆದಿವಾಸಿಗಳ ಆಚರಣೆ. ಇದು ಕ್ರಮೇಣ ಪಶ್ಚಿಮ, ಮಧ್ಯ, ಪೂರ್ವ ಏಷ್ಯಾದ ರ್ತಕ್ ಜನಾಂಗ ಮತ್ತು ಅಲ್ಲಿನ ಮೂಲನಿವಾಸಿಗಳಾದ ಮಂಗೋಲ್​ಗಳಲ್ಲಿ ಕೂಡ ಪಸರಿಸಿತು. ದೈವನರ್ತನದ ಉನ್ಮಾದದೊಂದಿಗೆ ಅಗೋಚರ ಶಕ್ತಿಗಳ ಜತೆ ಸಂವಹನ ನಡೆಸುವ ಕ್ರಿಯೆ ಪುರಾತನ ಕಾಲದಲ್ಲೇ ಶುರುವಾಯಿತು. ಇತಿಹಾಸಕಾರರ ಪ್ರಕಾರ, ಏಷ್ಯಾ, ಆಫ್ರಿಕಾ, ಆಸ್ಟ್ರೇಲಿಯಾ, ಅಮೆರಿಕದ ಕೆಲವು ಭಾಗಗಳಿಗೂ ಷಮನಿಸಂ ಪಸರಿಸಿತು. ಅತೀತ ಶಕ್ತಿಯನ್ನು ಮೈಗೂಡಿಸಿಕೊಂಡು ಭೂತ ಮತ್ತು ಭವಿಷ್ಯದ ವಿಚಾರಗಳನ್ನು ಹೇಳುವ ದೈವನರ್ತನವು, ಭಕ್ತಿಯ ನೆಲೆಯಲ್ಲಿ ಆಚರಣೆಗೊಳಪಡಲು ಶುರುವಾಯಿತು.

    ಜಪಾನಿನಲ್ಲಿರುವ ಕಗೂರ ನೃತ್ಯ ಕೂಡ ಷಮನಿಸಂ ಮಾದರಿಯ ದೈವನರ್ತನ. ಇದರಲ್ಲಿರುವ ಒಮೊಟೋ ಕಗುರ, ಹನಾ ಮಸ್ತುರಿ, ಹಯಚಿನ್ ಕಗುರ ಎಂಬ ಮೂರು ವಿಧದ ದೈವಾರಾಧನೆಯು ದೈವನರ್ತನದಂತಹುದೇ ಜನಪದೀಯ ಆಚರಣೆ. ನಾರ್ವೆ, ಸ್ವೀಡನ್, ಫಿನ್ಲೆಂಡ್ ಹಾಗೂ ರಷ್ಯಾದ ಕೋಲಾಪೆನಿನ್ಸುವೇಲಾದಲ್ಲಿ ಷಮನಿಸಂ ನಡೆಸುವ, ಸೇಮಿ ಭಾಷೆ ಮಾತನಾಡುವ ಸೇಮಿ ನೊಯ್ಡಿಸ್ (ಖಛಿಞಜಿ ಘಟಚಜಿಛಜಿಠ) ಜನಾಂಗವಿದೆ. ಇದೂ ನಮ್ಮ ಭೂತಕೋಲ ಕಟ್ಟುವ ಜನಾಂಗದಂತೆ ಉಪೇಕ್ಷೆಗೊಳಗಾಗಿದೆ. 2011ರಲ್ಲಿ ವಿಶ್ವಸಂಸ್ಥೆ ಈ ತಾರತಮ್ಯದ ಬಗ್ಗೆ ಅಲ್ಲಿನ ಸರಕಾರಕ್ಕೆ ಎಚ್ಚರಿಕೆ ನೀಡಿದೆ. ಸೇಮಿ ನೊಯ್ಡಿಸ್​ಗಳೂ ಅಗೋಚರ ಶಕ್ತಿಯ ಆರಾಧನಾ ಸಮಯದಲ್ಲಿ ನಮ್ಮ ಭೂತ ಕೋಲದವರಂತೆ ಮುಖಕ್ಕೆ ಹಳದಿ, ಕೆಂಪು ಬಣ್ಣ ಹಚ್ಚಿಕೊಂಡು, ತಲೆಗೆ ದೈವನರ್ತಕರು ಇಡುವ ತಲೆಪಟದಂತಹ ಶಿರಸ್ತ್ರಾಣ ಹಾಗೂ ಬೆನ್ನ ಹಿಂದೆ ಮತ್ತು ಹೊಟ್ಟೆಯ ಕೆಳಭಾಗದಲ್ಲಿ ಸೊಂಟಕ್ಕೆ ಕಟ್ಟುವ ಅಣಿಯ ರೀತಿಯ ಹಗುರವಾದ, ಬೃಹತ್ ಹಾಳೆಯಿಂದ ಮಾಡಿದ ಅರ್ಧಚಂದ್ರಾಕೃತಿಯ ವಸ್ತುವನ್ನು ಕಟ್ಟಿಕೊಳ್ಳುತ್ತಾರೆ. ಕಾಲಿಗೂ ಗಗ್ಗರ ರೀತಿಯ ಶಬ್ದ ಮಾಡುವ ವಸ್ತುವನ್ನು ಕಟ್ಟಿಕೊಳ್ಳುತ್ತಾರೆ. ಇನ್ನೂ ಕುತೂಹಲಕಾರಿ ವಿಷಯವೆಂದರೆ ಇವರು ಕೂಡ ನಮ್ಮ ಭೂತಾರಾಧನೆಯ ಸಮಯದಲ್ಲಿ ಹಾಡುವ ಪಾಡ್ದನ ರೀತಿಯ ಹಾಡನ್ನು ಚರ್ಮವಾದ್ಯ ನುಡಿಸುತ್ತಾ ಹಾಡುತ್ತಾರೆ. ಈ ಹಾಡಿಗೆ ಜೋಯ್್ಕ ಎನ್ನುತ್ತಾರೆ. ಹಾಡುತ್ತ ನರ್ತಿಸುತ್ತ ಡೋಲು, ತಮಟೆ ಮೊದಲಾದ ವಾದ್ಯಗಳು ಜೋರಾಗಿ ಹೊಡೆದುಕೊಳ್ಳುತ್ತಿದ್ದಂತೆಯೇ ಸೇಮಿ ನೋಯಿಡ್, ಅಗೋಚರ ಶಕ್ತಿಯನ್ನು ಆವಾಹನೆ ಮಾಡಿಕೊಂಡು ಜೋರಾಗಿ ಮೈಕೊಡವುತ್ತಾ ನರ್ತಿಸಲು ಆರಂಭಿಸುತ್ತಾನೆ. ನಮ್ಮಲ್ಲಿಯ ಭೂತಕೋಲ ಅಥವಾ ದೈವಾರಾಧನೆಯಲ್ಲೂ ಘಟಿಸುವುದು ಇದೇ ತಾನೇ? ಸೇಮಿ ನೊಯ್ಡಿಸ್ ಅತ್ಯಂತ ಪುರಾತನ ಆದಿವಾಸಿ ಜನಾಂಗ. ಭೂತಕೋಲವು ಇದರ ಪ್ರಭಾವಕ್ಕೆ ಒಳಪಟ್ಟಿರಬಹುದು. ಆದರೆ ರೊಮೇನಿಯನ್ ಇತಿಹಾಸಜ್ಞ ಮತ್ತು ಚಿಕಾಗೋ ವಿವಿಯ ಪೊ›. ಮಿರ್ಷಿಯಾ ಎಲಿಯಡ್ ಹೇಳುವಂತೆ, ಷಮನ್ ಎನ್ನುವುದು ಸಂಸ್ಕೃತ ಪದ. ಶ್ರಮನ ಎನ್ನುವ ಶಬ್ದದಿಂದ ಉಧ್ಭವವಾಗಿದೆ. ಶ್ರಮನ ಎನ್ನುವುದು ಪವಿತ್ರ ಬೌದ್ಧ ಅಲೆಮಾರಿ ಸನ್ಯಾಸಿಗಳ ಹೆಸರು. ಇದರಿಂದಲೇ ಷಮನಿಸಂ ಆರಂಭವಾಗಿದೆ ಎನ್ನುವುದು ಇವನ ವಾದ. ನಮ್ಮ ಭೂತಕೋಲ ನೃತ್ಯ ಉಗಮಕ್ಕೆ ಇವು ಮೂಲ ಎನ್ನುವುದಕ್ಕೆ ಇದರಿಂದ ಪುಷ್ಟಿ ದೊರೆಯುತ್ತಿದೆ. ಈ ಷಮನ್ ವ್ಯಕ್ತಿ ನಮ್ಮ ಭೂತಕೋಲ ಅಥವಾ ದೈವಾರಾಧನೆ ಮಾಡುವ ವ್ಯಕ್ತಿಗಳಂತೆ, ಭಾವಸಮಾಧಿಯ ಮನಸ್ಥಿತಿ ಹೊಂದಿ, ಅತೀತಶಕ್ತಿಯೊಂದಿಗೆ ಸಂವಹನ ಮಾಡುವ ವಿದ್ಯೆ ತಿಳಿದಾತ. ನಮ್ಮ ದೈವನರ್ತಕರು ಮತ್ತು ಪಾತ್ರಿಗಳೂ ಈ ಸಾಮರ್ಥ್ಯ ಹೊಂದಿದ್ದಾರೆಂಬ ನಂಬಿಕೆಯಿದೆ.

    ಇದೇ ರೀತಿ ಅತಿಮಾನುಷ ಶಕ್ತಿಗಳಾದ ಡೊಮೋಸ್ ಅಥವಾ ಜಿನ್​ಗಳು ಮನುಷ್ಯರ ದೇಹದೊಳಗೆ ಪ್ರವೇಶಿಸಿ ಧಾರ್ವಿುಕ ಮತ್ತು ಆಧ್ಯಾತ್ಮಿಕ ಆಚರಣೆಯ ರೀತಿಯಲ್ಲಿ ನಡೆಸುವ ಪದ್ಧತಿ ಇತರ ಪಾಶ್ಚಾತ್ಯ ದೇಶಗಳಲ್ಲಿ ಎಕ್ಸೋರ್ಸಿಸಂ ರೀತಿಯಲ್ಲೇ ಆಫ್ರಿಕಾ ದೇಶಗಳಲ್ಲಿ ಸಾಮಾನ್ಯವಾಗಿದೆ. ಕೆನ್ಯಾ ದೇಶದಲ್ಲಿ ಡಿಗೋ ಮತ್ತು ಗಿರಿಯಮ ಜನಾಂಗದವರು ನಮ್ಮ ಕರಾವಳಿಯ ನಲಿಕೆ ಜನಾಂಗದವರ ರೀತಿಯಲ್ಲೇ ಅತೀತಶಕ್ತಿಗಳನ್ನು ದೇಹದೊಳಗೆ ಆವಾಹಿಸಿ ನರ್ತನಸೇವೆ ನಡೆಸುತ್ತಾರೆ. ಆಫ್ರಿಕಾದ ಇಂಡಿಯನ್ ಓಷಿಯನ್ ಕರಾವಳಿ ಭಾಗದ ಹಾಗೂ ಮೊಜಾಂಬಿಕ್- ಉಗಾಂಡಾದಲ್ಲೂ ಮಯೊಟ್ಟೆ ಎನ್ನುವ ಆದಿವಾಸಿ ಜನಾಂಗದವರಲ್ಲಿ ಕೂಡ ಇಂತಹ ಆರಾಧನಾ ಪದ್ಧತಿ ಕಂಡು ಬರುತ್ತದೆ. ಗ್ರೀಸ್​ನಲ್ಲಿ ಪೆನ್ಹೆಲೆನಿಕ್ ಧರ್ಮದವರಲ್ಲೂ ನಮ್ಮ ಹಿಂದೂ ಧರ್ಮದ ನಾಗಮಂಡಲದ ರೀತಿ ಅಪೊಲೋ ಅಧಿದೇವತೆಗೆ ಪೈಥಿಯಾ ಎಂಬ ಮೇಲ್ವರ್ಗದ ಅರ್ಚಕ ಜನಾಂಗನರ್ತನ ಸೇವೆ ನೀಡುತ್ತಾ, ಚಿಂತನ-ಮಂಥನ ನಡೆಸುತ್ತಾರೆ. ಗ್ರೀಸ್​ನ ಡೆಲ್ಪಿಯಲ್ಲಿ ಈ ಅಪೊಲೋ ದೇವತೆಗೆ ಹಲವಾರು ದೈವಸ್ಥಾನ/ದೇವಸ್ಥಾನಗಳಿವೆ. ನಮ್ಮಲ್ಲಿರುವಂತೆಯೇ ಭೂತ- ದೈವಗಳನ್ನು ಕಲ್ಲು ಅಥವಾ ಶಿಲೆಯಲ್ಲಿ ಆವಾಹಿಸಿ ನಂಬುವಂತೆ ಪ್ರಪಂಚದ ಇತರ ಕಡೆಗಳಲ್ಲೂ ಇದೆ. ಗ್ರೀಸ್​ನಲ್ಲಿ ಇದನ್ನು ಒಂಫಲೋಸ್ ಎನ್ನುತ್ತಾರೆ. ನಮ್ಮ ಸಮೀಪದ ನೇಪಾಳದ ಸೆರುಬೆಸಿ ಪ್ರಾಂತ್ಯದ ಹಿಂದುಯಿಸಂ, ಅನಿಮಿಸಂ ಮತ್ತು ಬುದ್ಧಿಸಂಗಳಲ್ಲಿ ಷಮನಿಸಂ ಮಾದರಿಯ ದೈವನರ್ತನ, ಮಾಂತ್ರಿಕ ಸೇವೆ ವಿಪುಲವಾಗಿವೆ.

    ಭೂತಕೋಲವಾಗಲೀ ಷಮನಿಸಂ ಆಧಾರವಾಗಿರುವ ಪ್ರಪಂಚದ ಯಾವುದೇ ರೀತಿಯ ಮೈಮರೆತು (ಟ್ರಾನ್ಸ್) ನರ್ತಿಸುತ್ತಾ- ಆತ್ಮಗಳೊಂದಿಗೆ ಸಂವಹನ ನಡೆಸುವ ನೃತ್ಯಗಳಲ್ಲಾಗಲೀ, ಮನುಷ್ಯ ಅನಾದಿ ಕಾಲದಿಂದಲೂ ನೆಲ-ಜಲದೊಂದಿಗಿನ ಆತನ ಸಂಬಂಧ, ಭೂಮಾತೆಯನ್ನು ಗೌರವಿಸುವ, ಸಾಂಪ್ರದಾಯಿಕ ಮತ್ತು ಪ್ರಾಕೃತಿಕ ಗಿಡಮೂಲಿಕೆಗಳ ಮದ್ದಿನಿಂದ ಗುಣ ಹೊಂದುವ ವಿಚಾರಗಳು ಅಂದಿನಿಂದಲೂ ಜೀವಂತವಾಗಿವೆ. ವಿವಿಧ ಆಯಾಮಗಳ ಅಗೋಚರ ಜಗತ್ತನ್ನು ಸ್ವಂತವಾಗಿ ಗ್ರಹಿಸುತ್ತಾ, ಪ್ರಶ್ನೆ ಮತ್ತು ಉತ್ತರಗಳಿಗೆ ಸ್ಥಾನ ಕಲ್ಪಿಸುವ ಆಚರಣೆಯು ಬಾಹ್ಯ ಜಗತ್ತಿನ ಅತಿಮಾನುಷ ಶಕ್ತಿಗಳೊಂದಿಗೆ ಸಂವಹನ ಸಾಧಿಸುವ ಸೋಜಿಗದ ವಿಚಾರವಾಗಿದೆ. ಆದರೆ ಷಮನಿಸಂ ಬರೀ ಅಲೌಕಿಕ ಶಕ್ತಿಗಳೊಂದಿಗೆ ಸ್ಪಂದನೆಗೆ ಮಾತ್ರ ಸೀಮಿತವಾಗಿಲ್ಲ. ಅಭಿವ್ಯಕ್ತಿಶೀಲ ನೃತ್ಯ ಮಾಡುವಾಗಲೂ, ತನ್ನ ತೀವ್ರವಾದ ತೊಡಗಿಸಿಕೊಳ್ಳುವಿಕೆಯ ಷಮನಿಸಂ ಮಾದರಿಯು, ಭಾವಸಮಾಧಿಯತ್ತ ಕೊಂಡೊಯ್ಯುವಂತಹ ಅನೇಕ ನಿದರ್ಶನಗಳಿವೆ. ಜರ್ಮನಿಯಲ್ಲಿ 1886ರಲ್ಲಿ ಜನಿಸಿದ್ದ ವಿಶ್ವ ವಿಖ್ಯಾತ ನೃತ್ಯ ಕಲಾವಿದೆ ಮೇರಿ ವಿಗ್ಮನ್ ಕೂಡ ಷಮನಿಸಂ ಮಾದರಿಯಲ್ಲೇ ನೃತ್ಯದಲ್ಲಿ ತೊಡಗಿಸಿಕೊಂಡು, ಚೂಪಾದ ಶೂ ಧರಿಸದೆಯೇ ಹೆಬ್ಬೆರಳಲ್ಲಿ ನಿಂತು ಬ್ಯಾಲೆ ಮಾಡುತ್ತಿದ್ದಳು. ಫ್ರಾನ್ಸ್ನ ಮಾಟಿಲ್ಡೇ ರಾನ್ಸ್, ಮೌಲಾನ ಮಝರ್ೌಕಿ, ಸ್ಪೇನ್​ನ ಖ್ಯಾತ ಚಿತ್ರ ನಿರ್ದೇಶಕಿ ಮತ್ತು ನೃತ್ಯ ಕಲಾವಿದೆ ಬ್ಲಾಂಕ ಲೀ ಮೊದಲಾದವರ ನೃತ್ಯವು ದೈಹಿಕ ಅಭಿವ್ಯಕ್ತಿ ಮಾತ್ರವಲ್ಲ, ಆಧಾತ್ಮಿಕ ಅಭಿವ್ಯಕ್ತಿಯೂ ಹೌದು.

    ಆಧುನಿಕತೆಯ ಲೇಪ
    ಇತ್ತೀಚಿನ ದಿನಗಳಲ್ಲಿ ಷಮನಿಸಂ ಆಧಾರಿತ ದೈವಾರಾಧನೆ ಮತ್ತು ನೃತ್ಯ ಕಲಾಪ್ರಕಾರಗಳಲ್ಲಿ ಆಧುನಿಕತೆಯ ಲೇಪ ಹೆಚ್ಚಾಗುತ್ತಿದೆ. ಮೆಕ್ಸಿಕೋ, ಕೊರಿಯಾ, ಜಪಾನ್, ಆಫ್ರಿಕಾ, ಅಮೆರಿಕಾ ಮುಂತಾದೆಡೆ ಷಮನಿಸಂ ಮಾದರಿಯ ಸಂಮೋಹನ ರೀತಿಯ ದೈವನರ್ತನ ರೂಪದ ನೃತ್ಯಪ್ರಕಾರಗಳು ವೇದಿಕೆಯಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿವೆ. ಟೆಲಿವಿಷನ್ ಮತ್ತು ಸಿನೆಮಾ ಮಾಧ್ಯಮಗಳಲ್ಲಿ ಪ್ರದರ್ಶನಗೊಳ್ಳುತ್ತಿವೆ. ಆದ್ದರಿಂದಲೇ ಅಪಾರ ಜನಪ್ರಿಯತೆ ಪಡೆಯುತ್ತಿವೆ. ಆದರೆ ನಮ್ಮ ಕರಾವಳಿಯ ದೈವನರ್ತಕರು ಮಾತ್ರ ವಿರೋಧ ವ್ಯಕ್ತಪಡಿಸುತ್ತಿರುವುದು ವಿಪರ್ಯಾಸ.

    (ಲೇಖಕರು ಸಾಹಿತಿ ಮತ್ತು ಚಲನಚಿತ್ರ ನಿರ್ದೇಶಕ)

    ಬುದ್ಧಿವಂತರಿಗೆ ಮಾತ್ರ: ಫೋಟೋದಲ್ಲಿರುವ ನಾಲ್ವರು ಮಹಿಳೆಯರಲ್ಲಿ ಕಳ್ಳಿ ಯಾರು? ಪತ್ತೆಹಚ್ಚುವವರೇ ಜೀನಿಯಸ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts