More

    ಬೆಳಗ್ಗೆಯಿಂದಲೇ ಭಕ್ತರಿಂದ ಪೂಜೆ

    ಕೆ.ಆರ್.ನಗರ: ಮಹಾ ಶಿವರಾತ್ರಿ ಹಬ್ಬದ ಅಂಗವಾಗಿ ಕೆ.ಆರ್.ನಗರ ತಾಲೂಕಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.

    ಪಟ್ಟಣದ ಹೊರ ವಲಯದಲ್ಲಿರುವ ಶ್ರೀ ಮೀನಾಕ್ಷಿ ಸಮೇತ ಶ್ರೀಅರ್ಕೇಶ್ವರ ಸ್ವಾಮಿ ದೇವಾಲಯ, ಪಟ್ಟಣದ ಮಲೆ ಮಹದೇಶ್ವರ ದೇವಾಲಯ, ಚಂದ್ರಮೌಳೇಶ್ವರ ದೇವಾಲಯ, ಮಧುವನಹಳ್ಳಿ ಬಡಾವಣೆಯ ಶ್ರೀ ವೀರಭದ್ರೇಶ್ವರಸ್ವಾಮಿ ದೇವಾಲಯ ಸೇರಿದಂತೆ ಇತರ ದೇವಸ್ಥಾನಗಳಿಗೆ ಬೆಳಗ್ಗೆಯಿಂದಲೆ ಭಕ್ತರು ಭೆೇಟಿ ನೀಡಿ ಪೂಜೆ ಸಲ್ಲಿಸಿದರು.

    ಕೆ.ಆರ್.ನಗರ ತಾಲೂಕಿನ ಕಪ್ಪಡಿ ಕ್ಷೇತ್ರದಲ್ಲಿ ಶಿವರಾತ್ರಿಯಿಂದ ಯುಗಾದಿವರೆಗೆ ನಡೆಯುವ ವಾರ್ಷಿಕ ಜಾತ್ರೆ ಶುಕ್ರವಾರ ಆರಂಭವಾಗಿದ್ದು, ನೂರಾರು ಭಕ್ತರು ಸಿದ್ದಪ್ಪಾಜಿ, ರಾಚಪ್ಪಾಜಿ ಮತ್ತು ಚೆನ್ನಾಜಮ್ಮನವರ ಗದ್ದುಗೆಗಳ ದರ್ಶನ ಪಡೆದರು. ಬಾರಿಯ ಜಾತ್ರೆಯ ಉಸ್ತುವಾರಿ ವಹಿಸಿ ಪೂಜಾ ವಿಧಿ ವಿಧಾನಗಳ ನಡೆಸುವ ಬೊಪ್ಪೇಗೌಡನಪುರದ ಮಠಾಧೀಶ ವರ್ಚಸ್ವಿ ಸಿದ್ದಲಿಂಗರಾಜೇ ಅರಸ್ ಶುಕ್ರವಾರ ಕಪ್ಪಡಿ ಮಠವನ್ನು ಪ್ರವೇಶ ಮಾಡಿದರು.

    ಅರ್ಕೇಶ್ವರ ಸ್ವಾಮಿ ದೇವಾಲಯಕ್ಕೆ ಬಂದ ಭಕ್ತರು ಕಾವೇರಿ ನದಿಯಲ್ಲಿ ಪುಣ್ಯಸ್ನಾನ ಮಾಡಿ ದೇವರ ದರ್ಶನ ಪಡೆದರು. ಪಟ್ಟಣದ ಮಲೆ ಮಹದೇಶ್ವರ ದೇವಾಲಯದಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಿ ಭಕ್ತರಿಗೆ ಪ್ರಸಾದ ಮತ್ತು ಲಾಡು ವಿತರಿಸಲಾಯಿತು.

    ಜ್ಯೋತಿಲಿರ್ಂಗಗಳ ದರ್ಶನ: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯದ ಶಾಖಾ ಕಚೇರಿ ವತಿಯಿಂದ 88ನೇ ತ್ರಿಮೂರ್ತಿ ಶಿವ ಜಯಂತಿ ಮಹೋತ್ಸವದ ಅಂಗವಾಗಿ ಎಂಟು ದಿನಗಳ ಕಾಲ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯ ದರ್ಶನ ಮತ್ತು ಚಿತ್ರ ಪ್ರದರ್ಶನ ಆಯೋಜಿಸಲಾಗಿದೆ.

    ಪಟ್ಟಣದ ಡಾ.ರಾಜ್‌ಕುಮಾರ್ ಬಾನಾಂಗಳದಲ್ಲಿ ಮಾರ್ಚ್ 5 ರಿಂದ ಪ್ರಾರಂಭವಾಗಿರುವ 21 ಅಡಿ ಎತ್ತರದ ಪ್ರಕಾಶಮಯ ಶಿವಲಿಂಗ ದರ್ಶನ ಏರ್ಪಡಿಸಲಾಗಿದ್ದು, ಬೆಳಗ್ಗೆ 7 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಭಕ್ತರು ದರ್ಶನ ಪಡೆಯಬಹುದಾಗಿದೆ. 8 ದಿನಗಳ ಕಾಲ ನಿತ್ಯ 6.30 ರಿಂದ 8 ಗಂಟೆವರೆಗೆ ಪ್ರವಚನ, ಬೆಳಗ್ಗೆ 10.30 ರಿಂದ 12 ಗಂಟೆವರೆಗೆ ಹಿರಿಯ ನಾಗರಿಕರಿಗೆ ಭಗವಂತನ ಆಶೀರ್ವಾದ, ರಕ್ಷಾ ಕವಚ ಆಶೀರ್ವಚನ, ಸಂಜೆ 4 ರಿಂದ 5.30ರ ವರೆಗೆ ಮಹಿಳೆಯರಿಗಾಗಿ ಮನೋ ಬಲದಿಂದ ಶಿವ ಶಕ್ತಿಯರಾಗಿ ಮನೆಯನ್ನು ಮಂದಿರವನ್ನಾಗಿ ಮಾಡಿಕೊಳ್ಳಲು ಮಾರ್ಗದರ್ಶನ ಸೇರಿದಂತೆ ಇತರ ಪ್ರವಚನವನ್ನು ಏರ್ಪಡಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts