More

    ಹದಗೆಟ್ಟ ರಸ್ತೆಯಲ್ಲಿ ಸಂಚಾರವೇ ದುಸ್ತರ

    ಅಥಣಿ: ಕೆಲ ತಿಂಗಳ ಸುರಿದ ಭಾರಿ ಮಳೆ, ಪ್ರವಾಹದಿಂದ ಯಿಂದ ಅಥಣಿ ಕ್ಷೇತ್ರದ ಹಲವು ರಸ್ತೆಗಳಲ್ಲಿ ತಗ್ಗು-ಗುಂಡಿ ಬಿದ್ದಿದ್ದು, ವಾಹನ ಸವಾರರು ಭಯದಲ್ಲೇ ಓಡಾಡುವಂತಾಗಿದೆ. ಹದಗೆಟ್ಟ ರಸ್ತೆಯಲ್ಲಿ ಧೂಳು ಏಳುತ್ತಿದ್ದು, ಕಬ್ಬು ಸಾಗಿಸುವ ವಾಹನಗಳ ಸಂಚಾರದಿಂದಾಗಿ ರಸ್ತೆಗಳು ಮತ್ತಷ್ಟಿ ಹದಗೆಡುತ್ತಿವೆ.

    ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಉಪಮುಖ್ಯಮಂತ್ರಿ ಮತ್ತು ಒಬ್ಬರು ಶಾಸಕರು ಇದ್ದರೂ ಗ್ರಾಮೀಣ ಭಾಗದ ರಸ್ತೆಗಳಿಗೆ ದುರಸ್ತಿ ಭಾಗ್ಯ ಸಿಗುತ್ತಿಲ್ಲ. ಕಳೆದ ನಾಲ್ಕೈದು ವರ್ಷಗಳಿಂದ ಈ ಹದಗೆಟ್ಟ ರಸ್ತೆಗಳಲ್ಲಿ ಸಂಚರಿಸುವ ಪ್ರಯಾಣಿಕರ ಪಾಡು ಹೇಳತೀರದಾಗಿದೆ. ನೆರೆಯ ಮಹಾರಾಷ್ಟ್ರದೊಂದಿಗೆ ಹೊಂದಿಕೊಂಡಿರುವ ಅಥಣಿ ತಾಲೂಕಿನ ವ್ಯಾಪ್ತಿಯ ಜೇವರ್ಗಿ- ವಿಜಯಪುರ-ಸಂಕೇಶ್ವರ ರಾಜ್ಯ ಹೆದ್ದಾರಿ, ಜಿಲ್ಲಾ ಹೆದ್ದಾರಿಗಳು ಮತ್ತು ಗ್ರಾಮೀಣ ಭಾಗದ ರಸ್ತೆಗಳು, ಕಾಗವಾಡ-ಅಥಣಿ-ವಿಜಯಪುರಕ್ಕೆ ಹೋಗುವ ಮಾರ್ಗಗಳು ಸಂಪೂರ್ಣ ಹಾಳಾಗಿವೆ. ಆದರೆ, ರಸ್ತೆಗಳ ದುರಸ್ತಿ ಕೆಲಸ ಮಾತ್ರ ಆರಂಭವಾಗಿಲ್ಲ. ಮಿರಜ್, ಸಾಂಗಲಿ, ಕೊಲ್ಲಾಪುರ ಜಿಲ್ಲೆಗಳಲ್ಲಿನ ವಿವಿಧ ಆಸ್ಪತ್ರೆಗಳಿಗೆ ಈ ಭಾಗದ ಜನರು ಅಥಣಿ ಮಾರ್ಗವಾಗಿ ಹೋಗುತ್ತಾರೆ. ಆದರೆ, ರಸ್ತೆ ಹಾಳಾಗಿದ್ದರಿಂದ ರೋಗಿಗಳು ತೀವ್ರ ಸಂಕಷ್ಟ ಎದುರಿಸುವಂತಾಗಿದೆ ಎಂದು ಪುರಸಭೆ ಮಾಜಿ ಸದಸ್ಯ ಅವಿನಾಶ ಜಾಧವ್ ದೂರಿದ್ದಾರೆ.

    ಆರಂಭವಾಗದ 800 ಕೋಟಿ ರೂ. ವೆಚ್ಚದ ಕಾಮಗಾರಿ

    ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ 3ವರ್ಷಗಳ ಹಿಂದೆ ಕಾಗವಾಡ ಹತ್ತಿರ 800 ಕೋಟಿ ವೆಚ್ಚದ ರಾಜ್ಯ ಹೆದ್ದಾರಿ ಕಾಮಗಾರಿಗೆ ಭೂಮಿ ಪೂಜೆ ನೆರವೆರಿಸಿದ್ದರು. ಆದರೆ, ಇಲ್ಲಿಯವರೆಗೆ ಕಾಮಗಾರಿ ಆರಂಭವಾಗಿಲ್ಲ. ಅಥಣಿ ಕ್ಷೇತ್ರವು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ವ್ಯಾಪಾರ- ವಹಿವಾಟು ವಾಣಿಜ್ಯ ಕೇಂದ್ರವಾಗಿದೆ. ಆದರೆ, ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ. 5 ಸಕ್ಕರೆ ಕಾರ್ಖಾನೆಗಳಿದ್ದರೂ ಉತ್ತಮ ರಸ್ತೆ ಇಲ್ಲದಿರುವುದರಿಂದ ಉದ್ಯಮಿದಾರರು ನಾನಾ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ.

    ಕೆಲ ತಿಂಗಳ ಹಿಂದೆ ಸುರಿದ ಧಾರಾಕಾರ ಮಳೆಯಿಂದಾಗಿ ಕಾಮಗಾರಿ ಕೈಗೊಳ್ಳಲು ವಿಳಂಬವಾಗಿರುವುದು ನಿಜ. ಈಗಾಗಲೇ ರಸ್ತೆಯಲ್ಲಿ ಬಿದ್ದಿರುವ ತಗ್ಗು-ಗುಂಡಿ ಮುಚ್ಚುವ ಕಾಮಗಾರಿ ಆರಂಭವಾಗಿದೆ.
    | ಜಯಾನಂದ ಹಿರೇಮಠ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ

    ಅಥಣಿ ಪಟ್ಟಣದಲ್ಲಿ ನನೆಗುದಿಗೆ ಬಿದ್ದಿರುವ ವರ್ತುಲ ರಸ್ತೆ, ಬೈಪಾಸ್ ರಸ್ತೆ ಕಾಮಗಾರಿ ವರ್ಷಗಳು ಕಳೆದರೂ ಅನುಷ್ಠಾನಕ್ಕೆ ಬಂದಿಲ್ಲ. ಸಚಿವರು ಮತ್ತು ಶಾಸಕರ ಭಾಷಣಕ್ಕೆ ಮಾತ್ರ ಕಾಮಗಾರಿ ಸೀಮಿತಗೊಂಡಿದೆ. ಕೂಡಲೇ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಲಿ.
    | ಗಿರೀಶ ಬುಟಾಳೆ ಜೆಡಿಎಸ್ ಮುಖಂಡ

    | ರಾಜು.ಎಸ್.ಗಾಲಿ ಅಥಣಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts