More

    ಕರ್ಫ್ಯೂಗೆ ಸಕಾರಾತ್ಮಕ ಸ್ಪಂದನೆ

    ಕರ್ಫ್ಯೂಗೆ ಸಕಾರಾತ್ಮಕ ಸ್ಪಂದನೆ

    ಚಿಕ್ಕಮಗಳೂರು: ಕರ್ಫ್ಯೂಗೆ ನಗರ ಪ್ರದೇಶದ ಜನರು ಸ್ಪಂದಿಸಿದರು. ಬೆಳಗ್ಗೆ ಎಂದಿನಂತೆ ಹಾಲು, ಮೊಸರು, ಹಣ್ಣು, ತರಕಾರಿ, ಮಾಂಸ, ದಿನಸಿ ಖರೀದಿಸಿದರು. ಆದರೆ ಗಾರೆ ಕೆಲಸಗಾರರು ಸೇರಿ ಹಲವು ಮಹಿಳಾ ಕಾರ್ವಿುಕರು ಕರ್ಫ್ಯೂ ಅರಿವಿಲ್ಲದೆ ಆಜಾದ್ ವೃತ್ತಕ್ಕೆ ಆಗಮಿಸಿ ಕೆಲಸಕ್ಕಾಗಿ ಯಾರಾದರೂ ಕರೆಯುತ್ತಾರೆಂಬ ನಿರೀಕ್ಷೆಯಲ್ಲಿದ್ದರು.

    ಯಾವುದೆ ವಾಹನ ಕಂಡರೂ ಓಡಿ ಹೋಗಿ ಕೆಲಸಕ್ಕೆ ಜನ ಬೇಕಾ ಎಂದು ಕೇಳುತ್ತಿದ್ದರು. 10 ಗಂಟೆ ಕಳೆದರೂ ಕೆಲಸಕ್ಕೆ ಕರೆಯದಿದ್ದರಿಂದ ಮನೆಗೆ ತೆರಳಿದರು.

    ನಗರದಲ್ಲಿ ಔಷಧ, ಹಣ್ಣು, ತರಕಾರಿ, ಮಾಂಸದಂಗಡಿಗಳು ಎಂದಿನಂತೆ ತೆರೆದಿದ್ದವು. ಬಹುತೇಕ ಮಾಂಸದಂಗಡಿಗಳಲ್ಲಿ ಜನ ಮುಗಿಬಿದ್ದು ಖರೀದಿಸಿದರು. ಕೆಎಸ್​ಆರ್​ಟಿಸಿ ಬಸ್, ಆಟೋ, ಟ್ಯಾಕ್ಸಿ ನಿಲ್ದಾಣಗಳು ಸಂಪೂರ್ಣ ಸ್ತಬ್ಧವಾಗಿದ್ದವು. ಕೋಟೆಕೆರೆ ಏರಿ ರಸ್ತೆ ಅಭಿವೃದ್ಧಿ ಕಾಮಗಾರಿ ಸೇರಿ ನಿರ್ಮಾಣ ಹಂತದ ಮನೆಗಳಲ್ಲಿ ಗಾರೆಯವರ ಕೆಲಸ ಸುಗಮವಾಗಿ ಸಾಗಿತು.

    ಹನುಮಂತಪ್ಪವೃತ್ತ, ಕೆಎಸ್​ಆರ್​ಟಿಸಿ ಬಸ್ ನಿಲ್ದಾಣ, ಬೋಳರಾಮೇಶ್ವರ ವೃತ್ತ, ಕತ್ರಿಮಾರಮ್ಮ ವೃತ್ತ, ಹಿರೇಮಗಳೂರು, ಪಾಲಿಟೆಕ್ನಿಕ್ ವೃತ್ತಗಳಲ್ಲಿ ಪೊಲೀಸರು ಬೆಳಗಿನಿಂದಲೇ ವಾಹನಗಳ ತಪಾಸಣೆ ನಡೆಸಿದರು. ಮಧ್ಯಾಹ್ನ ವಾಹನ ಸಂಚಾರ, ಜನ ಸಂಚಾರ ವಿರಳವಾಯಿತು. ಪೆಟ್ರೋಲ್ ಬಂಕ್​ಗಳು ತೆರೆದಿದ್ದರೂ ಗ್ರಾಹಕರು ಇರಲಿಲ್ಲ. ಹೊರ ಊರುಗಳಿಂದ ಆಗಮಿಸಿದ್ದ ಹಲವರು ಇಂದಿರಾ ಕ್ಯಾಂಟೀನ್​ನಲ್ಲಿ ಊಟ, ತಿಂಡಿ ಸೇವಿಸಿದರು.

    ಗ್ರಾಮೀಣ ಭಾಗವಾದ ಕೆಂಪನಹಳ್ಳಿ, ಹಂಪಾಪುರ, ಅಲ್ಲಂಪುರ, ಬೀಕನಹಳ್ಳಿ, ನೆಟ್ಟೆಕೆರೆಹಳ್ಳಿ, ಕುರುವಂಗಿ, ಕರ್ತಿಕೆರೆ, ಲಕ್ಯಾ, ಮರ್ಲೆ, ಮಲ್ಲೇದೇವರಹಳ್ಳಿ, ಅಂಬಳೆ ಇತರೆ ಪ್ರದೇಶದಲ್ಲಿ ರೈತರು ಹೊಲಗದ್ದೆಗಳಲ್ಲಿ ಕೃಷಿ ಕಾರ್ಯದಲ್ಲಿ ನಿರತರಾಗಿದ್ದರು. ಕೆಲವು ವರ್ತಕರು ಹೊಲಗಳಿಗೆ ಆಗಮಿಸಿ ತರಕಾರಿ ಕೊಂಡೊಯ್ದರು.

    ‘ನಾನು ಕೂಲಿ ಮಾಡದಿದ್ದರೆ ಮಕ್ಕಳ ವಿದ್ಯಾಭ್ಯಾಸ, ಕುಟುಂಬ ನಿರ್ವಹಣೆ ಕಷ್ಟವಾಗುತ್ತದೆ. ನಿತ್ಯ ದುಡಿದರೆ ಮಾತ್ರವೇ ನಮ್ಮ ಜೀವನ. ಇಲ್ಲದಿದ್ದರೆ ಉಪವಾಸ ಇರಬೇಕಾಗುತ್ತದೆ’ ಹೀಗೆ ಅಳಲು ತೋಡಿಕೊಂಡಿದ್ದು ಕೂಲಿಕಾರ್ವಿುಕ ಮಹಿಳೆ ಸುಧಾ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts