More

    ಕಿಟ್‌ಗಾಗಿ ಆಗ್ರಹಿಸಿ ಕಾರ್ಮಿಕರ ಪ್ರತಿಭಟನೆ

    ಬಸವನಬಾಗೇವಾಡಿ: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೋಂದಾಯಿತ ಕಾರ್ಮಿಕರ ಮಕ್ಕಳಿಗೆ ವಿತರಿಸುವ ಶಾಲಾ ಕಿಟ್‌ಗಳಲ್ಲಿ ಅಧಿಕಾರಿಗಳು ದಲ್ಲಾಳಿಗಳ ಮೂಲಕ ಹಣ ನೀಡಿದವರಿಗೆ ಮಾತ್ರ ಕಿಟ್ ನೀಡಲು ಮುಂದಾಗಿದ್ದಾರೆ ಎಂದು ಆರೋಪಿಸಿ ನೂರಾರು ಕಾರ್ಮಿಕರು ಕರ್ನಾಟಕ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಶನಿವಾರ ಕಾರ್ಮಿಕರ ನಿರೀಕ್ಷಕರ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

    ಪಟ್ಟಣದ ಕಾರ್ಮಿಕ ಇಲಾಖೆಯ ಕಚೇರಿ ಮುಂದೆ ಕೆಲಹೊತ್ತು ಪ್ರತಿಭಟನೆ ನಡೆಸಿ ಕಚೇರಿಗೆ ಬೀಗ ಜಡೆದು ಆಕ್ರೋಶ ವ್ಯಕ್ತಪಡಿಸಿದರು. ಬೆಳಗ್ಗೆಯಿಂದಲೇ ನೋಂದಾಯಿತ ಕಾರ್ಮಿಕರು ಅರ್ಜಿ ಸಲ್ಲಿಸಲು ಕಚೇರಿಗೆ ಆಗಮಿಸಿದ್ದರು. ಅಧಿಕಾರಿಗಳು ಕಿಟ್ ಖಾಲಿ ಆಗಿವೆ ಎಂದು ತಿಳಿಸಿದಾಗ ಆಕ್ರೋಶಗೊಂಡ ಕಾರ್ಮಿಕರು ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದರು. ಇದರಿಂದ ಕೆಲ ಹೊತ್ತು ಗೊಂದಲದ ವಾತಾವರಣ ಸೃಷ್ಟಿಯಾಯಿತು. ನಂತರ ಸ್ಥಳಕ್ಕೆ ಆಗಮಿಸಿದ ತಾಲೂಕಾ ಕಾರ್ಮಿಕ ನಿರೀಕ್ಷಕ ಕಾರ್ಮಿಕರೊಂದಿಗೆ ಚರ್ಚಿಸಿ ನೀಡಿರುವ ಟೋಕನ್‌ಗಳನ್ನ ರದ್ದುಗೊಳಿಸಲಾಗುವುದು. ಜು. 17ರವರಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವುದಾಗಿ ಭರವಸೆ ನೀಡಿ ವಾತವರಣ ತಿಳಿಗೊಳಿಸಿದರು.

    ಕರವೇ ಜಿಲ್ಲಾ ಯುವ ಘಟಕ ಅಧ್ಯಕ್ಷ ಅಶೋಕ ಹಾರಿವಾಳ ಮಾತನಾಡಿ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೋಂದಾಯಿತ ಕಾರ್ಮಿಕರ 6ರಿಂದ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಕಿಟ್‌ಗಳನ್ನು ಪಡೆಯಲು ಜು. 12ರಿಂದ 17ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಅಧಿಕಾರಿಗಳು ಜು. 15ರಂದು ಅರ್ಜಿ ಸಲ್ಲಿಸಲು ಕಚೇರಿಗೆ ಆಗಮಿಸಿದ ಕಾರ್ಮಿಕರಿಗೆ ಕಿಟ್‌ಗಳು ಖಾಲಿ ಆಗಿವೆ ಎಂದು ಹೇಳುತ್ತಿದ್ದಾರೆ. ಕಾರ್ಮಿಕರು ಕಳೆದ ಎರಡು ದಿನಗಳಿಂದ ಅರ್ಜಿ ಸಲ್ಲಿಸಲು ಕಚೇರಿಗೆ ಅಲೆಯುತ್ತಿದ್ದಾರೆ. ಅಲ್ಲದೇ ಅರ್ಜಿ ಸಲ್ಲಿಸುವ ದಿನಾಂಕ ಪೂರ್ಣಗೊಳ್ಳದೆ ಅಧಿಕಾರಿಗಳು ದಲ್ಲಾಳಿಗಳ ಮೂಲಕ ಹಣ ಪಡೆದು ಹಣ ನೀಡಿದವರಿಗೆ ಮಾತ್ರ ಕಿಟ್ ನೀಡುವ ಟೋಕನ್ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.

    ತಾಲೂಕಾ ಕಾರ್ಮಿಕ ನಿರೀಕ್ಷಕ ಐ.ಎಚ್. ಇನಾಮದಾರ ಮಾತನಾಡಿ, ಮೊದಲು ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮಕೈಗೊಳ್ಳುವ ಭರವಸೆ ನೀಡಿದರು.

    ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಹಾಗೂ ನೋಂದಾಯಿತ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts