More

    ಸಾಧಕಿಯರಿಗೆ ಸಲಾಂ; ಸೋಜುಗಾದ ಸೂಜು ಮಲ್ಲಿಗೆ ಅನನ್ಯಾ 

    ಸಾಧಕಿಯರಿಗೆ ಸಲಾಂ; ಸೋಜುಗಾದ ಸೂಜು ಮಲ್ಲಿಗೆ ಅನನ್ಯಾ ಮಕ್ಕಳ ಲಾಲನೆ, ಪಾಲನೆಯಿಂದ ಆರಂಭವಾಗಿ ಪತ್ನಿ, ಗೃಹಿಣಿ, ಅಧಿಕಾರಿ, ಕ್ರೀಡಾಪಟು, ಗಗನಯಾತ್ರಿವರೆಗೆ ಎಲ್ಲ ಕ್ಷೇತ್ರಗಳಲ್ಲೂ ತಮ್ಮದೇ ಛಾಪು ಮೂಡಿಸುತ್ತಿರುವ ಸ್ತ್ರೀ ಕುಲವನ್ನು ಸ್ಮರಿಸುವ, ಗೌರವ ಸಲ್ಲಿಸುವ ದಿನ ಇಂದು. ಅಂತಹ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಪ್ರತಿವರ್ಷ ವಿಶಿಷ್ಟ ಹಾಗೂ ಸ್ಮರಣೀಯವಾಗಿ ಆಚರಿಸುತ್ತಾ ಬಂದಿರುವ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ 24×7 ನ್ಯೂಸ್ ಈ ಬಾರಿಯೂ ವಿವಿಧ ಕ್ಷೇತ್ರಗಳ ಐವರು ಮಹಿಳಾ ಸಾಧಕಿಯರನ್ನು ಗುರುತಿಸಿ ವರ್ಷದ ಮಹಿಳೆ-2020 ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಪುರಸ್ಕಾರಕ್ಕೆ ಭಾಜನರಾದ ‘ಮಹಿಳಾ ಪಂಚರತ್ನ’ಗಳ ಕಿರು ಪರಿಚಯ ಇಲ್ಲಿದೆ. 

    ಐದನೇ ವಯಸ್ಸಿಗೆ ಗಾಯನ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ ಅನನ್ಯಾ ಭಟ್, ಅದ್ಭುತ ಗಾಯನದಿಂದ ಜನರ ಮನಸೂರೆಗೊಳಿಸಿರುವ ಪ್ರತಿಭೆ.

    ಮೈಸೂರಿನ ಖ್ಯಾತ ಜ್ಯೋತಿಷಿ ವಿಶ್ವನಾಥ ಭಟ್ ಮತ್ತು ರಂಗಭೂಮಿ ನಟಿ, ಗಾಯಕಿ ರೇವತಿ ಅವರ ಪುತ್ರಿಯಾಗಿರುವ ಅನನ್ಯಾ, ತನ್ನ ಹತ್ತನೇ ವಯಸ್ಸಿಗೆ ರಂಗಭೂಮಿಗೆ ಎಂಟ್ರಿ ಕೊಟ್ಟು, ಸಾಕಷ್ಟು ನಾಟಕಗಳಲ್ಲಿ ನಟಿಸಿದ್ದಾರೆ. ಖ್ಯಾತ ಗಾಯಕ ರಾಜು ಅನಂತಸ್ವಾಮಿ, ನಟ, ರಂಗಕರ್ವಿು ಮಂಡ್ಯ ರಮೇಶ್ ಮತ್ತು ಶಿವಾಜಿ ರಾವ್ ಜಾದವ್ ಅವರ ಪ್ರೋತ್ಸಾಹವೇ ಇರೊಳಗಿನ ಪ್ರತಿಭೆ ಅನಾವರಣಕ್ಕೆ ಮುಖ್ಯ ಕಾರಣ.

    ಮೈಸೂರಿನ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಕಾಂ ಪದವಿ ಪೂರೈಸಿರುವ ಇವರು, ನಾಗತಿಹಳ್ಳಿ ಚಂದ್ರಶೇಖರ್ ಅವರ ‘ಒಲವೇ ಜೀವನ ಲೆಕ್ಕಾಚಾರ’ ಸಿನಿಮಾದ ಹಾಡಿನ ಗಾಯನದ ಮೂಲಕ ಚಿತ್ರಜಗತ್ತಿಗೆ ಕಾಲಿಟರು. ಪವನ್​ಕುಮಾರ್ ನಿರ್ದೇಶನದ ‘ಲೂಸಿಯಾ’ ಚಿತ್ರದ ‘ನೀ ತೊರೆದ ಗಳಿಗೆಯಲಿ …’ ಎಂಬ ಹಾಡು ಇವರಿಗೆ ದೊಡ್ಡ ಬ್ರೇಕ್ ನೀಡಿತು. ಅಲ್ಲಿಂದ ಆರಂಭವಾದ ಸಿನಿ ಜರ್ನಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗೂ ಹಬ್ಬಿದೆ. ಸಿನಿಮಾದಲ್ಲಿ ಹಾಡುವುದರ ಜತೆಗೆ ‘ಯುವ ದಸರಾ’, ‘ಬೆಂಗಳೂರು ಗಣೇಶ ಉತ್ಸವ’, ‘ಗಗನ ಚುಕ್ಕಿ, ಭರ ಚುಕ್ಕಿ ಉತ್ಸವ’ ಸೇರಿ ಸಾಕಷ್ಟು ಸಾರ್ವಜನಿಕ ಕಾರ್ಯಕ್ರಮ ನೀಡಿದ್ದಾರೆ.

    ಇತ್ತೀಚೆಗೆ ಈಶ ಫೌಂಡೇಶನ್​ನಲ್ಲಿ ಇವರು ಹಾಡಿದ ‘ಸೋಜುಗಾದ ಸೂಜು ಮಲ್ಲಿಗೆ…’ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಿನಿಮಾದ ಗಾಯನಕ್ಕೆ ಹಲವು ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದಿರುವ ಅನನ್ಯಾ, 64ನೇ ಫಿಲಂಫೇರ್​ನಲ್ಲಿ ‘ಅತ್ಯುತ್ತಮ ಗಾಯಕಿ’ ಪ್ರಶಸ್ತಿ ಪಡೆದಿದ್ದಾರೆ. ‘ಎಬಿಸಿ’ಎಂಬ ಸ್ವಂತ ಬ್ಯಾಂಡ್ ಕಟ್ಟಿಕೊಂಡು ಅದರ ಮೂಲಕ ಜಾನಪದ ಗೀತೆಗಳಿಗೆ ವಿಭಿನ್ನ ಟಚ್ ನೀಡಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.

    ಗಾಯನದ ಜತೆಗೆ ನಟನೆಯಲ್ಲೂ ತೊಡಗಿಸಿಕೊಂಡು, ‘ಉರ್ವಿ’ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇನ್ನು ಇವರು ಅಭಿನಯಿಸಿರುವ ‘ಭೂತ ಕಾಲ’, ‘ಭ್ರಮಕ’ ಸಿನಿಮಾಗಳು ರಿಲೀಸ್ ಆಗಬೇಕಿವೆ. ಬೆಂಗಳೂರಿನ ಖ್ಯಾತ ಹವ್ಯಾಸಿ ನಾಟಕ ತಂಡವಾದ ‘ಬೆನಕ’ ವತಿಯಿಂದ ಪ್ರದರ್ಶನವಾಗುವ ‘ಹರಿಶ್ಚಂದ್ರ ಕಾವ್ಯ’, ‘ಹಯವದನ’, ‘ಗೋಕುಲ ನಿರ್ಗಮನ’, ‘ಜೋಕುಮಾರಸ್ವಾಮಿ’ ಸೇರಿ ಸಾಕಷ್ಟು ನಾಟಕಗಳಲ್ಲಿ ಇವರ ಅಭಿನಯ ಮನೋಜ್ಞ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts