More

    ಮಹಿಳಾ ಕಾಲೇಜು ದುರಸ್ತಿ ಆರಂಭ: ನ್ಯಾಯಮೂರ್ತಿ ಬೀರಪ್ಪ ಎಚ್ಚರಿಕೆಗೆ ಎಚ್ಚೆತ್ತ ಅಧಿಕಾರಿ ವರ್ಗ

    ಚಿಕ್ಕಬಳ್ಳಾಪುರ: ಹಲವು ವರ್ಷಗಳಿಂದಲೂ ಬಗೆಹರಿಯದೆ ಕಾಡುತ್ತಿರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಮಸ್ಯೆಗಳು, ನ್ಯಾಯಮೂರ್ತಿಗಳ ಎಚ್ಚರಿಕೆಯ ಚಾಟಿಗೆ ಪರಿಹಾರ ಕಾಣುವ ನಿರೀಕ್ಷೆ ಮೂಡಿದೆ.
    ವಿದ್ಯಾರ್ಥಿಗಳ ವಿದ್ಯಾರ್ಥಿಗಳ ಪತ್ರ ಚಳವಳಿ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರದಲ್ಲಿನ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಇತ್ತೀಚೆಗೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ನ್ಯಾಯಮೂರ್ತಿ ಬಿ.ವೀರಪ್ಪ ತಂಡವು ಭೇಟಿ ನೀಡಿ, ಅವ್ಯವಸ್ಥೆ ಮತ್ತು ಮೂಲ ಸೌಕರ್ಯ ಒದಗಿಸುವಲ್ಲಿ ಜಿಲ್ಲಾಡಳಿತದ ನಿರ್ಲಕ್ಷ್ಯ ಧೋರಣೆಗೆ ಕಿಡಿಕಾರಿತ್ತು. ಇದರಿಂದ ಅನುದಾನ ಬಿಡುಗಡೆ, ಕಾಮಗಾರಿ ನಿರ್ವಹಣೆ, ಕಿರಿದಾದ ಕಟ್ಟಡದಲ್ಲಿ ವಿದ್ಯಾರ್ಥಿನಿಯರು ಅನುಭವಿಸುತ್ತಿರುವ ಕಿರಿಕಿರಿಯನ್ನು ತಪ್ಪಿಸಲು ಪರ್ಯಾಯವಾಗಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೊಠಡಿ ವ್ಯವಸ್ಥೆ, ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಭೇಟಿ ಮತ್ತು ಸಭೆಗಳಲ್ಲಿ ಚರ್ಚೆಯ ಬೆಳವಣಿಗೆಗಳಾಗಿವೆ. ಇದರಿಂದ ತ್ವರಿತವಾಗಿ ಮಹಿಳಾ ಕಾಲೇಜು ನಿರ್ಮಾಣವಾಗಿ, ಹೊಸ ಕಟ್ಟಡದಲ್ಲಿ ತರಗತಿಗಳ ನಿರ್ವಹಣೆಯ ನಿರೀಕ್ಷೆ ಮೂಡಿದೆ.

    ಹೋರಾಟಗಳಿಗೆ ಕಡಿಮೆ ಇಲ್ಲ
    ಮಹಿಳಾ ಕಾಲೇಜಿನ ಅವ್ಯವಸ್ಥೆ ವಿರುದ್ಧ ನಡೆಸಿದ ಹೋರಾಟಗಳು ಕಡಿಮೆ ಏನಿಲ್ಲ. ಜನಪ್ರತಿನಿಧಿಗಳಿಗೆ ಮುತ್ತಿಗೆ, ನ್ಯಾಯಾಧೀಶರು ಮತ್ತು ಲೋಕಾಯುಕ್ತರಿಗೆ ದೂರು, ಪತ್ರ ಚಳವಳಿ, ಪ್ರತಿಭಟನಾ ಮೆರವಣಿಗೆ, ಕಾಲೇಜಿನ ಎದುರು ಧರಣಿ ಮಾಡಿ ಗಮನ ಸೆಳೆಯಲಾಗಿದೆ. ಆದರೂ ಇಲ್ಲಿನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. 10 ವರ್ಷಗಳಿಂದಲೂ ಹಲವರ ಎಚ್ಚರಿಕೆಗೂ ಬಗ್ಗದೆ ನಿರ್ಲಕ್ಷ್ಯ ತೋರಿದ್ದಾರೆ. ಈ ಬಾರಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಬಿಸಿ ಜೋರಾಗಿ ತಟ್ಟಿದ ಹಿನ್ನೆಲೆ ಪರಿಹಾರಕ್ಕೆ ಮತ್ತು ಕ್ರಮಕ್ಕೆ ಮುಂದಾಗಿದ್ದಾರೆ.

    2 ತಿಂಗಳ ಕಾಲಾವಧಿ
    ವಿದ್ಯಾರ್ಥಿಗಳ ಪತ್ರ ಚಳವಳಿ ಹಿನ್ನೆಲೆ ಯಲ್ಲಿ ಕಾಲೇಜಿ ಗೆ ಬಂದು ಸಮಸ್ಯೆ ಯನ್ನು ಆಲಿಸಿದ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು, ಎರಡು ತಿಂಗಳೊಳಗೆ ಹೊಸ ಕಟ್ಟಡ ಕಾಮಗಾರಿ ಪೂರ್ಣ, ವಿದ್ಯಾರ್ಥಿನಿಯರಿಗೆ ಪಾಠ ಪ್ರವಚನ ವ್ಯವಸ್ಥೆಯಾಗಬೇಕು. ಇಲ್ಲದಿದ್ದಲ್ಲಿ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿ, ಅಧಿಕಾರಿಗಳನ್ನು ನ್ಯಾಯಾಲಯದ ಮೆಟ್ಟಿಲು ಹತ್ತಿಸುವುದಾಗಿ ಎಚ್ಚರಿಕೆ ನೀಡಿದ್ದರು. ಈ ಮೂಲಕ ಕಾಲೇಜಿನಲ್ಲಿ ಸಮಸ್ಯೆಗಳಿಂದ ವ್ಯಾಸಂಗಕ್ಕೆ ಕಿರಿಕಿರಿ ಅನುಭವಿಸುತ್ತಿರುವ ವಿದ್ಯಾರ್ಥಿನಿಯರ ಅಳಲಿಗೆ ಧ್ವನಿಗೂಡಿಸಿದ್ದಾರೆ.

    ಕೊಠಡಿ ದುರಸ್ತಿಗೆ ಕ್ರಮ
    ಮಹಿಳಾ ಪದವಿ ಕಾಲೇಜಿನ ಕೊಠಡಿ ನಿರ್ಮಾಣಕ್ಕೆ ಈಗಾಗಲೇ 3.5 ಕೋಟಿ ರೂ. ಮಂಜೂರಾಗಿದೆ. ಆದರೆ, ಹೊಸ ಕಾಮಗಾರಿ ಆರಂಭಕ್ಕೂ ಮೊದಲು ನೀರು ನಿಲ್ಲುವುದಿಲ್ಲ ಎಂಬುದು ಖಾತ್ರಿ ಯಾದಾಗ ಹೆಚ್ಚುವರಿ ಕೊಠಡಿ ನಿರ್ಮಿಸಲಾಗುತ್ತಿದೆ. ಜತೆಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋರುವ ಕೆಲವು ಕೊಠಡಿಗಳ ದುರಸ್ತಿಗೂ ಕ್ರಮ ಕೈಗೊಳ್ಳಲಾಗುತ್ತಿದೆ.

    ಆಯುಕ್ತರ ಸಲಹೆ ಸೂಚನೆ
    ಇತ್ತೀಚೆಗೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಸಂಬಂಧಪಟ್ಟ ಪ್ರಾಂಶುಪಾಲರಿಗೆ ಸಲಹೆ ಸೂಚನೆ ನೀಡಿದ್ದಾರೆ. ಪ್ರಸ್ತುತ ತಾತ್ಕಾಲಿಕ ವ್ಯವಸ್ಥೆಯಾಗಿ ಕಾಲೇಜಿನ ತರಗತಿಯ ಕೊಠಡಿಗಳಲ್ಲಿ ಸರ್ಕಾರಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಿಗೆ ಪಾಠ ಪ್ರವಚನಗಳನ್ನು ನಡೆಸಲಾಗುತ್ತಿದೆ. ಇದರಿಂದ ಆಯುಕ್ತರು ಕೊಠಡಿಗಳ ಮೀಸಲು, ಎರಡು ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಪಾಳಿ ವ್ಯವಸ್ಥೆಯಲ್ಲಿ ಬೋಧನೆ, ಬೋಧನಾ ಸಿಬ್ಬಂದಿ ಸಮರ್ಪಕ ಕಾರ್ಯ ನಿರ್ವಹಣೆಗೆ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಹಾಗೆಯೇ ನ್ಯಾಯಮೂರ್ತಿಗಳು ಬಂದು ಎಚ್ಚರಿಕೆ ನೀಡುವ ಹಂತಕ್ಕೆ ಹೋಗದಿರಿ ಎಂದರು.

    2015ರಲ್ಲಿ ಭೂಮಿ ಪೂಜೆ
    ಕಳೆದ 2015ನೇ ಸಾಲಿನಲ್ಲಿ ಅಣಕನೂರು ಗ್ರಾಮಕ್ಕೆ ಹೊಂದಿರುವ ರಾಷ್ಟ್ರೀಯ ಹೆದ್ದಾರಿ 7ರ ಬೈಪಾಸ್ ಮೇಲ್ಸುತುವೆ ಸಮೀಪದ 2 ಎಕರೆ ಜಾಗದಲ್ಲಿ 10 ಕೋಟಿ ರೂಪಾಯಿ ವೆಚ್ಚದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ನಿರ್ಮಾಣಕ್ಕೆ ಚಾಲನೆ ನೀಡಲಾಯಿತು ಆದರೆ, 7 ವರ್ಷ ಕಳೆದರೂ ಅರ್ಧಂಬರ್ಧ ಕಾಮಗಾರಿಯಲ್ಲಿಯೇ ಉಳಿದಿದೆ. ಪ್ರತಿ ವರ್ಷ ಕಾಲೇಜಿನ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಮುಂದಿನ ಶೈಕ್ಷಣಿಕ ಸಾಲಿಗೆ ಹೊಸ ಕಟ್ಟಡ ಕಾರ್ಯಾರಂಭ ಎಂದೇಳುತ್ತಲೇ ಇದ್ದಾರೆ. ಆದರೆ, ಇದುವರೆಗೂ ಬಳಕೆ ಸಾಧ್ಯವಾಗಿಲ್ಲ. ಪ್ರಸ್ತುತ ಕಟ್ಟಡದಲ್ಲಿ ಆರು ಕೊಠಡಿ ನಿರ್ಮಾಣವಾಗಿವೆ. ನೀರು ನಿಲ್ಲದಂತೆ ನೆಲ ಸಮತಟ್ಟುಗೊಳಿಸುವಿಕೆ, ಕಾಂಪೌಂಡ್, ಹೆಚ್ಚುವರಿ ಕೊಠಡಿಗಳ ನಿರ್ಮಾಣದ ಕಾಮಗಾರಿ ನಡೆಯಬೇಕಾಗಿದೆ.

    ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರ ಎಚ್ಚರಿಕೆಯ ಬಳಿಕ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ನಿರ್ಮಾಣ ಕೆಲಸ ಚುರುಕು ಪಡೆದಿದೆ. ತ್ವರಿತವಾಗಿ ಸಮಸ್ಯೆ ಬಗೆಹರಿಯುವ ನಿರೀಕ್ಷೆ ಇದೆ. ಆದಷ್ಟು ಬೇಗ ವಿದ್ಯಾರ್ಥಿನಿಯರ ಶೈಕ್ಷಣಿಕ ಪ್ರಗತಿಯ ಹಿತದೃಷ್ಟಿಯಿಂದ ಕಾಲೇಜು ಕಟ್ಟಡ ಉದ್ಘಾಟನೆಯಾಗಲಿ ಎಂಬುದು ಎಲ್ಲರ ಒತ್ತಾಯವಾಗಿದೆ.

    ಎ.ಮಂಜುನಾಥ್,ಎಬಿವಿಪಿ ವಿಭಾಗೀಯ ಸಂಚಾಲಕ, ಚಿಕ್ಕಬಳ್ಳಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts