More

    ಹಕ್ಕುಪತ್ರಕ್ಕಾಗಿ ಮಹಿಳೆ ಅಲೆದಾಟ

    ಶ್ರೀಪತಿ ಹೆಗಡೆ ಹಕ್ಲಾಡಿ ಶೇಡಿಬೇರು

    ಪ್ರತಿಷ್ಠಿತರು, ದೊಡ್ಡ ಹಿಡುವಳಿದಾರು, ಜಾಗ, ಮನೆ ಇದ್ದವರು, ಒಂದೇ ಕುಟುಂಬದ ನಾಲ್ಕಾರು ಮಂದಿಗೆ, ರಾಜಕೀಯ ನಾಯಕರಿಗೆ, ಪಕ್ಷದ ಬೆಂಬಲಿಗರಿಗೆ, ಅಕ್ರಮ ಸಕ್ರಮದಲ್ಲಿ ಸುಲಭವಾಗಿ ಜಾಗ ಮಂಜೂರಾಗುತ್ತದೆ. ಆದರೆ ಬಡವರಿಗೆ ಮಂಜೂರಾದ ಜಾಗ ಉಳ್ಳವರ ಒತ್ತಡಕ್ಕೆ ಮಣಿದು ರದ್ದಾಗುತ್ತದೆ. ಅಕ್ರಮ ಸಕ್ರಮ ಬಡವರಿಗೆ ಶಾಪವಾದರೆ, ಉಳ್ಳವರಿಗೆ ವರವಾಗಿದೆ.

    ಹೊರರಾಜ್ಯದಿಂದ ಬಂದವರಿಗೆ ಅಕ್ರಮ ಸಕ್ರಮದಲ್ಲಿ ಜಾಗ ಮಂಜೂರಾಗಿ ಹತ್ತಾರು ಎಕರೆ ದೊಡ್ಡ ಹಿಡುವಳಿದಾರರಾಗಿದ್ದಾರೆ. ಪೂರ್ವಿಕರ ಕಾಲದಿಂದಲೂ ಸರ್ಕಾರಿ ಜಾಗದಲ್ಲಿ ಕೂತು, ಕೃಷಿ ಮಾಡಿಕೊಂಡಿದ್ದರೂ ಹಕ್ಕುಪತ್ರಕ್ಕೆ ಅಲೆದಾಡಬೇಕು. ಬೈಂದೂರು ತಾಲೂಕು ಹಳ್ಳಿಹೊಳೆ ಶೇಡಿಬೇರು ನಿವಾಸಿ ವನಜಾ ಕುಲಾಲ್ತಿ ಹಕ್ಕುಪತ್ರಕ್ಕಾಗಿ ವನವಾಸ ಅನುಭವಿಸುತ್ತಿದ್ದಾರೆ. ಇಂಥ ಹತ್ತಾರು ಕುಟುಂಬಗಳೂ ಇವೆ.

    ಸರ್ವೇ ನಂಬರ್ 182ರಲ್ಲಿ ವನಜಾ ಕುಲಾಲ್ತಿ ಎಂಬುವರ ತಾಯಿ ಹಾಗೂ ತಂದೆ ಹೆಸರಲ್ಲಿ ಜಾಗ ಮಂಜೂರಾಗಿದ್ದು, ನ್ಯಾಯಾಲಯದ ತೀರ್ಪು ವನಜಾ ಕುಲಾಲ್ತಿ ಪರವಾಗಿದ್ದರೂ ಅಧಿಕಾರಿಗಳು ಮಂಜೂರಾದ ಜಾಗವನ್ನೇ ರದ್ದು ಮಾಡಿದ್ದಾರೆ! ಮಂಜೂರಾದ ಜಾಗದ ಪಕ್ಕದಲ್ಲಿ ಅದೇ ಸರ್ವೇ ನಂಬರ್ ಉಳ್ಳವರಿಗೆ ಜಾಗ ಮಂಜೂರು ಮಾಡಿದ್ದಾರೆ. ಗೇರು ಲೀಸಿಗೆ ಅಂತ ಸರ್ಕಾರಿ ಜಾಗ ಪಡೆದು, ಅದು ರದ್ದಾಗಿದ್ದರೂ ಗೇರು ಕೃಷಿ ಹೆಸರಲ್ಲಿ ಅಡಕೆ ತೋಟ ಮಾಡಿ ನಿಯಮ ಮುರಿದಿದ್ದರೂ ಅಧಿಕಾರಿಗಳು ಸುಮ್ಮನಿದ್ದಾರೆ! ವನಜಾ ಕುಲಾಲ್ತಿಗೆ ಅಕ್ರಮ ಸಕ್ರಮದಲ್ಲಿ ಮಂಜೂರಾದ ಜಾಗವೂ ಇಲ್ಲ. 94ಸಿಯಲ್ಲಿ ಅರ್ಜಿ ಹಾಕಿದ 9 ಸೆಂಟ್ಸ್ ಜಾಗವೂ ಸಿಕ್ಕಿಲ್ಲ. ಹೀಗೆ ಹಕ್ಕುಪತ್ರಕ್ಕಾಗಿ ಹಲವಾರು ಕುಟುಂಬಗಳು ಕಾಯುತ್ತಿವೆ.

    ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಪೊನ್ನುರಾಜ್ ವನಜಾ ಕುಲಾಲ್ತಿ ಜಾಗದ ಬಗ್ಗೆ ಕುಂದಾಪುರ ಎಸಿಗೆ ಸ್ಪಷ್ಟ ನಿರ್ದೇಶನ ನೀಡಿ ಗೇರು ಲೀಸ್ ಪಡೆದ ವ್ಯಕ್ತಿಯ ಹಕ್ಕು ರದ್ದು ಮಾಡಿ, ಜಾಗ ಮಂಜೂರು ಮಾಡುವಂತೆ ಆದೇಶಿಸಿದ್ದರು. ಜಿಲ್ಲಾಧಿಕಾರಿ ಮಾಡಿದ ಆದೇಶ ಎರಡು ವರ್ಷ ಗೌಪ್ಯವಾಗಿ ಎಸಿ ಕಚೇರಿಯಲ್ಲೇ ಇತ್ತು. ನಂತರ ಅಂದಿನ ಎಸಿ ವನಜಾ ಕುಲಾಲ್ತಿಗೆ ಮಂಜೂರಾದ ಜಾಗ ರದ್ದು ಮಾಡಿದ್ದಾರೆ! ನನಗೆ ಮಂಜೂರಾದ ಜಾಗ ಕೊಡಿ ಎಂದು ಅಧಿಕಾರಿಗಳಲ್ಲಿ ವನಜಾ ಕುಲಾಲ್ತಿ ಮೊರೆಯಿಟ್ಟರೂ ನಿನಗೆ ಜಾಗ ಮಂಜೂರು ಮಾಡಿದರೆ ಎದುರು ಪಾರ್ಟಿ ಸುಪ್ರೀಂಕೋರ್ಟ್‌ಗೆ ಹೋಗುತ್ತಾರೆ ಎಂದು ಅಧಿಕಾರಿಗಳು ಭಯ ಬೀಳಿಸುತ್ತಿದ್ದಾರೆ.

    ಇಲಾಖೆಗಳಿಂದ ಬಡವರ ಮೇಲೆ ಪ್ರಹಾರ: ಒಂದು ಕಡೆ ದಕ್ಕಿದ ಜಾಗಕ್ಕೂ ಕನ್ನ ಬಿದ್ದರೆ, ಅಡಕೆ, ತೆಂಗು ಇನ್ನಿತರ ಕೃಷಿ, ಕುಸಿಯುವ ಹಂತದಲ್ಲಿರುವ ಮನೆ, ಮಂಜೂರಾದ ಮನೆ, ಹಣಕಟ್ಟಿ ಮಂಜೂರು ಮಾಡಿದ 94ಸಿಯಲ್ಲಿ 9 ಸೆಂಟ್ಸ್ ಜಾಗ ಕೈತಪ್ಪಿದೆ. ವನಜಾ ಕುಲಾಲ್ತಿಗೆ 94ಸಿಯಲ್ಲಿ ಜಾಗ ಮಂಜೂರಾಗದಿದ್ದರೂ ಅದೇ ಸರ್ವೇ ನಂಬರ್‌ನಲ್ಲಿ ಮತ್ತೊಬ್ಬರಿಗೆ ಜಾಗ ಮಂಜೂರು ಮಾಡಿದ್ದು, ವ್ಯವಸ್ಥೆ ಉಳ್ಳವರ ಪರ ಎನ್ನುವುದಕ್ಕೆ ಸಾಕ್ಷಿ. ತೋಟಕ್ಕೆ ನೀರು ಬಿಡಲು ಮೆಸ್ಕಾಂ ಇಲಾಖೆಗೆ 13 ಸಾವಿರ ರೂ. ಕಟ್ಟಿ ಸ್ಯಾಂಕ್ಷನ್ ಮಾಡಿ ಮೂರು ದಿನ ತೋಟಕ್ಕೆ ನೀರು ಹಾಯಿಸಿದ ಅನಂತರ ನೋಟಿಸ್ ನೀಡದೆ ಸಂಪರ್ಕ ಕಡಿತ ಮಾಡಲಾಗಿದೆ. ಇವರು ಹಾಕಿದ ಮೋಟಾರ್ ಪಂಪನ್ನು ಉಳ್ಳವರ ಮನೆ ಕೆಲಸ ಮಾಡುವವ ನನ್ನದು ಎತ್ತಿಕೊಂಡು ಹೋಗಿದ್ದಾನೆ! ಗೇರು ಲೀಸ್ ಪಡೆದ ಜಾಗದಲ್ಲಿ ಮರಮಟ್ಟು ಸವರಿ ಅಡಕೆ ಕೃಷಿ ಮಾಡಿದರೂ ತುಟಿ ಬಿಚ್ಚದ ಅರಣ್ಯ ಇಲಾಖೆ, ವನಜಾ ಕುಲಾಲ್ತಿ ಮನೆ ಮೇಲೆ ಬೀಳುವ ಮರ ತೆರವು ಮಾಡಿದ್ದಕ್ಕೆ ಕೇಸ್ ಜಡಿದಿದ್ದಾರೆ! ಉಳ್ಳವರ ಪರವಾಗಿ ಪೊಲೀಸ್, ಅರಣ್ಯ, ಕಂದಾಯ, ಮೆಸ್ಕಾಂ ವನಜಾ ಕುಲಾಲ್ತಿ ಇನ್ನಿಲ್ಲದಂತೆ ದಣಿಸಿದ್ದಾರೆ.

    ಸಾಮಾಜಿಕ ನ್ಯಾಯ, ಕಾನೂನು ಚೌಕಟ್ಟಿನೊಳಗೆ ಮಹಿಳೆಗೆ ನ್ಯಾಯ ಕೊಡುವುದು ಸರ್ಕಾರದ ಧರ್ಮ. ಅಧಿಕಾರಿಗಳ ಕಣ್ಣು ತಪ್ಪಿಂದಲೋ ಮತ್ತಾವುದೋ ಕಾರಣಕ್ಕೆ ಮಹಿಳೆಗೆ ಹಕ್ಕು ನಿರಾಕರಿಸುವುದು ತಪ್ಪಾಗುತ್ತಿದ್ದು, ವನಜಾ ಕುಲಾಲ್ತಿಗೆ ನ್ಯಾಯ ಒದಗಿಸಬೇಕು ಎಂದು ಉಡುಪಿ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದೇನೆ. ಜಿಲ್ಲಾಧಿಕಾರಿ ಜತೆ ವನಜಾ ಕುಲಾಲ್ತಿ ಸಮ್ಮುಖದಲ್ಲಿ ಚರ್ಚೆ ಮಾಡಿದ್ದು, ಮಹಿಳೆಗೆ ಮಂಜೂರಾದ ಒಂದೂವರೆ ಎಕರೆ ಜಾಗ ನೀಡುವಂತೆ ಸಲಹೆ ಮಾಡಿದ್ದೇನೆ. ಮಹಿಳೆಗೆ ಅನ್ಯಾಯ ಆಗದಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ.

    ಕೋಟ ಶ್ರೀನಿವಾಸ ಪೂಜಾರಿ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ

    ಮೂರು ದಶಕದಿಂದ ಜಾಗ ಮನೆ ಉಳಿಸಿಕೊಳ್ಳಲು ಹೋರಾಡಿ ಹೈರಾಣಾಗಿದ್ದೇನೆ. 1952ರಲ್ಲಿ ಈ ಜಾಗದಲ್ಲಿ ಬಂದು ಕೂತಿದ್ದು, 1882-83ರಲ್ಲಿ ತಂದೆ ಹಾಗೂ ತಾಯಿ ಹೆಸರಲ್ಲಿ ಜಾಗ ಮಂಜೂರಾಗಿದೆ. ನನಗೆ ಮಂಜೂರಾದ ಜಾಗ ಅಧಿಕಾರಿಗಳ ಕಣ್ಣುತಪ್ಪಿನಿಂದ ಮಂಜೂರಾಗಿದ್ದರೆ, ಅದೇ ಸರ್ವೇ ನಂಬರ್‌ನಲ್ಲಿ ಉಳಿದವರಿಗೆ ಹೇಗೆ ಜಾಗ ಮಂಜೂರು ಮಾಡಲಾಗಿದೆ? ಸಚಿವ ಕೋಟ ಶ್ರೀನಿವಾಸ ಪೂಜಾರಿ ನಮ್ಮ ಕಷ್ಟಕ್ಕೆ ನೆರವು ನೀಡಿದ್ದಾರೆ. ನನಗೆ ಮಂಜೂರಾದ ಜಾಗ ನನಗೆ ಸಿಗದಿದ್ದರೆ, ನಮ್ಮ ಮನೆಯ ಎಲ್ಲ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ.

    ವನಜಾ ಕುಲಾಲ್ತಿ, ಶೇಡಿಬೇರು ಹಕ್ಕಿಗಾಗಿ ಅಲೆದಾಡುತ್ತಿರುವ ಮಹಿಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts