More

    ಮಹಿಳಾ ಮೀಸಲಾತಿ ಶೇ. ೫೦ಕ್ಕೆ ಹೆಚ್ಚಿಸಲಿ

    ಚಿಕ್ಕಮಗಳೂರು: ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರು ಪುರುಷರಿಗೆ ಸರಿಸಮಾನರಾಗಿರುವುದರಿಂದ ಸಂವಿಧಾನದ ಆಶಯದಂತೆ ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿಯನ್ನು ಶೇ. ೫೦ಕ್ಕೆ ಹೆಚ್ಚಿಸಬೇಕು ಎಂದು ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಒತ್ತಾಯಿಸಿದರು.

    ನಗರದ ಬಿಎಸ್‌ಪಿ ಕಚೇರಿಯಲ್ಲಿ ಶನಿವಾರ ಜಿಲ್ಲಾ ಸಹೋದರತ್ವ ಸಮಿತಿ ಮತ್ತು ಮಹಿಳಾ ಸಂಘದಿಂದ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ ಮಹಿಳೆಯರು ಕೇವಲ ಅಡುಗೆ ಮನೆಗಷ್ಟೇ ಸೀಮಿತವಾಗಿದ್ದರು. ಆದರೆ ಇಂದು ಪುರುಷರಿಗೆ ಸರಿ ಸಮಾನವಾಗಿ ಶಿಕ್ಷಣವಂತರಾಗುವುದರ ಜತೆಗೆ ಎಲ್ಲ ಕ್ಷೇತ್ರಗಳಲ್ಲಿಯೂ ದುಡಿಯುತ್ತಿದ್ದಾರೆ. ಮೀಸಲಾತಿ ಹೆಚ್ಚಳವಾದರೆ ಅವರು ಇನ್ನೂ ಹೆಚ್ಚಿನ ಸಾಧನೆ ಮಾಡುತ್ತಾರೆ ಎಂದು ಅಭಿಪ್ರಾಯಪಟ್ಟರು.
    ಹೆಣ್ಣು ಸಮಾಜದ ಕಣ್ಣು. ಹೆಣ್ಣು ಹುಟ್ಟಿನ ಸಂಕೇತವಾಗಿರುವುದರಿಂದ ಅವಳಿಲ್ಲದೆ ಸಮಾಜವಿಲ್ಲ. ಹಾಗಾಗಿ ಸಮಾಜ ಹೆಣ್ಣಿಗೆ ಗೌರವ ನೀಡುವುದನ್ನು ಕಲಿಯಬೇಕು. ಅವಳ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು. ಮಹಿಳೆಯರ ನೋವಿಗೆ ಸ್ಪಂದಿಸಬೇಕು ಎಂದು ಸಲಹೆ ನೀಡಿದರು.
    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹೋದರತ್ವ ಸಮಿತಿ ಅಧ್ಯಕ್ಷ ಕೆ.ಬಿ.ಸುಧಾ, ಮಹಿಳೆಯರು ಕೇವಲ ಅಡುಗೆಮನೆಗಷ್ಟೇ ಸೀಮಿತವಾಗಬಾರದು. ಅದರಿಂದ ಹೊರಬಂದು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಬೆಳೆಯಬೇಕು ಎಂದು ಕರೆ ನೀಡಿದರು.
    ಜಿಲ್ಲಾ ಸಹೋದರತ್ವ ಸಮಿತಿ ಕಳೆದ ಎಂಟು ವರ್ಷಗಳಿಂದ ಮಹಿಳೆಯರನ್ನು ಸ್ವಾಭಿಮಾನಿಗಳನ್ನಾಗಿ ಮಾಡಿ ಅವರನ್ನು ಸದೃಢಗೊಳಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ ಎಂದು ತಿಳಿಸಿದರು
    ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ವಿಜೇತರಿಗೆ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು. ಬಿಎಸ್‌ಪಿ ವಿಧಾನಸಭಾ ಸಮಿತಿ ಕಾರ್ಯದರ್ಶಿ ವಸಂತ ಕುಮಾರ್, ಜಿಲ್ಲಾ ಸಹೋದರತ್ವ ಸಮಿತಿ ಉಪಾಧ್ಯಕ್ಷೆ ಕೆ.ಎಸ್.ಮಂಜುಳಾ, ಕಚೇರಿ ಕಾರ್ಯದರ್ಶಿ ಕಲಾವತಿ, ಬಿಎಸ್‌ಪಿ ನಗರಾಧ್ಯಕ್ಷ ವಿಜಯಕುಮಾರ್, ನವೀನ್ ಕುಮಾರಿ, ಗೀತಾ, ಅಸ್ಮಾ, ಪರ್ವೀನ್, ರೇಖಾ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts