More

    ನೀರಿಗಾಗಿ ಮಹಿಳೆಯರ ಪ್ರತಿಭಟನೆ

    ನಂಜನಗೂಡು: ತಾಲೂಕಿನ ದೇಬೂರು ಗ್ರಾಮದ ಬಡಾವಣೆಯೊಂದರಲ್ಲಿ ಕಳೆದ 15 ದಿನಗಳಿಂದ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಇದಕ್ಕೆ ಕಾರಣವಾದ ಪಂಪ್‌ಸೆಟ್ ದುರಸ್ತಿಗೊಳಿಸದೇ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ಮಂಗಳವಾರ ಸ್ಥಳೀಯ ಮಹಿಳೆಯರು ಪ್ರತಿಭಟನೆ ನಡೆಸಿದರು.

    ಖಾಲಿ ಬಿಂದಿಗೆಯೊಂದಿಗೆ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿದ ಮಹಿಳೆಯರು, ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

    ಗ್ರಾಮದ ವೀರಶೈವ ಬಡಾವಣೆಯಲ್ಲಿ ಕಳೆದ 15 ದಿನಗಳಿಂದ ಮಿನಿಟ್ಯಾಂಕ್‌ನ ಪಂಪ್‌ಸೆಟ್ ಕೆಟ್ಟಿದೆ. ಇದರಿಂದ ದೈನಂದಿನ ಚಟುವಟಿಕೆಗಳಿಗೆ ನೀರಿನ ಅಭಾವ ಉಂಟಾಗಿ ಗ್ರಾಮಸ್ಥರು ಪರದಾಡುವಂತಾಗಿದೆ. ಹೀಗಿದ್ದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮಿನಿಟ್ಯಾಂಕ್‌ನ ನೀರಿನ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ದುರಸ್ತಿ ಕಾರ್ಯ ಕೈಗೊಳ್ಳದೇ ಮೀನಮೇಷ ಎಣಿಸುತ್ತಿದ್ದಾರೆ ಎಂದು ಆಪಾದಿಸಿದರು.

    ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಗ್ರಾಮ ಪಂಚಾಯಿತಿಗೆ ಲಿಖಿತ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಪಿಡಿಒ ಅನ್ನು ಪ್ರಶ್ನಿಸಿದರೆ ನೀರುಗಂಟಿ ಸರಿಯಾಗಿ ಕೆಲಸಕ್ಕೆ ಬರುತ್ತಿಲ್ಲ ಎಂದು ಸಬೂಬು ಹೇಳುತ್ತಾರೆ. ಸರಿಯಾಗಿ ಕೆಲಸ ಮಾಡದ ನೀರುಗಂಟಿಯನ್ನು ಕೆಲಸದಿಂದ ಕಿತ್ತೊಗೆದು ಸಮರ್ಪಕವಾಗಿ ನೀರು ಪೂರೈಸುವವರನ್ನು ನೇಮಕ ಮಾಡಿಕೊಂಡು ನಿವಾಸಿಗಳಿಗೆ ನಿಯಮಿತವಾಗಿ ನೀರು ಸರಬರಾಜು ಮಾಡಬೇಕು. ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕವಾದರೂ ಪೂರೈಕೆ ಮಾಡಲಿ ಎಂದು ಆಗ್ರಹಿಸಿದರು.
    ಮಹಿಳೆಯರ ಪ್ರತಿಭಟನೆ ವಿಷಯ ತಿಳಿಯುತ್ತಿದ್ದಂತೆ ಪಿಡಿಒ ಕಚೇರಿಯತ್ತ ಬರಲೇ ಇಲ್ಲ. ಪ್ರತಿಭಟನಕಾರರು ಕಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಿ ಪ್ರತಿಭಟನೆ ಅಂತ್ಯಗೊಳಿಸಿದರು.

    ಪ್ರತಿಭಟನೆಯಲ್ಲಿ ಶಿವು, ಸಂತೋಷ್, ಶಿವರಾಜು, ಮಹೇಶ್, ರಾಜಮ್ಮ, ಪ್ರೇಮಾ, ಸುಧಾ, ಜಾನಕಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts