More

    ಪತಿ ಎದುರೇ ಪತ್ನಿಯ ಅಪಹರಣ: ಪೊಲೀಸರಿಂದಲೇ ನಡೆಯಿತು ಕಿಡ್ನ್ಯಾಪ್?

    ರಾಣೆಬೆನ್ನೂರ: ಪ್ರೀತಿಸಿ ಮದುವೆಯಾದ ಯುವ ದಂಪತಿ ದೇವಸ್ಥಾನಕ್ಕೆ ಹೋಗಿ, ಬಳಿಕ ಸಂಬಂಧಿಕರ ಮನೆಯಲ್ಲಿ ತಂಗಿದ್ದರು. ಅಲ್ಲಿಗೆ ಪೊಲೀಸರೆಂದು ಹೇಳಿಕೊಂಡು ಬಂದ ನಾಲ್ವರು, ಪತಿ ಎದುರೇ ಪತ್ನಿಯನ್ನು ಅಪಹರಿಸಿಕೊಂಡು ಹೋದ ಘಟನೆ ಹರಪನಹಳ್ಳಿ ತಾಲೂಕಿನ ಬೆಣ್ಣಿಹಳ್ಳಿಯಲ್ಲಿ ನಡೆದಿದೆ.

    ರಾಣೆಬೆನ್ನೂರಿನ ಉಮಾಶಂಕರ ನಗರದ ನಿವಾಸಿ ದಿವ್ಯಶ್ರೀ ವೀರೇಶ ಅಡಿವೆಪ್ಪನವರ (20) ಅಪಹರಣವಾದ ಯುವತಿ.

    ಘಟನೆಯ ವಿವರ: ಪತಿ ವೀರೇಶ ಹಾಗೂ ದಿವ್ಯಶ್ರೀ ಮಾ. 27ರಂದು ಸ್ವಂತ ಕಾರಿನಲ್ಲಿ ಹರಪನಹಳ್ಳಿ ತಾಲೂಕಿನ ಕೊಟ್ಟೂರೇಶ್ವರ ದೇವಸ್ಥಾನಕ್ಕೆ ತೆರಳಿದ್ದರು. ದೇವರ ದರ್ಶನದ ಬಳಿಕ ಹರಪನಹಳ್ಳಿ ತಾಲೂಕಿನ ಬೆಣ್ಣಿಹಳ್ಳಿಯ ಸಂಬಂಧಿಕರ ಮನೆಯಲ್ಲಿ ತಂಗಿದ್ದರು. ಈ ಸಮಯದಲ್ಲಿ ಇನೋವಾ ಕಾರಿನಲ್ಲಿ ಬಂದ ನಾಲ್ವರು ‘ನಾವು ಶಿವಮೊಗ್ಗ ಪೊಲೀಸರು. ನಿಮ್ಮನ್ನು ವಿಚಾರಣೆ ಮಾಡುವುದಿದೆ ಬನ್ನಿ’ ಎಂದು ಕರೆದಿದ್ದಾಗಿ ವೀರೇಶ ತಿಳಿಸಿದ್ದಾರೆ.

    ‘ಇದಕ್ಕೆ ಒಪ್ಪದಿದ್ದಾಗ ನಮ್ಮನ್ನು ಬೆದರಿಸಿ ದೌರ್ಜನ್ಯದಿಂದ ದಿವ್ಯಶ್ರೀಯನ್ನು ಎಳೆದುಕೊಂಡು ತಮ್ಮ ಇನೋವಾ ಕಾರಿನಲ್ಲಿ ಹತ್ತಿಸಿಕೊಂಡರು. ನನಗೆ ಕಾರು ಫಾಲೋ ಮಾಡುವಂತೆ ಹೇಳಿದರು. ಆದರೆ, ಹರಿಹರದ ಬಳಿ ಎನ್​ಎಚ್-04 ರಸ್ತೆಗೆ ಬರುತ್ತಿದ್ದಂತೆ ದಾರಿ ತಪ್ಪಿಸಿ, ದಿವ್ಯಶ್ರೀಯನ್ನು ಅಪಹರಿಸಿಕೊಂಡು ಹೋಗಿದ್ದಾರೆ’ ಎಂದು ಪತಿ ವೀರೇಶ ರಾಣೆಬೆನ್ನೂರಿನ ಶಹರ ಠಾಣೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    ಪ್ರೀತಿಸಿ ಮದುವೆಯಾಗಿದ್ದ ಜೋಡಿ: ವೀರೇಶ ವೃತ್ತಿಯಲ್ಲಿ ಕಾರು ಚಾಲಕ. ಎರಡು ವರ್ಷದ ಹಿಂದೆ ಶಿವಮೊಗ್ಗದ ದಿವ್ಯಶ್ರೀ ಮನೆಯ ಪಕ್ಕದವರ ಕಾರು ಓಡಿಸಿಕೊಂಡಿದ್ದ. ಈ ಸಮಯದಲ್ಲಿ ದಿವ್ಯಶ್ರೀ ಪರಿಚಯವಾಗಿತ್ತು. ನಂತರ ಇಬ್ಬರ ನಡುವೆ ಸ್ನೇಹ ಬೆಳೆದು ಪ್ರೀತಿಗೆ ತಿರುಗಿತ್ತು. 2020 ಜೂನ್ 28ರಂದು ವೀರೇಶನ ಮನೆಯ ಮುಂದೆ ಇಬ್ಬರ ಮದುವೆ ಕೂಡ ಮಾಡಲಾಗಿತ್ತು. ಆದರೆ ಇದಕ್ಕೆ ದಿವ್ಯಶ್ರೀ ಮನೆಯವರ ವಿರೋಧವಿತ್ತು. ಕಳೆದ ಮಾ. 10ರಂದು ದಂಪತಿ ತಾಲೂಕು ಉಪ ನೋಂದಣಿ ಕಚೇರಿಯಲ್ಲಿ ವಿವಾಹ ನೋಂದಣಿ ಸಹ ಮಾಡಿಸಿಕೊಂಡಿದ್ದಾರೆ. ಇದಾದ ನಂತರ ಇಬ್ಬರೂ ಯುವತಿಯ ಮನೆಗೂ ಹೋಗಿ ಬಂದಿದ್ದಾರೆ.

    ಕಣ್ಣೀರಿಡುತ್ತಿರುವ ಪತಿ: ‘ದಿವ್ಯಶ್ರೀ ಐದು ತಿಂಗಳ ಗರ್ಭಿಣಿಯಾಗಿದ್ದಾಳೆ. ಹೀಗಾಗಿ, ದೇವಸ್ಥಾನಕ್ಕೆ ಹೋಗಿದ್ದೇವು. ಆದರೆ, ಏಕಾಏಕಿ ನನ್ನ ಪತ್ನಿಯನ್ನು ಅಪಹರಣ ಮಾಡಿರುವುದು ಆತಂಕ ಹುಟ್ಟಿಸಿದೆ. ಅಪಹರಣದ ಬಳಿಕ ಆಕೆಯ ಮನೆಗೆ ಹೋಗಿ ನೋಡಿದರೆ, ನಮ್ಮ ಅತ್ತೆ ಜಯಶೀಲಾ ಕಟಗಿ ಕೂಡ ಮನೆಯಲ್ಲಿರಲಿಲ್ಲ’ ಎಂದು ವೀರೇಶ ಕಣ್ಣೀರಿಡುತ್ತಿದ್ದಾರೆ.

    ಹಿರಿಯ ಅಧಿಕಾರಿಯ ಕೈವಾಡ ಶಂಕೆ

    ದಿವ್ಯಶ್ರೀ ಕುಟುಂಬದವರೊಬ್ಬರು ಪೊಲೀಸ್ ಇಲಾಖೆಯ ಉನ್ನತ ಹುದ್ದೆಯಲ್ಲಿದ್ದಾರೆ. ಈವರೆಗೂ ಶಿವಮೊಗ್ಗದಲ್ಲಿದ್ದ ಅವರು ಇದೀಗ ಬೆಂಗಳೂರಿಗೆ ವರ್ಗಾವಣೆ ಆಗಿದ್ದಾರೆ. ಅವರೇ ಪೊಲೀಸರನ್ನು ಬಳಸಿಕೊಂಡು ದಿವ್ಯಶ್ರೀಯನ್ನು ಅಪಹರಣ ಮಾಡಿದ್ದಾರೆ ಎಂದು ವೀರೇಶ ‘ವಿಜಯವಾಣಿ’ ಎದುರು ಆರೋಪಿಸಿದರು.

    ನಾವು ಪ್ರೀತಿಸಿ ಮದುವೆಯಾಗಿರುವುದು ದಿವ್ಯಶ್ರೀ ಕುಟುಂಬದ ಪೊಲೀಸ್ ಅಧಿಕಾರಿಯೊಬ್ಬರಿಗೆ ಇಷ್ಟವಿರಲ್ಲಿಲ್ಲ. ಆದ್ದರಿಂದ, ಅವರೇ ಆಕೆಯನ್ನು ಅಪಹರಣ ಮಾಡಿಸಿದ್ದಾರೆ. ಈ ಬಗ್ಗೆ ಪೊಲೀಸರು ಸೂಕ್ತ ಕ್ರಮ ಕೈಗೊಂಡು ನನಗೆ ನ್ಯಾಯ ಒದಗಿಸಿಕೊಡಬೇಕು.
    | ವೀರೇಶ ಅಡಿವೆಪ್ಪನವರ, ದಿವ್ಯಶ್ರೀ ಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts