More

    ವಿದ್ಯಾರ್ಥಿಗಳಿಗೆ ‘ಪದವಿ’ ಸಂಕಷ್ಟ

    ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗಳು ಪದೇಪದೆ ಮುಂದೂಡಿಕೆ ಆಗುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಕೋರ್ಸ್ ಆಯ್ಕೆಗೆ ಸಮಸ್ಯೆಯಾಗಿದೆ.

    ಖಾಸಗಿ ವಿಶ್ವವಿದ್ಯಾಲಯಗಳು, ಸ್ವಾಯತ್ತ ಕಾಲೇಜುಗಳು ಮಾರ್ಚ್‌ನಲ್ಲೇ ಪರೀಕ್ಷೆ ನಡೆಸಿ ಎಲ್ಲ ಪ್ರಕ್ರಿಯೆಗಳನ್ನೂ ಸಾಂಗವಾಗಿ ಮುಗಿಸಿವೆ. ಆದರೆ ಮಂಗಳೂರು ವಿವಿ ಅಧೀನ ಕಾಲೇಜುಗಳ (ಸರ್ಕಾರಿ/ಖಾಸಗಿ) ವಿದ್ಯಾರ್ಥಿಗಳು ಮಾತ್ರ ಇನ್ನೂ ಪರೀಕ್ಷೆ ಪೂರ್ಣಗೊಳಿಸಲಾಗದೆ ನಿರಾಶೆಯಲ್ಲಿದ್ದಾರೆ.

    ಹೆಚ್ಚಿನ ಕಾಲೇಜುಗಳಲ್ಲಿ ಪದವಿ ಅಂತಿಮ ಸೆಮಿಸ್ಟರ್ ತರಗತಿಗಳೇ ಪೂರ್ಣಗೊಂಡಿಲ್ಲ. ಕೆಲವು ಕಾಲೇಜುಗಳು ಮಾತ್ರ ಪಾಠ ಮುಗಿಸಿವೆ. ಇನ್ನು ಕೆಲವು ಕಾಲೇಜುಗಳು ಓದಿಕೊಳ್ಳಿ ಎಂದು ಹೇಳಿ ಪಾಠ ಪೂರ್ಣಗೊಳಿಸಿದಂತೆ ಮಾಡಿವೆ. ಪಾಠ ಮುಗಿಸಿಯೇ ಪರೀಕ್ಷೆ ನಡೆಸುವುದಾದರೆ ವಿಳಂಬವಾಗಬಹುದು ಎನ್ನಲಾಗುತ್ತಿದೆ. ಈ ನಡುವೆ, ಕೆಲವು ಪ್ರತಿಷ್ಠಿತ ಸಂಸ್ಥೆಗಳು ಪದವಿ ಮುಗಿಯುವ ಮೊದಲೇ ವಿದ್ಯಾರ್ಥಿಗಳನ್ನು ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಪ್ರವೇಶ ಪರೀಕ್ಷೆಗಳ ಮೂಲಕ ಬರಮಾಡಿಕೊಂಡಿವೆ. ಹೀಗೆ ಬೇರೆ ವಿವಿಗಳಲ್ಲಿ ಓದಲು ಮುಂದಾದವರಿಗೆ ಪರೀಕ್ಷೆ ನಡೆಯದೆ ಸಮಸ್ಯೆಯಾಗುತ್ತಿದೆ.

    ‘ಅಸ್ಸಾಂನ ಗುವಾಹಟಿ ಐಐಟಿಯಲ್ಲಿ ಎಂಎಸ್ಸಿಗೆ ಸೇರ್ಪಡೆಯಾಗಿದ್ದೇನೆ, ಅಲ್ಲಿ ಸದ್ಯ ಆನ್‌ಲೈನ್ ತರಗತಿ ನಡೆಯುತ್ತಿದೆ, ಈ ಸೆಪ್ಟೆಂಬರ್ ಅಂತ್ಯದ ವೇಳೆಗೆ ಮಿಡ್ ಸೆಮಿಸ್ಟರ್ ಪರೀಕ್ಷೆಗಳು ನಡೆಯಲಿವೆ. ಆದರೆ ನಾನು ಕಲಿಯುತ್ತಿರುವ ಕಾಲೇಜಿನಲ್ಲಿ ಬಿಎಸ್ಸಿ ಅಂತಿಮ ಸೆಮಿಸ್ಟರ್(6ನೇ) ಪರೀಕ್ಷೆಗಳೇ ಇನ್ನೂ ನಡೆದಿಲ್ಲ’ ಎಂದು ಮಂಗಳೂರಿನ ವಿದ್ಯಾರ್ಥಿನಿಯೊಬ್ಬರು ಪ್ರತಿಕ್ರಿಯಿಸಿದರು. ಈ ರೀತಿ ಹೊರಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗಾಗಿಯಾದರೂ ಪ್ರತ್ಯೇಕ ಪರೀಕ್ಷೆ ನಡೆಸಿದರೆ ಉತ್ತಮ. ಕೆಲವೊಮ್ಮೆ ಕ್ರೀಡಾಪಟುಗಳ ವಿಚಾರದಲ್ಲಿ ಇಂತಹ ಕ್ರಮ ತೆಗೆದುಕೊಳ್ಳುವುದಿದೆ ಎಂದು ಅವರು ಹೇಳುತ್ತಾರೆ.

    ಒಂದೆಡೆ ವಿಶ್ವವಿದ್ಯಾಲಯವೂ ಪದೇಪದೆ ಸರ್ಕಾರದ ಸೂಚನೆಯಂತೆ ಪರೀಕ್ಷೆಗಳನ್ನು ಮುಂದೂಡಿ ಸಂಕಷ್ಟದಲ್ಲಿದೆ. ವಿದ್ಯಾರ್ಥಿಗಳೂ ಬೇಸತ್ತಿದ್ದಾರೆ. ಕೆಲವು ವಿದ್ಯಾರ್ಥಿಗಳು ತಮ್ಮ ಅಂತಿಮ ಪದವಿ ಸೆಮಿಸ್ಟರ್ ಪೂರ್ಣವಾಗುವ ಮೊದಲೇ ಮುನ್ನೆಚ್ಚರಿಕೆ ಕ್ರಮವಾಗಿ ಬೇರೆ ವಿಶ್ವವಿದ್ಯಾಲಯಗಳಿಗೆ, ಐಐಟಿಯಂತಹ ಸಂಸ್ಥೆಗಳಿಗೆ ಪ್ರವೇಶ ಪಡೆದಿದ್ದಾರೆ, ಅವರೀಗ ಪದವಿ ಪರೀಕ್ಷೆ ನಡೆಯದ ಕಾರಣ ತಮ್ಮ ಭವಿಷ್ಯವೇನು ಎಂಬ ಗೊಂದಲದಲ್ಲಿದ್ದಾರೆ.

    ಆನ್‌ಲೈನ್ ಪರೀಕ್ಷೆ ಸವಾಲು: ಮಂಗಳೂರು ವಿಶ್ವವಿದ್ಯಾಲಯ ಆನ್‌ಲೈನ್ ಪರೀಕ್ಷೆ ನಡೆಸಲು ಸಿದ್ಧತೆಯೇನೋ ನಡೆಸಿದೆ. ಅದು ಕಷ್ಟವೂ ಅಲ್ಲ. ಆದರೆ ಹಲವು ವಿದ್ಯಾರ್ಥಿಗಳು ಇಂಟರ್ನೆಟ್ ಸೌಲಭ್ಯವಿಲ್ಲದ ಕಾರಣ ತಮಗೆ ಆನ್‌ಲೈನ್ ತರಗತಿಗೆ ಸೇರುವುದೇ ಕಷ್ಟ ಎನ್ನುತ್ತಿದ್ದಾರೆ, ಹಾಗಿರುವಾಗ ಆನ್‌ಲೈನ್ ಪರೀಕ್ಷೆ ನಡೆಸಿದರೆ ಅವರಿಗೆ ಕಷ್ಟವಾಗಬಹುದು ಎನ್ನುವ ಹಿಂಜರಿಕೆ ವಿವಿ ಆಡಳಿತದ್ದು.

    ಸದ್ಯ ಮಂಗಳೂರು ವಿವಿಯ ವತಿಯಿಂದ 1, 3, 5ನೇ ಸೆಮಿಸ್ಟರ್ ಪರೀಕ್ಷೆಗಳು ಪ್ರಗತಿಯಲ್ಲಿದ್ದು, ಸೆಪ್ಟೆಂಬರ್ 7ರೊಳಗೆ ಪೂರ್ಣಗೊಳ್ಳಲಿವೆ. ಆದರೆ ಪದವಿ 6ನೇ ಸೆಮಿಸ್ಟರ್ ಪರೀಕ್ಷೆ ನಡೆಸುವುದಕ್ಕೆ ತಕ್ಷಣ ಸಾಧ್ಯವಿಲ್ಲ. ಯಾಕೆಂದರೆ ಅನೇಕ ಕಾಲೇಜುಗಳಲ್ಲಿ ಇನ್ನೂ 6ನೇ ಸೆಮಿಸ್ಟರ್ ಬೋಧನೆ ನಡೆಯುತ್ತಿದೆ. ಸಿಲೆಬಸ್ ಪೂರ್ಣಗೊಳಿಸದೆ ಪರೀಕ್ಷೆ ನಡೆಸಲಾಗದು.

    27ರಂದು ನಿರ್ಧಾರ?: ಮಂಗಳೂರು ವಿವಿ ಸಿಂಡಿಕೇಟ್ ಸಭೆ ಆ.27ರಂದು ನಡೆಯಲಿದ್ದು, ಅದರಲ್ಲಿ ಪದವಿ ಕೊನೆಯ ಸೆಮಿಸ್ಟರ್ ಪರೀಕ್ಷೆ ನಡೆಸುವ ಬಗ್ಗೆ ಸದಸ್ಯರ ಸಲಹೆ ಪಡೆದುಕೊಂಡು ಮುಂದಿನ ಹೆಜ್ಜೆ ಇರಿಸಲು ವಿವಿ ಆಡಳಿತ ತೀರ್ಮಾನಿಸಿದೆ.

    ಸ್ವಾಯತ್ತ ಕಾಲೇಜುಗಳು ಮುಂದೆ: ಮಂಗಳೂರು ವಿವಿ ವ್ಯಾಪ್ತಿಯಲ್ಲಿ 153 ಮಂಗಳೂರು ವಿವಿ ಸಂಯೋಜಿತ ಹಾಗೂ 36 ಸರ್ಕಾರಿ ಕಾಲೇಜುಗಳು ಇವೆ. ಐದು ಸ್ವಾಯತ್ತ ಕಾಲೇಜುಗಳಿವೆ. ಸ್ವಾಯತ್ತ ಕಾಲೇಜುಗಳು (ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ, ಮಂಗಳೂರಿನ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ, ಸೇಂಟ್ ಆಗ್ನೆಸ್, ಸೇಂಟ್ ಅಲೋಶಿಯಸ್ ಮತ್ತು ಸೇಂಟ್ ಆನ್ಸ್ ಕಾಲೇಜ್ ಆಫ್ ಎಜುಕೇಶನ್) ಪದವಿ ಪರೀಕ್ಷೆ ನಡೆಸಿದ್ದು, ಆ ಕಾಲೇಜುಗಳಲ್ಲಿ ಓದಿದ ವಿದ್ಯಾರ್ಥಿಗಳಿಗೆ ಮುಂದಿನ ಕೋರ್ಸ್ ಆಯ್ಕೆಗೆ ಅನುಕೂಲವಾಗಿದೆ. ಹೆಚ್ಚಿನ ಖಾಸಗಿ ವಿವಿಗಳೂ ಪರೀಕ್ಷೆ ಮುಗಿಸಿರುವುದರಿಂದ ಅಲ್ಲಿನ ವಿದ್ಯಾರ್ಥಿಗಳು ಇತರೆಡೆ ಪ್ರವೇಶ ಪಡೆದುಕೊಂಡಿದ್ದಾರೆ.

    ನಮಗೆ ಇನ್ನು ತ್ವರಿತವಾಗಿ ಪದವಿಯ 6ನೇ ಹಾಗೂ ಸ್ನಾತಕೋತ್ತರ ಪದವಿಯ 4ನೇ ಸೆಮಿಸ್ಟರ್ ಪರೀಕ್ಷೆ ಮುಗಿಸಬೇಕಿದೆ, ಅದಕ್ಕೆ ಭೌತಿಕ ಪರೀಕ್ಷೆ ನಡೆಸಿ ಮೌಲ್ಯಮಾಪನ ಮಾಡುವುದು ತಡವಾಗಬಹುದು. ಹಾಗಾಗಿ ಆನ್‌ಲೈನ್ ನಡೆಸುವುದೇ ಉತ್ತಮ ಎಂದು ಕಾಣುತ್ತದೆ. ಸಿಂಡಿಕೇಟ್ ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ.

    ಪ್ರೊ.ಪಿ.ಎಸ್.ಯಡಪಡಿತ್ತಾಯ, ಕುಲಪತಿ, ಮಂಗಳೂರು ವಿವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts