More

    ಮುಸ್ಲಿಂ ಗುರು ಮೇಲಿನ ಪ್ರಕರಣ ಹಿಂಪಡೆಯಿರಿ

    ಶಿವಮೊಗ್ಗ: ಗುಜರಾತ್‌ನಲ್ಲಿ ವಿವಾದಾತ್ಮಕ ಭಾಷಣದ ಆರೋಪದಡಿ ಬಂಧಿಸಲಾದ ಮುಸ್ಲಿಂ ಗುರು ಮುಫ್ತಿ ಸಲ್ಮಾನ್ ಅಝ್ಹರಿ ಅವರ ಬಂಧನ ಖಂಡಿಸಿ ಗುರುವಾರ ಮರ್ಕಜಿ ಸುನ್ನಿ ಜಾಮಿಯಾ ಮಸೀದಿ ಜಿಲ್ಲಾ ಘಟಕ ಸದಸ್ಯರು ಈದ್ಗಾ ಮೈದಾನದಲ್ಲಿ ಪ್ರತಿಭಟನೆ ನಡೆಸಿದರು.

    ಮುಫ್ತಿ ಸಲ್ಮಾನ್ ಅಝ್ಹರಿ ಅವರು ತಮ್ಮ ಚಿಂತನೆಗಳನ್ನು ಗಜಲ್ ಮೂಲಕ ವ್ಯಕ್ತಪಡಿಸಿದ್ದಾರೆ. ಅದರಲ್ಲಿ ಯಾವುದೇ ದ್ವೇಷಪೂರಿತ ವಿಚಾರಗಳ ಕುರಿತ ಮಾತನಾಡಿಲ್ಲ. ಆದರೆ ಭಾಷಣದಲ್ಲಿ ಒಂದು ಧರ್ಮವನ್ನು ದ್ವೇಷ ಮಾಡುವ ಅಂಶಗಳಿವೆ ಎಂದು ಆರೋಪಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ದೂರಿದರು. ಸುಳ್ಳು ಪ್ರಕರಣದಲ್ಲಿ ಸಿಲುಕಿಸುವ ಮೂಲಕ ಮುಸ್ಲಿಂ ಸಮುದಾಯವನ್ನು ಹತ್ತಿಕ್ಕುವ ಹುನ್ನಾರ ನಡೆಯುತ್ತಿದೆ. ದೇಶದಲ್ಲಿ ಮುಸ್ಲಿಮರಿಗೆ ಬದುಕುವ ಹಕ್ಕು ಕಸಿದುಕೊಳ್ಳಲಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಮಾತನಾಡುವ ಹಕ್ಕಿದೆ. ಸುಳ್ಳು ಪ್ರಕರಣ ದಾಖಲಿಸುವ ಮೂಲಕ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗುತ್ತಿದೆ. ಕೂಡಲೆ ಅವರ ವಿರುದ್ಧ ಹೂಡಿರುವ ಪ್ರಕರಣ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
    ದೇಶದಲ್ಲಿ ಶಾಂತಿ ಸುವ್ಯವಸ್ಥೆ ಕದಡುವ ಕೆಲಸ ದುಷ್ಟ ಶಕ್ತಿಗಳು ಮಾಡುತ್ತಿವೆ. ಬಾಬರಿ ಮಸೀದಿ ದ್ವಂಸದ ಬಳಿಕ ಜ್ಞಾನವ್ಯಾಪಿ ಮಸೀದಿ ಪ್ರಕರಣ ಮುನ್ನೆಲೆಗೆ ತರಲಾಗುತ್ತಿದೆ. ಇದರಿಂದ ಸರ್ವಧರ್ಮ ಸಮನ್ವಯ ಎನ್ನುವ ನಿಲುವಿಗೆ ಧಕ್ಕೆ ಉಂಟಾಗುತ್ತಿದೆ. ದೇಶದಲ್ಲಿ ಹಿಂಸೆ, ಜನರಲ್ಲಿ ಭಯ ಮತ್ತು ಅಭದ್ರತೆಯ ವಾತಾವರಣ ಸೃಷ್ಟಿಸಲಾಗುತ್ತಿದೆ. ಹಾಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಧ್ಯೆಪ್ರವೇಶಿಸಿ ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಕಾಯ್ದೆಯನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಬೇಕು. ಕೋಮುವಾದಿ ಶಕ್ತಿಗಳ ವಿರುದ್ಧ ಸಮರ ಸಾರಬೇಕು ಎಂದು ಆಗ್ರಹಿಸಿ ಶಿವಮೊಗ್ಗ ಉಪ ವಿಭಾಗಾಧಿಕಾರಿ ಸತ್ಯನಾರಾಯಣ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
    ಜಾಮಿಯ ಮಸೀದಿ ಅಧ್ಯಕ್ಷ ಮನ್ನಾವರ್ ಪಾಷಾ, ಖಾಜಿ ಅಶ್ರಫ್ ಸಾಬ್, ಮುಫ್ತಿ ಅಖಿಲ್ ರಜತ್, ಸತ್ತಾರ್ ಬೇಗ್, ಅಶ್ರಫ್ ಅಹಮ್ಮದ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts