More

    ವೈಟ್ ಟಾಪಿಂಗ್ ರಸ್ತೆ ಶೀಘ್ರ ಸಂಚಾರಮುಕ್ತ ; ಅ.10ರೊಳಗೆ ರಸ್ತೆ ಉದ್ಘಾಟನೆ

    ತುಮಕೂರು: ಸ್ಮಾರ್ಟ್‌ಸಿಟಿಯ ಮೊದಲ ‘ವೈಟ್ ಟಾಪಿಂಗ್ ರಸ್ತೆ’ ಶೀಘ್ರ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಲಿದೆ. ನಗರದ ಟೌನ್‌ಹಾಲ್ ವೃತ್ತದಿಂದ ಸ್ವಾತಂತ್ರೃ ಚೌಕದವರೆಗಿನ ಅಶೋಕ ರಸ್ತೆಯನ್ನು ಸ್ಮಾರ್ಟ್‌ಸಿಟಿ ಯೋಜನೆ ಅಡಿ ಅಭಿವೃದ್ಧಿಪಡಿಸುವ ಕಾಮಗಾರಿ ಅಂತಿಮ ಹಂತ ತಲುಪಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಬಸ್ ನಿಲ್ದಾಣಗಳಿಗೆ ಹೊಂದಿಕೊಂಡಿರುವ ಅಶೋಕರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಸ್ಮಾರ್ಟ್‌ಸಿಟಿ ಯೋಜನೆ ಅಡಿ ಮೇ 25ರಂದು ಕೈಗೆತ್ತಿಕೊಳ್ಳಲಾಗಿದ್ದು ರಸ್ತೆ ಕಾಮಗಾರಿ ಕುಂಟುತ್ತಾ ಸಾಗಿದೆ. ಇದೀಗ ಕಾಮಗಾರಿ ಚುರುಕುಗೊಂಡಿದ್ದು ಅ.10ರೊಳಗೆ ರಸ್ತೆ ಉದ್ಘಾಟನೆಯಾಗಲಿದೆ.

    ರಸ್ತೆ ಅಭಿವೃದ್ಧಿಗೆ 16 ಕೋಟಿ ರೂ.: ಟೌನ್‌ಹಾಲ್ ವೃತ್ತದಿಂದ ಸ್ವಾತಂತ್ರೃ ಚೌಕದವರೆಗೆ 1.0465 ಕಿ.ಮೀ., ವೈಟ್ ಟಾಪಿಂಗ್ ರಸ್ತೆ, ಸ್ವಾತಂತ್ರೃ ಚೌಕದಿಂದ ಕೋಡಿಬಸವೇಶ್ವರ ದೇವಸ್ಥಾನದವರೆಗೆ 0.465 ಕಿ.ಮೀ., ಹಾಟ್‌ಸ್ಪಾಟ್ ರಸ್ತೆಯನ್ನು ಸ್ಮಾರ್ಟ್‌ಸಿಟಿ ಯೋಜನೆಯಡಿ 16 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. 60 ಟನ್ ಭಾರವುಳ್ಳ ವಾಹನಗಳ ಓಡಾಟಕ್ಕೆ ಅನುಗುಣವಾಗಿ ರಸ್ತೆ ವಿನ್ಯಾಸಪಡಿಸಲಾಗಿದೆ. ಚತುಷ್ಪಥ ರಸ್ತೆಯು ಮಧ್ಯಭಾಗದಿಂದ ಉಭಯ ಕಡೆ 7.85 ಮೀ., ಅಗಲವಿದೆ. ಹಾಗಾಗಿ, ಏಕಕಾಲಕ್ಕೆ 1 ಕಡೆ 2 ದೊಡ್ಡ ವಾಹನ, ಒಂದು ಆಟೋ ಸಂಚರಿಸಬಹುದು. ಉತ್ಕೃಷ್ಟಗುಣಮಟ್ಟದ ಕಾಂಕ್ರೀಟ್ ರಸ್ತೆ ಇದಾಗಿದ್ದು ಈ ರಸ್ತೆ 30 ವರ್ಷಗಳವರೆಗೆ ಬಾಳಿಕೆ ಬರಲಿದೆ. ಟೌನ್‌ಹಾಲ್‌ನಿಂದ ಸ್ವಾತಂತ್ರೃ ಚೌಕದವರೆಗಿನ ವೈಟ್ ಟಾಪಿಂಗ್ ರಸ್ತೆ ಎರಡು ಬದಿಯಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಸ್ಮಾರ್ಟ್ ಸಿಟಿಯಿಂದ ಮಾಡಲಾಗುವುದು. ರಸ್ತೆಯಲ್ಲಿ ವಾಹನಗಳ ಸುಗಮಸಂಚಾರ, ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಮೂಲಕ ‘ಸ್ಮಾರ್ಟ್’ ರಸ್ತೆಯಾಗಿ ಅಶೋಕರಸ್ತೆ ಕಾಣಲಿದೆ.

    ಏನಿದು ವೈಟ್ ಟಾಪಿಂಗ್ ರಸ್ತೆ ?: ‘ವೈಟ್ ಟಾಪಿಂಗ್’ ಬೆಂಗಳೂರಿನಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಸ್ಮಾರ್ಟ್‌ಸಿಟಿ ಯೋಜನೆ ಅಡಿ ನಗರದಲ್ಲಿ ವೈಟ್ ಟಾಪಿಂಗ್ ರಸ್ತೆ ನಿರ್ಮಿಸುತ್ತಾರೆಂಬುದು ಸಹಜವಾಗಿ ಜನರಲ್ಲಿ ಕುತೂಹಲ ಹುಟ್ಟಿಸಿತ್ತು. ಮಾಮೂಲಿ ಕಾಂಕ್ರಿಟ್ ರಸ್ತೆ ಇದಲ್ಲ. ಪೇವಮೆಂಟ್ ಕ್ವಾಲಿಟಿ ಕಾಂಕ್ರಿಟ್ (ಪಿಕ್ಯೂಸಿ) ರಸ್ತೆ ಇದಾಗಿದ್ದು, 18.5 ಸೆಂಮಿ ದಪ್ಪ ಇರಲಿದೆ. ಹಳ್ಳಬೀಳುವುದಾಗಲಿ, ಕಾಂಕ್ರಿಟ್ ಕಿತ್ತುಬರುವುದಾಗಲಿ ಆಗಲಾರದು. ಎಂತಹ ಮಳೆಗೂ ಇದು ಜಗ್ಗುವುದಿಲ್ಲ. 20 ವರ್ಷದವರೆಗೆ ಉತ್ಕೃಷ್ಟವಾಗಿರಲಿದೆ. 30 ವರ್ಷದವರೆಗೆ ಈ ರಸ್ತೆ ಬಾಳಿಕೆ ಬರಲಿದೆ.

    5 ವರ್ಷಕ್ಕೊಮ್ಮೆ ನಿರ್ವಹಣೆ: ಮಳೆ ಸಂದರ್ಭದಲ್ಲಿ ರಸ್ತೆಯಲ್ಲಿ ಚಲಿಸುವ ವಾಹನಗಳು ಸ್ಕಿಡ್ ಆಗದಂತೆ ಮೇಲ್ಪದರವನ್ನು ಟೆಕ್ಸ್ಚರ್ ಮಾಡಲಾಗುವುದು. 5 ವರ್ಷಕ್ಕೊಮ್ಮೆ ರಸ್ತೆಯ ಮೇಲ್ಪದರಲ್ಲಿ ಗೆರೆಗಳನ್ನು ಹಾಕುವ ಮೂಲಕ ಜಾರದಂತೆ ಕ್ರಮವಹಿಸಲಾಗುವುದು. ಮತ್ತೆ ಯುಜಿಡಿ, ಕುಡಿಯುವ ನೀರಿನ ಪೈಪ್, ಕೇಬಲ್‌ಗಳನ್ನು ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ತೆಗೆದುಕೊಂಡು ಹೋಗಲು ರಸ್ತೆ ಅಗೆಯದಂತೆ 5 ಕಡೆ ಕ್ರಾಸ್ ಜೆಕ್ಟ್‌ಗಳನ್ನು ನಿರ್ಮಿಸಲಾಗಿದೆ.

    ಮೇ 25 ರಂದು ಅಶೋಕ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭವಾಗಿದ್ದು ಕರೊನಾ ಹಾಗೂ ಕೆಲವು ತಾಂತ್ರಿಕ ಅಡೆತಡೆಗಳಿಂದ ವಿಳಂಬವಾಯಿತು. ಅನಿವಾರ್ಯವಾಗಿ ನಗರದ ಜನತೆ ಈ ತೊಂದರೆ ಸಹಿಸಿಕೊಂಡಿದ್ದು ಅ.10 ರೊಳಗೆ ಸಾರ್ವಜನಿಕರ ಸಂಚಾರಕ್ಕೆ ಈ ರಸ್ತೆಯನ್ನು ಮುಕ್ತಗೊಳಿಸಲಾಗುವುದು. ಜೆಸಿ ರಸ್ತೆ, ಎಂಜಿ ರಸ್ತೆ, ವಿವೇಕಾನಂದ ರಸ್ತೆ , ಹೊರಪೇಟೆ ರಸ್ತೆಯನ್ನು ಸಹ ವೈಟ್ ಟಾಪಿಂಗ್ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲಾಗುವುದು.
    ಜಿ.ಬಿ.ಜ್ಯೋತಿಗಣೇಶ್ ನಗರ ಶಾಸಕ

    ಯುಜಿಡಿ, ಹೇಮಾವತಿ ಕುಡಿಯುವ ನೀರಿನ ಪೈಪ್, ಕೇಬಲ್‌ಗಳು ಯಾವುದೇ ಅಡಚಣೆಯಾಗದಂತೆ ಅತ್ಯಾಧುನಿಕವಾಗಿ ವಿನ್ಯಾಸಪಡಿಸಿ ವೈಟ್ ಟಾಪಿಂಗ್ ರಸ್ತೆ ಅಭಿವೃದ್ಧಿಸಲಾಗಿದೆ. ಅಂಡರ್‌ಗ್ರೌಂಡ್ ವಿದ್ಯುತ್ ಕೇಬಲ್ ಸಂಪರ್ಕ ಸಹ ಇದ್ದು ರಸ್ತೆ ಸಂಚಾರಕ್ಕೆ ಮುಕ್ತವಾಗಿ ಒಂದು ವರ್ಷ ಬಳಿಕ ವಿದ್ಯುತ್ ಕಂಬ ತೆರವುಗೊಳಿಸಿ ‘ಸ್ಮಾರ್ಟ್’ ರಸ್ತೆಯಾಗಿಸಲಾಗುವುದು.
    ಬಸವರಾಜೇಗೌಡ ಇಇ, ಸ್ಮಾರ್ಟ್‌ಸಿಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts