More

    ಎಲ್ಲಿದ್ದಾರೆ ಅಧಿಕಾರದ ಹಂಗಿಲ್ಲದ ಜನಪರ ಚಳವಳಿಯ ನಾಯಕರು?

    ಎಲ್ಲಿದ್ದಾರೆ ಅಧಿಕಾರದ ಹಂಗಿಲ್ಲದ ಜನಪರ ಚಳವಳಿಯ ನಾಯಕರು?ಕಳೆದ ತಿಂಗಳು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿಯವರು ಕೂಡಿ ‘ಸಂಸದೀಯ ಮೌಲ್ಯಗಳ ಕುಸಿತ ತಡೆಗಟ್ಟುವ ನಿಟ್ಟಿನಲ್ಲಿ ಒಂದು ಆತ್ಮಾವಲೋಕನ’ ಎಂಬ ವಿಚಾರಗೋಷ್ಠಿಯನ್ನು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ಏರ್ಪಡಿಸಿದ್ದರು. ಮುಖ್ಯಮಂತ್ರಿಗಳು, ವಿರೋಧಪಕ್ಷದ ನಾಯಕರಾದಿಯಾಗಿ ರಾಜಕೀಯ ವಲಯದ ಅನೇಕ ಮುತ್ಸದ್ಧಿಗಳು, ವಿವಿಧ ಕ್ಷೇತ್ರದ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಸಂಸದೀಯ ವ್ಯವಸ್ಥೆಯಲ್ಲಿ ಮಾತ್ರವಲ್ಲ, ಎಲ್ಲ ವಲಯಗಳಲ್ಲಿ ಕುಸಿಯುತ್ತಿರುವ ಮೌಲ್ಯಗಳ ಬಗೆಗೆ ಆತಂಕ, ಅದನ್ನು ಸರಿಪಡಿಸುವ ಬಗೆಗೆ ರಚನಾತ್ಮಕ ಚಿಂತನೆ, ಸರಿಪಡಿಸಬೇಕೆನ್ನುವ ಪ್ರಾಮಾಣಿಕ ಕಳಕಳಿ ಅಲ್ಲಿ ಪಾಲ್ಗೊಂಡ ಎಲ್ಲರಲ್ಲೂ ಸ್ಪಷ್ಟವಾಗಿ ವ್ಯಕ್ತವಾಗುತ್ತಿತ್ತು. ಈ ಮೊದಲು ಕಾಗೇರಿಯವರು ನಮ್ಮ ಸಂವಿಧಾನವನ್ನು ಕುರಿತ ಚರ್ಚೆಯೊಂದನ್ನೂ ಏರ್ಪಡಿಸಿದ್ದು ನನಗಿಲ್ಲಿ ನೆನಪಾಗುತ್ತಿದೆ. ಯಾವ ರಾಜ್ಯದ ವಿಧಾನಸಭೆಯೂ ಅಷ್ಟು ಸುದೀರ್ಘವಾಗಿ ನಮ್ಮ ಸಂವಿಧಾನವನ್ನು ಕುರಿತು ಚಿಂತಿಸಿದ ನಿದರ್ಶನವಿಲ್ಲ. ಜನಪ್ರತಿನಿಧಿಗಳಿಗೆ ಮಾತ್ರವಲ್ಲ, ಎಲ್ಲರಿಗೂ ಸಂವಿಧಾನದ ಮಹತ್ವ ಅರಿವಾಗಬೇಕು. ಮಕ್ಕಳಿಗೆ ಶಾಲೆಯ ಹಂತದಲ್ಲಿಯೇ ಕಡ್ಡಾಯವಾಗಿ ಸಂವಿಧಾನದ ಪರಿಚಯವಾಗಿ, ಸ್ಪಷ್ಟ ತಿಳಿವಳಿಕೆ ರೂಪಿಸಿದರೆ ನಿಸ್ಸಂದೇಹವಾಗಿ ಅವರು ಜವಾಬ್ದಾರಿಯುತ ಪ್ರಜೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ನಮ್ಮ ಶಿಕ್ಷಣ ಸಂಸ್ಥೆಗಳು ಈ ದಿಕ್ಕಿನಲ್ಲಿ ಚಿಂತಿಸುವ ಅಗತ್ಯವಿದೆ. ಈ ಸಂಕಿರಣ ಅದರ ಮುಂದಿನ ಹೆಜ್ಜೆಯಂತಿತ್ತು.

    ಕಾಗೇರಿಯವರು ತಮ್ಮ ಪತ್ರದಲ್ಲಿ, ‘ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸತ್ತು ಮತ್ತು ವಿಧಾನ ಮಂಡಲಗಳು ಅತ್ಯುನ್ನತ ಸಂಸ್ಥೆಗಳಾಗಿವೆ. ಇವುಗಳು ಭಾರತದ ಸಂವಿಧಾನದಲ್ಲಿರುವ ಕಲ್ಪನೆಯಂತೆ ದೇಶದ ಪ್ರಜೆಗಳ ಆಶೋತ್ತರಗಳನ್ನು ನೆರವೇರಿಸುವ ಗುರಿಯನ್ನು ಹೊಂದಿದ್ದು, ಈ ಗುರಿ ಸಾಧಿಸಲು ಈ ಸಂಸದೀಯ ಸದನಗಳು ಸರಿಯಾದ ದಿಕ್ಕಿನಲ್ಲಿ ಅವುಗಳ ಕರ್ತವ್ಯವನ್ನು ನೆರವೇರಿಸಬೇಕಾಗಿರುವುದು ಅನಿವಾರ್ಯ. ಆದರೆ, ಇತ್ತೀಚಿನ ದಿನಗಳಲ್ಲಿ ಸಂಸದೀಯ ಸದನಗಳಲ್ಲಿನ ಕಾರ್ಯಕಲಾಪಗಳು ಸುವ್ಯವಸ್ಥಿತವಾಗಿ ನಡೆಯದೆ ಗೊಂದಲಗಳು, ಅಡೆ-ತಡೆಗಳು, ಅಸಾಂವಿಧಾನಿಕ ಘಟನೆಗಳು… ಸಭಾಧ್ಯಕ್ಷರು/ಸಭಾಪತಿಗಳಿಗೆ ಕರ್ತವ್ಯ ನಿರ್ವಹಿಸದಂತೆ ತಡೆ ಒಡ್ಡುವುದು ಸಾಮಾನ್ಯವಾಗಿರುವುದು ನಮಗೆಲ್ಲ ತಿಳಿದ ವಿಷಯವಾಗಿದೆ. ಇಂತಹ ಘಟನೆಗಳಿಂದ ಸಂವಿಧಾನದ ಧ್ಯೇಯೋದ್ದೇಶಗಳನ್ನು ಈಡೇರಿಸುವಲ್ಲಿ ಈ ಸಂಸದೀಯ ಸಂಸ್ಥೆಗಳು ವಿಫಲವಾಗುತ್ತಿವೆ ಎಂಬ ಭಾವನೆ ಪುಷ್ಟಿಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದುದರಿಂದ ಇನ್ನು ಮುಂದೆಯಾದರೂ ಸಂಸದೀಯ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಆತ್ಮಾವಲೋಕನದ ಅವಶ್ಯಕತೆ ಇದೆ ಎಂಬುದು ನನ್ನ ಭಾವನೆಯಾಗಿದೆ’ ಎಂದಿದ್ದರು. ಅವರ ಮಾತುಗಳಲ್ಲಿ ಮೂರು ಅಂಶಗಳಿವೆ. ಮೊದಲನೆಯದು- ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಡಿನ ಅತ್ಯುನ್ನತ ಸಂಸ್ಥೆಗಳಾದ ಸಂಸತ್ತು, ವಿಧಾನ ಮಂಡಲಗಳು ಪ್ರಜೆಗಳ ಆಶೋತ್ತರಗಳನ್ನು ನೆರವೇರಿಸುವ ಗುರಿಹೊಂದಿರಬೇಕೆಂಬ ಸಂವಿಧಾನದ ಆಶಯ; ಎರಡನೆಯದು ಅದು ಸದ್ಯದ ಸನ್ನಿವೇಶದಲ್ಲಿ ಸಾಧ್ಯವಾಗುತ್ತಿಲ್ಲ ಎಂಬ ಅರಿವಿನ ವಿಷಾದ; ಮೂರನೆಯದು ಅದಕ್ಕೆ ನಾವೇ ಕಾರಣ, ನಾವೇ ಈ ಬಗ್ಗೆ ಚಿಂತಿಸಿ, ಸರಿಪಡಿಸಿಕೊಳ್ಳಲು ಪ್ರಯತ್ನಿಸಬೇಕೆಂಬ ಆತ್ಮಾವಲೋಕನದ ಎಚ್ಚರ.

    ಇದು ಆ ಸಭೆಯಲ್ಲಿ ಪಾಲ್ಗೊಂಡ ಎಲ್ಲರ ಕಳಕಳಿಯೂ ಆಗಿತ್ತು. ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಕಾರ್ಯಕಲಾಪಗಳು ಗಾಂಭೀರ್ಯ ಕಳೆದುಕೊಂಡು, ಬೀದಿಜಗಳದ ಮಟ್ಟಕ್ಕೆ ಇಳಿದಿರುವುದರ ಬಗ್ಗೆ ಎಲ್ಲರಲ್ಲಿಯೂ ಆತಂಕವಿತ್ತು; ಪ್ರಮುಖವಾಗಿ ಅಲ್ಲಿದ್ದ ಜನಪ್ರತಿನಿಧಿಗಳೇ ಮುಕ್ತವಾಗಿ ಮಾತನಾಡಿ, ಸುಧಾರಿಸಿಕೊಳ್ಳಬಹುದಾದ ಸಾಧ್ಯತೆಗಳ ಬಗ್ಗೆ ಸಲಹೆ ನೀಡಿದರು. ಅಲ್ಲಿ ರ್ಚಚಿತವಾದ ಕೆಲ ಸಂಗತಿಗಳನ್ನು ನಾವು ಗಮನಿಸಬಹುದು:

    ಮೊದಲನೆಯದಾಗಿ ವಿಧಾನ ಮಂಡಲಗಳ ಕಾರ್ಯಕಲಾಪಗಳು ನಿಗದಿತ ಅವಧಿಯಷ್ಟು ನಡೆಸಲು ಸಾಧ್ಯವಾಗದ ಸನ್ನಿವೇಶ ಸೃಷ್ಟಿಯಾಗಿದೆ. ಜನರ ಸಮಸ್ಯೆಗಳನ್ನು ಗಂಭೀರವಾಗಿ ರ್ಚಚಿಸಿ, ಸರ್ಕಾರದ ಗಮನಕ್ಕೆ ತರುವ ಅವಕಾಶದಿಂದಲೇ ಜನಪ್ರತಿನಿಧಿಗಳು ವಂಚಿತರಾಗುತ್ತಿದ್ದಾರೆ. ಕನಿಷ್ಠ 60 ದಿನಗಳಾದರೂ ಕಾರ್ಯಕಲಾಪಗಳು ನಡೆಯಬೇಕೆಂದು 2005ರಲ್ಲಿ ನಿರ್ಧರಿಸಿದರೂ, ಅದೂ ಸಾಧ್ಯವಾಗುತ್ತಿಲ್ಲ. ಬರೀ ಗದ್ದಲ, ಮುಂದೂಡುವಿಕೆ, ಕಡೆಗೆ ಆತುರಾತುರವಾಗಿ ಅಗತ್ಯ ವಿಧೇಯಕಗಳಿಗೆ ಅಂಗೀಕಾರ ಪಡೆದು ಅನಿರ್ದಿಷ್ಟ ಅವಧಿಗೆ ಸಭಾಕಲಾಪಗಳನ್ನು ಮುಂದೂಡುವುದು ನಡೆದೇ ಇದೆ. ಮೊನ್ನೆಯೂ ಇದೇ ಆದದ್ದು. ಕಾರ್ಯಕಲಾಪ ನಡೆಸಲಾಗದ ವಾತಾವರಣವಿದೆಯೆನ್ನುವುದೇ ಅತ್ಯಂತ ನಾಚಿಕೆಯ ಸಂಗತಿ. ಭಿನ್ನಾಭಿಪ್ರಾಯದ ಅಭಿವ್ಯಕ್ತಿಗೂ, ವೈಯಕ್ತಿಕ ನಿಂದನೆಯ ರೀತಿಗೂ ವ್ಯತ್ಯಾಸ ತಿಳಿಯದಿದ್ದರೆ ಹೀಗಾಗುತ್ತದೆ.

    ಪಕ್ಷಾತೀತವಾಗಿ ಎಲ್ಲ ರಾಜಕಾರಣಿಗಳೂ ಒಪ್ಪಿಕೊಂಡ ಒಂದು ಸಂಗತಿಯೆಂದರೆ ಚುನಾವಣೆಯ ಸಂದರ್ಭದಲ್ಲಿ ಅಭ್ಯರ್ಥಿಯನ್ನು ಆಯ್ಕೆ ಮಾಡುವಾಗಲೇ ಹಾದಿ ತಪು್ಪತ್ತಿದ್ದೇವೆ ಎಂಬುದು. ಅರ್ಹ, ಯೋಗ್ಯ ಅಭ್ಯರ್ಥಿಗೆ ಬದಲಾಗಿ ಹಣಬಲ, ಜಾತಿಬಲ ಹಾಗೂ ತೋಳ್ಬಲ ಇರುವ ವ್ಯಕ್ತಿಗೆ ಮಣೆ ಹಾಕಲಾಗುತ್ತಿದೆಯೆಂಬುದು ಬಹಿರಂಗ ಸತ್ಯ. ಒಂದು ಕಾಲಕ್ಕೆ ಜನರೇ ಅಭ್ಯರ್ಥಿಯ ಖರ್ಚಿಗೆ ಹಣ ನೀಡಿ, ಮತವನ್ನೂ ಹಾಕುತ್ತಿದ್ದರು; ಈಗ ಚುನಾವಣೆಯ ರೀತಿಯೇ ಬದಲಾಗಿದೆ; ಭೂಗತ ವಲಯದ ಭಯಾನಕ ವ್ಯಕ್ತಿತ್ವಗಳು ರಾಜಕಾರಣದಲ್ಲಿ ಪ್ರಾಮುಖ್ಯ ಪಡೆದುಕೊಳ್ಳುತ್ತಿವೆ. ಸಜ್ಜನ ರಾಜಕಾರಣಿ ಚುನಾವಣೆ ಗೆಲ್ಲುವುದು ಅಸಾಧ್ಯ ಎಂಬ ವಾತಾವರಣವನ್ನು ನಾವೇ ಸೃಷ್ಟಿ ಮಾಡಿದ್ದೇವೆ; ಅದರ ಫಲವನ್ನೂ ಅನುಭವಿಸುತ್ತಿದ್ದೇವೆ; ಹೊರಬರುವ ದಾರಿ ಸುಲಭವಲ್ಲ ಎಂಬ ಅಸಹಾಯಕತೆ ಅನೇಕರಲ್ಲಿತ್ತು. ಸೇವಾವಲಯವೆಂದು ಪರಿಗಣಿತವಾಗಿದ್ದ ರಾಜಕಾರಣ ಇಂದು ಬಂಡವಾಳ ಹೂಡಿ ಲಾಭ ಮಾಡುವ ಉದ್ಯಮವಾಗಿ ಬದಲಾಗಿರುವುದರ ಬಗ್ಗೆ ಅನೇಕರು ಪ್ರಸ್ತಾಪಿಸಿದರು. ಅಕ್ರಮ ಹಣ ಸಂಪಾದನೆ ಮಾಡಿ ಅದನ್ನು ರಕ್ಷಿಸಿಕೊಳ್ಳಲು ಅಧಿಕಾರ ಹಿಡಿಯುವ ಸಾಧನವಾಗಿ ರಾಜಕಾರಣ ಬಳಕೆಯಾಗುತ್ತಿರುವುದರ ಬಗ್ಗೆಯೂ ಅಲ್ಲಿ ಆತಂಕವಿತ್ತು.

    ಇಲ್ಲಿಯೇ ಪ್ರಸ್ತಾಪಿತವಾದ ಮತ್ತೊಂದು ಸಂಗತಿಯೆಂದರೆ ಪ್ರಜಾಪ್ರಭುತ್ವ ಪದ್ಧತಿಯಲ್ಲಿ ತೊಡಗಿಸಿಕೊಂಡಿರುವ ನಮ್ಮ ಯಾವ ಪಕ್ಷಗಳಲ್ಲಿಯೂ ಆಂತರಿಕ ಪ್ರಜಾಪ್ರಭುತ್ವ ಇಲ್ಲವೆನ್ನುವುದು; ಅಧಿನಾಯಕನನ್ನು ಹೊರತುಪಡಿಸಿದರೆ ಉಳಿದೆಲ್ಲರೂ ಮುಖಹೀನ ವ್ಯಕ್ತಿಗಳಾಗಿ ಕಾಣಿಸುತ್ತಿದ್ದಾರೆ. ಪ್ರಜಾಪ್ರಭುತ್ವದ ಹೆಸರಿನಲ್ಲಿ ರಾಜಸತ್ತೆಯ ಪಳೆಯುಳಿಕೆಯಂತೆ ಕಾಣುವ ಕುಟುಂಬ ರಾಜಕಾರಣ, ವ್ಯಕ್ತಿಸ್ವಾತಂತ್ರ್ಯವನ್ನು ಹತ್ತಿಕ್ಕುವ ಸರ್ವಾಧಿಕಾರಿ ನಿಲುವು ದಟ್ಟವಾಗಿಯೇ ಕಾಣಿಸುತ್ತದೆ. ವಿರೋಧ ಪಕ್ಷದಲ್ಲಿದ್ದೂ ಘನತೆಯಿಂದ ನಡೆದುಕೊಳ್ಳುವುದು ಸಾಧ್ಯ; ಆಡಳಿತದಲ್ಲಿ ಪರಿಣಾಮಕಾರಿ ಪಾತ್ರ ವಹಿಸಲು ಅವಕಾಶವಿದೆ ಎಂಬ ಪ್ರಾಥಮಿಕ ಜ್ಞಾನವೇ ಇಲ್ಲದವರಂತೆ ನಮ್ಮ ಜನಪ್ರತಿನಿಧಿಗಳು ನಡೆದುಕೊಳ್ಳುತ್ತಿದ್ದಾರೆ; ಅಧಿಕಾರದ ಬೆನ್ನುಹತ್ತಿ ಭ್ರಷ್ಟರಾಗುತ್ತಿದ್ದಾರೆ ಎಂದು ಜನಪ್ರತಿನಿಧಿಗಳೇ ಆಕ್ಷೇಪ ವ್ಯಕ್ತಪಡಿಸಿದರು.

    ಒಂದು ಕಾಲಕ್ಕೆ ವಿಧಾನ ಪರಿಷತ್ತು ತಜ್ಞರ, ಸಮಾಜದಲ್ಲಿ ಗಣ್ಯಸ್ಥಾನ ಪಡೆದ ಹಿರಿಯರ ತಾಣವಾಗಿತ್ತು. ಚುನಾವಣಾ ರಾಜಕಾರಣದಿಂದ ದೂರವಿರುವ ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡಿ ಸಭೆಯ ಘನತೆ ಹೆಚ್ಚಿಸುವ ಪ್ರಯತ್ನವಿತ್ತು. ಅಲ್ಲಿಯ ಚರ್ಚೆ ಜನಪರವಾಗಿದ್ದು ಆಳ ಅಧ್ಯಯನ ಹಿನ್ನೆಲೆಯಿರುತ್ತಿತ್ತು. ಆಡುವವರ ಮಾತು ಕೇಳುವವರಲ್ಲಿ ಗೌರವ ಮೂಡಿಸುತ್ತಿತ್ತು. ಅಧಿಕಾರದ ಕೇಂದ್ರದಲ್ಲಿರುವವರೂ ಅಂಥವರ ಸಲಹೆಗಳನ್ನು ಗಂಭೀರವಾಗಿ ಸ್ವೀಕರಿಸುತ್ತಿದ್ದರು. ಈಗ ಅಲ್ಲಿಗೂ ನಾಮ ನಿರ್ದೇಶನವಾಗುವವರು ಎಂಥವರು? ಈ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ನಮ್ಮ ಕಾಲದಲ್ಲಿ ರಾಜಕೀಯಕ್ಕೆ ಎಲ್ಲಿಲ್ಲದ ಪ್ರಾಮುಖ್ಯತೆ ಸಿಕ್ಕಿಬಿಟ್ಟಿದೆ. ‘ರಾಜಾ ಪ್ರತ್ಯಕ್ಷ ದೇವತಾ’ ಎಂಬ ಮಾತು ರಾಜಕಾರಣಿಗಳಿಗೆ ಅನ್ವಯವಾಗುತ್ತಿದೆ. ನಮ್ಮ ಸಮೂಹ ಮಾಧ್ಯಮಗಳೂ ಅವರನ್ನು ವೈಭವಿಸುತ್ತಿವೆ. ಹೀಗಾಗಿ ತಾವು ಏನು ಬೇಕಾದರೂ ಮಾಡಬಹುದು, ಏನು ಬೇಕಾದರೂ ಮಾತನಾಡಬಹುದು ಎಂಬ ದುರಹಂಕಾರ ಬಹಳಷ್ಟು ಪುಢಾರಿಗಳಲ್ಲಿ ಮನೆ ಮಾಡಿದೆ. ಸ್ವಾತಂತ್ರ್ಯ ಬರುವ ಮೊದಲು ಮತ್ತು ಬಂದ ನಂತರದ ಕೆಲ ವರ್ಷಗಳು ನಮ್ಮ ರಾಜಕಾರಣಿಗಳಿಗೆ ದೇಶ ಮತ್ತು ಜನರ ಹಿತವೇ ಮುಖ್ಯವಾಗಿತ್ತು. ನಂತರದ ವರ್ಷಗಳಲ್ಲಿ ದೇಶ ಇರುವುದೇ ತಮಗಾಗಿ ಎಂಬ ಭಾವನೆ ರಾಜಕಾರಣಿಗಳಲ್ಲಿ ಬೆಳೆದುಬಿಟ್ಟಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು. ಇದು ನಿಜವೂ ಹೌದು. ಆದರೆ ಇದಕ್ಕೆ ಯಾರು ಕಾರಣರು? ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಪಕ್ಷಗಳು ಹಿಡಿದ ಹಾದಿಯನ್ನು ನೋಡಿದರೆ ಅಧಿಕಾರಕ್ಕಾಗಿ ಎಂತೆಂಥವರನ್ನು ಓಲೈಸಿದರು, ಪ್ರಮುಖ ಸ್ಥಾನಗಳಲ್ಲಿ ಪ್ರತಿಷ್ಠಾಪಿಸಿದರು ಎಂಬುದು ತಿಳಿಯುತ್ತದೆ. ಬೇವು ಬಿತ್ತಿ ಮಾವು ಬೆಳೆಯಲು ಸಾಧ್ಯವೇ?

    ಇತ್ತೀಚೆಗೆ ವಿಧಾನಸಭೆ ಪ್ರವೇಶಿಸುವ ಅನೇಕರಿಗೆ ಸಂಸದೀಯ ಚಟುವಟಿಕೆಗಳ ಪ್ರಾಥಮಿಕ ಜ್ಞಾನವೂ ಇರುವುದಿಲ್ಲ. ಇವರಲ್ಲಿ ಅನೇಕರು ಓದಿನ ಶತ್ರುಗಳು. ಯಾವ ಬಗೆಯ ಸಿದ್ಧತೆಯೂ ಇಲ್ಲದೆ ಅರ್ಥಪೂರ್ಣವಾಗಿ ಚರ್ಚೆಯಲ್ಲಿ ಪಾಲ್ಗೊಳ್ಳುವುದಾದರೂ ಹೇಗೆ ಸಾಧ್ಯ? ಗಾಂಧೀಜಿ, ನೆಹರು, ಅಂಬೇಡ್ಕರ್, ಲೋಹಿಯಾ, ರಾಜಾಜಿ, ವಾಜಪೇಯಿ ಮೊದಲಾದವರು ಆಳ ಅಧ್ಯಯನದ ಹಿನ್ನೆಲೆಯಲ್ಲಿ ವಾದ ಮಂಡಿಸುತ್ತಿದ್ದರು. ಎಲ್ಲ ಮಾಹಿತಿಗಳನ್ನು ಸಂಗ್ರಹಿಸಿ ವಿಷಯ ಪ್ರತಿಪಾದನೆ ಮಾಡುತ್ತಿದ್ದರು. ಅವರೆಲ್ಲರಿಗೂ ವಿದ್ವತ್​ವಲಯದ ಜೊತೆ ನಿಕಟ ಒಡನಾಟವಿತ್ತು. ಜಗತ್ತಿನ ಶ್ರೇಷ್ಠ ರಾಜನೀತಿಜ್ಞರೆಲ್ಲರಲ್ಲೂ ಈ ಗುಣವನ್ನು ಕಾಣುತ್ತೇವೆ. ಆದರೆ ಈಗ ನಮ್ಮ ಜನನಾಯಕರೆನ್ನಿಸಿಕೊಂಡವರ ಒಡನಾಟ ಯಾರ ಸಂಗಡ?

    ಯಾವುದೇ ಕ್ಷೇತ್ರದವರಿಗೂ ಒಂದು ಹಂತದ ತರಬೇತಿ ಇರುತ್ತದೆ. ಆದರೆ ನಮ್ಮ ಜನಪ್ರತಿನಿಧಿಗಳಿಗೆ ಆ ಬಗೆಯ ಯಾವ ತರಬೇತಿಯೂ ಇದ್ದಂತಿಲ್ಲ. ಹೀಗಾಗಿ ಹೊಸದಾಗಿ ಆಯ್ಕೆಯಾಗುವವರಿಗೆ ಸಂಸದೀಯ ಚಟುವಟಿಕೆಗಳ ಪ್ರಾಥಮಿಕ ಮಾಹಿತಿ ಒದಗಿಸಿ, ಮಾದರಿ ಸಂಸದೀಯ ಪಟುಗಳ ಬಗ್ಗೆ ಪರಿಚಯಿಸುವ ‘ತರಬೇತಿ ಅಕಾಡೆಮಿ’ ಯೊಂದರ ಅಗತ್ಯವನ್ನೂ ಕೆಲವರು ಪ್ರತಿಪಾದಿಸಿದರು. ಒಳ್ಳೆಯ ಸಲಹೆ. ಆದರೆ ನಿದ್ದೆ ಮಾಡುತ್ತಿರುವವರನ್ನು ಎಬ್ಬಿಸಬಹುದೇ ಹೊರತು ನಿದ್ದೆ ಮಾಡುತ್ತಿರುವಂತೆ ನಟಿಸುತ್ತಿರುವವರನ್ನು ಎಬ್ಬಿಸಲು ಸಾಧ್ಯವೇ? ರಾಜಕೀಯವನ್ನು ದಂಧೆಯಾಗಿ ಮಾಡಿಕೊಂಡು ಬಂದವರಿಗೆ ಏನು ಹೇಳಿದರೇನು ಫಲ? ಹೊಸ ತಲೆಮಾರಿನ ಸಮರ್ಥ ಯುವಕರು ರಾಜಕೀಯ ವಲಯ ಪ್ರವೇಶಿಸುವುದು ಸಾಧ್ಯವಾದರೆ ಬದಲಾವಣೆ ಆಗಬಹುದು. ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಯಲ್ಲಿ ಮೂಲಭೂತ ಬದಲಾವಣೆ ತರಲು ಸಾಧ್ಯವಾದರೆ ಅವರ ಕಳಕಳಿ ಅರ್ಥಪೂರ್ಣವಾಗುತ್ತದೆ. ಇಲ್ಲದಿದ್ದರೆ ಇಂತಹ ಸಂಕಿರಣಗಳೂ ಮೊಸಳೆ ಕಣ್ಣೀರಿನ ಮಾದರಿಯಂತಾಗುತ್ತವೆ.

    ರಾಜಕೀಯದಲ್ಲಿರುವ ಎಲ್ಲರೂ ನೀಚರೇನಲ್ಲ; ಆದರೆ ಅಂತಹವರೆದುರು ಗಂಭೀರ ಚಿಂತನೆಯ ಮುತ್ಸದ್ದಿಗಳು ಮಂಕಾಗುತ್ತಿರುವುದು ಮಾತ್ರ ಕಟುಸತ್ಯ. ಮಾಸ್ತಿಯವರು ಹೇಳುತ್ತಿದ್ದರು: ತಾಮಸ ಯಾಕೆ ಇಷ್ಟೊಂದು ವಿಜೃಂಭಿಸುತ್ತಿದೆಯೆಂದರೆ ಸಾತ್ವಿಕ ಶಕ್ತಿ ನಿಷ್ಕ್ರಿಯವಾಗಿರುವುದರಿಂದ ಎಂದು. ಅಲ್ಲಿ ಮಾತನಾಡಿದ ಎಲ್ಲ ಹಿರಿಯರ ಕಳಕಳಿ ಪ್ರಾಮಾಣಿಕವಾದದ್ದೆ; ಆದರೆ ಅದು ವೇದಿಕೆಯ ಗೊಣಗಾಟವಾಗದೆ ನಿಜಜೀವನದಲ್ಲಿ ಅರ್ಥಪೂರ್ಣವಾಗಬೇಕಾದರೆ ನಮ್ಮ ಕೆಲವು ಹಿರಿಯ ನಾಯಕರಾದರೂ ಅಧಿಕಾರದ ಹಂಗು ತೊರೆದು ಜನರ ನಡುವೆ ಜಾಗೃತಿ ಮೂಡಿಸುವ ಚಳವಳಿಯೊಂದನ್ನು ರೂಪಿಸಬೇಕಾಗಿದೆ. ಜನಪರ ಚಳವಳಿ ಮಾತ್ರ ನಾಯಕನನ್ನು ಸೃಷ್ಟಿಸುತ್ತದೆಯೇ ಹೊರತು ಸಂಖ್ಯಾಬಲದ ಲೆಕ್ಕಾಚಾರದ ಆಟವಲ್ಲ ಎಂಬುದನ್ನು ಅವರು ಮನಗಾಣಬೇಕಿದೆ. ಗಾಂಧಿ, ಜೆಪಿ ನೆನಪಾಗುತ್ತಿದ್ದಾರೆ. ಆದರೆ ಅಧಿಕಾರದ ಆಕರ್ಷಣೆ ಮೀರಲು ನಮ್ಮ ಕಾಲದ ನಾಯಕರಿಗೆ ಸಾಧ್ಯವೇ? ಅಧಿಕಾರದ ಆಕರ್ಷಣೆಯ ಆಮಿಷದಲ್ಲಿ ವಿವೇಕಿಗಳಾದ ಇವರೂ ಈ ವಿಷವ್ಯೂಹದ ವ್ಯವಸ್ಥೆಯ ಪಾಲುದಾರರೇ ಆಗಿಬಿಟ್ಟಿರುವುದು ದುರಂತವ್ಯಂಗ್ಯ. (ಲೇಖಕರು ಖ್ಯಾತ ವಿಮರ್ಶಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts