More

    ಅಧಿವೇಶನದಲ್ಲಿ ಚರ್ಚಿಸುವುದು ಏನಿದೆ?, ಶಾಸಕರ ವಿರುದ್ಧ ನಗರಸಭೆ ಸದಸ್ಯರ ಧರಣಿ, ಸ್ವಪಕ್ಷೀಯರಿಂದಲೂ ಅಸಮಾಧಾನ

    ನೆಲಮಂಗಲ: ಸರ್ಕಾರ ನಿಯಮಾನುಸಾರ ಮೇಲ್ದರ್ಜೆಗೇರಿಸಿರುವ ನಗರಸಭೆ ಸದಸ್ಯರ ವಿರುದ್ಧ ಅಧಿವೇಶನದಲ್ಲಿ ಚರ್ಚಿಸಲು ಮುಂದಾಗಿರುವ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ನಡೆ ಖಂಡಿಸಿ ಸದಸ್ಯರು ಬುಧವಾರ ನಗರಸಭಾ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

    2019ರ ಜೂನ್‌ನಲ್ಲಿ ನಡೆದ ಪುರಸಭೆ ಚುನಾವಣೆಯಲ್ಲಿ ಜೆಡಿಎಸ್ 13, ಕಾಂಗ್ರೆಸ್ 7, ಬಿಜೆಪಿ 2, ಪಕ್ಷೇತರ 1 ಸೇರಿ ಒಟ್ಟು 23 ಮಂದಿ ಆಯ್ಕೆಯಾಗಿದ್ದರು. 2019 ಡಿ.26 ರಂದು ಪುರಸಭೆಯನ್ನು ನಗರಸಭೆಯಾಗಿ ಸರ್ಕಾರ ಮೇಲ್ದರ್ಜೆಗೇರಿಸಿತ್ತು. ನಗರಸಭೆಗೆ ವಿಲೀನಗೊಂಡಿದ್ದ ಗ್ರಾಪಂ ವ್ಯಾಪ್ತಿಗಳ ಕೆಲವರು, ಪುರಸಭೆಗೆ ಚುನಾಯಿತರಾದವರನ್ನು ನಗರಸಭಾ ಸದಸ್ಯರಾಗಿ ಮೇಲ್ದರ್ಜೆಗೇರಿಸಿದ್ದ ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. 2 ತಿಂಗಳ ಒಳಗಾಗಿ ನೂತನ ನಗರಸಭೆ 31 ವಾರ್ಡ್‌ಗಳಿಗೆ ಚುನಾವಣೆ ನಡೆಸುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಹೈಕೋರ್ಟ್ ಏಕಸದಸ್ಯ ಪೀಠದ ಆದೇಶ ಮರುಪರಿಶೀಲಿಸುವಂತೆ ಚುನಾಯಿತ 23 ಮಂದಿ ಹೈಕೋರ್ಟ್‌ನ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ. ಇದರ ನಡುವೆ ಅಧಿವೇಶನದಲ್ಲಿ ನಗರಸಭೆಯ 31 ವಾರ್ಡ್‌ಗಳಿಗೆ ಜರೂರಾಗಿ ಚುನಾವಣೆ ನಡೆಸುವಂತೆ ಚರ್ಚಿಸಲು ಮುಂದಾಗಿರುವುದು ಬೇಸರ ತಂದಿದೆ ಎಂದು ಸದಸ್ಯರು ತಿಳಿಸಿದರು.

    ಸದಸ್ಯರಾದ ರಾಜಮ್ಮಪಿಳ್ಳಪ್ಪ ಸುಧಾಕೃಷ್ಣಪ್ಪ, ಎನ್.ಎಸ್.ಪೂರ್ಣಿಮಾ ಸುಗ್ಗರಾಜು, ಲೋಲಾಕ್ಷಿ ಗಂಗಾಧರ್, ನರಸಿಂಹಮೂರ್ತಿ, ಸುನೀಲ್‌ಮೂಡ್, ಎಂ.ಎನ್.ಚೇತನ್, ಭಾರತಿಭಾಯಿ, ಪದ್ಮನಾಭಪ್ರಸಾದ್, ಎ.ಪುರುಷೋತ್ತಮ್, ಜಿ.ಆನಂದ್, ಸುಜಾತಾಮುನಿಯಪ್ಪ, ರಾಜಮ್ಮ, ಕೆ.ವಸಂತ್, ಚಂದ್ರಶೆಟ್ಟಿ ಮತ್ತಿತರರು ಇದ್ದರು.

    ಶಾಸಕ ಪತ್ರದಲ್ಲಿ ಏನಿದೆ?: 2019ರ ಪುರಸಭೆ ಚುನಾವಣೆಯಲ್ಲಿ ಚುನಾಯಿತರಾಗಿದ್ದ 23 ಸದಸ್ಯರನ್ನು ನಗರಸಭಾ ಸದಸ್ಯರಾಗಿ ಸರ್ಕಾರ ಮೇಲ್ದರ್ಜೆಗೇರಿಸಿದ್ದು, ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆಗೆ ಮುಂದಾಗಿರುವುದು ಒಂದೆಡೆಯಾದರೆ, ವಿಲೀನಗೊಂಡಿರುವ ಪ್ರದೇಶಗಳಿಗೆ ನಾಮನಿರ್ದೇಶಿತರನ್ನು ನೇಮಕ ಮಾಡಲು ನಗರಾಭಿವೃದ್ಧಿ ಇಲಾಖೆ ಮುಂದಾಗಿದೆ. ಆದರೆ ಇದು ಸರಿಯಲ್ಲ. ಆದ್ದರಿಂದ ಹೈಕೋರ್ಟ್ ಆದೇಶದಂತೆ 2 ತಿಂಗಳ ಒಳಗಾಗಿ ನಗರಸಭೆ 31 ವಾರ್ಡ್‌ಗಳಿಗೆ ಚುನಾವಣೆ ನಡೆಸಬೇಕು. ಈ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸಲು ಅನಮತಿ ಕೋರಿ ಸರ್ಕಾರದ ಕಾರ್ಯದರ್ಶಿಗಳಿಗೆ ಶಾಸಕರು ಪತ್ರ ಬರೆದಿದ್ದಾರೆ.

    ಸ್ವಪಕ್ಷಕ್ಕೆ ತೊಡಕಾದ ಶಾಸಕರು: ನಗರಸಭೆ 23 ಸದಸ್ಯ ಬಲ ಪೈಕಿ ಅತಿ ಹೆಚ್ಚು ಜೆಡಿಎಸ್ ಅಭ್ಯರ್ಥಿಗಳು ಆಯ್ಕೆಯಾಗಿರುವುದು ಒಂದೆಡೆಯಾದರೆ ಅಧ್ಯಕ್ಷ ಗಾದಿ ಹಿಡಿಯುತ್ತಿರುವಾಗ ಪಕ್ಷದ ಶಾಸಕರೇ ಅಡ್ಡಗಾಲು ಹಾಕುತ್ತಿರುವುದು ಜೆಡಿಎಸ್ ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

    ಪುರಸಭೆ ಕಾಯ್ದೆ 1964ರ ಕಲಂ 361(3) ರನ್ವಯ ಪುರಸಭೆ ಸದಸ್ಯರನ್ನೇ ನಗರಸಭೆ ಸದಸ್ಯರಾಗಿ ಮೇಲ್ದರ್ಜೆಗೇರಿಸಿ ನ್ಯಾಯ ಒದಗಿಸಿದೆ. ನಂತರ ನಗರಸಭೆಗೆ ವಿಲೀನಗೊಂಡಿರುವ ಸಣ್ಣ ಪ್ರದೇಶಗಳ ಪ್ರಾಮುಖ್ಯತೆ ನೀಡಿ ಪುರಸಭೆ ಕಾಯ್ದೆ ಪ್ರಕಾರ ಹೆಚ್ಚುವರಿ ಕೌನ್ಸಿಲರ್ ನೇಮಕ ಮಾಡಿರುವುದೇ ಸರಿಯಿಲ್ಲ ಎಂದು ಸರ್ಕಾರದ ಕ್ರಮದ ವಿರುದ್ಧ ಅಧಿವೇಶನದಲ್ಲಿ ಚರ್ಚಿಸಲು ಮುಂದಾಗಿದ್ದಾರೆ. ಕ್ಷೇತ್ರದಲ್ಲಿನ ಶಾಶ್ವತ ಕುಡಿಯುವ ನೀರಿನ ಸಮಸ್ಯೆ, ಒಳಚರಂಡಿ ಸೌಕರ್ಯ ಸೇರಿ ಹಲವು ಜ್ವಲಂತ ಸಮಸ್ಯೆಗಳನ್ನು ಅಧಿವೇಶನದಲ್ಲಿ ಚರ್ಚಿಸುವುದನ್ನು ಬಿಟ್ಟು ಕೆಲ ವ್ಯಕ್ತಿಗಳ ಹಿತಾಸಕ್ತಿಗೆ ಮುಂದಾಗಿದ್ದಾರೆ.
    ಎನ್.ಪಿ.ಹೇಮಂತ್‌ಕುಮಾರ್
    ತಾಲೂಕು ಜೆಡಿಎಸ್ ಅಧ್ಯಕ್ಷ

    ಶಾಸಕರು ಏಕಪಕ್ಷೀಯವಾಗಿ ವರ್ತಿಸುತ್ತಿದ್ದಾರೆ. ನಮಗೆ ಆಗಿರುವ ಅನ್ಯಾಯವನ್ನು ದ್ವಿಸದಸ್ಯ ಪೀಠದಲ್ಲಿ ಪ್ರಶ್ನಿಸಿದ್ದು ಅಗತ್ಯವಿದ್ದಲ್ಲಿ ಸುಪ್ರೀಂ ಮೆಟ್ಟಲೇರಲು ಸಿದ್ಧವಿದ್ದೇವೆ.
    ಸಿ.ಪ್ರದೀಪ್
    ನಗರಸಭೆ ಸದಸ್ಯ

    2 ಬಾರಿ ಆಯ್ಕೆಯಾಗಿದ್ದರೂ ಪುರಸಭೆ ಸೇರಿ ಮೇಲ್ದರ್ಜೆಗೇರಿರುವ ನಗರಸಭೆಗೆ ಯಾವುದೇ ಕೊಡುಗೆ ನೀಡದ ಶಾಸಕರು ಈಗ ನಗರಸಭಾ ಸದಸ್ಯರ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದು ಎಷ್ಟುಸರಿ?.
    ಎನ್.ಗಣೇಶ್
    ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts