More

    ಅಕ್ರಮ ವಿದೇಶಿಯರ ಪತ್ತೆ ವಿಧಾನವೇನು?

    ಬೆಂಗಳೂರು: ರಾಜ್ಯದಲ್ಲಿ ಅಕ್ರಮವಾಗಿ ನೆಲೆಸುವ ವಿದೇಶಿ ಪ್ರಜೆಗಳನ್ನು ಪತ್ತೆ ಹಚ್ಚಲು, ಅವರ ವಿರುದ್ಧ ಕ್ರಮ ಕೈಗೊಳ್ಳಲು ಅನುಸರಿಸಲಾಗುತ್ತಿರುವ ವಿಧಾನಗಳ ಕುರಿತು ಪ್ರಮಾಣಪತ್ರ ಸಲ್ಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

    ನಗರದ ವಕೀಲ ಕೆ.ಬಿ.ವಿಜಯಕುಮಾರ್ ಹಾಗೂ ಭಾರತ್ ಪುನರುತ್ಥಾನ್ ಟ್ರಸ್ಟ್ ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸೋಮವಾರ ವಿಚಾರನೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ, ಈ ನಿರ್ದೇಶನ ನೀಡಿತು.

    ಸರ್ಕಾರದ ಪರ ವಕೀಲರು, ಪ್ರಮಾಣಪತ್ರ ಸಲ್ಲಿಸಲು 2 ವಾರ ಕಾಲಾವಕಾಶ ಅಗತ್ಯವಿದ್ದು, ಮುಚ್ಚಿದ ಲಕೋಟೆಯಲ್ಲಿ ಕೋರ್ಟ್​ಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ಇದಕ್ಕೆ ಸಮ್ಮತಿಸಿದ ನ್ಯಾಯಾಲಯ 2 ವಾರದಲ್ಲಿ ಪ್ರಮಾಣಪತ್ರ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿತು. ಇದೇ ವೇಳೆ, ವೀಸಾ ಅವಧಿ ಮುಗಿದ ನಂತರವೂ ದೇಶದಲ್ಲಿ ಅಕ್ರಮವಾಗಿ ನೆಲೆಸುವ ವಿದೇಶಿ ಪ್ರಜೆಗಳ ಬಗ್ಗೆ ನಿಗಾವಹಿಸಲು ಯಾವ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬ ಬಗ್ಗೆ ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೂ ನಿರ್ದೇಶಿಸಿದ ಪೀಠ, ಅರ್ಜಿ ವಿಚಾರಣೆ ಮುಂದೂಡಿತು.

    ಅಕ್ರಮ ವಲಸಿಗರನ್ನು ಪತ್ತೆ ಹಚ್ಚುವುದು ಹೇಗೆ?: ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅಕ್ರಮ ವಲಸಿಗರನ್ನು ಗಡಿಪಾರು ಮಾಡಲು ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿದ ಪೀಠ, ವಿದೇಶಿಗರನ್ನು ಪತ್ತೆ ಹಚ್ಚುವುದು ಹೇಗೆ, ಯಾರ ಹಣೆಯ ಮೇಲೂ ‘ನಾವು ವಿದೇಶಿಯರು’ ಎಂದು ಸ್ಟ್ಯಾಂಪ್ ಇರುವುದಿಲ್ಲ. ಆದ್ದರಿಂದ, ಅಕ್ರಮವಾಗಿ ನೆಲೆಸಿರುವವರನ್ನು ಪತ್ತೆ ಹಚ್ಚುವ ವಿಧಾನ ಏನು, ಅದನ್ನು ಯಾರು ಮಾಡುತ್ತಾರೆ, ಹೇಗೆ ಮಾಡುತ್ತಾರೆ ಅನ್ನುವುದು ಮುಖ್ಯ. ಈ ವಿಚಾರದಲ್ಲಿ ಸಲಹೆ ಇದ್ದರೆ ಕೊಡಿ ಎಂದು ಅರ್ಜಿದಾರರ ಪರ ವಕೀಲರನ್ನು ಕೇಳಿತು.

    ಅರ್ಜಿದಾರರ ಪರ ವಕೀಲರು, ಪೊಲೀಸರು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಉತ್ತರಿಸಿದರು. ಅದಕ್ಕೆ ನ್ಯಾಯಪೀಠ, ಪೊಲೀಸರು ಮನೆ-ಮನೆಗೆ ತೆರಳಿ ವಿದೇಶಿ ಅಕ್ರಮ ವಲಸಿಗರು ಯಾರೆಂದು ಗುರುತಿಸುವ ಕೆಲಸ ಮಾಡಬೇಕೆ, ಒಂದು ವೇಳೆ ಕೋರ್ಟ್ ಈ ನಿರ್ದೇಶನ ಕೊಟ್ಟರೆ ಪೊಲೀಸರು ಮನೆ-ಮನೆ ಭೇಟಿ ಆರಂಭಿಸಬಹುದು. ಆಗ ಅಮಾಯಕರಿಗೆ ತೊಂದರೆ ಆಗುವ ಸಾಧ್ಯತೆಗಳಿರುತ್ತವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೊದಲು ಪ್ರಮಾಣಪತ್ರ ಸಲ್ಲಿಸಲಿ. ಮುಂದೇನು ಎಂಬುದನ್ನು ನಂತರ ಯೋಚಿಸೋಣ ಎಂದು ನ್ಯಾಯಪೀಠ ಹೇಳಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts