More

    ಅಗ್ರೆಸ್ಸಿವ್​ ಹೈಬ್ರಿಡ್ ಮ್ಯೂಚುಯಲ್ ಫಂಡ್ ಎಂದರೇನು?

    ಲೇಖಕರು: ಪ್ರಮೋದ್ ಆರ್. (ಮ್ಯೂಚುವಲ್ ಫಂಡ್ ವಿತರಕರು)

    ಅಗ್ರೆಸ್ಸಿವ್​ ಹೈಬ್ರಿಡ್ ಮ್ಯೂಚುಯಲ್ ಫಂಡ್‌ಗಳು ಸಾಮಾನ್ಯವಾಗಿ ಈಕ್ವಿಟಿಗಳು (ಷೇರುಗಳು) ಮತ್ತು ಸಾಲದ ಸ್ವತ್ತುಗಳ ಸಂಯೋಜನೆಯಲ್ಲಿ ಹೂಡಿಕೆ ಮಾಡುತ್ತವೆ, ಇವು ಬಂಡವಾಳದ ಹೆಚ್ಚಳ ಮತ್ತು ಆದಾಯ ವೃದ್ಧಿಸುವ ಗುರಿಯನ್ನು ಹೊಂದಿರುತ್ತದೆ.

    SEBI (ಭಾರತೀಯ ಷೇರು ವಿನಿಮಯ ಮಂಡಳಿ) ನಿಯಮದ ಅಡಿಯಲ್ಲಿ, ಅಗ್ರೆಸ್ಸಿವ್​ ಹೈಬ್ರಿಡ್ ಮ್ಯೂಚುವಲ್ ಫಂಡ್‌ಗಳು ತಮ್ಮ ಸ್ವತ್ತುಗಳ ಶೇಕಡಾ 65ರಿಂದ 80ರಷ್ಟನ್ನು ಈಕ್ವಿಟಿ ಮತ್ತು ಇಕ್ವಿಟಿ-ಸಂಬಂಧಿತ ಸಾಧನಗಳಲ್ಲಿ ಹೂಡಿಕೆ ಮಾಡುತ್ತವೆ, ಉಳಿದ ಶೇಕಡಾ 20ರಿಂದ 35ರಷ್ಟನ್ನು ಸಾಲ ಭದ್ರತೆಗಳು ಮತ್ತು ಹಣದ ಮಾರುಕಟ್ಟೆ ಸಾಧನಗಳಲ್ಲಿ ಹೂಡಿಕೆ ಮಾಡುತ್ತವೆ.

    ಈಕ್ವಿಟಿಯಲ್ಲಿನ ಹೂಡಿಕೆ ಭಾಗವು ಬೆಳವಣಿಗೆಯ ಸಾಮರ್ಥ್ಯಕ್ಕೆ ಕೊಡುಗೆ ನೀಡಿದರೆ, ಸಾಲದ ಹೂಡಿಕೆ ಭಾಗವು ಸ್ಥಿರತೆಯನ್ನು ಒದಗಿಸುತ್ತದೆ. ಸಾಲದ ಆಸ್ತಿಗಳಿಗೆ ಹೋಲಿಸಿದರೆ ಈಕ್ವಿಟಿಗೆ ಹೆಚ್ಚಿನ ಹಣವನ್ನು ನಿಯೋಜಿಸುವುದರಿಂದ ಈ ಫಂಡ್​ಗಳನ್ನು ಅಗ್ರೆಸ್ಸಿವ್​ (ಆಕ್ರಮಣಕಾರಿ) ಎಂದು ಕರೆಯಲಾಗುತ್ತದೆ. ಇಕ್ವಿಟಿಯಲ್ಲಿನ ಹೆಚ್ಚಿನ ಹೂಡಿಕೆಯು ಈ ಫಂಡ್​ಗಳನ್ನು ಮಾರುಕಟ್ಟೆಯ ಏರಿಳಿತಗಳಿಗೆ ಗುರಿಯಾಗಿಸುತ್ತವೆ. ಇದರ ಪರಿಣಾಮವಾಗಿ, ಹೆಚ್ಚಿನ ರಿಸ್ಕ್​ಗೆ ಒಡ್ಡುತ್ತದೆ.

    ಯಾರು ಹೂಡಿಕೆ ಮಾಡಬೇಕು?:

    ಪ್ರಮುಖವಾಗಿ ಇಕ್ವಿಟಿ ಹಂಚಿಕೆ ಅಗತ್ಯತೆಗಳೊಂದಿಗೆ 3ರಿಂದ 5 ವರ್ಷಗಳ ಹೂಡಿಕೆಯ ಅವಧಿ ಹೊಂದಿರುವ ಹೂಡಿಕೆದಾರರು ಈ ಫಂಡ್​ ಪರಿಗಣಿಸಬಹುದು. ಪೂರ್ಣ ಪ್ರಮಾಣದ ಈಕ್ವಿಟ್​ ಫಂಡ್​ಗಳಿಗೆ ಹೋಲಿಸಿದರೆ, ಅಗ್ರೆಸ್ಸಿವ್​ ಹೈಬ್ರಿಡ್ ಮ್ಯೂಚುಯಲ್ ಫಂಡ್‌ಗಳಲ್ಲಿ ರಿಸ್ಕ್ ಪ್ರಮಾಣ ಸ್ವಲ್ಪ ಕಡಿಮೆ ಇರುತ್ತದೆ.

    ಷೇರು ಮಾರುಕಟ್ಟೆಯು ತುಂಬಾ ಚಂಚಲತೆ ಕಾಣುತ್ತಿರುವ ಸಂದರ್ಭದಲ್ಲಿ, ಈ ಫಂಡ್​ಗಳಲ್ಲಿನ ಸಾಲದ ಹೂಡಿಕೆಯು ಅಪಾಯದಿಂದ ಒಂದಿಷ್ಟು ರಕ್ಷಣೆ ನೀಡುವುದನ್ನು ಖಾತ್ರಿಗೊಳಿಸುತ್ತದೆ. ಈ ನಿಧಿಯಲ್ಲಿ ಹೂಡಿಕೆ ಮಾಡುವ ಮಾದರಿ ವಿಧಾನವೆಂದರೆ SIP (ಸಿಸ್ಟಮೆಟಿಕ್​ ಇನ್ವೆಸ್ಟ್​ಮೆಂಟ್​ ಪ್ಲಾನ್​. ಮಾಸಿಕವಾಗಿ ಇಲ್ಲವೇ ತ್ರೈಮಾಸಿಕವಾಗಿ ಅಥವಾ ವಾರ್ಷಿಕವಾಗಿ ನಿರ್ದಿಷ್ಟ ಪ್ರಮಾಣದ ಹಣ ಹೂಡಿಕೆ ಮಾಡುವುದು).

    ತೆರಿಗೆ ಪರಿಣಾಮಗಳು:

    ಅಗ್ರೆಸ್ಸಿವ್​ ಹೈಬ್ರಿಡ್ ಮ್ಯೂಚುಯಲ್ ಫಂಡ್‌ಗಳಿಗೆ ಕೂಡ ಈಕ್ವಿಟಿ ಫಂಡ್‌ಗೆ ಸಮಾನವಾಗಿಯೇ ತೆರಿಗೆ ವಿಧಿಸಲಾಗುತ್ತದೆ. ಹೂಡಿಕೆಯನ್ನು ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಹಿಡಿದಿಟ್ಟುಕೊಂಡರೆ, ಲಾಭದ ಮೇಲೆ ಶೇಕಡಾ 10ರಷ್ಟು ದೀರ್ಘಾವಧಿಯ ಬಂಡವಾಳ ಲಾಭದ ದರದಲ್ಲಿ (ಲಾಂಗ್ ಟರ್ಮ್​ ಕ್ಯಾಪಿಟಲ್​ ಗೇನ್​) ತೆರಿಗೆ ವಿಧಿಸಲಾಗುತ್ತದೆ, ಪ್ರಸ್ತುತ ಹಣಕಾಸು ವರ್ಷದಲ್ಲಿ 1 ಲಕ್ಷ ರೂಪಾಯಿಗಿಂತ ಕಡಿಮೆ ಲಾಭ ಇದ್ದರೆ ಈ ತೆರಿಗೆಗೆ ವಿನಾಯಿತಿ ಇರುತ್ತದೆ. ಮತ್ತೊಂದೆಡೆ, ಒಂದು ವರ್ಷಕ್ಕಿಂತ ಕಡಿಮೆ ಅವಧಿಗೆ ಹೂಡಿಕೆಯನ್ನು ಹಿಡಿದಿಟ್ಟುಕೊಂಡರೆ, ಲಾಭಗಳಿಗೆ ಯಾವುದೇ ವಿನಾಯಿತಿ ಇಲ್ಲದೆಯೇ ಶೇಕಡಾ 15ರಷ್ಟು ಫ್ಲಾಟ್ ದರದಲ್ಲಿ ತೆರಿಗೆ ವಿಧಿಸಲಾಗುತ್ತದೆ.

    ನಿಧಿಯ ಆಯ್ಕೆ:

    ವ್ಯಾಲ್ಯು ರಿಸರ್ಚ್​ ಮಾಹಿತಿಯ ಪ್ರಕಾರ, ಈ ವರ್ಗದಲ್ಲಿ ವಿವಿಧ ಆಸ್ತಿ ನಿರ್ವಹಣಾ ಕಂಪನಿಗಳು (AMC- ಅಸೆಟ್​ ಮ್ಯಾನೇಜ್​ಮೆಂಟ್​ ಕಂಪನಿಗಳು) 49 ಫಂಡ್​ಗಳು ಲಭ್ಯವಿವೆ. ಕಳೆದ ಒಂದು ವರ್ಷದ ಅವಧಿಯಲ್ಲಿ, ಈ ವರ್ಗದ ಆದಾಯದಲ್ಲಿ ಶೇಕಡಾ 9ರಿಂದ ಶೇಕಡಾ 31ರವರೆಗೆ ಲಾಭ ದೊರೆತಿದೆ. ಆದ್ದರಿಂದ ಹೂಡಿಕೆಗಾಗಿ ಫಂಡ್​ ಆಯ್ಕೆ ಮಾಡುವಾಗ, ಫಂಡ್​ನ ಹಿಂದಿನ ಕಾರ್ಯಕ್ಷಮತೆಯನ್ನು ಏಕೈಕ ಮಾನದಂಡವಾಗಿರಲು ಬಿಡಬಾರದು. ವಿವಿಧ ಮಾರುಕಟ್ಟೆ ಪರಿಸ್ಥಿತಿಗಳಲ್ಲಿ ದೀರ್ಘಾವಧಿಯಲ್ಲಿ ಫಂಡ್​ ಅನ್ನು ಹೇಗೆ ನಿರ್ವಹಿಸಲಾಗಿದೆ ಎಂಬುದನ್ನು ಪರಿಶೀಲಿಸುವುದು ಮುಖ್ಯವಾಗಿದೆ. ಬದಲಾಗುತ್ತಿರುವ ಮಾರುಕಟ್ಟೆ ಪರಿಸ್ಥಿತಿಗಳಲ್ಲಿ ಸೂಕ್ತ ರೀತಿಯಲ್ಲಿ ನಿರ್ವಹಿಸಲು ಫಂಡ್​ ವ್ಯವಸ್ಥಾಪಕರು ಎಷ್ಟು ಸಮರ್ಥರಾಗಿದ್ದಾರೆ ಎಂಬುದರ ಕಲ್ಪನೆಯನ್ನು ಇದು ನೀಡುತ್ತದೆ. ವಿವಿಧ ಕಾಲಮಾನಗಳಲ್ಲಿ ಸ್ಥಿರವಾಗಿ ಪ್ರದರ್ಶನ ನೀಡಿದ ಈ ವರ್ಗದ ಫಂಡ್​ಗಳ ಪೈಕಿ ಐಸಿಐಸಿಐ ಪ್ರುಡೆನ್ಶಿಯಲ್ ಇಕ್ವಿಟಿ ಆ್ಯಂಡ್​ ಡೆಟ್​ ಫಂಡ್​ ಪ್ರಮುಖವಾದುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts