More

    ಜಾಲತಾಣದಿಂದ ದೂರದೂರ; ಲಾಕ್​ಡೌನ್​ನಲ್ಲಿ ಸ್ಟಾರ್​ಗಳು ಏನ್ಮಾಡ್ತಿದ್ದಾರೆ?

    ಕನ್ನಡದ ಹಲವು ಸ್ಟಾರ್ ನಟ-ನಟಿಯರು ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಹಲವು ವಿಷಯಗಳ ಬಗ್ಗೆ ಆಗಾಗ ಪೋಸ್ಟ್ ಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಆದರೆ, ಲಾಕ್​ಡೌನ್ ಶುರುವಾಗಿದ್ದೇ ಆಗಿದ್ದು, ಹಲವರು ಸೋಷಿಯಲ್ ಮೀಡಿಯಾದಿಂದ ಕಣ್ಮರೆಯಾಗಿದ್ದಾರೆ.

    ಶಿವರಾಜಕುಮಾರ್, ಪುನೀತ್ ರಾಜಕುಮಾರ್, ದರ್ಶನ್, ಯಶ್, ಧ್ರುವ ಸರ್ಜಾ, ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ, ರಚಿತಾ ರಾಮ್ ಸೇರಿದಂತೆ ಹಲವರು ಕಳೆದೊಂದು ತಿಂಗಳಿನಿಂದ ಸೋಷಿಯಲ್ ಮೀಡಿಯಾದಿಂದ ದೂರವಾಗಿದ್ದಾರೆ. ಇನ್ನು, ಗಣೇಶ್, ಧನಂಜಯ್, ಶ್ರೀಮುರಳಿ, ‘ದುನಿಯಾ’ ವಿಜಯ್ ಮುಂತಾದವರು ಆಗಾಗ ಒಂದೊಂದು ಪೋಸ್ಟ್ ಹಾಕುವ ಮೂಲಕ ಕಾಣಿಸಿ ಕೊಳ್ಳುತ್ತಿರುತ್ತಾರೆ. ಇದ್ದುದರಲ್ಲಿ ಉಪೇಂದ್ರ, ಸುದೀಪ್, ಸತೀಶ್ ನೀನಾಸಂ, ‘ನೆನಪಿರಲಿ’ ಪ್ರೇಮ್ ಹರಿಪ್ರಿಯಾ, ಹರ್ಷಿಕಾ ಪೂಣಾಚ್ಛ ಸೇರಿದಂತೆ ಬೆರಳಣಿಕೆಯಷ್ಟು ಮಂದಿ ಮಾತ್ರ ಒಂದಲ್ಲ ಒಂದು ಪೋಸ್ಟ್ ಗಳ ಮೂಲಕ ಸಕ್ರಿಯರಾಗಿದ್ದಾರೆ.

    ಕೆಲವರು ತಾವು ಮಾಡುತ್ತಿರುವ ಸಾಮಾಜಿಕ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುತ್ತಲೇ, ಸಂಕಷ್ಟದಲ್ಲಿರುವವರಿಗೆ ತಮ್ಮದೇ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಇಷ್ಟಕ್ಕೂ, ಸೋಷಿಯಲ್ ಮೀಡಿಯಾ ದಿಂದ ಹಲವರು ದೂರ ವಿರುವುದೇಕೆ? ಜಗ್ಗೇಶ್ ಒಬ್ಬರನ್ನು ಬಿಟ್ಟರೆ, ಮಿಕ್ಕಂತೆ ಯಾರೂ ಈ ಕುರಿತು ಮಾತನಾಡಿಲ್ಲ. ತಮ್ಮ ಆಪ್ತ ಮಾದೇಗೌಡರ ಮಗನ ಸಾವಿನಿಂದ ತಮ್ಮ ಮನಸ್ಸು ಚೂರಾಗಿದ್ದು, ಕೆಲವು ದಿನಗಳ ಕಾಲ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿಯುವುದಾಗಿ ಜಗ್ಗೇಶ್ ಹೇಳಿಕೊಂಡಿದ್ದಾರೆ. ಮಿಕ್ಕಂತೆ ಬೇರೆ ಯಾರೂ ನಿರ್ಧಿಷ್ಟ ಕಾರಣ ಅಥವಾ ಸ್ಪಷ್ಟನೆಯನ್ನು ನೀಡಿಲ್ಲ. ಮೊಬೈಲ್​ಗಳನ್ನು ಎತ್ತಿಟ್ಟು, ಕುಟುಂಬದ ಜತೆಗೆ ಕಾಲ ಕಳೆಯುತ್ತಿದ್ದಾರೆ. ಕೆಲವರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ, ಇನ್ನೂ ಕೆಲವರು ಅಡುಗೆ, ಫಿಟ್ನೆಸ್, ಓದು, ಸಿನಿಮಾ ವೀಕ್ಷಣೆ ಎಂದು ಲಾಕ್​ಡೌನ್ ಸಮಯ ಕಳೆಯುತ್ತಿದ್ದಾರೆ.

    – ಸ್ಟಾರ್​ಗಳ ಬಗ್ಗೆ ಬೇಸರ

    ಲಾಕ್​ಡೌನ್​ನಿಂದ ಸಾಕಷ್ಟು ಜನ ಕಷ್ಟದಲ್ಲಿರುವಾಗ, ಹಲವು ಸ್ಟಾರ್ ನಟ-ನಟಿಯರು ಕಣ್ಮರೆಯಾಗಿದ್ದಾರೆ ಎಂಬ ಬೇಸರ ಹಲವರಲ್ಲಿದೆ. ಬೇರೆ ಭಾಷೆಯ ಚಿತ್ರರಂಗಗಳಲ್ಲಿ ಅಲ್ಲಿನ ಸ್ಟಾರ್ ನಟರು ಧನಸಹಾಯವಲ್ಲದೆ ಕಷ್ಟದಲ್ಲಿರುವವರಿಗೆ ಸ್ಪಂದಿಸುತ್ತಿದ್ದರೆ, ಇಲ್ಲಿ ಮಾತ್ರ ಬಹಳಷ್ಟು ಜನ ಏನೂ ಮಾಡದೆ ದೂರವೇ ಇದ್ದಾರೆ ಎಂಬ ಅಸಹನೆ ಇದೆ. ತಮ್ಮ ಚಿತ್ರ ಬಿಡುಗಡೆ ಸಮಯದಲ್ಲಿ ಸಕ್ರಿಯರಾಗಿರುವ ನಟ-ನಟಿಯರು ಇಂತಹ ಸಂದರ್ಭದಲ್ಲಿ ಅಗತ್ಯವಿರುವವರಿಗೆ ಏನೂ ಮಾಡುತ್ತಿಲ್ಲ ಎಂಬ ಚರ್ಚೆ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಲೇ ಇರುತ್ತದೆ. ಬಹಳಷ್ಟು ಸ್ಟಾರ್​ಗಳು ಏನು ಮಾಡುತ್ತಿದ್ದಾರೆ ಎಂದು ಗೊತ್ತಾಗದಿದ್ದರೂ, ಎಲ್ಲರೂ ಸುಮ್ಮನಿದ್ದಾರೆ ಅಥವಾ ಏನೂ ಮಾಡುತ್ತಿಲ್ಲ ಎಂಬುದು ಸಂಪೂರ್ಣ ಸತ್ಯವಲ್ಲ. ಏಕೆಂದರೆ, ಕೆಲವರು ಸಹಾಯ ಮಾಡಿದರೂ ಅದರಿಂದ ಪ್ರಚಾರ ಪಡೆಯುವುದಕ್ಕೆ ಮುಂದಾಗುತ್ತಿಲ್ಲ. ಸದ್ದಿಲ್ಲದೆ ತಮ್ಮ ಕೈಲಾದ ಸಹಾಯ ಮಾಡಿ ಸುಮ್ಮನಾಗುತ್ತಿದ್ದಾರೆ. ಇನ್ನೂ, ಕೆಲವರು ಈ ನಿಟ್ಟಿನಲ್ಲಿ ಇನ್ನಷ್ಟೇ ಹೆಜ್ಜೆ ಇಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts